ಅಫ್ಘಾನಿಸ್ತಾನದ ಮಹಿಳೆಗೆ ಮಿಲಿಟರಿ ವಿಮಾನದಲ್ಲಿ ಹೆರಿಗೆ

ವಾಷಿಂಗ್ಟನ್: ತಾಲಿಬಾನಿಯರ ಕೈವಶವಾಗಿರುವ ಅಫ್ಘಾನಿಸ್ತಾನದ ಕಾಬೂಲ್‍ನಿಂದ ಜರ್ಮನಿಯ ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಹಾರಿದ ವಾಯುಪಡೆಯ ಸಿ-17 ವಿಮಾನದಲ್ಲಿ ಅಫ್ಘಾನಿಸ್ತಾನದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವುದಾಗಿ ಅಮೆರಿಕ ಮಿಲಿಟರಿ ಮಾಹಿತಿ ನೀಡಿದೆ.

ರ್‍ಯಾಮ್‌ಸ್ಟೈನ್ ವಾಯುನೆಲೆಯ ಸಹಕಾರದೊಂದಿಗೆ ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರನ್ನು ರಕ್ಷಿಸುವ ವೇಳೆ ಈ ಘಟನೆಗೆ ಸಿ-17 ವಿಮಾನ ಸಾಕ್ಷಿಯಾಗಿದೆ. ಇದೇ ವಿಚಾರದ ಕುರಿತು ಟ್ವೀಟ್ ಮಾಡಿರುವ ಅಮೆರಿಕ ಮಿಲಿಟರಿಯ ಏರ್ ಮೊಬಿಲಿಟಿ ಕಮಾಂಡ್, ಕಾಬೂಲ್‍ನಿಂದ ಜರ್ಮನಿಗೆ ಹೊರಟಿದ್ದ ವಿಮಾನದಲ್ಲಿ ಶನಿವಾರದಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ವಾಯು ಒತ್ತಡವನ್ನು ಮತ್ತಷ್ಟು ಹೆಚ್ಚು ಮಾಡುವ ಸಲುವಾಗಿ ವಿಮಾನ ಹಾರಾಟದ ಎತ್ತರವನ್ನು ಹೆಚ್ಚಿಸಲು ವಿಮಾನದ ಕಮಾಂಡರ್ ತೀರ್ಮಾನಿಸಿದ್ದರು. ಆ ರೀತಿ ಮಾಡುವುದರಿಂದ ಗರ್ಭಿಣಿಯ ದೇಹದ ಆರೋಗ್ಯದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ ಹಾಗೂ ಜೀವಕ್ಕೆ ಅಪಾಯವಾಗದಂತೆ ನೋಡಿಕೊಳ್ಳಲು ಸಹಕಾರವಾಗುತ್ತದೆ ಎನ್ನುವುದು ಅವರಿಗೆ ತಿಳಿದಿತ್ತು ಎಂದು ಹೇಳಿದೆ. ಇದನ್ನೂ ಓದಿ: ನಮ್ಮಲ್ಲೂ ಅಯೋಗ್ಯ ಸ್ವಾಮೀಜಿಗಳು ಇದ್ದಾರೆ- ಯತ್ನಾಳ್ ಕಿಡಿ

ರ್‍ಯಾಮ್‌ಸ್ಟೈನ್ ವಾಯುನೆಲೆಗೆ ಬರುತ್ತಿದ್ದಂತೆಯೇ, ಅಮೆರಿಕದ ವೈದ್ಯಕೀಯ ಸಿಬ್ಬಂದಿ ಗರ್ಭಿಣಿಗೆ ವಿಮಾನದಲ್ಲೇ ಚಿಕಿತ್ಸೆ ಆರಂಭಿಸಿದರು. ಹೆರಿಗೆ ನೋವು ಅದಾಗಲೇ ಕಾಣಿಸಿಕೊಂಡಿತ್ತಾದ್ದರಿಂದ ಹೆರಿಗೆ ಮಾಡಿಸಲಾಯಿತ್ತು. ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೇ ಹೆರಿಗೆ ಆಗಿದ್ದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣವೇ ತಾಯಿ ಮತ್ತು ಮಗುವನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದು ಇದೀಗ ತಾಯಿ, ಮಗೂ ಇಬ್ಬರೂ ಆರೋಗ್ಯವಾಗಿದ್ದಾರೆ.

Source: publictv.in Source link