ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಾರಿಗೆ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನ

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಸಾರಿಗೆ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನಕ್ಕೆ ಶಾಂತಿನಗರದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕರ ಕಚೇರಿಯಲ್ಲಿ ಇಂದು ಚಾಲನೆ ನೀಡಲಾಯಿತು.

ಶಾಂತಿನಗರದಲ್ಲಿರುವ ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕರ ಕಚೇರಿಯಲ್ಲಿ ಚಾಲನೆ ನೀಡಿದ ಬಳಿಕ ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಆಡಳಿತ ಕಚೇರಿಗೂ ಭೇಟಿ ನೀಡಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಮೆಟ್ರೋ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆಗಬೇಕಾದ ಕಾರ್ಯಗಳು ಹಾಗೂ ಹಕ್ಕೋತ್ತಾಯ ಪತ್ರಗಳನ್ನು ಬಿ.ಎಂ.ಆರ್.ಸಿ.ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಆಡಳಿತ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸಲ್ಲಿಸಲಾಯಿತು. ಇದನ್ನೂ ಓದಿ: ಕನ್ನಡ ಭಾಷಾ ಕಲಿಕೆ ಪರಿಣಾಮಕಾರಿ ಅನುಷ್ಠಾನವಾಗಲಿ – ಶಿಕ್ಷಣ ಸಚಿವರಿಗೆ ಮನವಿ

ಮೆಟ್ರೋ ನಿಲ್ದಾಣಗಳಲ್ಲಿ ಕನ್ನಡ ಪುಸ್ತಕ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡುವುದು. ಸಾರ್ವಜನಿಕ ದೂರುಗಳು, ಸಲಹೆಗಳ ನಮೂನೆಗಳು ಮತ್ತು ಅರ್ಜಿಗಳು ಕನ್ನಡದಲ್ಲಿರಬೇಕು. ನಿಲ್ದಾಣಗಳಲ್ಲಿ ಮತ್ತು ಕಚೇರಿಗಳಲ್ಲಿ ನಿರ್ವಹಣೆ ಮಾಡುವ ದಾಖಲಾತಿ ಪುಸ್ತಕಗಳನ್ನು ಕನ್ನಡದಲ್ಲಿ ನಿರ್ವಹಣೆ ಮಾಡುವುದು. ಸಂಸ್ಥೆ ನೀಡುವ ಗುರುತಿನ ಚೀಟಿಯಲ್ಲಿ ಕನ್ನಡ ಭಾಷೆ ಬಳಸುವುದು. ಮಾನವ ಸಂಪನ್ಮೂಲ ಕೇಂದ್ರ ಕಚೇರಿಯ ಉದ್ಯೋಗಕ್ಕೆ ಸಂಬಂಧಿಸಿದ ಕಚೇರಿ ಆದೇಶಗಳಲ್ಲಿ ಕನ್ನಡ ಬಳಕೆ ಮಾಡುವುದು. ಮೆಟ್ರೋ ರೈಲುಗಳಲ್ಲಿ ಪ್ರದರ್ಶನಗೊಳ್ಳುವ 31 ಜಿಲ್ಲೆಗಳ ವಿಶೇಷತೆ, ಪ್ರಸಿದ್ಧ ಸ್ಥಳಗಳ ಮಾಹಿತಿ ನಿಲ್ದಾಣಗಳಲ್ಲಿಯೂ ಇರಬೇಕು. ಅಗ್ನಿ ಅವಘಡ ಸೇರಿದಂತೆ ಇತರೆ ತುರ್ತು ಸಂದರ್ಭಗಳ ಬಗ್ಗೆ ಮಾಹಿತಿ ನೀಡುವ ನಾಮಫಲಕಗಳು ಕನ್ನಡದಲ್ಲಿರಬೇಕು. ಕನ್ನಡ ಕಲಿಕಾ ತರಬೇತಿ ಕೇಂದ್ರ ನಿರಂತರವಾಗಿ ನಡೆಸಬೇಕೆಂದು ಮೆಟ್ರೋ ಸಂಸ್ಥೆಗೆ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಐರ್ಲೆಂಡ್‍ನಲ್ಲಿದ್ದರೂ ಬಿಡದ ನಂಟು- ಮಕ್ಕಳಿಗೆ ನಿರಂತರ ಕನ್ನಡ ಪಾಠ

blank

ಸಾರಿಗೆ ವಲಯದ ಮುಖೇನ ಇಂದು ತೀವ್ರಗತಿಯಲ್ಲಿ ರಾಜ್ಯದ ಹೊರಗಿನ ಜನತೆಯ ಆಗಮನ-ನಿರ್ಗಮನ, ವಲಸೆ ಹೆಚ್ಚುತ್ತಿದೆ. ಸಾರಿಗೆ ವಲಯದಲ್ಲೂ ಕನ್ನಡ ಭಾಷೆಯ ಬಳಕೆ ಕುಂದದೇ ಗಟ್ಟಿಯಾಗಿ ನೆಲೆಯಾಗಬೇಕು. ಟಿಕೆಟ್, ಬಸ್, ಮೆಟ್ರೋದಂತಹ ಬೆರಳೆಣಿಕೆಯ ಪದಗಳನ್ನು ಬಿಟ್ಟರೆ ಉಳಿದ ಕಡೆ ಕನ್ನಡ ಪದಗಳನ್ನು ಬಳಸಬೇಕು. ಈ ಸದುದ್ದೇಶಕ್ಕಾಗಿ ಕನ್ನಡಿಗರೆಲ್ಲರೂ ಬದ್ಧರಾಗಿರಬೇಕು. ಕರ್ನಾಟಕವೆಂದು ನಾಮಕರಣ ಮಾಡಿದ, ಹಿಂದುಳಿದ ವರ್ಗಗಳ ಆಶಾಕಿರಣ, ಉಳುವವನಿಗೆ ಭೂಮಿ ಕೊಡಿಸಿದ, ನಾಡಿನ ಜನಪ್ರಿಯ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಜನ್ಮದಿನದ ಸಂದರ್ಭ ಸಾರಿಗೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಸಾರಿಗೆ ವಲಯ ಅಂದರೆ ಕರಾರಸಾಸಂ(ಕೆಎಸ್‍ಆರ್‍ ಟಿಸಿ), ಬೆಂಮಸಾಸಂ(ಬಿಎಂಟಿಸಿ), ಮೆಟ್ರೋ, ಬೇಂದ್ರೆ ಸಾರಿಗೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಮೂರು ದಿನಗಳ ಕಾಲ ಕನ್ನಡ ಬಳಕೆ ಜಾಗೃತಿ ಅಭಿಯಾನವನ್ನು ಪ್ರಾಧಿಕಾರವು ಹಮ್ಮಿಕೊಂಡಿದೆ. ಕನ್ನಡನಾಡಿನಲ್ಲಿ ನೆಲೆಸಿದವರು ಕನ್ನಡದಲ್ಲೇ ಮಾತು, ಸಂವಹನ ನಡೆಸುವಷ್ಟು ಕನ್ನಡ ಕಲಿತು, ಮಾತನಾಡಬೇಕು. ಈ ಸದಾಶಯ, ಸದುದ್ದೇಶವೇ ನಮ್ಮ ಹಕ್ಕೊತ್ತಾಯ ಮತ್ತು ಮನವಿ ಎಂದು ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಹಕ್ಕೊತ್ತಾಯ ಹಾಗೂ ಮನವಿ ಪತ್ರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಲ್ಲಿಸಲಾಯಿತು.

blank

ಇದೇ ಸಂದರ್ಭದಲ್ಲಿ ಮೆಟ್ರೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಂಜುಮ್ ಪರ್ವೇಜ್ ಅವರು ನಮ್ಮ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿರುವ ಅನ್ಯರಾಜ್ಯದ ಸಿಬ್ಬಂದಿ ಕನ್ನಡ ಕಲಿಯಲು ಉತ್ಸುಕರಾಗಿದ್ದು, ಇವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ತರಬೇತಿ ಶಿಬಿರ ಅಥವಾ ಜಾಲತಾಣ ಕನ್ನಡ ಕಲಿಕೆ ಕುರಿತು . ಪೋರ್ಟಲ್‍ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು.

ಬೈಯಪ್ಪನಹಳ್ಳಿ ಮೆಟ್ರೋ ಆಡಳಿತ ಕಚೇರಿಯ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಮೆಟ್ರೋ ರೈಲಿನ ಒಳಭಾಗದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ವಿಶೇಷತೆಗಳ ಪ್ರದರ್ಶನ, ಕನ್ನಡದ ದಿಕ್ಸೂಚಿ, ಸೂಚನಾ ಫಲಕಗಳು, ಸಿಬ್ಬಂದಿಯು ಪ್ರಯಾಣಿಕರೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಅನುಕೂಲವಾಗುವಂತೆ ತರಬೇತಿ ಕಾರ್ಯಕ್ರಮಗಳು ಹಾಗೂ ತಾಂತ್ರಿಕ ನಲೆಗಟ್ಟಿನಲ್ಲಿ ಕನ್ನಡದ ಬಳಕೆಗೆ ಅನುಕೂಲವಾಗುವಂತೆ ಈಗಾಗಲೇ ಕೈಗೊಂಡಿರುವ ಶ್ಲಾಘನೀಯ ಕ್ರಮಗಳನ್ನು ಪರಿವೀಕ್ಷಿಸಲಾಯಿತು. . ಇದನ್ನೂ ಓದಿ: ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಕನ್ನಡಿಗರು ಫಿದಾ

ಈ ಸಂದರ್ಭದಲ್ಲಿ ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಆಡಳಿತ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಎ.ಎಸ್.ಶಂಕರ್, ಕನ್ನಡ ಕೋಶ ಬೆಂಗಳೂರು ಮೆಟ್ರೋ ಮುಖ್ಯಸ್ಥರಾದ ಮಧುಶ್ರೀ, ಮೆಟ್ರೋ ಸಾರ್ವಜನಿಕಾ ಸಂಪರ್ಕಾಧಿಕಾರಿ ಭಾರತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ಮತ್ತಿತರರು ಹಾಜರಿದ್ದರು.

Source: publictv.in Source link