ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಪೂರ್ವ ಜನ್ಮದ ಪುಣ್ಯ: ಜನಾರ್ದನ ರೆಡ್ಡಿ

ರಾಯಚೂರು: ರಾಯರ 350ನೇ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಆರಾಧನೆಗೆಂದು ಆಗಮಿಸಿದ್ದ ರೆಡ್ಡಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ. ಕಳೆದ ಹತ್ತು ವರ್ಷಗಳ ಕಾಲ ನನ್ನ ಹುಟ್ಟೂರಿಗೆ ಬರಲಾಗದೇ ವನವಾಸದ ರೀತಿಯ ಸಂಕಷ್ಟ ಅನುಭವಿಸಿದೆ. ಅದರಿಂದ ಪಾರು ಮಾಡಿದ್ದು ರಾಘವೇಂದ್ರಸ್ವಾಮಿಗಳ ಪವಾಡ. ನಾನು ಮಂತ್ರಾಲಯದ ರಾಯರ ಪರಮ ಭಕ್ತ. ಯಾವಾಗಲೂ ಸಂಕಷ್ಟದ ಗಳಿಗೆಯಲ್ಲಿ ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥಿಸುತ್ತೇನೆ. ರಾಯರ ಅನುಗ್ರಹದಿಂದಲೇ ಇಂದು 350ನೇ ಆರಾಧನೆಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದೆ ಎಂಬುದರಲ್ಲಿ ವಿಶ್ವಾಸವಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನಟ ಕೋಮಲ್ ವಿರುದ್ಧ ಸ್ವೆಟರ್ ಹಗರಣ ಆರೋಪ

ರಾಜಕೀಯ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ವಿಚಾರದ ಬಗ್ಗೆ ಮಾತಾಡಲ್ಲ. ಸಕ್ರಿಯ ರಾಜಕೀಯಕ್ಕೆ ಮರಳುವ ಬಗ್ಗೆಯೂ ಏನೂ ಹೇಳಲ್ಲ ಎಂದು ತಿಳಿಸಿದ್ದಾರೆ.

ರಾಯರ 350ನೇ ಆರಾಧನಾ ಮಹೋತ್ಸವ ಹಿನ್ನೆಲೆ ಜನಾರ್ದನ ರೆಡ್ಡಿ ಅವರು ಪತ್ನಿ ಅರುಣಾಲಕ್ಷ್ಮಿಯೊಂದಿಗೆ ಮಠಕ್ಕೆ ಆಗಮಿಸಿದ್ದರು. ಗ್ರಾಮದ ಅಧಿದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

Source: publictv.in Source link