ಮುಂದುವರಿದ ಆಪರೇಷನ್​​​ ದೇವಿ ಶಕ್ತಿ; ಕಾಬೂಲ್‌ನಿಂದ ಮತ್ತೆ 78 ಭಾರತೀಯರ ಸ್ಥಳಾಂತರ

ಮುಂದುವರಿದ ಆಪರೇಷನ್​​​ ದೇವಿ ಶಕ್ತಿ; ಕಾಬೂಲ್‌ನಿಂದ ಮತ್ತೆ 78 ಭಾರತೀಯರ ಸ್ಥಳಾಂತರ

ತಾಲಿಬಾನ್​​ ಉಗ್ರರ ಕೈವಶವಾದ ಅಫ್ಘಾನಿಸ್ತಾನದಿಂದ ಭಾರತೀಯರನ್ನು ಸ್ಥಳಾಂತರಗೊಳಿಸುವ ಕೆಲಸ ನಡೆಯುತ್ತಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಆದೇಶದ ಮೇರೆಗೆ ಎಂದಿನಂತೆಯೇ ಇಂದು ಕೂಡ ಸುಮಾರು 78 ಜನರನ್ನು ಹೊತ್ತು ಭಾರತೀಯ ವಾಯು ಸೇನೆ ವಿಮಾನ ದೆಹಲಿ ತಲುಪಿದೆ. ಕಾಬುಲ್​​​​​​ನಿಂದ ದೆಹಲಿಗೆ ಭಾರತೀಯರನ್ನು ಸುರಕ್ಷಿತವಾಗಿ ಹೊತ್ತು ತಂದ ಭಾರತೀಯ ವಾಯು ಸೇನೆಗೆ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಸಲ್ಯೂಟ್ ಮಾಡಿದ್ದಾರೆ. ಅಲ್ಲದೇ ಆಪರೇಷನ್​​​ ದೇವಿ ಶಕ್ತಿ ಮುಂದುವರಿದಿದೆ ಎಂದು ಟ್ವೀಟ್​​ ಮಾಡಿದ್ದಾರೆ.

ಆಗಸ್ಟ್​ 15ರಂದು ಅಫ್ಘಾನ್​ ರಾಜಧಾನಿ ಕಾಬೂಲ್ ಅ​​ನ್ನು ತಾಲಿಬಾನ್​ ವಶಪಡಿಸಿಕೊಂಡಿದೆ. ಈ ಬೆನ್ನಲ್ಲೇ ಇಲ್ಲಿನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಅಮೆರಿಕ ಮತ್ತು ನ್ಯಾಟೋ ಪಡೆಗಳು ನಿಯಂತ್ರಿಸುತ್ತಿವೆ. ​ದಿನಕ್ಕೆ ಎರಡು ವಿಮಾನಗಳ ಮೂಲಕ ಸ್ಥಳಾಂತರ ಕಾರ್ಯ ನಡೆಸಲು ಭಾರತಕ್ಕೆ ಇದೇ ಪಡೆಗಳು ಅನುಮತಿ ನೀಡಿವೆ.

ತಜಿಕಿಸ್ತಾನದಲ್ಲಿರುವ ನಮ್ಮ ರಾಯಭಾರಿ ಕಚೇರಿಯ ಬೆಂಬಲದಿಂದ ಭಾರತ ಸರ್ಕಾರದ ಸ್ಥಳಾಂತರ ಕೆಲಸ ಸುಗಮವಾಗಿ ನಡೆಯುತ್ತಿದೆ. ಕಾಬೂಲ್​​ನಿಂದ ದಿನಕ್ಕೆ ಎರಡು ವಿಮಾನಗಳ ಸಂಚಾರ ನಡೆಸಲು ಭಾರತಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ವಾಪಸ್​ ಕರೆತರಲಾಗುತ್ತಿದೆ. ಈ ಮಿಷನ್​​ಗೆ ಆಪರೇಷನ್​​​​ ದೇವಿ ಶಕ್ತಿ ಎಂದು ಹೆಸರಿಡಲಾಗಿದೆ.

ಏನಿದು ಆಪರೇಷನ್​​ ದೇವಿ ಶಕ್ತಿ?

ದೇವಿ ಶಕ್ತಿ ಎಂದರೆ ಇಲ್ಲಿ ದುರ್ಗಾದೇವಿ ಎಂದರ್ಥ. ನವರಾತ್ರಿ ಹಬ್ಬದ ಪೌರಣಿಕ ಕಥೆ ಪ್ರಕಾರ ಮಹಿಷಾಸುರ ಎಂಬ ರಾಕ್ಷಸನಿದ್ದ. ತುಂಬಾ ಕ್ರೂರಿಯಾಗಿದ್ದ ಈತ ದೇವತೆಗಳಿಗೆ ಕಷ್ಟಕೊಡುತ್ತಿದ್ದ. ಇವನ ಉಪಟಳ ಸಹಿಸಲಾಗದೆ ದೇವತೆಗಳು ವಿಷ್ಣುವಿನ ಮೊರೆ ಹೋಗುತ್ತಾರೆ. ದೇವತೆಗಳ ಕಷ್ಟ ನೋಡಿದ ವಿಷ್ಣು, ಬ್ರಹ್ಮ ಮತ್ತು ಈಶ್ವರ ರಾಕ್ಷಸನ ಸಂಹಾರಕ್ಕಾಗಿ  ಮಹಾ ಪರಾಕ್ರಮಿ ದೇವಿಗೆ ಮೊರೆ ಹೋಗ್ತಾರೆ. ಆ ದೇವತೆಯೇ ದುರ್ಗಾದೇವಿ.

ಇದನ್ನೂ ಓದಿ: ಅಫ್ಘಾನ್ ಸೇನೆ-ತಾಲಿಬಾನ್​ ಸಂಘರ್ಷ: 200 ವರ್ಷಗಳ ಕಾಲದ ಕಾದಾಟದ ಸ್ವಾರಸ್ಯಕರ ಕಥೆ

ದುರ್ಗಾದೇವಿಗೆ 10 ಕೈಗಳು, ಅವುಗಳಲ್ಲಿ ಅಸ್ತ್ರಗಳನ್ನು ನೀಡಿ ಜಗತ್ತನ್ನು ಕಾಪಾಡುವ ಶಕ್ತಿಯನ್ನು ನೀಡಿರುತ್ತಾರೆ. ದುರ್ಗಾದೇವಿ ಮಹಿಷಾಸುರ ರಾಕ್ಷಸನ ಜೊತೆ 9 ದಿನಗಳ ಕಾಲ ಯುದ್ಧ ಮಾಡಿ ಕೊಂದು ಜಗತ್ತಿನ ಕಷ್ಟಗಳನ್ನು ನೀಗಿಸಿದಳು. ಭಾರತವೂ ಈಗ ಇಂತಹ ದೇವಿ ಹೆಸರಿನಲ್ಲಿ ಅಫ್ಘಾನಿಸ್ತಾನದಲ್ಲಿ ಸಿಲುಕಿದ ಭಾರತೀಯರನ್ನು ಬಚಾವ್​ ಮಾಡುತ್ತಿದೆ.

Source: newsfirstlive.com Source link