20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

20 ವರ್ಷಗಳ ನಂತರ ಮೊದಲ ಬಾರಿಗೆ ಕೇಂದ್ರ ಸಚಿವರೊಬ್ಬರು ಅರೆಸ್ಟ್..! ಬಿಜೆಪಿ ತೀವ್ರ ಖಂಡನೆ

ಮುಂಬೈ: ಮಹಾರಾಷ್ಟ್ರ ಪೊಲೀಸರ ವಶದಲ್ಲಿದ್ದ ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನ ಬಂಧಿಸಲಾಗಿದೆ. ಸಿಎಂ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ ಅನ್ನೋ ಹೇಳಿಕೆ ಸಂಬಂಧ ಕೇಂದ್ರ ಸಚಿವರನ್ನ ನಾಶಿಕ್ ಪೊಲೀಸರು ಸಂಗಮೇಶ್ವರದಲ್ಲಿ ಬಂಧಿಸಿದ್ದಾರೆ. 20 ವರ್ಷಗಳ ನಂತರ ಅರೆಸ್ಟ್​ ಆಗಿರುವ ಮೊದಲ ಕೇಂದ್ರ ಸಚಿವರು ಇವರಾಗಿದ್ದಾರೆ.

ಸದ್ಯ ಬಂಧನದ ಪ್ರಕ್ರಿಯೆಯನ್ನ ಮುಕ್ತಾಯಗೊಳಿಸಿರುವ ಪೊಲೀಸರು ಅವರನ್ನ ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ ಅಂತಾ ನಾಶಿಕ್ ಪೊಲೀಸ್​ ಆಯುಕ್ತ ದೀಪಕ್ ಪಾಂಡೆ ತಿಳಿಸಿದ್ದಾರೆ. ಅಲ್ಲದೆ ರಾಣೆ ಅವರು ರಾಜ್ಯಸಭಾ ಸದಸ್ಯರಾಗಿರೋದ್ರಿಂದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೂ ಬಂಧನದ ಬಗ್ಗೆ ಮಾಹಿತಿ ನೀಡಲಾಗುತ್ತದೆ ಅಂತಾ ಅವರು ತಿಳಿಸಿದ್ದಾರೆ.

ಬಂಧನ ಖಂಡಿಸಿದ ಬಿಜೆಪಿ
ಇನ್ನು ಮಹಾರಾಷ್ಟ್ರ ಪೊಲೀಸರು ದಾಖಲಿಸಿದ್ದ ಎಫ್​ಐಆರ್​ ಅನ್ನ ರದ್ದು ಮಾಡುವಂತೆ ಕೋರಿ ಬಾಂಬೈ ಹೈಕೋರ್ಟ್​ಗೆ ಮನವಿ ಮಾಡಿಕೊಂಡಿದ್ದಾರೆ. ತ್ವರಿತಗತಿಯಲ್ಲಿ ವಿಚಾರಣೆ ನಡೆಸುವಂತೆ ಕೇಂದ್ರ ಸಚಿವರು ಕೇಳಿಕೊಂಡಿದ್ದಾರೆ. ರಾಣೆ ಅವರ ಹೇಳಿಕೆಗೆ ಶಿವಸೇನೆ ಕಿಡಿಕಾರಿದ್ದು, ಮಹಾರಾಷ್ಟ್ರದಾದ್ಯಂತ ಪ್ರತಿಭಟನೆಯನ್ನ ನಡೆಸುತ್ತಿದೆ. ಇಂದು ಬೆಳಗ್ಗೆ ಮುಂಬೈನಲ್ಲಿರುವ ರಾಣೆ ಮನೆ ಎದುರು ಪ್ರತಿಭಟನೆಗೆ ಇಳಿದಿದ್ದ ಸಂದರ್ಭದಲ್ಲಿ ದೊಡ್ಡ ಗಲಾಟೆ ನಡೆದಿತ್ತು.

ಕೇಂದ್ರ ಸಚಿವರ ಬಂಧನವನ್ನ ಬಿಜೆಪಿ ಖಂಡಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ.. ಮಹಾರಾಷ್ಟ್ರ ಸರ್ಕಾರ ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಬಂಧಿಸಿರೋದು ಸಾಂವಿಧಾನಿಕ ಮೌಲ್ಯಗಳ ಉಲ್ಲಂಘನೆ. ಇಂತಹ ಕ್ರಮಗಳಿಗೆ ನಾವು ಹೆದರುವುದಿಲ್ಲ. ಜನ-ಆಶೀರ್ವಾದ ಯಾತ್ರೆಯಲ್ಲಿ ಬಿಜೆಪಿ ಪಡೆಯುತ್ತಿರುವ ಅಪಾರ ಬೆಂಬಲಕ್ಕೆ ಇವರು ಬೆಚ್ಚಿಬಿದ್ದಿದ್ದಾರೆ. ನಾವು ಪ್ರಜಾಸತ್ತಾತ್ಮಕವಾಗಿ ಹೋರಾಟ ಮುಂದುವರಿಸುತ್ತೇವೆ ಅಂತಾ ಹೇಳಿದ್ದಾರೆ.

ಇನ್ನು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಟ್ವೀಟ್ ಮಾಡಿ ನಾವು ಇಂತಹ ವಿಚಾರಕ್ಕೆ ಹೆದರುವುದಿಲ್ಲ ಎಂದು ಗುಡುಗಿದ್ದಾರೆ.

 

2005ರಲ್ಲಿ ಕೇಂದ್ರ ಸಚಿವ ರಾಣೆ ಅವರು ಠಾಕ್ರೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಿವಸೇನೆಗೆ ಗುಡ್​ಬೈ ಹೇಳಿದ್ದರು. ನಂತರ ಕಾಂಗ್ರೆಸ್​ ಸೇರಿದ್ದ ರಾಣೆ ಅಲ್ಲಿ ಸಚಿವರಾಗಿದ್ದರು. 2017ರಲ್ಲಿ ಕಾಂಗ್ರೆಸ್​ಗೆ ಗುಡ್​ಬೈ ಹೇಳಿ ಸ್ವಂತ ಪಕ್ಷವನ್ನ ಕಟ್ಟಿದ್ದರು. ಮುಂದಿನ ದಿನಗಳಲ್ಲಿ ಆ ಪಕ್ಷವನ್ನ ಬಿಜೆಪಿ ಜೊತೆ ವಿಲೀನ ಮಾಡಿಕೊಂಡಿದ್ದರು. ಜುಲೈನಲ್ಲಿ ಪ್ರಧಾನಿ ಮೋದಿ ತಮ್ಮ ಸಂಪುಟವನ್ನ ಪುನರ್ ರಚನೆ ಮಾಡಿದರು. ಮೋದಿ ಸಂಪುಟದಲ್ಲಿ ಬಡ್ತಿ ಪಡೆದು ಮಧ್ಯಮ ಮತ್ತು ಸಣ್ಣ ಕೈಗಾರಿಕೆ ಇಲಾಖೆಯ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ.

ಇದನ್ನೂ ಒದಿ: ಕೇಂದ್ರ ಸಚಿವರನ್ನೇ ವಶಕ್ಕೆ ಪಡೆದ ಮಹಾರಾಷ್ಟ್ರ ಪೊಲೀಸರು

 

Source: newsfirstlive.com Source link