ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಬಂದಿಳಿದ 7 ಮಂದಿ ಕನ್ನಡಿಗರು.. ಆಫ್ಘನ್ ಪರಿಸ್ಥಿತಿ ಬಗ್ಗೆ ಹೇಳಿದ್ದೇನು..?

ಅಫ್ಘಾನಿಸ್ತಾನದಿಂದ ತಾಯ್ನಾಡಿಗೆ ಬಂದಿಳಿದ 7 ಮಂದಿ ಕನ್ನಡಿಗರು.. ಆಫ್ಘನ್ ಪರಿಸ್ಥಿತಿ ಬಗ್ಗೆ ಹೇಳಿದ್ದೇನು..?

ನವದೆಹಲಿ: ಅಫ್ಘಾನ್​ನಿಂದ ಭಾರತಕ್ಕೆ ಒಟ್ಟು 7 ಮಂದಿ ಕನ್ನಡಿಗರನ್ನ ಕರೆತರಲಾಗಿದೆ. 107 ಭಾರತೀಯರು ಸೇರಿ ಕಾಬೂಲ್ ಏರ್​ಬೇಸ್​ನಲ್ಲಿ ಕೆಲಸದಲ್ಲಿದ್ದ 7 ಮಂದಿ ಕನ್ನಡಿಗರನ್ನ ಕಾಬೂಲ್​ನಿಂದ ಸೇನಾ ವಿಮಾನದ ಮೂಲಕ ಕರೆತರಲಾಗಿದೆ. ಸದ್ಯ ಈ 7 ಜನ ಕನ್ನಡಿಗರು ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ಇದ್ದಾರೆ. ಆರ್​​ಟಿಪಿಸಿಆರ್​ ಟೆಸ್ಟ್​ ಬಳಿಕ ನಾಳೆ 7 ಜನರೂ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.

ತಾಯ್ನೆಲಕ್ಕೆ ವಾಪಸ್ಸಾದ ಕನ್ನಡಿಗರ ಮಾಹಿತಿ ಹೀಗಿದೆ..

  1. ಹಿರಕ್​ ದೇವ್​​ನಾಥ್​- ಬೆಂಗಳೂರಿನ ಮಾರತ್​​ಹಳ್ಳಿ
  2. ತನ್ವೀನ್​ ಅಬ್ದುಲ್- ​ ಬಳ್ಳಾರಿಯ ಸಂಡೂರು
  3. ದಿನೇಶ್ ರೈ ಮಂಗಲಪಾಡಿ- ಮಂಗಳೂರಿನ ಬಜ್ಪೆ
  4. ಜಗದೀಶ್ ಪೂಜಾರಿ- ಮಂಗಳೂರಿನ ಮೂಡುಬಿದಿರೆ
  5. ದೇಸ್​​ಮಂಡ್ ಡೇವಿಸ್ ಡಿಸೋಜಾ- ಮಂಗಳೂರಿನ ಕಿನ್ನಿಗೋಳಿ
  6. ಪ್ರಸಾದ್ ಆನಂದ್​- ಮಂಗಳೂರಿನ ಉಳ್ಳಾಲ
  7. ಶ್ರವಣ್ ಅಂಚನ್- ಮಂಗಳೂರಿನ ಬಿಜೈ

ನ್ಯೂಸ್​ಫಸ್ಟ್​ ಜೊತೆಗೆ ಕನ್ನಡಿಗ ಜಗದೀಶ್ ಪೂಜಾರಿ ಹೇಳಿದ್ದೇನು..? 

ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿರೋ ಕನ್ನಡಿಗ ಜಗದೀಶ್ ಪೂಜಾರಿ ನ್ಯೂಸ್ ಫಸ್ಟ್​​ಗೆ ಹೇಳಿಕೆ ನೀಡಿದ್ದು 16 ಕ್ಕೆ ಬಂದಿರೋ ಸಿ 17 ವಿಮಾನಕ್ಕೆ ಜನರನ್ನ ನಾನೇ ಬಸ್​ನಲ್ಲಿ ಕರೆದುಕೊಂಡು ಹೋಗಿದ್ದೇನೆ. ಇದು ನನಗೆ ಹೆಮ್ಮೆಯ ವಿಚಾರ.. ಭಾರತದ ಎಂಬಸಿಯವರು ನಮಗೆ ಬಹಳಷ್ಟು ಸಹಕಾರ ನೀಡಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ನಾವು ದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿದ್ದೇವೆ. ಕನ್ನಡಿಗರು ಒಟ್ಟು 5 ಜನ ನಮ್ಮ ಕಂಪನಿಯಿಂದ ಭಾರತಕ್ಕೆ ಬಂದಿದ್ದೇವೆ. ನಾನು 10 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡುತ್ತಿದ್ದೇನೆ.

ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

ಅಗಸ್ಟ್ 11 ನೇ ತಾರೀಖಿನಂದೇ ದೆಹಲಿಯಿಂದ ಕಾಬೂಲ್ ಗೆ ಹೋಗಿದ್ದೆ.. 15 ನೇ ತಾರೀಖಿನವರೆಗೆ ಏನೂ ಗೊತ್ತಾಗಲಿಲ್ಲ. ಕತಾರ್ ಏರ್ ಬೇಸ್​ನಲ್ಲಿ 16 ರಿಂದ ಊಟ ನೀಡೋದು ನಿಲ್ಲಿಸಿಬಿಟ್ರು. 17 ಕ್ಕೆ ನಮ್ಮನ್ನ ಯುಎಸ್ ಮಿಲಿಟರಿಯವರು ದೋಹಾಕ್ಕೆ ಕರೆದುಕೊಂಡು ಹೋಗಿ.. ಅಲ್ಲಿಂದ ಭಾರತಕ್ಕೆ ಕರೆತಂದಿದ್ದಾರೆ. ನಾವು ಕಾಬೂಲ್​ನ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವುದರಿಂದ ಹೊರಗಡೆ ಏನಾಗ್ತಿದೆ ಅಂತ ಗೊತ್ತಾಗಿಲ್ಲ. ಆದರೆ ಜನರು ಮಾತ್ರ ಭಾರೀ ಭಯದಲ್ಲಿದ್ರು.. ವಿಮಾನದಲ್ಲಿ ಏರಿದ ನಂತರ ಎಲ್ಲರಿಗೂ ಒಂದು ರೀತಿಯ ಸಮಾಧಾನ ಮತ್ತು ಖುಷಿ ಆಯ್ತು. ಆದರೆ ದೆಹಲಿಗೆ ಬಂದ ನಂತರವೇ ನಮಗೆ ಸರಿಯಾಗಿ ನಡೆಸಿಕೊಳ್ಳಲಿಲ್ಲ.. ಕೋವಿಡ್ ಲಸಿಕೆ ಹಾಕಿಸಿಕೊಂಡಿರೋ ರಿಪೋರ್ಟ್ ತೋರಿಸಿದ್ರು ಮತ್ತೆ ಲಸಿಕೆ ಹಾಕಿದ್ರು. RTPCR ವರದಿ ಬರೋದಕ್ಕೆ ತುಂಬಾ ತಡವಾಯಿತು. ಅಫ್ಘಾನಿಸ್ಥಾನದಿಂದ ಬಂದಿದ್ದೇವೆ ಅಂತ ಅಲ್ಲಿ ಬೇರೆ ತರವೇ ನೋಡಿದ್ರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Source: newsfirstlive.com Source link