ಕಾಂಗ್ರೆಸ್ಸಿಗರ ಫ್ಯೂಸ್‍ನ್ನು ಹೆಚ್‍ಡಿಕೆ ಕೀಳೋದು ಬೇಡ, ಅವರೇ ಕಿತ್ಕೊಳ್ತಿದ್ದಾರೆ: ಈಶ್ವರಪ್ಪ

– ಕಾಂಗ್ರೆಸ್ಸಿನಲ್ಲಿರುವುದೇ 4-5 ಜನ ನಾಯಕರು, ಒಬ್ಬರ ಕಂಡರೆ ಇನ್ನೊಬ್ಬರಿಗೆ ಆಗಲ್ಲ

ಚಿಕ್ಕಮಗಳೂರು: ಕಾಂಗ್ರೆಸ್ಸಿಗರ ಫ್ಯೂಸ್‍ನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರು ಕಿತ್ತು ಹಾಕುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ಸಿಗರೇ ಒಬ್ಬರ ಫ್ಯೂಸನ್ನು ಮತ್ತೊಬ್ಬರು ಕಿತ್ತುಕೊಳ್ಳುತ್ತಿದ್ದಾರೆ ಎಂದು ಗ್ರಾಮೀಣಾಭೀವೃದ್ಧಿ ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರ ಫ್ಯೂಸ್ ಕಿತ್ತಿದ್ದೇನೆ ಎಂಬ ಹೆಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್‍ನಲ್ಲಿರುವುದೇ ನಾಲ್ಕೈದು ಜನ ನಾಯಕರು. ಅವರ ಹೆಸರು ಹೇಳಲು ಇಚ್ಛೆ ಪಡುವುದಿಲ್ಲ. ಆ ಪಕ್ಷದಲ್ಲಿ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗಲ್ಲ. ನೇರ ಗುಂಪುಗಾರಿಕೆ ಇದೆ. ಹೊರ-ಒಳಗಿನ ಕಾಂಗ್ರೆಸ್ಸಿಗರು ಅಂತ ಒಂದು ಸಲ ಬಹಿರಂಗ ಕೂಡ ಆಗಿದೆ. ಸದ್ಯಕ್ಕೆ ತಲೆ ಮೇಲೆ ತಟ್ಟಿ ನಿಲ್ಲಿಸಿದ್ದಾರೆ. ಅದು ಯಾವಾಗ ಪ್ರಜ್ವಲಿಸಿ ಸ್ಫೋಟ ಆಗುತ್ತೋ ಕಾಂಗ್ರೆಸ್ಸಿಗರಿಗೇ ಗೊತ್ತಿಲ್ಲ ಎಂದರು. ಇದನ್ನೂ ಓದಿ: ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ: ಜನಾರ್ದನ ರೆಡ್ಡಿ

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಾತಿ ಗಣತಿಯನ್ನು ಯಾಕೆ ಬಿಡುಗಡೆ ಮಾಡಲಿಲ್ಲ? ಜಾತಿ ಗಣತಿಗೆ ಹಣ ಬಿಡುಗಡೆ ಮಾಡುವಾಗ ಇದ್ದ ಆಸಕ್ತಿ, ವರದಿಯನ್ನು ಬಹಿರಂಗಪಡಿಸುವುದರ ಮೇಲೆ ಯಾಕೆ ಇರಲಿಲ್ಲ? ಕಾಂತರಾಜ್ ಅವರ ಕಮಿಟಿ ರಿಪೋರ್ಟ್ ರೆಡಿ ಇತ್ತು. ಅದನ್ನು ಬಿಡುಗಡೆ ಮಾಡಲಿಲ್ಲ. ಬೈಂಡಿಂಗ್ ಆಗಿರಲಿಲ್ಲ, ರೆಡಿ ಆಗಿರಲಿಲ್ಲ ಎಂದು ಈಗ ಸುಳ್ಳು ಹೇಳುತ್ತಿದ್ದಾರೆ. ಆದರೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಿದ್ದರಾಮಯ್ಯನವರೇ ಇದ್ದರು. ಆಗಲೂ ಬಿಡುಗಡೆ ಮಾಡಿ ಎಂದು ಆ ವೇಳೆ ಸಿಎಂ ಆಗಿದ್ದ ಕುಮಾರಸ್ವಾಮಿಯವರಿಗೆ ಹೇಳಲಿಲ್ಲ. ಈಗ ಕುಮಾರಸ್ವಾಮಿಯವರು ಬಿಡುಗಡೆ ಮಾಡಲಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಮ್ಮಿಶ್ರ ಸರ್ಕಾರ ದಲಿತರು, ಹಿಂದುಳಿದವರಿಗೆ ಅನ್ಯಾಯ ಮಾಡುತ್ತಿದೆ. ನಾನು ಈ ಸರ್ಕಾರದ ಜೊತೆ ಇರುವುದಿಲ್ಲ ಎಂದು ಹೇಳಿ ಹೊರಬರಬೇಕಿತ್ತು. ಏಕೆ ಬರಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಗ ಸುಮ್ಮನಿದ್ದು, ಈಗ ಬಿಜೆಪಿ ಸರ್ಕಾರ ಬಂದ ಮೇಲೆ ಬಿಜೆಪಿಯವರಿಗೆ ಜಾತಿ ಗಣತಿ ಬಗ್ಗೆ ಆಸಕ್ತಿ ಇಲ್ಲ ಎಂದು ಬಿಜೆಪಿ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇದು ರಾಜಕೀಯದ ಕುತಂತ್ರ ಅಲ್ಲದೆ ಮತ್ತೇನು ಎಂದಿದ್ದಾರೆ.

ಸ್ವಾತಂತ್ರ್ಯ ಬಂದಾಗಿನಿಂದಲೂ 27 ಜನ ಹಿಂದುಳಿದವರಿಗೆ ಕೇಂದ್ರ ಮಂತ್ರಿ ಸ್ಥಾನವನ್ನು ಯಾರಾದರೂ ನೀಡಿದ್ದರಾ? 20 ಜನ ದಲಿತರನ್ನು ಹಿಂದೆ ಯಾವಾಗಲಾದರೂ ಮಂತ್ರಿ ಮಾಡಿದ್ದರಾ ಎಂದು ಕಾಂಗ್ರೆಸ್ಸಿಗರಿಗೆ ಪ್ರಶ್ನಿಸಿದರು. ದಲಿತರು, ಹಿಂದುಳಿದವರ ಬಗ್ಗೆ ಆಸಕ್ತಿ ಇರೋದು ಬಿಜೆಪಿಗೆ ಮಾತ್ರ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

Source: publictv.in Source link