ಸ್ಪಷ್ಟನೆ ಕೊಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ, ಎಲ್ಲದಕ್ಕೂ ಸಮಯ ಉತ್ತರಿಸುತ್ತದೆ: ಸಂಜನಾ ಗಲ್ರಾನಿ

ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯಾರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರ ಎಫ್‍ಎಸ್‍ಎಲ್ ವರದಿಯಲ್ಲಿ ಇಬ್ಬರೂ ಡ್ರಗ್ಸ್ ಸೇವನೆ ಮಾಡಿರುವುದು ದೃಢವಾಗಿದೆ. ಈ ವರದಿ ಬೆನ್ನಲ್ಲೇ ನನಗೆ ಈಗ ವಿವರಣೆ ಹಾಗೂ ಸ್ಪಷ್ಟನೆ ಕೊಡಲು ಸಮಯವೂ ಇಲ್ಲ ಅನಿವಾರ್ಯತೆಯೂ ಇಲ್ಲ, ಎಲ್ಲದಕ್ಕೂ ಸಮಯ ಉತ್ತರಿಸುತ್ತದೆ ಎಂದು ಸಂಜನಾ ಗಲ್ರಾನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

ವರದಿ ದೃಡಪಟ್ಟ ಹಿನ್ನೆಲೆ ಸಂಜನಾ ಸೋಶಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಹಾಕಿಕೊಂಡಿದ್ದು, ಸ್ನೇಹಿತರೇ ನನ್ನ ಮೇಲಿನ ನಿಮ್ಮೆಲ್ಲರ ಕಾಳಜಿಗೆ ಧನ್ಯವಾದಗಳು. ಒಂದು ಕಥೆಗೆ ಯಾವಾಗಲೂ ಎರಡು ಭಾಗ ಇರುತ್ತದೆ. ಆ ಒಂದು ಭಾಗಕ್ಕೆ ನೀವೆಲ್ಲರೂ ಈಗ ಸಾಕ್ಷಿಯಾಗುತ್ತಿದ್ದೀರಿ. ಇನ್ನೊಂದು ಭಾಗ ಸಮಯ ಬಂದಾಗ ಬಹಿರಂಗವಾಗುತ್ತದೆ. ನೀವೆಲ್ಲರೂ ಗಮನಿಸಿದಂತೆ ನಾನು ತುಂಬಾ ತುಂಬಾ ಬ್ಯುಸಿ ಲೈಫ್ ಲೀಡ್ ಮಾಡುತ್ತಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ಸಂಜನಾ, ರಾಗಿಣಿ ದ್ವಿವೇದಿಗೆ ಸಂಕಷ್ಟ!

ನನ್ನ ಕೆಲಸ, ನನ್ನ ಫೌಂಡೇಶನ್ ಕೆಲಸ, ಸಿನಿಮಾ ಕೆಲಸದ ಜೊತೆ ಜೊತೆಗೆ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದೇನೆ. ನನಗೆ ಈಗ ವಿವರಣೆ ಹಾಗೂ ಸ್ಪಷ್ಟನೆ ಕೊಡಲು ಸಮಯವೂ ಇಲ್ಲ, ಅನಿವಾರ್ಯತೆಯೂ ಇಲ್ಲ, ಸಮಯ ಉತ್ತರಿಸುತ್ತದೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.

10 ತಿಂಗಳ ಬಳಿಕ ಹೈದರಾಬಾದ್‍ನ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಸಿಕ್ಕಿದ್ದು, ತಲೆಕೂದಲು ಪರೀಕ್ಷೆಯಲ್ಲಿ ನಟಿಯರ ಮಾದಕ ದ್ರವ್ಯ ಸೇವನೆ ದೃಢವಾಗಿದೆ. ಹೈದರಾಬಾದ್ ನ ಸಿಎಸ್‍ಎಫ್‍ಎಲ್‍ನ ಲ್ಯಾಬ್ ನೀಡಿರುವ ವರದಿಯನ್ನು ಸಿಸಿಬಿ ತರಿಸಿಕೊಂಡಿದೆ. ಈ ಹಿಂದೆ ಇಬ್ಬರು ನಟಿಯರನ್ನು ಬಂಧಿಸಿದ್ದಾಗ ತಲೆ ಕೂದಲು ಸಂಗ್ರಹಿಸಿ ಡ್ರಗ್ಸ್ ಸೇವನೆ ಪತ್ತೆ ಮಾಡಲು ಕಳುಹಿಸಲಾಗಿತ್ತು. ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ತಲೆ ಕೂದಲಿನ ಮಾದರಿ ಸಂಗ್ರಹ ಮಾಡಲಾಗಿತ್ತು. ಒಮ್ಮೆ ಸರಿಯಾದ ಕ್ರಮದಲ್ಲಿ ಮಾದರಿ ಸಂಗ್ರಹ ಆಗದೇ ರಿಜೆಕ್ಟ್ ಆಗಿತ್ತು. ಬಳಿಕ ಮತ್ತೊಮ್ಮೆ ಮಾದರಿ ಸಂಗ್ರಹ ಮಾಡಿ ಕಳುಹಿಸಲಾಗಿತ್ತು. ಈಗ ವರದಿ ದೃಢ ಎಂದು ಪ್ರಯೋಗಾಲಯದಿಂದ ವರದಿ ನೀಡಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸುರುಳಿ ಸುತ್ತಿದ್ದ 100 ರೂ. ನೋಟಿನ ಮೂಲಕ ರಾಗಿಣಿ ಡ್ರಗ್ಸ್ ಸೇವನೆ

Source: publictv.in Source link