ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

ಕಾಬೂಲ್: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ ಎಂದು ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿದ್ದಾರೆ.

ಅಂದ್ರಾಬ್ ಪ್ರಾಂತ್ಯದಲ್ಲಿ ಉಗ್ರರಿಂದ ಮನೆ ಮನೆ ಶೋಧವಾಗುತ್ತಿದೆ. ಈ ಹೊತ್ತಿನಲ್ಲೇ ಅಫ್ಘಾನ್‍ನ ಮಾಜಿ ಉಪಾಧ್ಯಕ್ಷ, ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್ ಟ್ವೀಟ್ ಮಾಡಿ ಸಂದೇಶವೊಂದನ್ನು ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಯುದ್ಧದಲ್ಲಿ ಸಹಾಯ ಮಾಡಿದ ಅಫ್ಘನ್ನರಿಗೆ ಅಮೆರಿಕದಲ್ಲಿ ಆಶ್ರಯ: ಜೋ ಬೈಡನ್ ಘೋಷಣೆ

ಟ್ವೀಟ್‍ನಲ್ಲಿ ಏನಿದೆ?

ದೇವರಿಗೆ ಮಾತ್ರ ನನ್ನನ್ನು ಇಲ್ಲಿಂದ ತೆರವುಗೊಳಿಸಲು ಸಾಧ್ಯ. ಆದರೆ ನನ್ನ ದೇಹ ಈ ಮಣ್ಣಿನಲ್ಲಿ ಐಕ್ಯವಾಗುತ್ತದೆ. ಅಫ್ಘಾನಿಸ್ತಾನ ಮತ್ತು ನಾನು ಒಂದೇ. ಇಲ್ಲಿಂದ ಹೊರದಬ್ಬಲು ಯಾರಿಂದಲೂ ಆಗದು, ನಾನು ಕೂಡಾ ಹೊರಗೆ ಹೋಗಲಾರೆ. ಈ ಮಣ್ಣಿನಲ್ಲೇ ನನ್ನ ದೇಹ ಮಣ್ಣಾಗಿ ಹೋಗಲಿ ಎನ್ನುವ ಮೂಲಕ ಉಗ್ರರಿಗೆ ಹೆದರುವುದಿಲ್ಲ ಎಂಬ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ. ಅಫ್ಘಾನಿಸ್ತಾನದ ಉಪಾಧ್ಯಕ್ಷರಾಗಿದ್ದ ಅಮರುಲ್ಲಾ ಸಲೇಹ್ ಕೆಲ ದಿನಗಳ ಹಿಂದಷ್ಟೇ ನಾನೀಗ ಅಮೆರಿಕಾದ ಹಂಗಾಮಿ ಅಧ್ಯಕ್ಷ ಎಂದು ಘೋಷಿಸಿಕೊಂಡಿದ್ದರು.

ಅಫ್ಘಾನಿಸ್ತಾನದಲ್ಲಿ ಪ್ರಾಬಲ್ಯ ಸಾಧಿಸಿರುವ ತಾಲಿಬಾನ್ ಉಗ್ರರು ದಿನೇ ದಿನೇ ಅಟ್ಟಹಾಸ ಮೆರೆಯುತ್ತಿದ್ದು ಇದೀಗ ಅಫ್ಘಾನ್‍ನ ಅಂದ್ರಾಬ್ ಕಣಿವೆಗೆ ಅಗತ್ಯ ಸಾಮಗ್ರಿ ಪೂರೈಕೆಯನ್ನೇ ಬಂದ್ ಮಾಡಿದ್ದಾರೆ. ಅಂದ್ರಾಬ್ ಕಣಿವೆಗೆ ಆಹಾರ ಸಾಮಗ್ರಿ, ಇಂಧನ ಪೂರೈಕೆ ಸ್ಥಗಿತವಾಗಿದ್ದು ಅಲ್ಲಿನ ಪ್ರತಿ ಮನೆಯನ್ನೂ ಶೋಧಿಸುತ್ತಿರುವ ತಾಲಿಬಾನಿಗಳು ಮಕ್ಕಳು, ವೃದ್ಧರನ್ನು ಕಿಡ್ನ್ಯಾಪ್ ಮಾಡುತ್ತಿದ್ದಾರೆ. ಉಗ್ರರ ಭಯದಿಂದ ಸಾವಿರಾರು ಮಹಿಳೆಯರು, ಮಕ್ಕಳು ಬೆಟ್ಟಗುಡ್ಡಗಳತ್ತ ಓಡಿಹೋಗುತ್ತಿದ್ದು, ಜೀವ ಉಳಿಸಿಕೊಳ್ಳುವುದೇ ಹರಸಾಹಸವಾಗಿದೆ.

Source: publictv.in Source link