ಪುಟ್ಟ ಕಂದಮ್ಮಗಳ ಮೇಲೆ ತಾಲಿಬಾನ್​​​ ಉಗ್ರರ ಕಣ್ಣು; ಹೇಳ ತೀರದು ಪೋಷಕರ ಗೋಳು

ಪುಟ್ಟ ಕಂದಮ್ಮಗಳ ಮೇಲೆ ತಾಲಿಬಾನ್​​​ ಉಗ್ರರ ಕಣ್ಣು; ಹೇಳ ತೀರದು ಪೋಷಕರ ಗೋಳು

ತಾಲಿಬಾನ್​ ಉಗ್ರರ ಕೆಂಗಣ್ಣು ಇದೀಗ ಪುಟ್ಟ ಕಂದಮ್ಮಗಳ ಮೇಲೆ ನೆಟ್ಟಿದೆ. 20 ಮಕ್ಕಳನ್ನ ಕಿಡ್ನಾಪ್ ಮಾಡಿರುವ ತಾಲಿಬಾನ್​ಗಳು ಪೋಷಕರಿಗೆ ಶರಣಾಗುವಂತೆ ಬ್ಲಾಕ್​ ಮೇಲ್ ಮಾಡಿ ಡೆಡ್​ ಲೈನ್ ಹೊರಡಿಸಿದ್ದಾರೆ. ಇನ್ನೊಂದು ಕಡೆ ಅಫ್ಘಾನ್ ನೆಲದಿಂದ ರಕ್ಷಣಾ ವಿಮಾನ ನಭಕ್ಕೆ ನೆಗೆಯುತ್ತಲೇ ತಾಯಿಯೋರ್ವಳು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.. ಅಫ್ಘಾನಿಸ್ತಾನದಲ್ಲಿ ಇಂದು ನಡೆದ ಪ್ರಮುಖ ಡೆವಲಪ್​ಮೆಂಟ್ಸ್ ಕುರಿತ ಸ್ಪೆಷಲ್ ವರದಿ ಇಲ್ಲಿದೆ.. ಅಫ್ಘಾನಿಸ್ತಾನದಲ್ಲಿ ಮತ್ತೆ ಬಂದೂಕು ಸಿಡಿದಿದೆ. ಏರ್​ಪೋರ್ಟ್​ನಲ್ಲಿ ರಕ್ತಪಾತ ನಡೆದಿದೆ. ಕಂದಮ್ಮಗಳು ಕಿಡ್ನಾಪ್ ಆಗಿದ್ದಾರೆ. ವಿಮಾನದಲ್ಲಿ ಮಗುವಿಗೆ ಜನ್ಮ ನೀಡಲಾಗಿದೆ. ಇದು ಅಫ್ಘಾನ್​ ಸ್ಥಿತಿ ಗತಿ,ಇದು ಅಫ್ಘಾನ್ ಸದ್ಯದ ಪರಿಸ್ಥಿತಿ.. ನಿಜಕ್ಕೂ ಅಫ್ಘನ್ನರ ಪಾಲಿಗೆ ಇಂದು ಬ್ಲಾಕ್ ಸಂಡೆ ಆಗಿ ಪರಿಣಮಿಸಿದೆ.

ಕ್ಷಣ ಕ್ಷಣಕ್ಕೂ ಆತಂಕ, ಕ್ಷಣ ಕ್ಷಣಕ್ಕೂ ಭಯ.. ಯಾವ ಕ್ಷಣದಲ್ಲಿ ಏನು ಅಪಾಯ ಕಾದಿದ್ಯೋ ಅನ್ನೋ ಟೆನ್ಷನ್. ಈಗ ಇದ್ದವರು ಮತ್ತೆ ಇಲ್ಲ, ಇಂದು ಇದ್ದವರು ನಾಳೆ ಇಲ್ಲ. ಅಫ್ಘಾನಿಸ್ತಾನದಲ್ಲಿ ಅಮ್ಮಂದಿರು ಅಳುತ್ತಿದ್ದಾರೆ. ತಾಯಂದಿರು ನರಳುತ್ತಿದ್ದಾರೆ. ಏನೋ ಅರಿಯದ ಪುಟ್ಟ ಕಂದಮ್ಮಗಳು ನರಕಯಾತನೆ ಅನುಭವಿಸುತ್ತಿದ್ದಾರೆ. ಜನರ ಪಾಲಿಗೆ ಅಫ್ಘಾನ್ ಇದೀಗ ಭೂಲೋಕದ ನರಕವಾಗಿ ಪರಿಣಮಿಸಿದೆ. ಅಫ್ಘಾನಿಸ್ತಾನಾ ಕಂಡು ಕೇಳರಿಯದ ಭೀಕರ ದುರಂತವನ್ನ ಎದುರಿಸುತ್ತಿದೆ. ಅಲ್ಲಿ ಮಹಿಳೆಯರ ಸ್ವಾತಂತ್ರ್ಯ ನಾಶವಾಗಿ ಹೋಗಿದೆ. ಎಲ್ಲಿಯವರೆಗೆ ಅಫ್ಘಾನ್​ ಘನಘೋರ ಸ್ಥಿತಿ ತಲುಪಿದರೆ ಅಂದ್ರೆ, ಅಫ್ಘಾನಿಸ್ತಾನದಲ್ಲಿ ಮಕ್ಕಳಿಗೂ ಜನ್ಮ ಕೊಡಲು ಕೂಡ ಇದೀಗ ತಾಯಂದಿರು ಭಯ ಪಡುತ್ತಿದ್ದಾರೆ.

ತಾಲಿಬಾನ್​ ಉಗ್ರರ ಬಾಯಿಗಿಂತ ಬಂದೂಕುಗಳೇ ಹೆಚ್ಚು ಅಬ್ಬರಿಸುತ್ತಿದೆ. ತಾಲಿಬಾನ್​ಗಳ ಬಲೆಯಲ್ಲಿ ಸಿಲುಕಿದವರು ಒದ್ದಾಡುತ್ತಿದ್ದಾರೆ. ತಾಲಿಬಾನ್​ ನಾಡಲ್ಲಿ ಉಗ್ರರ ಕ್ರೌರ್ಯ ಮೇಲಾಗುತ್ತಿದೆ. 20 ವರ್ಷಗಳ ಕಾಲ ತಾಲಿಬಾನ್​ಗಳ ಮನದಲ್ಲಿ ಕೆಂಡವಾಗಿ ಉಳಿದಿದ್ದ ಕೋಪ ಇದೀಗ ಬೆಂಕಿಯಾಗಿ ಹೊರ ಬಂದಿದ್ದು, ಅಲ್ಲಿಯ ಜನರನ್ನ ಬದುಕನ್ನ ನಾಶ ಮಾಡುತ್ತಿದೆ.

blank

ಅಫ್ಘಾನಿಸ್ತಾನದಲ್ಲಿ ಘನಘೋರ ಸ್ಥಿತಿ ತಲುಪಿದ ಮಹಿಳೆಯರ ಪರಿಸ್ಥಿತಿ
ಮಗುವಿಗೆ ಜನ್ಮಕೊಡಲು ಕೂಡ ಅಘ್ಘಾನಿಸ್ತಾನದಲ್ಲಿ ಸ್ವಾತಂತ್ರ್ಯ ಇಲ್ವಾ?
ಅಮೆರಿಕ ಸೇನಾ ವಿಮಾನದಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ

ಎಸ್.. ತಾಯಂದಿರು ಮಕ್ಕಳನ್ನ ಎಸೆಯುತ್ತಿದ್ದಾರೆ. ಅಫ್ಘಾನಿಸ್ತಾನದ ತಾಯಂದಿರಲ್ಲಿ ಕಣ್ಣೀರು ಬೋರ್ಗೆರೆದು ಬರುತ್ತಿದೆ. ಕರುಳ ಕುಡಿಯನ್ನೇ ಗಡಿಯಾಚೆಗೆ ಎಸೆದಿದ್ದಾರೆ. ಹೆತ್ತೊಡಲು ನೋವಿನ ಸಾಗರದಲ್ಲಿ ಮುಳುಗಿದೆ. ಅಫ್ಘಾನಿಸ್ಥಾನದಲ್ಲಿ ಗರ್ಭಿಣಿಯರು ಮಕ್ಕಳಿಗೆ ಜನ್ಮ ನೀಡಲು ಕೂಡ ಮಹಿಳೆಯರು ಸ್ವಾತಂತ್ರ್ಯ ಕಳ್ಕೊಂಡ್ರಾ ಅನ್ನೋ ಪ್ರಶ್ನೆ ಮೂಡಿದೆ. ಅದ್ಕೆ ಕಾರಣವಾಗಿದ್ದು ಇಂದು ನಡೆದ ಘಟನೆ.
ಅಫ್ಘಾನಿಸ್ಥಾನದಿಂದ ಜರ್ಮನಿಗೆ ಹೊರಟ್ಟಿದ್ದ ಅಮೆರಿಕ ಸೇನಾ ವಿಮಾನದಲ್ಲಿ ಇದೀಗ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ಅಫ್ಘಾನಿಸ್ಥಾನದಲ್ಲಿ ಅಪಾಯದಲ್ಲಿದ್ದ ನೂರಾರು ಜನರನ್ನ ಅಮೆರಿಕ ಸೇನಾ ಹೆಲಿಕಾಫ್ಟರ್​ ಸಿ-17 ಗ್ಲೋಬೋ ಮಾಸ್ಟರ್ ಲಂಡನ್​ಗೆ ಸ್ಥಳಾಂತರಿಸಲಾಗಿತ್ತು. ತಾಲಿಬಾನ್​ಗಳ ಕ್ರೂರತೆಯನ್ನ ಅರಿತ ಮಹಿಳೆ ಕೂಡ ಸಿ-17 ಫ್ಲೈಟ್ ಹತ್ತಿದ್ಳು. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಅಫ್ಘಾನಿಸ್ತಾನದಲ್ಲಿ ಏರ್​ ಲಿಫ್ಟ್​ ಆದ ಫ್ಲೈಟ್ ಜರ್ಮನಿಯಲ್ಲಿ ಲ್ಯಾಂಡ್ ಆಗ್ತಿದ್ದಂಗೆ ಫೈಟ್​ನಲ್ಲಿದ್ದ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾಳೆ. ತಾಯಿ ಹಾಗು ಮಗು ಇಬ್ಬರನ್ನು ಕೂಡ ಇದೀಗ ಜರ್ಮನಿಯ ವಿಮಾನ ನಿಲ್ದಾಣದ ಸಮೀದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ತಾಲಿಬಾನ್​ಗಳಿಂದ 20 ಮಕ್ಕಳು ಕಿಡ್ನಾಪ್
ಪೋಷಕರು ಶರಣಾಗುವಂತೆ ಬ್ಲಾಕ್​ಮೇಲ್

ತಾಲಿಬಾನ್ ರಕ್ಕಸರ ವಕ್ರ ಕಣ್ಣು ಇದೀಗ ಪುಟ್ಟ ಕಂದಮ್ಮಗಳ ಮೇಲೆ ಬಿದ್ದಿದೆ. ಅಫ್ಘಾನ್​ನಲ್ಲಿ ಸಿಕ್ಕ ಸಿಕ್ಕವರ ನರಮೇಧ ನಡೆಸಿರುವ ಈ ಹೇಡಿಗಳು, ಇದೀಗ ಜಗತ್ತು ಏನೆಂದು ಗೊತ್ತಿಲ್ಲದ ಪುಟ್ಟ ಕಂದಮ್ಮಗಳ ಎದುರು ಬಂದೂಕು ಇಟ್ಟಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳು ತಮ್ಮ ವಿರೋಧಿಗಳನ್ನ ಸಿಕ್ಕ ಸಿಕ್ಕ ಕಡೆ ಹುಡುಕಾಟ ನಡೆಸುತ್ತಿದ್ದಾರೆ. ತಮ್ಮ ವಿರೋಧಿಗಳು ಸಿಗದ ಕಾರಣ ಕುಪಿತಗೊಂಡ ಉಗ್ರರು ಇದೀಗ ಅವರ ಮಕ್ಕನ್ನ ಕಿಡ್ನಾಪ್ ಮಾಡಿದ್ದಾರೆ. ಸರಿಸುಮಾರು 20 ಮಕ್ಕಳನ್ನ ಕಿಡ್ನಾಪ್ ಮಾಡಿ ಬ್ಲಾಕ್​ ಮೇಲ್ ಮಾಡುತ್ತಿದ್ದಾರೆ. ತಾಲಿಬಾನ್​ ಪಾಪಿಗಳ ಹೇಡಿತನದಿಂದ ಇದೀಗ ಪುಟ್ಟ ಕಂದಮ್ಮಗಳು ನರಕ ಯಾತನೆ ಅನುಭವಿಸುತ್ತಿದ್ದಾರೆ.

ಅಫ್ಘಾನ್​ ಜನರಿಗೆ ತಾಲಿಬಾನ್​ಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳೋದೇ ಒಂದು ಸಾಹಸಮಯವಾಗಿ ಬಿಟ್ಟಿದೆ. ಜನರು ತಾಲಿಬಾನ್​ಗಳ ಕೈಯಿಂದ ರಕ್ಷಣೆ ಮಾಡಲು, ವಿಮಾನದ ರೆಕ್ಕೆ, ಚಕ್ರಗಳನ್ನ ಆಶ್ರಯವಾಗಿಟ್ಟುಕೊಂಡು ದೇಶ ತೊರೆಯಕು ಸಾಹಸವನ್ನ ಮಾಡಿದ್ರು. ಬದುಕುವ ಆಸೆ ಕಮರಿ ಹೋಗುತ್ತಿದೆ. ಜೀವ ಉಳಿಸುವ ಧಾವಂತದಲ್ಲೇ ಪ್ರಾಣ ಕಳ್ಕೊತ್ತಿದ್ದಾರೆ. ತಾಲಿಬಾನ್​ ಸ್ವಾಧೀನದಿಂದ ಪಲಾಯನ ಮಾಡಲು ಹೋಗಿ ಕಾಲ್ತುಳಿತ ಉಂಟಾಗಿ ಅಫ್ಘಾನ್ ನಾಗರಿಕರು ಸಾಯುತ್ತಿದ್ದಾರೆ. ಪುಟ್ಟ ಪುಟ್ಟ ಕಂದಮ್ಮಗಳನ್ನ ತಾಯಂದಿರು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಳಿಯ ಮುಳ್ಳು ತಂತಿಗಳ ಮೇಲೆ ಎಸೆಯುತ್ತಿದ್ದಾರೆ. ಇದೆಲ್ಲಾ ಜೀವ ಉಳಿಸಲು ಅಫ್ಘಾನ್ ಜನರು ನಡೆಸುತ್ತಿರುವ ಕಸರತ್ತು. ಇದೀಗ ಅಂತಹದ್ದೆ ಮತ್ತೊಂದು ಘಟನೆ ಮರುಕಳಿಸಿದೆ.

ಅಫ್ಘಾನಿಸ್ತಾನದಲ್ಲಿ ಮುಂದುವರೆದ ತಾಲಿಬಾನ್​ ಅಟ್ಟಹಾಸ
ಕಾಬೂಲ್​ ಏರ್ಪೋರ್ಟ್​ನಲ್ಲಿ ಮತ್ತೆ ಏಳು ಜನರು ಸಾವು

ಆಗಸ್ಟ್ 18ರಂದು ಕಾಬೂಲ್​ ಏರ್​ಪೋರ್ಟ್​ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸುಮಾರು 40 ಮಂದಿ ಪ್ರಜೆಗಳು ಸಾವನ್ನಪ್ಪಿದ್ದರು. ಇದಾದ ಮೂರೇ ದಿನಕ್ಕೆ ಇದೇ ಕಾಬೂಲ್​ ಏರ್​​ಪೋರ್ಟ್​ನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಸಿದೆ. ಅಫ್ಘಾನಿಸ್ಥಾನದಲ್ಲಿ ಸಾವಿನ ಸರಣಿ ಮುಂದುವರೆದಿದ್ದು, ಜನರು ಮತ್ತೆ ಮತ್ತೆ ಸಾವಿನ ಮನೆ ಸೇರುತ್ತಿದ್ದಾರೆ.

ಹೌದು.. ತಾಲಿಬಾನ್​​ ಉಗ್ರರಿಂದ ತಪ್ಪಿಸಿಕೊಂಡು ಪಲಾಯನವಾಗಲೆಂದು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೃಹತ್ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ರು. ಅಲ್ಲದೆ ಜನರು ಗೋಡೆ ಹತ್ತಿ ಒಳ ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ, ಏರ್​ಪೋರ್ಟ್​ನಲ್ಲಿ ಗುಂಪು ಸೇರಿದ್ದ ನಾಗರಿಕರನ್ನು ಓಡಿಸಲು ತಾಲಿಬಾನ್ ಉಗ್ರರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಇದ್ರಿಂದ ಗಾಬರಿಗೊಂಡ ಜನರು ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿ ಸರಿಸುಮಾರು ಏಳು ಜನರು ಪ್ರಾಣ ಕಳ್ಕೊಂಡಿದ್ದಾರೆ.

blank

ಪ್ರಾಣ ಉಳಿಸಲು 13 ಸಾವಿರ ಕಿ.ಮೀ ಪ್ರಯಾಣಿಸಿದ ಯುವಕರು

ಮೂರು ದೇಶಗಳ ಸುತ್ತಾಟ, 13 ಸಾವಿರ ಕಿಲೋ ಮೀಟರ್ ಓಡಾಟ. ಇದು ಬರೀ ಓಡಾಟವಲ್ಲ ಇದು ಪ್ರಾಣ ಉಳಿಸಲು ನಡೆಸಿದ ಹೋರಾಟ.ಯಾವಾಗ ತಾಲಿಬಾನ್​ಗಳು ಕಾಬೂಲ್​ನ ಬಾಗಿಲಲ್ಲಿ ಬಂದು ಬಂದೂಕು ಸಹಿತ ನಿಲ್ಲಲು ಶುರು ಮಾಡಿದ್ರೋ , ಅವತ್ತೆ ಅಲ್ಲಿದ್ದ ಜನರಿಗೆ ಮುಂದಿನ ಕರಾಳ ದಿನಗಳ ಅನುಭವ ಆಗಲು ಶುರುವಾಗಿದೆ. ಇದ್ರಿಂದ ಭಯಗೊಂಡು ಜನರು ಒಂದಿಲ್ಲೊಂದು ರೀತಿಯ ಪ್ರಯತ್ನ ನಡೆಸುತ್ತಾರೆ. ಭವಿಷ್ಯದ ಕರಾಳತೆಯನ್ನ ಅರಿತ ಕೆಲವರು ದೇಶ ಬಿಡಲು ರೆಡಿಯಾಗಿದ್ದಾರೆ. ಇದೇ ವೇಳೆ ಅಫ್ಘಾನ್​ನಲ್ಲಿದ್ದ ಪ್ರಾಣ ಉಳಿಸಲು ನಡೆಸಿದ ಪ್ರಯತ್ನ ನಿಜಕ್ಕೂ ಸಿನಿಮ ದೃಶ್ಯಗಳನ್ನ ಮೀರಿಸುವಂತ್ತಿದೆ.

ಕಾಬೂಲ್​ ಟು ದುಬೈ, ದುಬೈ ಟು ಲಂಡನ್, ಲಂಡನ್​ನಿಂದ ಡೆಲ್ಲಿ
ಕಡೆಗೂ ಯಶಸ್ವಿಯಾಗಿ ದೆಹಲಿಗೆ ಬಂದಿಳಿದ ನಾಲ್ವರು ಯುವಕರು

ಕಾಬೂಲ್​ ನ ಬಾಗಿಲ ಬಳಿ ಉಗ್ರರು ಬಂದ ನಿಂತ ಅನುಭವಾಗ್ತಿದ್ದಂಗೆ ನಾಲ್ವರು ಯುವಕರು ದೇಶ ತೊರೆಯುವ ಸಿದ್ಧತೆ ಮಾಡ್ಕೊಂಡಿದ್ದಾರೆ. ಕಾಬೂಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಅಮೆರಿಕ ಸೇನೆಯ ವಶದಲ್ಲಿರುವ ಕಾರಣ , ಇತರೆ ದೇಶಗಳ ವಿಮಾನಗಳು ಅಷ್ಟು ಸುಲಭವಾಗಿ ಅಫ್ಘಾನ್​ನಲ್ಲಿ ಲ್ಯಾಂಡ್ ಆಗುವಂತ್ತಿಲ್ಲ. ಆಗಸ್ಟ್​ 13 ರಂದು ಕಾಬೂಲ್​ಗೆ ತಾಲಿಬಾನ್​ ಪಡೆ ಬರ್ತಿದ್ದಂಗೆ ಹೆದರಿದ ನಾಲ್ವರು ಭಾರತೀಯರು ಪ್ರಾಣ ರಕ್ಷಸಿಲು ಹೋರಾಟ ನಡೆಸಿದ್ದಾರೆ. ಇದೇ ವೇಳೆ ದುಬೈಗೆ ತೆರಳುವ ವಿಮಾನದಲ್ಲಿ ಅಲ್ಲಿಂದ್ದ ದುಬೈಗೆ ಹೊರಟಿದ್ದಾರೆ. ನಂತರ ದುಬೈನಿಂದ ಲಂಡನ್​ ವಿಮಾನವೇರಿ ಲಂಡನ್​ ಹಾರಿದ್ದಾರೆ. ನಂತರ ಲಂಡನ್​​ನಿಂದ ಮತ್ತೆ ದೆಹಲಿ ವಿಮಾನವೇರಿ ತವರು ತಲುಪಿದ್ದಾರೆ. ಇಲ್ಲಿ ನಾವು ಮತ್ತೊಂದು ಮುಖ್ಯ ಅಂಶ ಗಮನಿಸಬೇಕು..ಕಾಬೂಲ್ ಹಾಗೂ ದೆಹಲಿಯ ನಡುವಿನ ಅಂತರ ಒಂದು ಸಾವಿರ ಕಿಲೋ ಮೀಟರ್ ಅಷ್ಟೇ.. ಆದ್ರೆ ಇವರು ಅನಿವಾರ್ಯವಾಗಿ ಕಾಬೂಲ್​ ಟು ದುಬೈ,ದುಬೈ ಟು ಲಂಡನ್ ಹಾರಿ ಕಡೆಗೂ ದೆಹಲಿಗೆ ಬಂದಿಳಿದಿದ್ದಾರೆ. ಈ ಮೂಲಕ 13 ಸಾವಿರ ಕಿಲೋ ಮೀಟರ್ ಸಂಚರಿಸಿ , ತಾಲಿಬಾನ್​ ರಕ್ಕಸರಿಂದ ತಮ್ಮ ಜೀವವನ್ನ ಉಳಿಸಿದ್ದಾರೆ.

ತಾಲಿಬಾನ್​ ಕೋಟೆಗೆ ನುಗ್ಗಿ ಭಾರತೀಯರ ರಕ್ಷಣೆ
ಉಗ್ರರ ಚಕ್ರವ್ಯೂಹವನ್ನ ಭಾರತೀಯರಿಗೆ ಸರ್ಪಗಾವಲು
ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾದ ಏರ್​ಪೋರ್ಟ್​

ಅಫ್ಘಾನ್ ರಾಜಧಾನಿ ಕಾಬೂಲ್ ನಗರದಿಂದ ಇಲ್ಲಿಯವರೆಗೂ 329 ಭಾರತೀಯರು ಮತ್ತು ಇಬ್ಬರು ಅಫ್ಘಾನ್ ಶಾಸಕರು ಸೇರಿದಂತೆ ಸುಮಾರು 400 ಜನರನ್ನು ಯಶಸ್ವಿಯಾಗಿ ಕರೆತರಲಾಗಿದೆ.107 ಭಾರತೀಯರು ಮತ್ತು 23 ಅಫ್ಘಾನ್ ಸಿಖ್ಖರು ಮತ್ತು ಹಿಂದುಗಳು ಸೇರಿದಂತೆ ಒಟ್ಟು 168 ಜನರನ್ನು ಕಾಬೂಲ್ ನಿಂದ ಭಾರತೀಯ ವಾಯುಪಡೆಯ ವಿಮಾನದ ಮೂಲಕದ ಭಾರತಕ್ಕೆ ಕರೆತರಲಾಗಿದೆ. ಇದೇ ವೇಳೆ ದೆಹಲಿಯ ಏರ್​ಪೋರ್ಟ್​​ ಭಾವುಕ ಸನ್ನಿವೇಶವೊಂದಕ್ಕೆ ಸಾಕ್ಷಿಯಾಯಿತು.

ತಾಲಿಬಾನ್ ಚಕ್ರವ್ಯೂಹವನ್ನ ಭೇದಿಸಿ ಯಶಸ್ವಿಯಾಗಿ ಭಾರತಕ್ಕೆ ಬಂದಿಳಿದ ತನ್ನ ತಾಯಿ ಹಾಗೂ ತಂಗಿಯನ್ನ ನೋಡಿದ ಪುಟ್ಟ ಮಗುವಿನ ಕಣ್ಣಲ್ಲಿ ಆನಂದಭಾಷ್ಟ ಸುರಿಯುತ್ತಿತ್ತು. ಈ ದೃಶ್ಯ ಕಂಡು ಬಂದಿದ್ದು ದೆಹಲಿ ಹಿಂಡೆನ್​ ವಾಯುನೆಲೆಯಲ್ಲಿ.. ಹೌದು..ತನ್ನ ತಾಯಿ ತಾಯಿ ಹಾಗೂ ತಂಗಿಯನ್ನ ನೋಡಿದ ಮಗು ತಬ್ಬಿಕೊಂಡು ಮುತ್ತಿಕ್ಕುವ ದೃಶ್ಯ ಹೃದಯಸ್ಪರ್ಶಿ ದೃಶ್ಯ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಭಾರತಕ್ಕೆ ಬಂದ 400 ಜನರ ಪೈಕಿ ಅಫ್ಘಾನಿಸ್ತಾನದ ಸಂಸತ್ ಸದಸ್ಯ ನರೀಂದರ್ ಸಿಂಗ್ ಖಾಲ್ಸಾ ಅಫ್ಘಾನ್​ ಪರಿಸ್ಥಿತಿಯನ್ನ ನೆನೆದು ಕಣ್ಣೀರು ಹಾಕಿದ್ದಾರೆ.

ತಾಲಿಬಾನ್​ ಕೋಟೆಗೆ ನುಗ್ಗಿ ಉಗ್ರರ ಚಕ್ರವ್ಯೂಹವನ್ನ ಭೇಧಿಸಿ ಜನರನ್ನ ರಕ್ಷಣೆ ಮಾಡಲಾಗಿದೆ. ತಾಯಿನಾಡಿಗೆ ಮರಳಿದವರ ಮುಖದಲ್ಲಿ ಮಂದಹಾಸದ ನಗು ಅರಳಿದೆ. ಇನ್ನೂ ಕೂಡ ಅಫ್ಘಾನ್​ನಲ್ಲಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ದಿನಕ್ಕೆ ಎರಡು ಬಾರಿ ರಕ್ಷಣಾ ಕಾರ್ಯ ನಡೆಸಲು ಅಮೆರಿಕ ಗ್ರೀನ್ ಸಿಗ್ನಲ್ ಕೊಟ್ಟಿದೆ.

ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆಗೆ ಗ್ರೀನ್ ಸಿಗ್ನಲ್

ಅಮೆರಿಕ ಹಾಗೂ ನ್ಯಾಟೋ ಪಡೆಗಳಿಂದ ಭಾರತಕ್ಕೆ ಅನುಮತಿ

ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ದೇಶದ ಪ್ರಜೆಗಳನ್ನಕಾಬೂಲ್ ನಿಂದ ವಾಪಸ್ ಕರೆಸಿಕೊಳ್ಳುವ ನಿಟ್ಟಿನಲ್ಲಿ ದಿನಕ್ಕೆ 2 ವಿಮಾನಗಳ ಕಾರ್ಯಾಚರಣೆ ನಡೆಸಲು ಭಾರತಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಅಫ್ಘಾನ್ ತಾಲಿಬಾನ್ ತೆಕ್ಕೆಗೆ ಜಾರಿದ್ರೂ ಕೂಡ ಕಾಬೂಲ್ ನಲ್ಲಿರುವ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಾಂತ್ರಿಕವಾಗಿ ಅಮೆರಿಕ ಹಾಗೂ ನ್ಯಾಟೋ ಪಡೆಗಳ ನಿಯಂತ್ರಣದಲ್ಲಿಯೇ ಇದೆ. ಅಮೆರಿಕ ಹಾಗೂ ನ್ಯಾಟೋ ಪಡೆಗಳು ಭಾರತಕ್ಕೆ ಅನುಮತಿ ನೀಡಿವೆ .

ಒಟ್ಟಿನಲ್ಲಿ ಅಫ್ಘಾನ್​ನಲ್ಲಿ ದಿನದಿಂದ ದಿನಕ್ಕೆ ಘನಘೋರ ಸ್ಥಿತಿ ತಲುಪುತ್ತಿದ್ದು,ಅಲ್ಲಿ ಬದುಕೋದೆ ಒಂದು ಪವಾಡ ಎಂಬತ್ತಾಗಿದೆ. ಜನರು ಬದುಕಲು ಒಂದಿಲ್ಲೊಂದು ರೀತಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಪುಟ್ಟ ಕಂದಮ್ಮಗಳ ಮೇಲೂ ಉಗ್ರರ ವಕ್ರದೃಷ್ಠಿ ಬಿದ್ದಿರುವುದರಿಂದ ಅಫ್ಘಾನ್ ಅಮ್ಮಂದಿರ ಅಳಲು ಮುಗಿಲು ಮುಟ್ಟುವಂತ್ತಾಗಿದೆ.

Source: newsfirstlive.com Source link