ರಾಜೀನಾಮೆ ಸಂದೇಶ ರವಾನಿಸಿದ ಸಚಿವ ಆನಂದ್ ಸಿಂಗ್?

ಬೆಂಗಳೂರು: ಖಾತೆ ವಿಚಾರಕ್ಕೆ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ರಾಜೀನಾಮೆಯ ಸಂದೇಶವೊಂದನ್ನು ಕಳುಹಿಸಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇಂದು ಅಥವಾ ನಾಳೆ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಮ್ಮ ರಾಜೀನಾಮೆಯ ಸಂದೇಶವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.

ರಾಜೀನಾಮೆ ಸಂದೇಶ ಕಳುಹಿಸುವ ಮೂಲಕ ಆನಂದ್ ಸಿಂಗ್ ಅವರು ಮತ್ತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಶಾಕ್ ಕೊಟ್ಟಿದ್ದಾರೆ. ಈ ಸಂದೇಶವನ್ನು ತಮ್ಮ ಆಪ್ತ ಶಾಸಕ ರಾಜೂಗೌಡ ಮೂಲಕ ರವಾನೆ ಮಾಡಿದ್ದಾರೆ. ಅಂತೆಯೇ ರಾಜೂ ಗೌಡ ಅವರು ಇಂದು ಬೆಳಗ್ಗೆ ಯಡಿಯೂರಪ್ಪ ಭೇಟಿ ಮಾಡಿ ವಿಷಯ ಮುಟ್ಟಿಸಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರಿಗೆ ಆಗಮಿಸಿರುವ ಆನಂದ ಸಿಂಗ್, ಯಾವ ನಾಯಕರನ್ನೂ ಭೇಟಿ ಮಾಡದೇ ಅಜ್ಞಾತವಾಗಿದ್ದರು. ನಿನ್ನೆ ರಾತ್ರಿ  ಆಪ್ತನ ಜೊತೆ ಮಾತುಕತೆ ನಡೆಸಿರುವ ಆನಂದ್ ಸಿಂಗ್, ಇಂದು ಬೆಳಗ್ಗೆ ಆಪ್ತನ ಮೂಲಕ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ನಿಮ್ಮನ್ನು ಮದುವೆಯಾಗುತ್ತೇನೆ ಎಂದ ಅಭಿಮಾನಿಗೆ ಖುಷ್ಬೂ ಉತ್ತರ

ಬಸವರಾಜ್ ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಆನಂದ್ ಸಿಂಗ್ ಅವರಿಗೆ ಪ್ರವಾಸೋದ್ಯಮ, ಜೀವಶಾಸ್ತ್ರ ಹಾಗೂ ಪರಿಸರ ಖಾತೆಯನ್ನು ನೀಡಲಾಗಿದೆ. ಆದರೆ ಈ ಖಾತೆಯಿಂದ ಆನಂದ್ ಅಸಮಾಧಾನಗೊಂಡಿದ್ದು, ಈ ಹಿಂದೆಯೂ ರಾಜೀನಾಮೆಯ ಎಚ್ಚರಿಕೆ ನೀಡಿದ್ದರು. ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ ಆದರೆ ನಿರಾಸೆ ಮಾಡಿರೋದಕ್ಕೆ ಸಾಕಷ್ಟು ಬೇಸರವಾಗಿದೆ. ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದು ಒಳಿತು ಎನ್ನುವದು ನನ್ನ ನಿಲುವು. ಮತ್ತೊಮ್ಮೆ ಸಿಎಂಗೆ ಮನವಿ ಮಾಡುತ್ತೇನೆ ಕೊಡದೆ ಇದ್ದರೆ ನನ್ನ ದಾರಿ ನಾನು ನೋಡಿಕೊಳ್ಳುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದರು. ಇದನ್ನೂ ಓದಿ: ಅಫ್ಘಾನಿಸ್ತಾನವನ್ನು ಬಿಟ್ಟು ಹೋಗುವುದಿಲ್ಲ, ದೇಹ ಇಲ್ಲೇ ಮಣ್ಣಾದರೂ ಸೈ: ಹಂಗಾಮಿ ಅಧ್ಯಕ್ಷ ಅಮರುಲ್ಲಾ ಸಲೇಹ್

Source: publictv.in Source link