ಭಾರತದಲ್ಲೇ ಇಂಗ್ಲಿಷ್‌ ಕಲಿತು, ಸೈನಿಕನಾದವನು ಉಗ್ರಗಾಮಿ ಸಂಘಟನೆ ಸೇರಿದ್ದು ಹೇಗೆ?

ಭಾರತದಲ್ಲೇ ಇಂಗ್ಲಿಷ್‌ ಕಲಿತು, ಸೈನಿಕನಾದವನು ಉಗ್ರಗಾಮಿ ಸಂಘಟನೆ ಸೇರಿದ್ದು ಹೇಗೆ?

ತಾಲಿಬಾನಿಗಳ ಬಗ್ಗೆ ಬಗೆದಷ್ಟು ವಿಚಿತ್ರ, ಆಚ್ಚರಿ, ರೋಚಕ ವಿಷಯಗಳು ಹೊರ ಬರ್ತಾನೆ ಇವೆ. ಆದ್ರಲ್ಲಿಯೂ ಈಗ ನಾವು ಹೇಳ್ತಾ ಇರೋ ಒಬ್ಬ ತಾಲಿಬಾನಿ ಮುಖಂಡನ ಬಗ್ಗೆ ಕೇಳಿದ್ರೆ ದಂಗಾಗಿ ಬಿಡ್ತೀರಿ.

ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಂಡ ನಂತರ ತಮ್ಮ ಅಟ್ಟಹಾಸವನ್ನು ಮುಂದುವರಿಸುತ್ತಿದ್ದಾರೆ. ಶರಿಯಾ ಕಾನೂನು ಉಲ್ಲಂಘಿಸಿದ್ರೆ ಹುಷಾರ್‌ ಅನ್ನುತ್ತಿದ್ದಾರೆ. ರಸ್ತೆಯಲ್ಲಿಯೇ ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಪತ್ರಕರ್ತರನ್ನು ಹತ್ಯೆ ಮಾಡಲು ಮನೆಮನೆ ಬಾಗಿಲು ಬಡಿಯುತ್ತಿದ್ದಾರೆ. ಅಮೆರಿಕ, ನ್ಯಾಟೋ ಸೇನೆಗೆ ಸಹಾಯ ಮಾಡಿದವರನ್ನು ಕೊಲ್ಲುತ್ತಿದ್ದಾರೆ. ಪೊಲೀಸ್‌ ಅಧಿಕಾರಿಗಳನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಅಫ್ಘಾನ್‌ ರಾಷ್ಟ್ರೀಯ ಧ್ವಜ ಹಿಡಿದು ಮೆರವಣಿಗೆ ಮಾಡಿದವರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ.. ಕ್ರೌರ್ಯದ ಕೃತ್ಯ ಒಂದಾ ಎರಡಾ? ಪ್ರತಿ ನಿತ್ಯ ತಾಲಿಬಾನಿಗಳ ಕ್ರೌರ್ಯ ಹೊರ ಬರ್ತಾನೆ ಇದೆ. ಇಷ್ಟೆಲ್ಲ ಕ್ರೌರ್ಯ ಮೆರೆಯುತ್ತಿರುವ ತಾಲಿಬಾನಿಗಳ ಇತಿಹಾಸ ನೋಡಿದ್ರೆ ಒಬ್ಬೊಬ್ಬರದು ಒಂದೊಂದು ಕಥೆಗಳು ಬೆಳಕಿಗೆ ಬರ್ತಾ ಇವೆ.

ಮೈಮೇಲೆ ಕಪ್ಪು ಬಟ್ಟೆ ಹಾಕಿಕೊಂಡಿದ್ದಾನೆ. ತಲೆಯನ್ನು ಕಪ್ಪು ಬಟ್ಟೆಯಲ್ಲಿಯೇ ಸುತ್ತಿಕೊಂಡಿದ್ದಾನೆ. ಖದರ್‌ ಲುಕ್‌ ನೀಡ್ತಾ ಇದ್ದಾನೆ. ನಾವು ಹೇಳ್ತಾ ಇರೋದು ಇದೇ ವ್ಯಕ್ತಿಯ ಬಗ್ಗೆಯಾಗಿದೆ. ಈತ ಶೇರ್‌ ಮೊಹಮ್ಮದ್‌ ಅಬ್ಬಾಸ್‌ ಆಗಿದ್ದು, ತಾಲಿಬಾನಿ ಮುಖಂಡನಾಗಿ ಕ್ರೌರ್ಯ ಮೆರೆಯುತ್ತಿದ್ದಾನೆ. ಈತನಿಗೂ ಭಾರತಕ್ಕೂ ಇರೋ ಸಂಬಂಧ ಏನು ಗೊತ್ತಾ? ಆತ ಭಾರತಕ್ಕೆ ಬಂದು ಮಾಡಿದ್ದು ಏನು ಗೊತ್ತಾ? ಅದನ್ನೆಲ್ಲಾ ಕೇಳಿದ್ರೆ ನೀವು ಅಚ್ಚರಿಗೊಳ್ಳುತ್ತೀರಿ. ಒಬ್ಬ ಸಭ್ಯ ವ್ಯಕ್ತಿಯಾಗಿದ್ದವನು ಅದೇಗೆ ಕ್ರೌರ್ಯ ಪ್ರದಶಿಸುವ ವ್ಯಕ್ತಿಯಾದ ಅಂತ ನೀವೇ ದಿಗ್ಬ್ರಮೆಗೆ ಒಳಗಾಗುತ್ತೀರಿ.

1982ರಲ್ಲಿ ಭಾರತಕ್ಕೆ ಬಂದಿದ್ದ ಶೇರ್‌ ಮೊಹಮ್ಮದ್‌ ಅಬ್ಬಾಸ್‌
ಭಾರತೀಯ ಸೇನೆಯಲ್ಲಿ ತರಬೇತಿ ಪಡೆದಿದ್ದ ಅಬ್ಬಾಸ್‌

1982 ರಲ್ಲಿ ಭಾರತೀಯ ಸೇನೆಯಲ್ಲಿ ಅಫ್ಘಾನ್‌ ಸೈನಿಕರಿಗೆ ತರಬೇತಿ ನೀಡಲು ಯೋಜನೆ ಸಿದ್ಧವಾಗಿರುತ್ತದೆ. ಭಾರತದಲ್ಲಿ ಉನ್ನತ ಮಟ್ಟದ ತರಬೇತಿ ಪಡೆಯಬೇಕು ಅಂತ ಅಫ್ಘಾನ್‌ನಿಂದ ಒಂದು ಬ್ಯಾಚ್‌ ಭಾರತಕ್ಕೆ ಬಂದಿರುತ್ತದೆ. ಆ ಬ್ಯಾಚ್‌ನಲ್ಲಿ ಶೇರ್‌ ಮೊಹಮ್ಮದ್‌ ಅಬ್ಬಾಸ್‌ ಕೂಡ ಇರುತ್ತಾರೆ. ಸುಮಾರು ಒಂದೂವರೆ ವರ್ಷಗಳ ಕಾಲ ಡೆಹ್ರಾಡೂನ್‌ನ ಐಎಂಎ ತರಬೇತಿ ಪಡೆಯುತ್ತಾನೆ. ಅಂದು 20 ವರ್ಷದ ಯುವಕನಾಗಿದ್ದ ಮೊಹಮ್ಮದ್‌ ಅಬ್ಬಾಸ್‌ ಸೌಮ್ಯ ಸ್ವಭಾವದ ವ್ಯಕ್ತಿಯಾಗಿರುತ್ತಾನೆ. ಭಾರತೀಯ ಸೈನಿಕರ ಜೊತೆ ಆತ್ಮೀಯತೆಯಿಂದ ಬೆರೆಯುತ್ತಾನೆ.

ಅಬ್ಬಾಸ್‌ ಬಗ್ಗೆ ನೆನಪು ಹೊರಹಾಕಿದ ಚತುರ್ವೇದಿ
ಸೌಮ್ಯ ಸ್ವಭಾವದ ಅಬ್ಬಾಸ್‌ ಮೀನಿನಂತೆ ಈಜುತ್ತಿದ್ದ
ಭಾರತೀಯ ಸೇನೆಯಲ್ಲಿ ‘ಶೇರ್‌’ ಎಂದೇ ಖ್ಯಾತನಾಗಿದ್ದ

1982ರ ಸೇನಾ ಬ್ಯಾಚ್‌ನಲ್ಲಿ ತರಬೇತಿ ಪಡೆದ ಅಬ್ಬಾಸ್‌ ಒಬ್ಬ ಸೌಮ್ಯದ ವ್ಯಕ್ತಿಯಾಗಿದ್ದ ಅಂತ ಸಹೋದ್ಯೋಗಿಗಳು ಹೇಳುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್‌ ಡಿ.ಎ.ಚತುರ್ವೇದಿ ಅವರು, ಒಂದೂವರೆ ವರ್ಷಗಳ ಕಾಲ ಅಬ್ಬಾಸ್‌ ತರಬೇತಿ ಪಡೆದಿದ್ದಾನೆ. ಆ ಸಂದರ್ಭದಲ್ಲಿ ಆತನಲ್ಲಿ ಕ್ರೌರ್ಯದ ಬುದ್ಧಿ ಇರಲಿಲ್ಲ. ಅಂತಹ ಸೌಮ್ಯದ ವ್ಯಕ್ತಿ ಹೇಗೆ ಕ್ರೌರ್ಯ ರೂಪಿಸಿಕೊಂಡ ಅನ್ನೋದೇ ಅಚ್ಚರಿಯಾಗಿದೆ. ಒಳ್ಳೆಯ ಕ್ರೀಡಾಪಟು ಕೂಡ ಆಗಿದ್ದ, ಸ್ವಿಮ್ಮಿಂಗ್‌ ಆತನ ಇಷ್ಟದ ಕ್ರೀಡೆಯಾಗಿತ್ತು. ಆತನ್ನನ್ನು ಸಹೋದ್ಯೋಗಿಗಳು ಪ್ರೀತಿಯಿಂದ ಶೇರ್‌ ಎಂದೇ ಕರೆಯುತ್ತಿದ್ರು ಅಂತ ತಿಳಿಸಿದ್ದಾರೆ. ಅದೇ ರೀತಿ ಮತ್ತೊಬ್ಬ ನಿವೃತ್ತ ಸೇನಾಧಿಕಾರಿ ಕೇಸರ್‌ ಸಿಂಗ್‌ ಶೇಖಾವತ್‌ ಅವರು ಅಬ್ಬಾಸ್‌ ಬಗ್ಗೆ ಪ್ರತಿಕ್ರಿಯಿಸಿದ್ದು, ನನ್ನ ಬಳಿ ಈಗಲೂ ಆತನೊಂದಿಗಿದ್ದ ಫೋಟೋಗಳು ಇವೆ. ನೀರಿನಲ್ಲಿ ಮೀನಿನಂತೆ ಈಜುತ್ತಿದ್ದ. ಉತ್ತಮ ಸ್ನೇಹಿತನಾಗಿದ್ದ ಅಂದಿದ್ದಾರೆ.

ಸೇನಾ ತರಬೇತಿಯ ನಂತರ ಅಫ್ಘಾನ್‌ಗೆ ಹೋದ ಅಬ್ಬಾಸ್‌
ಅಫ್ಘಾನ್‌ ರಾಷ್ಟ್ರೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿ ಕಾರ್ಯನಿರ್ವಹಣೆ

ಡೆಹ್ರಾಡೂನ್‌ನಲ್ಲಿ ಒಂದೂವರೆ ವರ್ಷ ತರಬೇತಿ ಪಡೆದ ಬಳಿಕ ಅಂದ್ರೆ, 1984 ರಲ್ಲಿ ಅಫ್ಘಾನ್‌ಗೆ ಮರಳುತ್ತಾರೆ. ಹಾಗೇ ತಾಯಿನಾಡಿಗೆ ಹೋದವರು ಅಫ್ಘಾನ್‌ ರಾಷ್ಟ್ರೀಯ ಸೇನೆಯಲ್ಲಿ ಲೆಫ್ಟಿನೆಂಟ್‌ ಆಗಿ ಸೇರಿಕೊಳ್ಳುತ್ತಾರೆ. ದೇಶ ರಕ್ಷಣೆಗೆ ಉಗ್ರರ ವಿರುದ್ಧ ಹೋರಾಡುತ್ತಾರೆ. ಅಬ್ಬಾಸ್‌ ಶೌರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತದೆ. ಹಾಗೇ ಸೋವಿಯತ್‌ ಅಫ್ಘನ್‌ ಮಹಾಯುದ್ಧ ಮತ್ತು ಇಸ್ಲಾಮಿಕ್‌ ಆಫ್‌ ಅಫ್ಘಾನಿಸ್ತಾನ್‌ ಯುದ್ಧದಲ್ಲಿ ಅಫ್ಘಾನ್‌ ರಾಷ್ಟ್ರದ ಪರ ಹೋರಾಟ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿಯೂ ಅಬ್ಬಾಸ್‌ ಬಗ್ಗೆ ಭಾರೀ ಪ್ರಮಾಣದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದ್ರೆ, ತದನಂತರದಲ್ಲಿ ನಡೆದ ಬೆಳವಣಿಗೆಗಳಿಂದ ತಾಲಿಬಾನಿಗಳ ಗುಂಪಿಗೆ ಸೇರ್ಪಡೆಗೊಳ್ಳುತ್ತಾನೆ. ಹಾಗೇ ತಾಲಿಬಾನಿ ಗುಂಪಿಗೆ ಸೇರಿ ಅಬ್ಬಾಸ್‌ ಮಾಡಿದ್ದಾದ್ರೂ ಏನು?

ಸೇನೆ ಬಿಟ್ಟು ತಾಲಿಬಾನಿಯರನ್ನ ಸೇರಿದ ಅಬ್ಬಾಸ್‌
ತಾಲಿಬಾನಿ ಉಗ್ರ ಸಂಘಟನೆಯಲ್ಲಿ ಸಕ್ರಿಯ

ಆರ್ಮಿ ಸೇರಿ ಅಫ್ಘಾನ್‌ ರಾಷ್ಟ್ರದ ಸೇವೆ ಮಾಡಿದ್ದ ಅಬ್ಬಾಸ್‌ ತಾಲಿಬಾನಿ ಸಂಘಟನೆಯ ಪ್ರಭಾವಕ್ಕೆ ಒಳಗಾಗಿದ್ದೇ ಅಚ್ಚರಿಯಾಗಿದೆ. ಅಷ್ಟೊಂದು ದೇಶಪ್ರೇಮದಿಂದ ಹೋರಾಡಿದ್ದ ವ್ಯಕ್ತಿ ತಾಲಿಬಾನಿ ಸಂಘಟನೆ ಸೇರಿದ್ನಲ್ಲ ಅಂತ ಅಬ್ಬಾಸ್‌ನ ಅದೆಷ್ಟೋ ಆತ್ಮೀಯರು, ಕುಟುಂಬದವರು ನೊಂದುಕೊಳ್ಳುತ್ತಾರೆ. ಆದ್ರೆ, ಅಬ್ಬಾಸ್‌ ತಾಲಿಬಾನಿ ಸಂಘಟನೆ ಸೇರಿದವನು ಉಗ್ರವಾದ ಅಳವಡಿಸಿಕೊಳ್ಳುತ್ತಾನೆ. ಕ್ರೌರ್ಯ ಮೆರೆಯಲು ಪ್ರಾರಂಭಿಸುತ್ತಾನೆ. ಯಾವ ದೇಶದ ಜನರನ್ನು ರಕ್ಷಣೆ ಮಾಡಲು ಹೋರಾಡಿದ್ನೋ ಅದೇ ದೇಶದ ಜನರನ್ನು ಗುಂಡಿಟ್ಟು ಕೊಲ್ಲೋದನ್ನು ಕಲಿಯುತ್ತಾನೆ. ತಾಲಿಬಾನಿ ಸಂಘಟನೆಯಲ್ಲಿ ಹಂತ ಹಂತವಾಗಿ ಬೆಳೆಯುತ್ತಾನೆ. ವರ್ಷ ಕಳೆದಂತೆ ಉನ್ನತ ಸ್ಥಾನ ಪಡೆಯುತ್ತಾ ಸಾಗುತ್ತಾನೆ. ಇದೇ ಕಾರಣಕ್ಕೆ 1996ರಲ್ಲಿ ತಾಲಿಬಾನ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ಅಬ್ಬಾಸ್‌ ಕೂಡ ಸಚಿವನಾಗುತ್ತಾನೆ.

ತಾಲಿಬಾನಿ ಸರ್ಕಾರದಲ್ಲಿ ವಿದೇಶಾಂಗ ಸಚಿವ
ಬಿಲ್‌ ಕ್ಲಿಂಟನ್‌ ಜೊತೆಗೂ ಮಾತುಕತೆ ನಡೆಸಿದ್ದ ಅಬ್ಬಾಸ್‌

ಭಾರತದಲ್ಲಿ ಹೇಗೆ ಸೌಮ್ಯ ಸ್ವಭಾವದ ವ್ಯಕ್ತಿಯಾಗಿ ಅಬ್ಬಾಸ್‌ ಕಾಣಿಸಿಕೊಂಡಿದ್ನೋ ಅದೇ ರೀತಿ ತಾಲಿಬಾನಿ ಸಂಘಟನೆ ಸೇರಿದಾಗ ಇರಲಿಲ್ಲ. ಅವನ ಮುಖದಲ್ಲಿ ಕಾಣಿಸುತ್ತಿದ್ದ ಸಭ್ಯತೆ ಮಾಯವಾಗಿತ್ತು. ಮನಸ್ಸಲ್ಲಿ ಇದ್ದ ಸೌಮ್ಯ ಸ್ವಭಾನ ಹಾರಿಹೋಗಿತ್ತು. ಈತ ತಾಲಿಬಾನಿ ಸಂಘಟನೆ ಸೇರಿದ ಮೇಲೆ ಆ ಸಂಘಟನೆ ಮತ್ತಷ್ಟು ಪ್ರಬಲವಾಗಿ ಬೆಳೆಯುತ್ತದೆ. ಹಾಗೇ 1996ರಲ್ಲಿ ತಾಲಿಬಾನಿಗಳು ಅಫ್ಘಾನ್‌ನಲ್ಲಿ ಅಧಿಕಾರಕ್ಕೆ ಬರುತ್ತಾರೆ. ಆ ಸಂದರ್ಭದಲ್ಲಿ ಅಬ್ಬಾಸ್‌ಗೆ ವಿದೇಶಾಂಗ ಖಾತೆ ನೀಡಲಾಗಿರುತ್ತದೆ. ಅಬ್ಬಾಸ್‌ ಭಾರತದಲ್ಲಿ ಇರುವಾಗಲೇ ಇಂಗ್ಲಿಷ್‌ ಅನ್ನು ಚೆನ್ನಾಗಿ ಕಲಿತಿರುತ್ತಾನೆ. ಹೀಗಾಗಿ ವಿದೇಶಾಂಗ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾನೆ. ಅಂದಿನ ಅಮೆರಿಕ ಅಧ್ಯಕ್ಷರಾಗಿದ್ದ ಬಿಲ್‌ ಕ್ಲಿಂಟನ್‌ ಸೇರಿದಂತೆ ವಿಶ್ವ ನಾಯಕರ ಜೊತೆ ಮಾತುಕತೆ ನಡೆಸುತ್ತಾನೆ.

ಅಮೆರಿಕ ಸೇನೆ ಬರುತ್ತಿದ್ದಂತೆ ಪಲಾಯನ ಮಾಡ್ತಾನೆ
ತೆರೆಮರೆಯಲ್ಲಿಯೇ ಶಕ್ತಿ ತುಂಬುವ ಕೆಲಸ ಮಾಡ್ತಾನೆ

2001ರಲ್ಲಿ ಲಾಡೆನ್‌ ಬೇಟೆಗಾಗಿ ಅಮೆರಿಕ ಸೇನೆ ಅಫ್ಘಾನಿಸ್ತಾನಕ್ಕೆ ನುಗ್ಗುತ್ತದೆ. ತಾಲಿಬಾನಿ ಉಗ್ರಗಾಮಿ ಸಂಘಟನೆಯ ವಿರುದ್ಧ ಸಮರವನ್ನೇ ಸಾರುತ್ತದೆ. ಇದರಿಂದ ತಾಲಿಬಾನಿ ಸರ್ಕಾರ ಪತನವಾಗುತ್ತದೆ. ಇತ್ತ ಪ್ರಜಾಪ್ರಭುತ್ವ ಸರ್ಕಾರ ಅಧಿಕಾರಕ್ಕೇರುತ್ತದೆ. ಇದೇ ಸಂದರ್ಭದಲ್ಲಿ ಅಬ್ಬಾಸ್‌ ಪಲಾಯನ ಮಾಡಿ ಬಿಡ್ತಾನೆ. ಆದ್ರೆ, ಈತ ಸುಮ್ಮನೆ ಕುಳಿತುಕೊಂಡಿರಲಿಲ್ಲ. ವಿದೇಶಾಂಗ ಸಚಿವನಾಗಿಯೂ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ತಾಲಿಬಾನಿಗಳಿಗೆ ಶಕ್ತಿ ತುಂಬವ ಕೆಲಸ ಮಾಡುತ್ತಾನೆ. ತೆರೆಮರೆಯಲ್ಲಿಯೇ ಕೆಲವು ವಿದೇಶಿ ಶಕ್ತಿಗಳ ನೆರವು ಪಡೆಯುವಲ್ಲಿ ಯಶಸ್ವಿಯಾಗುತ್ತಾನೆ. ಹೀಗಾಗಿಯೇ 2016ರಲ್ಲಿ ಈತನನ್ನು ತಾಲಿಬಾನಿಗಳ ರಾಜಕೀಯ ಮುಖಂಡನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ತಾಲಿಬಾನ್‌ ಸರ್ಕಾರದಲ್ಲಿ ಈತನಿಗೆ ಸಿಗುತ್ತೆ ಮಹತ್ವದ ಹುದ್ದೆ

ಈಗಾಗಲೇ ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಂಡು ಸರ್ಕಾರ ರಚನೆಗೆ ಸಿದ್ಧರಾಗಿದ್ದಾರೆ. ಸರ್ಕಾರ ರಚನೆ ಅಷ್ಟು ಸುಲಭವಿಲ್ಲ. ಯಾಕಂದ್ರೆ ಜಾಗತಿಕ ಮಟ್ಟದಲ್ಲಿ ತಾಲಿಬಾನ್‌ ಸರ್ಕಾರಕ್ಕೆ ಬಹುತೇಕ ರಾಷ್ಟ್ರಗಳು ಮಾನ್ಯತೆ ನೀಡುವುದಿಲ್ಲ. ಆದ್ರೂ ಒಮ್ಮೆ ಸರ್ಕಾರ ರಚನೆ ಆಯ್ತು ಅಂತಾದ್ರೆ, ಅಬ್ಬಾಸ್‌ಗೆ ಮುಖ್ಯ ಹುದ್ದೆ ಸಿಗಲಿದೆ. ಹಿಂದೊಮ್ಮೆ ವಿದೇಶಾಂಗ ಖಾತೆಯನ್ನು ನಿರ್ವಹಿಸಿದ ಅನುಭವ ಕೂಡ ಅಬ್ಬಾಸ್‌ಗೆ ಇರುವುದು ಪ್ಲಸ್‌ ಪಾಯಿಂಟ್‌ ಆಗಿದೆ.

ಒಬ್ಬ ಸೈನಿಕನಾಗಿ ದೇಶದ ಜನರ ರಕ್ಷಣೆ ಮಾಡಿದವನು ತಾಲಿಬಾನ್‌ ಜೊತೆ ಸೇರಿದ್ದು ದುರಂತ. ಅದೇನೇ ಇರಲಿ, ಅಫ್ಘಾನ್‌ನಲ್ಲಿ ಶಾಂತಿ ನೆಲೆಸುವ ಕೆಲಸ ಆಗ್ಬೇಕು. ಜನ ನೆಮ್ಮದಿಯಿಂದ ಜೀವನ ಮಾಡುವಂತೆ ಆಗ್ಬೇಕು ಎಂಬುದೇ ಜಗತ್ತಿನ ಆಶಯ.

Source: newsfirstlive.com Source link