ತಾಲಿಬಾನ್​ಗೆ ಸೆಡ್ಡು ಹೊಡೆದ ಪಂಜ್​​ಶಿರ್​ಗೆ​​ ಮೊದಲ ಸಾಥ್​! -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ರೌಂಡಪ್

ತಾಲಿಬಾನ್​ಗೆ ಸೆಡ್ಡು ಹೊಡೆದ ಪಂಜ್​​ಶಿರ್​ಗೆ​​ ಮೊದಲ ಸಾಥ್​! -ಈ ಹೊತ್ತಿನ ಟಾಪ್​​ 10 ಸುದ್ದಿಗಳ ಕ್ವಿಕ್​​ರೌಂಡಪ್

01. ರಾಜ್ಯ ಪ್ರವಾಸಕ್ಕೆ ಬಿಎಸ್​ವೂಗೆ ಹೊಸ ಕಾರು 

ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬಿ ಎಸ್​ ಯಡಿಯೂರಪ್ಪ ರಿಲಾಕ್ಸ್​ ಮೂಡಿನತ್ತ ವಾಲಿದ್ರು. ಕುಟುಂಬದ ಜೊತೆಗೆ ಮಾಲ್ಡೀವ್ಸ್​ ಪ್ರವಾಸಕ್ಕೆ ತೆರಳಿದ್ರು. ಸಣ್ಣ ಬ್ರೇಕ್​ನ ಬಳಿಕ ಯಡಿಯೂರಪ್ಪನವರು ರಾಜ್ಯಕ್ಕೆ ವಾಪಾಸ್ಸಾಗಿದ್ದಾರೆ. ಬಿಎಸ್​​ವೈ ವಾಪಾಸ್ಸಾಗ್ತಿದ್ದಂತೆ ಅವರಿಗಾಗಿ 1 ಕೋಟಿ ಮೌಲ್ಯದ ಟೊಯೋಟಾ ವೆಲ್​ಫೈರ್ ಕಾರು ಖರೀದಿಸಲಾಗಿದೆ.

02. 20 ದಿನಗಳ ನಂತರ ರಾಜ್ಯ ಪ್ರವಾಸಕ್ಕೆ ಬಿಎಸ್​ವೈ ಸಜ್ಜು

ಯಡಿಯೂರಪ್ಪನವರ ರಾಜಕಿಯ ಜೀವನದ ಸೆಕೆಂಡ್​ ಇನ್ನಿಂಗ್ಸ್​ಗೆ ಅಖಾಡ ಸಿದ್ಧವಾಗಿದೆ. ಅಂದಹಾಗೇ, ಪಕ್ಷ ಸಂಘಟನೆಗೆ ಸಕಲ ರೀತಿಯಲ್ಲೂ ಸಜ್ಜಾಗಿರುವ ಯಡಿಯೂರಪ್ಪನವ್ರು, ತಮ್ಮ ಹೊಸ ಕಾರಿನಲ್ಲೇ ರಾಜ್ಯ ಪ್ರವಾಸಕ್ಕಾಗಿ ಮುಂದಾಗಿದ್ದಾರೆ. ಈ ಬಗ್ಗೆ ಖುದ್ದು ಯಡಿಯೂರಪ್ಪನವರೇ ನಿನ್ನೆ ಮಾಹಿತಿ ಕೊಟ್ಟಿದ್ದು, 20 ದಿನಗಳ ನಂತರ ರಾಜ್ಯ ಪ್ರವಾಸ ಮಾಡೋದಾಗಿ ತಿಳಿಸಿದ್ದಾರೆ. ಇನ್ನು, ರಾಜ್ಯ ಪ್ರವಾಸಕ್ಕೆ ಯಡಿಯೂರಪ್ಪನವರು ತೆರಳಿದಾಗ ಕಾರಿನಿಂದಲೇ ನಿಂತು ಜನರತ್ತ ಕಣ್ಣಾಯಿಸಲು ಸನ್​ರೂಫ್​ ಸಿಸ್ಟಮ್ ಕೂಡ ಈ ಕಾರಿನಲ್ಲಿದೆ.

03. ಸಾರಿಗೆ ನೌಕರರ ಸಂಬಳಕ್ಕಾಗಿ ₹60.82 ಕೋಟಿ ಬಿಡುಗಡೆ

ಸಾರಿಗೆ ನೌಕರರ ಜುಲೈ ತಿಂಗಳ ಸಂಬಳಕ್ಕಾಗಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಸತ್ಯವತಿ ಆದೇಶ ಹೊರಡಿಸಿದ್ದು, ಸರ್ಕಾರ 60.82 ಕೋಟಿ ಹಣ ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ. KSRTC, ವಾಯುವ್ಯ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ಸಿಬ್ಬಂದಿಯ ಶೇಕಡಾ 25 ರಷ್ಟು ಸಂಬಳಕ್ಕಾಗಿ 60.82 ಕೋಟಿ ಬಿಡುಗಡೆ ಮಾಡಲಾಗಿದೆ. ಈ ಸಂಬಂಧ KSRTCಗೆ 27.74 ಕೋಟಿ, ವಾಯುವ್ಯ ಸಾರಿಗೆ ನಿಗಮಕ್ಕೆ 17.48 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆಗೆ 15.61 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.

04. ಪಂಜ್​​ಶಿರ್​ ಪಡೆಗೆ ತಜಕಿಸ್ತಾನ ಸಪೋರ್ಟ್​

ತಾಲಿಬಾನ್​ ಜೊತೆಗಿನ ಸಮರಕ್ಕೆ ಪಂಜ್​ಶಿರ್​ ಪಡೆ ಸರ್ವಸನ್ನದ್ಧವಾಗಿದೆ. ಆದ್ರೆ, ತಾಲಿಬಾನ್​ ಜೊತೆಗೆ ಯುದ್ಧಕ್ಕೆ ಬೇಕಾದ ನೆರವಿಗಾಗಿ ನಾರ್ದರ್ನ್​ ಅಲಯನ್ಸ್ ಕಾಯುತ್ತಿದ್ದು, ಗಡಿ ಹಂಚಿಕೊಂಡಿರುವ ತಜಕಿಸ್ತಾನ ಮೊಟ್ಟ ಮೊದಲ ಸಾಥ್​ ನೀಡಿದೆ. ಇನ್ನು, ಯುದ್ಧೋಪಕರಣಗಳು ಸೇರಿ ಅಗತ್ಯ ಸಾಮಾಗ್ರಿಗಳನ್ನ ಹೆಲಿಕಾಪ್ಟರ್​ಗಳ ಮೂಲಕ ಪಂಜ್​ಶಿರ್​ ಪಡೆಗೆ ತಜಕಿಸ್ತಾನ ರವಾನಿಸಿದೆ. ತಾಲಿಬಾನ್​ ಅಫ್ಘಾನಿಸ್ತಾನಕ್ಕೆ ದಾಳಿ ಮಾಡಿದ್ದ ವೇಳೆ ತಜಕಿಸ್ತಾನಕ್ಕೆ ಪರಾರಿಯಾಗಿದ್ದ ಅಫ್ಘನ್​ ಯೋಧರು ಹೆಲಿಕಾಪ್ಟರ್​ಗಳಲ್ಲಿ ಈಗ ಪಂಜ್​ಶಿರ್​ ಪ್ರದೇಶಕ್ಕೆ ಬಂದಿರುವ ಮಾಹಿತಿ ಲಭ್ಯವಾಗಿದೆ.

05. ಪಂಜ್​ಶಿರ್​ನಲ್ಲಿ ವಾಲಿಬಾಲ್​ ಆಡಿದ ಅಮರುಲ್ಲಾ

ಅಫ್ಘಾನಿಸ್ತಾನ ತಾಲಿಬಾನ್ ವಶವಾದ್ರೂ ನಾನೇ ಅಫ್ಘಾನಿಸ್ತಾನದ ಅಧ್ಯಕ್ಷ ಅಂತ ಉಪಾಧ್ಯಕ್ಷ ಅಮರುಲ್ಲಾ ಸಲೇಹ್ ಹೇಳಿದ್ರು. ಇದೇ ಅಮರುಲ್ಲಾ ಸಲೇಹ್​ ಈಗ​ ಪಂಜ್​​​ಶಿರ್​ನಲ್ಲಿ ವಾಲಿಬಾಲ್​ ಆಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈಗಾಗಲೇ ವಿರೋಧಿಗಳಾದ ಪಂಜ್​​ ಶಿರ್​ ಯೋಧರೊಂದಿಗೆ ಹೋರಾಡಲು ತಾಲಿಬಾನಿ​ಗಳು ಹರಸಾಹಸಪಡ್ತಿದ್ದಾರೆ. ಸದ್ಯ, ಈ ಪ್ರ್ಯಾಂತ್ಯವೇ ರಣಾಂಗಣವಾಗಿ ಮಾರ್ಪಡುವ ಎಲ್ಲಾ ಲಕ್ಷಣಗಳು ಇದೆ. ಆದ್ರೆ ಇದ್ಯಾವುದಕ್ಕೂ ಕೇರ್​ ಮಾಡದ ಅಮರುಲ್ಲಾ ಸಲೇಹ್​ ವಾಲಿಬಾಲ್​ ಆಡುತ್ತಾ ರಿಲ್ಯಾಕ್ಸ್​ ಆಗಿದ್ದಾರೆ.

06. ಇಂದು ಜಿ-7 ರಾಷ್ಟ್ರಗಳ ತುರ್ತು ಸಭೆ

ಅಫ್ಘಾನಿಸ್ತಾನದ ಅರಾಜಕತೆಯ ಬೆನ್ನಲ್ಲೇ ಇಂದು ಜಿ-7 ನಾಯಕರ ಸಭೆ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಬ್ರಿಟನ್​ ಪ್ರಧಾನಿ ಬೋರಿಸ್​ ಜಾನ್​ಸನ್​ ವಹಿಸಲಿದ್ದಾರೆ. ಇನ್ನು, ಸಭೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಅಫ್ಘಾನ್​ ನಾಗರೀಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುವುದು, ಮತ್ತು ಇತರೆ ಮುಖ್ಯ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದೆ. ಇನ್ನು, ತಾಲಿಬಾನ್​ ನೀಡಿರುವ ಡೆಡ್​ಲೈನ್​ಗೆ ಮಣಿಯದಂತೆ ಜೋ ಬೈಡನ್​ಗೆ ಒತ್ತಡ ಹೆಚ್ಚಾಗ್ತಿದ್ದು, ಆಗಸ್ಟ್​ 31ರ ಬಗ್ಗೆಯೂ ನಿರ್ಧರಿಸುವ ಸಾಧ್ಯತೆ ಇದೆ.

07. ಅಲೂಚಿ ಬಾಗ್​​ನಲ್ಲಿ ಇಬ್ಬರು ಉಗ್ರರ ಹತ್ಯೆ

ಜಮ್ಮು ಮತ್ತು ಕಾಶ್ಮೀರದ ಅಲೂಚಿ ಬಾಗ್​ ಪ್ರದೇಶದಲ್ಲಿ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್​ಕೌಂಟರ್​​ನಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದ ಇಬ್ಬರು ಉಗ್ರರ ಪೈಕಿ ಓರ್ವ ಕಮಾಂಡರ್ ಎಂದು ತಿಳಿದು ಬಂದಿದೆ. ಈ ಕುರಿತು ಕಾಶ್ಮೀರ ವಲಯ ಪೊಲೀಸ್ ಟ್ವೀಟ್ ಮಾಡಿದ್ದು, ಉಗ್ರರನ್ನು ಹತ್ಯೆಯಿಂದ ಭದ್ರತಾ ಪಡೆಗೆ ದೊಡ್ಡ ಯಶಸ್ಸು ಸಿಕ್ಕಿದಂತಾಗಿದೆ. ಹತ್ಯೆಗೀಡಾದವರನ್ನು ಲಷ್ಕರ್-ಎ-ತೊಯ್ಬಾದ, ದಿ ರೆಸಿಸ್ಟನ್ಸ್ ಫ್ರಂಟ್ ಉಗ್ರ ಕಮಾಂಡರ್ ಅಬ್ಬಾಸ್ ಶೇಖ್ ಮತ್ತು ಆತನ ಎರಡನೇ ಕಮಾಂಡ್ ಸಕೀಬ್ ಮಂಜೂರ್ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

08. ₹6 ಲಕ್ಷ ಕೋಟಿಯ ಆಸ್ತಿ ನಗದೀಕರಣಕ್ಕೆ ಕೇಂದ್ರ ಸಿದ್ಧತೆ

ಹಣಕಾಸಿನ ಕೊರತೆಯನ್ನು ನೀಗಿಸುವ ಸಲುವಾಗಿ ಹಾಗೂ ಮೂಲ ಸೌಕರ್ಯ ಯೋಜನೆಗಳಿಗೆ ಅನುದಾನ ಒದಗಿಸುವ ಸಲುವಾಗಿ ಕೇಂದ್ರ ಸರ್ಕಾರ 6 ಲಕ್ಷ ಕೋಟಿ ಮೌಲ್ಯದ ಆಸ್ತಿಯನ್ನು ನಗದೀಕರಣ ಮಾಡುವ ಯೋಜನೆಗೆ ಕೈ ಹಾಕಿದೆ. ಈ ಯೋಜನೆಯಲ್ಲಿ ಗ್ಯಾಸ್​ ಪೈಪ್​ಲೈನ್​, ರಸ್ತೆಗಳು, ರೈಲ್ವೇ ಸ್ವತ್ತುಗಳು ಸೇರಿದಂತೆ ಇತರೆ ಆಸ್ತಿಗಳನ್ನ ಖಾಸಗಿ ವಲಯಕ್ಕೆ ಗುತ್ತಿಗೆ ನೀಡುವ ಪ್ರಕ್ರಿಯೆಗಳು ಇರಲಿವೆ. ಆದ್ರೆ, ಗುತ್ತಿಗೆಗೆ ನೀಡುವ ಆಸ್ತಿ ಕೇಂದ್ರದ ಹೆಸರಲಿನಲ್ಲಿಯೇ ಇರಲಿದ್ದು, ನಿರ್ದಿಷ್ಟ ಸಮಯದ ಬಳಿಕ ಆಸ್ತಿಗಳನ್ನು ಕೇಂದ್ರ ಸರ್ಕಾರಕ್ಕೆ ಖಾಸಗಿ ಸಂಸ್ಥೆಗಳು ವಾಪಸ್ ನೀಡಬೇಕು.

09. ಮತ್ತೆ ಸುಪ್ರೀಂ ಮೆಟ್ಟಿಲೇರಲಿದೆ ತಮಿಳುನಾಡು

ತಮಿಳುನಾಡು ಸರ್ಕಾರ ಮೇಕೆದಾಟು ಅಣೆಕಟ್ಟು ವಿಷಯವಾಗಿ ಎನ್​ಜಿಟಿ ನೀಡಿರುವ ಆದೇಶವನ್ನು ಸುಪ್ರೀಂ ಕೋರ್ಟ್​ನಲ್ಲಿ ಪ್ರಶ್ನಿಸುವುದಕ್ಕೆ ನಿರ್ಧರಿಸಿದೆ. ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಾಣ ಕಾಮಗಾರಿಗಳನ್ನ ಪ್ರಾರಂಭಿಸಲು ಮುಂದಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳಬಾರದು ಅಂತ ಕೇಂದ್ರ ಕರ್ನಾಟಕಕ್ಕೆ ಮನವಿ ಮಾಡಿತ್ತು. ಈ ವಿಷಯವಾಗಿ ಎನ್​ಜಿಟಿ ಸ್ವಯಂ ಪ್ರೇರಿತವಾಗಿ ಸಮಿತಿ ರಚನೆ ಮಾಡಿ ವರದಿ ಮಂಡಿಸುವಂತೆ ಕೇಳಿತ್ತು. ಆದ್ರೆ, ಸುಪ್ರೀಂ ಕೋರ್ಟ್​ ಕರ್ನಾಟಕ ಸಲ್ಲಿಸಿದ್ದ ಮರುಪರಿಶೀಲನೆ ಅರ್ಜಿಯನ್ನು ಪರಿಶೀಲಿಸಿತ್ತು. ಹಾಗಾಗಿ, ಎನ್​ಜಿಟಿ ತಮಿಳುನಾಡಿಗೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡದ ಕಾರಣ, ಈ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸುಪ್ರಿಂ ಕೋರ್ಟ್​ನಲ್ಲಿ ಮೇಲ್ವನವಿ ಸಲ್ಲಿಸಲು ನಿರ್ಧರಿಸಿದೆ.

10. ಇಂದು ಪ್ಯಾರಾಲಿಂಪಿಕ್ಸ್​ಗೆ ಚಾಲನೆ

ಕೊರೊನಾ ಸೋಂಕಿನ ಆತಂಕದ ನಡುವೆ ಜಪಾನ್​ ಟೊಕಿಯೋ ಒಲಂಪಿಕ್ಸ್​ ಅನ್ನು ಯಶಸ್ವಿಯಾಗಿ ಆಯೋಜನೆ ಮಾಡಿತ್ತು. ಈಗ ಪ್ಯಾರಾಲಿಂಪಿಕ್ಸ್​ಗೆ ಸಿದ್ಧತೆ ಮಾಡಿಕೊಂಡಿದ್ದು, ಇಂದು ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಪ್ಯಾರಾಲಿಂಪಿಕ್ಸ್​ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಸುಮಾರು 3 ಗಂಟೆಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಜಪಾನ್ ದೊರೆ ನುರಿಹಿಟೋ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಭಾರತದಿಂದ 5 ಕ್ರೀಡಾಪಟುಗಳು ಪ್ಯಾರಾಲಿಂಕ್ಸ್​ನಲ್ಲಿ ಭಾಗಿಯಾಗಲಿದ್ದು, ಮರಿಯಪ್ಪನ್​ ತಂಗವೇಲು ಭಾರತದ ಧ್ವಜವನ್ನು ಹಿಡಿದು ಮುಂದುವರೆಯಲಿದ್ದಾರೆ.

Source: newsfirstlive.com Source link