ಹೈವೇ ಪಾಲಿಟಿಕ್ಸ್​: ‘ಎಷ್ಟು ದಿನ ಸುಳ್ಳು ಹೇಳ್ತೀರಾ..?’ -ಪ್ರತಾಪ ಸಿಂಹ ವಿರುದ್ಧ ವಿಶ್ವನಾಥ್ ಗುಡುಗು 

ಹೈವೇ ಪಾಲಿಟಿಕ್ಸ್​: ‘ಎಷ್ಟು ದಿನ ಸುಳ್ಳು ಹೇಳ್ತೀರಾ..?’ -ಪ್ರತಾಪ ಸಿಂಹ ವಿರುದ್ಧ ವಿಶ್ವನಾಥ್ ಗುಡುಗು 

ಮೈಸೂರು: ಬೆಂಗಳೂರು-ಮೈಸೂರು ದಶ ಪಥದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮೋದಿ ಸರ್ಕಾರದ ಯೋಜನೆ ಅಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಹೆಚ್​.ವಿಶ್ವನಾಥ್ ಗುಡುಗಿದ್ದಾರೆ.

ಕೆಲಸ ಮಾಡಿ ಕ್ರೆಡಿಟ್ ತೆಗೆದುಕೊಳ್ಳಲಿ
ಈ ಸಂಬಂಧ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್​.ವಿಶ್ವನಾಥ್.. ಕೆಲವು ರಾಜಕಾರಣಿಗಳು ಕೆಲಸ ಮಾಡೋದನ್ನ ಬಿಟ್ಟು ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಾರೆ. ಕೆಲಸ ಮಾಡಿ ರಾಜಕಾರಣಿಗಳು ಕ್ರೆಡಿಟ್ ತೆಗೆದುಕೊಳ್ಳಬೇಕು. ಬೆಂಗಳೂರು-ಮೈಸೂರು ದಶಪಥ ಮೋದಿ ಕಾಲದಲ್ಲಿ ಆಗಿರೋದಲ್ಲ. 2012ರಲ್ಲಿ ಆಸ್ಕರ್ ಫರ್ನಾಂಡಿಸ್ ಮಂತ್ರಿಯಾಗಿದ್ದಾಗ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದವು. ಈ ವೇಳೆ 1,882 ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನ ರಾಷ್ಟ್ರೀಯ ಹೆದ್ದಾರಿ ಮಾಡಲು ತೀರ್ಮಾನಿಸಲಾಗಿತ್ತು.

Image

ಈ ವೇಳೆ ನಡೆದ ಸಭೆಯಲ್ಲಿ ನಾನು, ಧ್ರುವನಾರಾಯಣ್, ರಮ್ಯಾ, ಡಿ.ಕೆ. ಸುರೇಶ್ ಕೂಡ ಇದ್ದರು. ಈ ರಸ್ತೆ ಸಂಬಂಧ 8 ರಿಂದ 10 ಮೀಟಿಂಗ್​ಗಳು ನಡೆದವು. ನಂತರದ ದಿನಗಳಲ್ಲಿ ಯುಪಿಎ ಸರ್ಕಾರ ಬದಲಾಯಿತು, ಅಲ್ಲದೇ ರಾಜ್ಯದಲ್ಲಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದರು. ಆಗ ಮಹಾದೇವಪ್ಪ ಪಿಡಬ್ಲ್ಯೂಡಿ ಸಚಿವರಾದಾಗ ಈ ಯೋಜನೆ ಜಾರಿಗೆ ಬರುವಲ್ಲಿ ಯಶಸ್ವಿಯಾಯಿತು.

Image

ನಾನ್ ಕಡಿದೆ ಅನ್ನೋದನ್ನ ಬಿಡಿ
ಪ್ರತಾಪ್ ಸಿಂಹ ಹೇಳಿರೋದು ಸರಿಯಲ್ಲ. ಮೊದಲು ನೀವು ಏನು ಮಾಡಿದ್ದೀರ ಅದನ್ನ ಜನರಿಗೆ ಹೇಳಿ. ಮೈಸೂರಿಂದ-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಮಂಗಳೂರು ಹೆದ್ದಾರಿ ಯೋಜನೆಗಳು ಆಗಿನ ಕಾಲದಲ್ಲೇ ನಡೆದಿರುವ ಕೆಲಸ. ಅನಾವಶ್ಯಕವಾಗಿ ಯಾರೂ ಕ್ರೆಡಿಟ್ ತೆಗೆದುಕೊಳ್ಳಬಾರದು.

ಮಿಸ್ಟರ್ ಪ್ರತಾಪ್ ಸಿಂಹ..
ಸುಮ್ಮನೆ ಅನಾವಶ್ಯಕವಾಗಿ ಅದನ್ನ ನಾನು ಮಾಡಿದೆ, ನಾನ್ ಕಡಿದೆ ಅನ್ನೋದನ್ನ ಬಿಟ್ಟು, ಸುಮ್ನೆ ಎಷ್ಟು ದಿನ ನೀವು ಸುಳ್ಳು ಹೇಳುತ್ತಿರಾ? ಸುಳ್ಳು ಹೇಳಬಾರದು. ಇದು ಪ್ರತಾಪ್ ಸಿಂಹ ಅವರ ಕೆಲಸ ಅಲ್ಲ, ಅವರ ಸಾಧನೆ ಅಲ್ಲ, ಅವತ್ತು ಇದ್ದಂತಹ ಸಂಸದರ, ಸರ್ಕಾರದ ಸಾಧನೆ. ನೀವು ಹೊಸದಾಗಿ ಯೋಜನೆಗಳನ್ನ ತಂದು ಮಾಡಿ, ನೀವು ಕೇಂದ್ರ ಸರ್ಕಾರದಿಂದ ಏನೇನು ತೆಗೆದುಕೊಂಡು ಬಂದಿದ್ದೀರಿ.. ಅದನ್ನ ಕರೆಕ್ಟ್ ಆಗಿ ಹೇಳಿ.. ನಾವು ಎಂಪಿ ಆದ್ಮೇಲೆ ಆಗಿರುವಂತ ಕೆಲಸಗಳು ಇವೆಲ್ಲ ಮಿಸ್ಟರ್ ಪ್ರತಾಪ್ ಸಿಂಹ ಎಂದು ವಾಗ್ದಾಳಿ ನಡೆಸಿದರು.

Image

ಪ್ರತಾಪ್ ಸಿಂಹ ಹೇಳಿದ್ದೇನು..?
ಮೈಸೂರು ಹಾಗೂ ಬೆಂಗಳೂರು ನಡುವಿನ ಹತ್ತು ಪಥದ ಹೆದ್ದಾರಿ ಅವೈಜ್ಞಾನಿಕ ಎಂಬ ಮಂಡ್ಯ ಸಂಸದೆ ಸುಮಲತಾ ಹೇಳಿದ್ದರು. ಇದೇ ವಿಚಾರಕ್ಕೆ ಆಗಸ್ಟ್​ 18 ರಂದು ಸುದ್ದಿಗೋಷ್ಠಿ ನಡೆಸಿದ್ದ ಪ್ರತಾಪ್ ಸಿಂಹ.. ಹೆದ್ದಾರಿ ಕಾಮಗಾರಿ ಬಗ್ಗೆ ಯಾರಿಗೆ ಅನುಮಾನ ಇದೆಯೋ ಅವರು ತಜ್ಞರನ್ನು ಕರೆದುಕೊಂಡು ಹೋಗಿ ಪರಿಶೀಲನೆ ಮಾಡಲಿ. ದಶಪಥ ಹೆದ್ದಾರಿ ನಿರ್ಮಾಣ ಮಾಡುತ್ತಿರುವುದು ಮೈಸೂರಿಗಾಗಿ. ಮಂಡ್ಯ ಹಾಗೂ ರಾಮನಗರದ ಮೂಲಕ ಹಾದು ಹೋಗುತ್ತೆ ಎಂಬ ಮಾತ್ರಕ್ಕೆ, ಇದು ನಮ್ಮ ಯೋಜನೆ ಅಂತ ಹೇಳಿದ್ರೆ ಅದಕ್ಕೆ ಅರ್ಥವಿಲ್ಲ.  2022ರ ದಸರಾ ವೇಳೆ ಮೈಸೂರು ಮತ್ತು ಬೆಂಗಳೂರು ನಡುವಿನ ದಶಪಥ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಒಂದು ಬಿಡಿಗಾಸು ಹಣ ಕೂಡ ಪಡೆದಿಲ್ಲ. 60 ಕಿಲೋ ಮೀಟರ್ ಬೈಪಾಸ್ ಇದ್ದು, ಜನವರಿ ವೇಳೆಗೆ ಇಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇದು ದೇಶದ ಅತಿ ದೊಡ್ಡ ಪ್ರಾಜೆಕ್ಟ್ ಆಗಿದೆ. ದಶಪಥ ರಸ್ತೆ ಮೈಸೂರಿಗೆ ಇರೋದ್ರಿಂದ ಹೆಚ್ಚು ಆಸಕ್ತಿ ತೆಗೆದುಕೊಂಡಿದ್ದೇನೆ. ಇದು ಮೋದಿ ಸರ್ಕಾರದ ಯೋಜನೆ. ರಾಜ್ಯ ಸರ್ಕಾರದ ಹಣ ಬಳಸುತ್ತಿಲ್ಲ ಎಂದಿದ್ದರು.

Source: newsfirstlive.com Source link