ಹೈಟಿ ಭೂಕಂಪದಲ್ಲಿ 344 ಜನ ನಾಪತ್ತೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

ಹೈಟಿ ಭೂಕಂಪದಲ್ಲಿ 344 ಜನ ನಾಪತ್ತೆ -ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​​ ರೌಂಡ್ಅಪ್

1) ಇಂದಿನಿಂದ 9 ರಿಂದ 12ನೇ ತರಗತಿಗಳು ಆರಂಭ

blank

ಇಂದಿನಿಂದ ರಾಜ್ಯಾದ್ಯಂತ 9 ರಿಂದ 12ನೇ ತರಗತಿಗಳು ಆರಂಭವಾಗಲಿದ್ದು, ಶಿಕ್ಷಣ ಇಲಾಖೆಯೂ ಸಕಲ ರೀತಿಯಲ್ಲೂ ಸಜ್ಜಾಗಿದೆ . ಇಷ್ಟು ದಿನ ಕೇವಲ ಆನ್​​ಲೈನ್ ಕ್ಲಾಸ್​ನಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು, ಆಫ್​​ಲೈನ್ ಕ್ಲಾಸ್​ನತ್ತ ಮುಖ ಮಾಡಲಿದ್ದಾರೆ. ಇನ್ನು ಶಾಲೆಗಳ ಸಿಬ್ಬಂದಿ ಸಹ 9-10ನೇ ತರಗತಿಗಳ ಕೊಠಡಿಗಳನ್ನ ಶುಚಿಗೊಳಿಸಿ, ಸ್ಯಾನಿಟೈಸ್ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಟ್ವೀಟ್​ ಮಾಡಿ ವಿದ್ಯಾರ್ಥಿಗಳಿಗೆ ಶುಭಕೋರಿದ್ದಾರೆ.

2 ) ತಮಿಳುನಾಡಿಗೆ 250 ಬಸ್​ಗಳ ಕಾರ್ಯಾಚರಣೆ

blank

ರಾಜ್ಯದಲ್ಲಿ ಕೊರೊನಾ ಕಾರಣದಿಂದಾಗಿ ಕಳೆದ ಏಪ್ರಿಲ್​ 27ರಿಂದ ಕರ್ನಾಟಕ ಸಾರಿಗೆ ಸಂಸ್ಥೆ ತಮಿಳುನಾಡಿಗೆ ಹೋಗುವ ಬಸ್​ಗಳನ್ನ ನಿರ್ಬಂಧಿಸಿತ್ತು. ಈಗ ಮತ್ತೆ ಅಂತರ್​ ರಾಜ್ಯ ಬಸ್​ಗಳ ಓಡಾಡಕ್ಕೆ KSRTC ಅನುಮತಿ ನೀಡಿದ್ದು, ತಮಿಳುನಾಡಿಗೆ 250 ಬಸ್​ಗಳ ಕಾರ್ಯಾಚರಣೆ ನಡೆಸಲಿದೆ ಅಂತ ಮಾಹಿತಿ ನೀಡಿದೆ. KSRTC ಬಸ್​ಗಳು ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ ತಿರುಕೊಯಿಲೂರು, ಕೊಯಂಬತ್ತೂರು, ತಿರುನಲ್ಲಾರ್, ತಿರುಚಿ, ಮಧುರೈ, ಕುಂಬಕೊಣಂ, ಕಾಂಚಿಪುರಂ,ಚೆನೈ ಹಾಗೂ ಊಟಿಗೆ ಸಂಚಾರ ಮಾಡಲಿವೆ ಅಂತ ತಿಳಿಸಿದೆ.

3) ಅಫ್ಘಾನಿಸ್ತಾನದಿಂದ ದೆಹಲಿಗೆ ಬಂದಿಳಿದ 7 ಕನ್ನಡಿಗರು

ಅಫ್ಘಾನಿಸ್ತಾನದ ಅಗ್ನಿಕುಂಡದಲ್ಲಿ ಸಿಲುಕಿ ಪರದಾಡುತ್ತಿದ್ದ ಭಾರತೀಯರು ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ..ಆ ಕರಾಳ ಕೂಪದಲ್ಲಿ ಸಿಲುಕಿ ದಿಕ್ಕೆಟ್ಟಿದ್ದ ಹಲವು ಭಾರತೀಯರು ಕೊನೆಗೂ ಸೇಫಾಗಿ ಮನೆ ಸೇರಿದ್ದಾರೆ. ಭಾರತೀಯ ವಾಯುಸೇನೆಯ ರೋಚಕ ಕಾರ್ಯಚರಣೆಯ ಫಲವಾಗಿ, 107 ಭಾರತೀಯರು ಸ್ವದೇಶಕ್ಕೆ ಮರಳಿದ್ದು, ಅದರಲ್ಲಿದ್ದ 7 ಕನ್ನಡಿಗರೂ ವಾಪಸ್ಸಾಗಿದ್ದಾರೆ. ಇನ್ನು ಅಫ್ಘಾನ್​ ಕನ್ನಡಿಗರನ್ನ ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕೋವಿಡ್ ರಿಪೋರ್ಟ್ ಬಂದ ಬಳಿಕ ಊರುಗಳಿಗೆ ಕಳುಹಿಸಲು ಸಿದ್ದತೆ ನಡೆಸಲಾಗುತ್ತಿದೆ. ಬಹುಶಃ ಇಂದು ಕೊರೊನಾ ವರದಿ ಸಿಗುವ ಸಾಧ್ಯತೆ ಇದ್ದು, ಇಂದೇ ಎಲ್ಲರನ್ನೂ ದೆಹಲಿಯಿಂದ ಕರ್ನಾಟಕಕ್ಕೆ ಕರೆತರುವ ಸಾಧ್ಯತೆ ಇದೆ.

4) ಪಂಜ್​ಶಿರ್ ಪ್ರಾಂತ್ಯದ ಮೇಲೆ ಉಗ್ರರ ಕಣ್ಣು

blank

ಇಡೀ ಅಫ್ಘಾನಿಸ್ತಾನವನ್ನೇ ಕಬ್ಜಾ ಮಾಡಿಕೊಂಡಿರುವ ತಾಲಿಬಾನಿಗಳಿಗೆ ಪಂಜ್​ಶಿರ್ ಪ್ರಾಂತ್ಯ ಮಾತ್ರ ಕೈವಶವಾಗಿಲ್ಲ. ಇಡೀ ದೇಶವನ್ನೇ ಹೆದರಿಸಿ ಬೆದರಿಸಿ ಹಿಡಿತಕ್ಕೆ ತೆಗೆದುಕೊಂಡಿರೋ ನರರಾಕ್ಷಸರಿಗೆ ಪಂಜ್​ಶಿರ್ ದುಸ್ವಪ್ನವಾಗಿ ಕಾಡುತ್ತಿದೆ. ಯಾಕಂದ್ರೆ, ಅಲ್ಲಿ ತಾಲಿಬಾನ್ ಹಾಗೂ ಅದರ ರೀತಿ ರಿವಾಜುಗಳನ್ನು ದೊಡ್ಡ ಮಟ್ಟದಲ್ಲಿ ವಿರೋಧಿಸೋ ವಿರೋಧಿ ಪಡೆಯೇ ಇದೆ.. ಹೇಗಾದ್ರೂ ಮಾಡಿ ಆ ಪ್ರಾಂತ್ಯವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸುತ್ತಿರೋ ಸೈತಾನರು ಈಗ ಪಂಜ್​ಶಿರ್​​ಗೆ ಲಗ್ಗೆ ಇಟ್ಟಿದ್ದಾರೆ.

5) ಅಫ್ಘಾನ್​ನಲ್ಲಿ ಶೀಘ್ರದಲ್ಲೇ ಹೊಸ ಸರ್ಕಾರ ಘೋಷಣೆ

ಅಫ್ಘಾನಿಸ್ತಾನದಲ್ಲಿ ಹೊಸ ಸರ್ಕಾರವನ್ನು ಶೀಘ್ರದಲ್ಲಿಯೇ ಘೋಷಿಸುವುದಾಗಿ ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ತಿಳಿಸಿದ್ದಾರೆ. ಹೊಸ ಸರ್ಕಾರ ರಚನೆ ಕುರಿತು ರಾಜಕೀಯ ನಾಯಕರ ಜೊತೆ ಮಾತುಕತೆ ನಡೆಸಲಾಗ್ತಿದೆ. ಸದ್ಯದಲ್ಲಿಯೇ ಹೊಸ ಸರ್ಕಾರ ಘೋಷಿಸಲಾಗುವುದು. ತಾಲಿಬಾನಿ ನಾಯಕರು ರಾಜಕೀಯ ನಾಯಕರನ್ನು ಭೇಟಿ ಆಗಿದ್ದಾರೆ. ರಾಜಧಾನಿ ಕಾಬೂಲ್‌ ನಗರದಲ್ಲಿಯೇ ರಾಜಕೀಯ ನಾಯಕರನ್ನು ಭೇಟಿಯಾಗಿ ಸರ್ಕಾರ ರಚನೆ ಬಗ್ಗೆ ಚರ್ಚೆ ಮುಂದುವರೆಸಿದ್ದಾರೆ. ಅವರ ಅಭಿಪ್ರಾಯಗಳಿಗೂ ಸಹ ತಾಲಿಬಾನ್ ಪ್ರಾಮುಖ್ಯತೆ ನೀಡಲಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.

6) ಇನ್​ಫೋಸಿಸ್​ ಸಿಇಓಗೆ ಕೇಂದ್ರ ಸಮನ್ಸ್​ ಜಾರಿ

ಆದಾಯ ತೆರಿಗೆ ಇಲಾಖೆಯ ಹೊಸ ವೆಬ್​ ಪೋರ್ಟಲ್​ನಲ್ಲಿ ಕಾಣಿಸಿಕೊಳ್ಳುತ್ತಿರುವ ದೋಷವನ್ನು ಸರಿಪಿಡಿಸಿ ಎಂದು ಇನ್ಫೋಸಿಸ್ ಸಿಇಓ ಸಲೀಲ್​ ಪರೇಕ್​ಗೆ ಕೇಂದ್ರ ಸರ್ಕಾರ ಸಮನ್ಸ್​ ಜಾರಿ ಮಾಡಿದೆ. ಹೊಸ ಇ_ಫೈಲಿಂಗ್​ ಪೋರ್ಟಲ್​ ಪ್ರಾರಂಭಿಸಿ ಮೂರು ತಿಂಗಳಾದ್ರೂ ಪೋರ್ಟಲ್​ನಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ವಿಷಯವಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ ಇನ್​ಫೋಸಿಸ್​ಗೆ ಪತ್ರ ಬರೆದಿದ್ರು. ಆದ್ರೆ ಈ ವಿಚಾರವಾಗಿ ಸಿಇಓ ಸಲೀಲ್​ ಯಾವುದೇ ಉತ್ತರ ನೀಡದ ಕಾರಣ ಕೇಂದ್ರ ಸಮನ್ಸ್​ ಜಾರಿ ಮಾಡಿದೆ. ಮತ್ತು ಇಂದು ಸಚಿವಾಲಯದ ಮುಂದೆ ಹಾಜರಾಗುವಂತೆ ಸೂಚಿಸಿದೆ.

7 ) ಅಸ್ಸಾಂ ಸಿಎಂ ಮೇಲೆ ಕೇಸ್ ದಾಖಲು

ಕೊರೊನಾ ನಿಯಮಗಳನ್ನ ಪಾಲಿಸದ ಕಾರಣ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಸೇರಿದಂತೆ ಕೇಂದ್ರ ಸಚಿವ ಸರ್ಬಾನಂದ್​ ಸೋನಾವಾಲ್​ ಹಾಗೂ ಇತರೆ ಬಿಜೆಪಿ ನಾಯಕರ ವಿರುದ್ಧ ಅಸ್ಸಾಂ ಪೊಲೀಸರು ಕೇಸ್​ ದಾಖಲಿಸಿಕೊಂಡಿದ್ದಾರೆ. ರಾಜ್ಯದಲ್ಲಿ ನಡೆದ ಬಿಜೆಪಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಕೋವಿಡ್​ ನಿಯಮಗಳನ್ನ ಗಾಳಿಗೆ ತೂರಿದ್ದಾರೆ ಅಂತ ಅಸ್ಸಾಂ ಜತೀಯಾ ಪರಿಷದ್​ ಹಾಗೂ ವಿದ್ಯಾರ್ಥಿಗಳ ಸಂಘಟನೆ ಮತ್ತು ಅಸ್ಸೋಂ ಜಾತಿಯಾತ್ಬೀ ಯುಬ ಚಾತ್ರಾ ಪರಿಷದ್​ಗಳು ದೂರು ಸಲ್ಲಿಸಿದ್ದವು.

8) ಹೈಟಿ ಭೂಕಂಪದಲ್ಲಿ 344 ಜನ ನಾಪತ್ತೆ

ಕೆರಿಬಿಯನ್​ ದ್ವೀಪರಾಷ್ಟ್ರ ಹೈಟಿಯಲ್ಲಿ ಸಂಭವಿಸಿದ್ದ ಭಾರೀ ಭೂಕಂಪದಲ್ಲಿ ಮೃತರಾದವರ ಸಂಖ್ಯೆ 2 ಸಾವಿರದ 207ಕ್ಕೆ ಏರಿಕೆಯಾಗಿದೆ ಅಂತ ನಾಗರಿಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ. ಆಗಸ್ಟ್​ 14ರಂದು ಸಂಭವಿಸಿದ್ದ 7.2 ರಷ್ಟು ತೀವ್ರತೆಯ ಭೂಕಂಪದಲ್ಲಿ 12 ಸಾವಿರದ 268 ಮಂದಿ ಗಾಯಗೊಂಡಿದ್ದು, ಸುಮಾರು 53 ಸಾವಿರದ ಮನೆಗಳಿಗೆ ಹಾನಿಯಾಗಿದೆ. ಮತ್ತು 344 ಜನ ಕಾಣೆಯಾಗಿದ್ದಾರೆ ಅಂತ ನಾಗರಿಕ ರಕ್ಷಣಾ ಸಂಸ್ಥೆ ತಿಳಿಸಿದೆ.

9) 10 ಶಾಲೆಗಳಿಗೆ ಭಾರತೀಯ ಹಾಕಿ ಟೀಂ ಆಟಗಾರರ ಹೆಸರು

ಪಂಜಾಬ್​ನ ಶಿಕ್ಷಣ ಸಚಿವ ವಿಜರ್ ಇಂದೆರ್ ಸಿಂಗ್ಲಾ ತಮ್ಮ ರಾಜ್ಯದ 10 ಶಾಲೆಗಳಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಹಾಕಿ ತಂಡದ ಆಟಗಾರರ ಹೆಸರುಗಳನ್ನ ಮರುನಾಮಕರಣ ಮಾಡಿದ್ದಾರೆ. ಶಾಲೆಗಳ ಹೆಸರನ್ನ ಮರುನಾಮಕರಣ ಮಾಡಲು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅನುಮತಿ ನೀಡಿದ್ದಾರೆ. ಮಿಥಾಪುರ್​ನ ಸರ್ಕಾರಿ ಹಿರಿಯ ಪ್ರೌಢ ಶಾಲೆಗಳಿಗೆ ಕ್ಯಾಪ್ಟನ್ ಮನ್​ಪ್ರೀತ್ ಸಿಂಗ್ ಹೆಸರಿಡಲಾಗಿದೆ. ಮಿಥಾಪುರ್​ನ ಶಾಲೆಯನ್ನು ಇನ್ನು ಮುಂದೆ ಕ್ಯಾಪ್ಟನ್ ಮನ್​ಪ್ರೀತ್ ಸಿಂಗ್ ಸರ್ಕಾರಿ ಹಿರಿಯ ಪ್ರೌಢಶಾಲೆ ಎಂದು ಕರೆಯಲಾಗುವುದು ಎಂದಿದ್ದಾರೆ. ಇನ್ನು ಅಮೃತ್​ಸರ್​ನ ಜಿಎಸ್ಎಸ್​ಎಸ್​ ಶಾಲೆಗೆ ವೈಸ್​ಕ್ಯಾಪ್ಟನ್​ ಹರ್ಮನ್​ಪ್ರೀತ್ ಸಿಂಗ್ ಹೆಸರು ಇಡಲಾಗುವುದು ಎಂದಿದ್ದಾರೆ.

10) ಟೈಗರ್​-3 ಚಿತ್ರದ ಸಲ್ಲು ಫೋಟೋ ಲೀಕ್​

blank

ಬಾಲಿವುಡ್​ ನಟ ಸಲ್ಮಾನ್ ಖಾನ್ ಸದ್ಯ​ ಟೈಗರ್​ 3 ಚಿತ್ರಕ್ಕಾಗಿ ರಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ. ಈ ಮಧ್ಯೆ ಚಿತ್ರದಲ್ಲಿ ಸಲ್ಲು ಭಾಯ್​ ಅವರ ಪಾತ್ರವನ್ನು ಪರಿಚಯಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್​ ಆಗಿದೆ. ಉದ್ದನೆ ಗಡ್ಡ, ಕೆಂಪು ಬಣ್ಣದ ತಲೆಗೂದಲು ಇರುವ ಸಲ್ಮಾನ್​ ಖಾನ್​ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿದ ಜನ ಮಾತ್ರ ಸಲ್ಲು ಭಾಯ್​ ಹೊಸ ಲುಕ್​ ನೋಡಿ ಕನ್​ಫ್ಯೂಸ್​ ಆಗಿದ್ದಾರೆ. ಅಂದಹಾಗೆ ಯಶ್​​ ರಾಜ್​ ಬ್ಯಾನರ್​ನಲ್ಲಿ ನಿರ್ಮಾಣವಾಗ್ತಿರೋ ಟೈಗರ್​ 3 ನಲ್ಲಿ ಸಲ್ಲು ಜೊತೆ ನಟಿ ಕತ್ರಿನಾ ಕೈಫ್​ ನಟಿಸುತ್ತಿದ್ದು, ಸಲ್ಮಾನ್​ ಖಾನ್​ ರಾ ಏಜೆಂಟ್​ ಪಾತ್ರದಲ್ಲಿ ಮಿಂಚಲಿದ್ದಾರೆ.

Source: newsfirstlive.com Source link