ಬೂದಿ ಮುಚ್ಚಿದ ಕೆಂಡದಂತಿದೆ ಖಾತೆ ಕಿಚ್ಚು -ಬೊಮ್ಮಾಯಿಗೆ ಮುಗಿಯದ ಸಂಪುಟ ಸಂಕಷ್ಟ

ಬೂದಿ ಮುಚ್ಚಿದ ಕೆಂಡದಂತಿದೆ ಖಾತೆ ಕಿಚ್ಚು -ಬೊಮ್ಮಾಯಿಗೆ ಮುಗಿಯದ ಸಂಪುಟ ಸಂಕಷ್ಟ

ಬೆಂಗಳೂರು: ಸರ್ಕಾರದಲ್ಲಿ ಅಸಮಾಧಾನದ ಬೆಂಕಿ ಬೂದಿಮುಚ್ಚಿದ ಹಾಗಿದೆ. ಸಿಎಂ ಊರಿಗೆ ಬಂದ್ರು ಜಾರಕಿಹೊಳಿ ದೂರವೇ ಉಳಿದ್ರೆ, ಸ್ಥಾನಮಾನ ಸಿಕ್ಕರೂ ಶ್ರೀರಾಮುಲು ಮತ್ತು ಆನಂದ್​​ ಸಿಂಗ್​​​ ಅಧಿಕಾರ ಸ್ವೀಕರಿಸ್ತಿಲ್ಲ. ಇತ್ತ ಸಿ.ಪಿ ಯೋಗೇಶ್ವರ್​​​ ಕಥೆ ಯಾರಿಗೂ ಬೇಡ ಅನ್ನುವಂತಾಗಿದೆ.

ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ರಚನೆ ಆಗಿ 18 ದಿನಗಳು ಕಳೆದಿದೆ. ಆದ್ರೆ ಖಾತೆ ಕಿಚ್ಚು ಈವರೆಗೂ ಆರಿಲ್ಲ. ಸ್ಥಾನ ವಂಚಿತರ ಅಸಮಾಧಾನದ ಕಿಡಿ ಈಗಲೂ ಧಗಧಗಿಸ್ತಿದೆ. ಸಂಪುಟ ರಚನೆ ಬಳಿಕ ಉದ್ಭವವಾಗಿರುವ ಕಗ್ಗಂಟು ಸಿಎಂ ಬೊಮ್ಮಾಯಿಗೆ ಹೊಸ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

blank

ಸಿಎಂ ಬೊಮ್ಮಾಯಿ ವಿರುದ್ಧ ಸಿಡಿಯುತ್ತಾ ಬೆಳಗಾವಿ ಕಿಡಿ!
ಬಂಡಾಯಗಾರ, ಮೈತ್ರಿ ಸರ್ಕಾರ ಪತನದ ರೂವಾರಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತೆ ಸಿಡಿದೇಳುವ ಸುಳಿವು ನೀಡಿದ್ದಾರೆ. ಅವರ ನಡೆ ಮತ್ತೆ ಗೊಂದಲ ಮೂಡಿಸಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಬೆಳಗಾವಿ ಆಗಮಿಸಿದ್ರು, ರಮೇಶ್​​​ ಸಾಹುಕಾರ್ ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಸಹಜವಾಗಿ ಇದು ಸಿಎಂಗೆ ಇರುಸು ಮುರುಸು ತರಿಸಿತ್ತು.

ಆದ್ರೆ, ಸಿಎಂ ಬೊಮ್ಮಾಯಿ ಹೇಳೋದೆ ಬೇರೆ. ಸರ್ಕಾರದಲ್ಲಿ ಯಾವುದೇ ಅಸಮಾಧಾನಗಳಿಲ್ಲ. ರಮೇಶ್ ಜಾರಕಿಹೋಳಿ ಜೊತೆ ನಾನು ಮಾತನಾಡಿದ್ದೇನೆ ಎಂದಿದ್ದಾರೆ. ಆದ್ರೆ ಬೆಳಗಾವಿಯಲ್ಲೇ ಇದ್ರೂ ಸಿಎಂ ಕಾರ್ಯಕ್ರಮದಿಂದ ಸಾಹುಕಾರ್ ದೂರ ಉಳಿದಿದ್ಯಾಕೆ ಅನ್ನೋ ಪ್ರಶ್ನೆಗಳು ಏಳ್ತಿವೆ.

blank

ಅವಿಭಜಿತ ಬಳ್ಳಾರಿ ನಾಯಕರ ಮುಗಿಯದ ಖಾತೆ ಕ್ಯಾತೆ!
ಜಾರಕಿಹೊಳಿ, ಸವದಿ, ಅಭಯ್​​​ ಪಾಟೀಲ್​​​. ಇದು ಸಚಿವ ಸ್ಥಾನ ಸಿಗದ ಕಾರಣ ಬೆಳಗಾವಿಯ ನಾಯಕರು ಹೊಂದಿರುವ ಅಸಮಾಧಾನದ ಕಿಡಿ. ಆದ್ರೆ, ಸಚಿವ ಸ್ಥಾನ ಸಿಕ್ಕ ಬಳಿಕವೂ ಅವಿಭಜಿತ ಬಳ್ಳಾರಿ ನಾಯಕರ ತಕರಾರೆ ಬೇರೆ. ಖಾತೆ ಹಂಚಿಕೆಯಾದ್ರೂ ಅಧಿಕೃತವಾಗಿ ಕೆಲಸ ಶುರುಮಾಡಿಲ್ಲ.. ಆನಂದ್​​ ಸಿಂಗ್​​, ಶ್ರೀರಾಮುಲು ಜವಾಬ್ದಾರಿ ನಿರ್ವಹಿಸದೇ ಅಲಕ್ಷ್ಯ ತೋರ್ತಿದ್ದು, ಸಿಎಂ ಕೂಡಾ ಈ ಇಬ್ಬರು ನಾಯಕರ ಬಗ್ಗೆ ಬೇಸರ ಹೊಂದಿದ್ದಾರೆ.

ಸಿಎಂ ಬೊಮ್ಮಾಯಿ ಸಿಡಿಮಿಡಿ!
ಈವರೆಗೆ ಶ್ರೀರಾಮುಲು ಮತ್ತು ಆನಂದ್​​​ ಸಿಂಗ್​​​​ ತಮ್ಮ ಕೆಲಸ ಆರಂಭಿಸಿಲ್ಲ. ಇಬ್ಬರಿಗೂ ವಹಿಸಿದ ಇಲಾಖೆಗಳ ಅಧಿಕಾರಿಗಳ ಜೊತೆ ಅಧಿಕೃತವಾಗಿ ಸಭೆ ಕೂಡ ನಡೆಸಿಲ್ಲ. ಸೆಪ್ಟೆಂಬರ್​​​ 13ರಂದು ವಿಧಾನಮಂಡಲದ ಅಧಿವೇಶನ ಬೇರೆ ಆರಂಭ ಆಗ್ತಿದೆ. ಅಧಿವೇಶನದಲ್ಲಿ ನೂತನ ಸಚಿವರುಗಳ ಪರಿಚಯ ಮಾಡಬೇಕು. ಆದರೆ ಖಾತೆ ಹಂಚಿಕೆ ಆಗಿ 15 ದಿನ ಕಳೆದ್ರೂ ಈ ಇಬ್ಬರು ಸಚಿವರು ವಿಧಾನಸೌಧಕ್ಕೆ ಆಗಮಿಸಿಲ್ಲ. ಇದರಿಂದ ವಿಪಕ್ಷಗಳ ಟೀಕೆಗೆ ಗುರಿಯಾಗುವ ಭೀತಿ ಸಿಎಂಗೆ ಕಾಡ್ತಿದ್ದು, ಸಚಿವರಿಬ್ಬ ನಡೆ ಬಗ್ಗೆ ಸಿಎಂ ಬೊಮ್ಮಾಯಿ, ತಮ್ಮ ಆಪ್ತರ ಬಳಿ ಅಸಮಾಧಾನ ಹೊರ ಹಾಕಿದ್ದಾರೆ.

blank

‘ಎಕ್ಸಾಂ’ ಬರೆದ ‘ಸೈನಿಕ’ನಿಂದ ಸಚಿವರ ಅಂತರ!
ಸಂಪುಟದಲ್ಲಿ ಸಚಿವ ಸ್ಥಾನ ವಂಚಿತ ಸಿ.ಪಿ. ಯೋಗೇಶ್ವರ್‌ ಏಕಾಂಗಿ ಆಗಿದ್ದಾರೆ. ಬಿಎಸ್​​ವೈ ನಾಯಕತ್ವ ಬಗ್ಗೆ ಎಕ್ಸಾಂ ಬರೆದು ಫಲಿತಾಂಶ ಪಡೆದಿದ್ದ ಸಿಪಿವೈ ಒಂಟಿ ಆಗಿದ್ದಾರೆ. ಯೋಗೇಶ್ವರ್​​ ಹೇಳಿದ ಕೆಲಸಗಳಿಂದ ಸಚಿವರು ದೂರ ಉಳಿತಿದ್ದಾರೆ. ಅಷ್ಟಕ್ಕೂ ಸಿ.ಪಿ ಯೋಗೇಶ್ವರ್​​​ ಕಂಡ್ರೆ ಸಚಿವರು ದೂರ ನಿಲ್ತಿರೋದ್ಯಾಕೆ? ಅನ್ನೋದಕ್ಕೆ ಈ ಕಾರಣಗಳೇ ಸಾಕ್ಷಿ.

ಸಚಿವರಿಗೆ ‘ಸೈನಿಕ’ ಅಂದ್ರೆ ಭಯ!?
ಬಿಎಸ್​​ವೈ ನಾಯಕತ್ವ ಬದಲಾವಣೆ ವಿಚಾರದಲ್ಲಿ ಸಿಪಿವೈ ಪ್ರಮುಖ ಪಾತ್ರ ನಿರ್ವಹಿಸಿದ್ರು. ಕೆಲಸಕ್ಕೆ ಯಾರನ್ನೋ ಕಳುಹಿಸಿ, ಇನ್ನೊಂದು ಮತ್ತೊಂದು ಮಾಡಿದ್ರೆ ಮುಂದೇನು ಮಾಡೋದು. ಏನೋ ಮಾಡಲು ಹೋಗಿ, ಇನ್ನೇನೋ ಆದ್ರೆ ಅನ್ನೋ ಚಿಂತೆ ಸಚಿವರಿಗೆ ಕಾಡ್ತಿರುವಂತಿದೆ.

ಇದರ ಜೊತೆಗೆ ಬಿಎಸ್​​ವೈ ಭಯ ಕೂಡಾ ಸಚಿವರಿಗೆ ಕಾಡ್ತಿದೆ. ಸಿಪಿವೈ ಕೆಲಸ ಮಾಡಿದ್ರೆ, ಯಡಿಯೂರಪ್ಪ ಕೆಂಗಣ್ಣಿಗೆ ಗುರಿ ಆಗಬಹುದು ಅನ್ನೋ ಆತಂಕ ಸಚಿವರು ಹೊಂದಿದಂತಿದೆ. ಒಟ್ಟಾರೆ, ಖಾತೆ ಕ್ಯಾತೆ, ಸ್ಥಾನ ವಂಚಿತರ ಸಿಟ್ಟು ಸರ್ಕಾರದಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಸಾರಿ ಹೇಳ್ತಿದೆ.

ವಿಶೇಷ ವರದಿ; ಶ್ರೀಕಾಂತ್​​​ ಜೊತೆ ಗಣಪತಿ, ನ್ಯೂಸ್​​ಫಸ್ಟ್​​, ಬೆಳಗಾವಿ

Source: newsfirstlive.com Source link