ಹೈವೇ ಕ್ರೆಡಿಟ್‌ ಪಾಲಿಟಿಕ್ಸ್​: ಸಂಸದ ಪ್ರತಾಪ್‌ ಸಿಂಹಗೆ ಟಾಂಗ್​ ಕೊಟ್ಟ ಸ್ವಪಕ್ಷದ ಶಾಸಕ ರಾಮದಾಸ್​

 ಹೈವೇ ಕ್ರೆಡಿಟ್‌ ಪಾಲಿಟಿಕ್ಸ್​: ಸಂಸದ ಪ್ರತಾಪ್‌ ಸಿಂಹಗೆ ಟಾಂಗ್​ ಕೊಟ್ಟ ಸ್ವಪಕ್ಷದ ಶಾಸಕ ರಾಮದಾಸ್​

ಮೈಸೂರು: ಬೆಂಗಳೂರು ಹೈವೆ ಕ್ರೆಡಿಟ್‌ಗಾಗಿ ಬಿಜೆಪಿ ಕಾಂಗ್ರೆಸ್ ಪೈಪೋಟಿ ವಿಚಾರವಾಗಿ ಸಂಸದ ಪ್ರತಾಪ್‌ಸಿಂಹಗೆ ಸ್ವಪಕ್ಷೀಯ ಶಾಸಕರೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮೊನ್ನೆ ಬೆಂಗಳೂರು-ಮೈಸೂರು ದಶ ಪಥದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಮೋದಿ ಸರ್ಕಾರದ ಯೋಜನೆ ಅಂದಿದ್ದ ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಹೆಚ್​.ವಿಶ್ವನಾಥ್ ಗುಡುಗಿದ ಬೆನ್ನಲ್ಲೇ ಶಾಸಕ ಎಸ್.ಎ‌.ರಾಮದಾಸ್  ಸಂಸದ ಪ್ರತಾಪ್ ಸಿಂಹಗೆ ಟಾಂಗ್​ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಬಿಜೆಪಿ ಶಾಸಕ ಎಸ್.ಎ‌.ರಾಮದಾಸ್ ಇದು ಯಾರಿಗೂ ಸೇರಿದ ಕ್ರೆಡಿಟ್ ಅಲ್ಲ. ಇದು ಭಾರತ ಮಾತೆಗೆ, ದೇಶಕ್ಕೆ ಸೇರಿದ ಕ್ರೆಡಿಟ್‌. ಜನರ ತೆರಿಗೆ ಹಣದಲ್ಲಿ ‌ನಿರ್ಮಾಣವಾಗುತ್ತಿರುವ ರಸ್ತೆ ಇದು. ಇದು ನಾನು ಮಾಡಿದ್ದು, ನಾವು ಮಾಡಿದ್ದು ಎನ್ನುವುದು ಸರಿಯಲ್ಲ ಎಂದು ಸಂಸದ ಪ್ರತಾಪ್‌ ಸಿಂಹಗೆ ಪರೋಕ್ಷವಾಗಿ ಟಾಂಗ್​ ನೀಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹೈವೆ ಇದು ಎಲ್ಲರಿಗೂ ಸೇರಿದ ಅಭಿವೃದ್ಧಿ ಕಾರ್ಯ. ನನ್ನ ಕ್ಷೇತ್ರದಲ್ಲೂ ನಾನು ರಸ್ತೆ ನಿರ್ಮಾಣ ಮಾಡುತ್ತಿದ್ದೇನೆ. ಆದರೆ ಅದರ ಕ್ರೆಡಿಟ್ ನನ್ನದಲ್ಲ, ಎಲ್ಲಾ ಇಲಾಖೆ ವ್ಯವಸ್ಥೆಗೆ ಸೇರಿದ್ದು. ರಾಷ್ಟ್ರೀಯ ಹೆದ್ದಾರಿ ವಿಚಾರದಲ್ಲೂ ಅದು ಎಲ್ಲರಿಗೂ ಸೇರಿದ್ದು. ಇದನ್ನು ನಾನು ಮಾಡಿದ್ದೇನೆ, ನಾವು ಮಾಡಿದ್ದೇವೆ ಎಂದು ಹೇಳುವುದು ಸರಿಯಲ್ಲ ಎಂದು ತಮ್ಮದೆ ಪಕ್ಷದ ಸಂಸದನಿಗೆ ರಾಮದಾಸ್ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಹೈವೇ ಪಾಲಿಟಿಕ್ಸ್​: ‘ಎಷ್ಟು ದಿನ ಸುಳ್ಳು ಹೇಳ್ತೀರಾ..?’ -ಪ್ರತಾಪ ಸಿಂಹ ವಿರುದ್ಧ ವಿಶ್ವನಾಥ್ ಗುಡುಗು

ಮೈಸೂರು ಪಾಲಿಕೆ ಮೇಯರ್ ಚುನಾವಣೆ ವಿಚಾರ ಕುರಿತು ಮಾತನಾಡಿ ಯಾರು, ಯಾರ ಜೊತೆ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ.ಪಕ್ಷದವರು ಯಾರನ್ನ ಅಭ್ಯರ್ಥಿ ಮಾಡ್ತಾರೋ ಅವರಿಗೆ ನಾನು ಸೇರಿ ನಮ್ಮ ಸದಸ್ಯರು ಮತ ಹಾಕುತ್ತೇವೆ.ನಮ್ಮ ಕ್ಷೇತ್ರದಲ್ಲೇ 12 ಜನ ಸದಸ್ಯರು, ನಾನು ಸೇರಿ 13 ಮತಗಳಿವೆ. ಪಕ್ಷ ಸೂಚಿಸಿದವರಿಗೆ ನಮ್ಮ ಮತ ಇರುತ್ತದೆ.ಜಿಲ್ಲಾ ಉಸ್ತುವಾರಿ ಸಚಿವರು ಅದನ್ನ ನೋಡಿಕೊಳ್ತಿದ್ದಾರೆ ಎಂದಿದ್ದಾರೆ.

ಸ್ವಪಕ್ಷದ ವಿರುದ್ಧವೇ ವಿಶ್ವನಾಥ್ ಟೀಕೆ ವಿಚಾರಕ್ಕೆ ಸಂಬಂಧಿಸಿ, ಅವರಿಗೆ ಹೇಳುವಷ್ಟು ದೊಡ್ಡವನು ನಾನಲ್ಲ. ಅವರು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಅವರ ಆತ್ಮಸಾಕ್ಷಿಗೆ ಗೊತ್ತು.ಈ‌ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.

Source: newsfirstlive.com Source link