ಮೈಸೂರು ಫೈರಿಂಗ್ ಕೇಸ್: ‘ಎಷ್ಟೇ ಕಿರುಚಾಡಿದರೂ ಸಹಾಯಕ್ಕೆ ಯಾರೂ ಬರಲಿಲ್ಲ’ -ಮೃತನ ಸಹೋದರ ಕಣ್ಣೀರು

ಮೈಸೂರು ಫೈರಿಂಗ್ ಕೇಸ್: ‘ಎಷ್ಟೇ ಕಿರುಚಾಡಿದರೂ ಸಹಾಯಕ್ಕೆ ಯಾರೂ ಬರಲಿಲ್ಲ’ -ಮೃತನ ಸಹೋದರ ಕಣ್ಣೀರು

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗುಂಡಿನ ಸದ್ದು ಮೊಳಗಿದೆ. ಚಿನ್ನಾಭರಣ ದೋಚಲು ಬಂದ ದುಷ್ಕರ್ಮಿಗಳು ಫೈರಿಂಗ್ ನಡೆಸಿದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ದಡದಹಳ್ಳಿ ಗ್ರಾಮದ ಚಂದ್ರು (23) ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಯುವಕ. ನಗರದ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಅಂಗಡಿಯನ್ನ ಮೂವರು ದರೋಡೆಕೋರರು ರಾಬರಿ ಮಾಡಲು ಲಗ್ಗೆ ಇಟ್ಟಿದ್ದರು. ಇದನ್ನು ತಡೆಯಲು ಅಂಗಡಿ ಮಾಲೀಕ ಪ್ರಯತ್ನಿಸಿದ್ದಾನೆ. ಆಗ ದರೋಡೆಕೋರರು ನಡೆಸಿದ ಫೈರಿಂಗ್​ನಿಂದ ಯುವಕ ಸಾವನ್ನಪ್ಪಿದ್ದಾನೆ.

blank

ಈ ಬಗ್ಗೆ ಮೃತ ಯುವಕನ ಸಹೋದರ ಮಾತನಾಡಿ.. ನಾನು ನನ್ನ ತಮ್ಮ ಕಿವಿಗೆ ಓಲೆ ತೆಗೆದುಕೊಳ್ಳಲು ಹೋಗಿದ್ವಿ. ಜ್ಯೂವೆಲರಿ ಶಾಪ್‌ ಓಪನ್ ಆಗ್ತಿದ್ದಂತೆ ಶೂಟ್ ಮಾಡಿಬಿಟ್ಟರು. ಗುಂಡು ತಾಗಿದ ಕೂಡಲೇ ತಮ್ಮ ಚಂದ್ರು ಪ್ರಜ್ಞೆ ತಪ್ಪಿ ಬಿದ್ದ. ಎಷ್ಟೇ ಕಿರುಚಾಡಿದರೂ, ಅಂಗಲಾಚಿದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ನನ್ನ ತಮ್ಮನನ್ನ ಉಳಿಸಿ ಅಂತ ಬೇಡಿದರೂ ಆಸ್ಪತ್ರೆಗೆ ಸಾಗಿಸಲು ಯಾರೂ ಬರಲಿಲ್ಲ. ಕೊನೆಗೆ ಆಟೋವೊಂದರಲ್ಲಿ ಕರೆದುಕೊಂಡು ಹೋದಾಗ ಪ್ರಾಣ ಹೋಗಿತ್ತು ಅಂತಾ ಸಹೋದರ ರಂಗಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.

blank
ಮೃತ ಚಂದ್ರು

ಘಟನೆ ಬಗ್ಗೆ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾತನಾಡಿ.. ಆರೋಪಿಗಳನ್ನ ಶೀಘ್ರದಲ್ಲೇ ಬಂಧಿಸುತ್ತೇವೆ. ಮೈಸೂರು ನಗರದ ಇಡೀ ಕ್ರೈಂ ಪೊಲೀಸರ‌ನ್ನ ತನಿಖೆಗೆ ನಿಯೋಜಿಸಲಾಗಿದೆ. ಮೈಸೂರು ಜನತೆ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಂತಹ ವ್ಯಕ್ತಿಗಳು ಕಂಡು ಬಂದಾಗ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಅಂತಾ ತಿಳಿಸಿದ್ದಾರೆ.

Source: newsfirstlive.com Source link