ಹಾನಗಲ್​​ ಉಪಚುನಾವಣೆ; ಪ್ರತಿಷ್ಠೆಯಾಗಿ ಸ್ವೀಕರಿಸಿದ ಬೊಮ್ಮಾಯಿ.. ಸೈಲೆಂಟ್​​ ಆದ್ರಾ ಕಾಂಗ್ರೆಸ್ಸಿಗರು?

ಹಾನಗಲ್​​ ಉಪಚುನಾವಣೆ; ಪ್ರತಿಷ್ಠೆಯಾಗಿ ಸ್ವೀಕರಿಸಿದ ಬೊಮ್ಮಾಯಿ.. ಸೈಲೆಂಟ್​​ ಆದ್ರಾ ಕಾಂಗ್ರೆಸ್ಸಿಗರು?

ಹಾವೇರಿ: ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಸಿಎಂ ಬಸವರಾಜ್​​ ಬೊಮ್ಮಾಯಿ ಪ್ರತಿಷ್ಠೆ ಕಣವಾಗಿ ಸ್ವೀಕರಿಸದ್ದೇ ತಡ ಸ್ಥಳೀಯ ಕಾಂಗ್ರೆಸ್​ ನಾಯಕರು ಫುಲ್​​ ಸೈಲೆಂಟ್​​ ಆಗಿದ್ದಾರೆ. ಉಪಚುನಾವಣೆಯಲ್ಲಿ ಹಾನಗಲ್​​​ ಟಿಕೆಟ್​ಗಾಗಿ ಮಾಜಿ ಸಚಿವ ಮನೋಹರ ತಹಶೀಲ್ದಾರ್​​ ಮತ್ತು ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಶ್ರೀನಿವಾಸ ನಡುವೆ ಭಾರೀ ಪೈಪೋಟಿ ನಡೆದಿತ್ತು. ಇಬ್ಬರು ತಮ್ಮ ಬೆಂಬಲಿಗರನ್ನು ಕರೆದುಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಮನೆಗಳಿಗೆ ಭೇಟಿ ನೀಡಿ ಟಿಕೆಟ್​​​ ಬೇಡಿಕೆ ಇಟ್ಟಿದ್ದರು.

ಈಗ ಸಿಎಂ ಬಸವರಾಜ್​​​​ ಬೊಮ್ಮಾಯಿ ಹಾನಗಲ್​​​​ ಕ್ಷೇತ್ರದ ಉಪಚುನಾವಣೆಯನ್ನು ಸೀರಿಯಸ್ಸಗಾಗಿ ಪರಿಗಣಿಸಿದ್ದಾರೆ ಎಂದು ಕಾಂಗ್ರೆಸ್​ ನಾಯಕರು ಸೈಲೆಂಟ್​​ ಆಗಿದ್ದಾರೆ. ಬಸವರಾಜ್​​​ ಬೊಮ್ಮಾಯಿ ಸಿಎಂ ಆದ ಮೇಲೆ ನಡೆಯುತ್ತಿರುವ ಮೊದಲ ಚುನಾವಣೆ ಮತ್ತು ತವರು ಜಿಲ್ಲೆಯದ್ದು ಎಂಬ ಕಾರಣಕ್ಕೆ ಹೀಗಾಗಿದೆ. ಬೊಮ್ಮಾಯಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಲು ಹಲವು ಕಾರಣಗಳಿವೆ.

ಹೀಗಿವೆ ಹಲವು ಕಾರಣಗಳು..

  • ಬಸವರಾಜ್ ಬೊಮ್ಮಾಯಿ‌ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಪಕ್ಕದಲ್ಲೇ ಇದೆ ಹಾನಗಲ್! ಹೀಗಾಗಿ ಈ ಕ್ಷೇತ್ರವನ್ನೂ ಸಿಎಂ ಬೊಮ್ಮಾಯಿ‌ ತಮ್ಮ ಸ್ವಂತ ಕ್ಷೇತ್ರದಂತೆ ಪರಿಗಣಿಸಿ ಉಪ ಚುನಾವಣೆ ಎದುರಿಸಲು ಮುಂದಾಗಿರೋದು ಕೈ ನಾಯಕರು ಹಿಂದೇಟು ಹಾಕುವಂತೆ ಮಾಡಿದೆ.
  • ಹಾನಗಲ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ‌ಯವರ ತವರು ಜಿಲ್ಲೆಯ ಕ್ಷೇತ್ರ. ಹಾವೇರಿ ಜಿಲ್ಲೆ ಮುಖ್ಯಮಂತ್ರಿಯವರು ಪ್ರತಿನಿಧಿಸುವ ಜಿಲ್ಲೆ. ತಮ್ಮ ತವರು ಜಿಲ್ಲೆಯ ಚುನಾವಣೆ ಸಿಎಂ ಪಾಲಿಗೆ ಪ್ರತಿಷ್ಠೆಯೇ ಹೌದು.
  • ಹಾನಗಲ್ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಉದಾಸಿಯವರನ್ನು ಪರಮ ಗುರು ಎಂದೇ ಆರಾಧಿಸುವ ಬಸವರಾಜ್ ಬೊಮ್ಮಾಯಿ‌ ಈ ಉಪಚುನಾವಣೆಯನ್ನು ಭಾವನಾತ್ಮಕವಾಗಿಯೂ ಗೆಲ್ಲಲೇಬೇಕಾದ ಯುದ್ಧವಾಗಿ ಪರಿಗಣಿಸಿದ್ದಾರೆ.
  • ಬಸವರಾಜ್ ಬೊಮ್ಮಾಯಿ‌ಯವರ ರಾಜಕೀಯ ಏಳಿಗೆಯಲ್ಲಿ ಉದಾಸಿಯವರ ಪಾತ್ರವೂ ಇದೆ. ಹೀಗಾಗಿ ಈ ಉಪಚುನಾವಣೆ ಗೆಲ್ಲುವ ಮೂಲಕ ಗುರುಗಳ ಋಣ ತೀರಿಸುವ ಸಂಕಲ್ಪ ಮಾಡಿದ್ದಾರೆ ಸಿಎಂ ಬೊಮ್ಮಾಯಿ‌.

ಒಟ್ಟಿನಲ್ಲಿ ಮುಖ್ಯಮಂತ್ರಿಯಾದ ಮೇಲೆ ಬಸವರಾಜ್ ಬೊಮ್ಮಾಯಿ‌ ಅವರಿಗೆ ಎದುರಾಗಲಿರುವ ಮೊದಲ ದೊಡ್ಡ ಸವಾಲ್ ಈ ಉಪ ಚುನಾವಣೆ. ಹೀಗಾಗಿ ತಮ್ಮನ್ನು ತಾವು ಪ್ರೂವ್ ಮಾಡಲೇಬೇಕಾದ ಅನಿವಾರ್ಯತೆ ಸಿಎಂಗಿದೆ. ಹೀಗಾಗಿ ಅವರು ಶತಾಯ ಗತಾಯ ಗೆಲುವಿಗಾಗಿ ತಮಗಿರುವ ಎಲ್ಲ ಅಧಿಕಾರ ಬಳಸಿಕೊಳ್ಳುವ ಸಾಧ್ಯತೆ ಇದೆ. ಇದನ್ನು ಅಂದಾಜಿಸಿಯೇ ಕೈ ನಾಯಕರು ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿಎಂಗೆ ಎದುರಾಯ್ತು ಹೊಸ ಟೆನ್ಶನ್​.. ಮತ್ತೆ ರೆಬೆಲ್​ ಆಗೋಕೆ ಸಚಿವರ ತಂತ್ರ? 

ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

Source: newsfirstlive.com Source link