ಮುಗಿಯದ ಖಾತೆ ಕ್ಯಾತೆ: ಆನಂದ್ ಸಿಂಗ್​​ಗೆ ಕಿವಿ ಮಾತು ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ!

ಮುಗಿಯದ ಖಾತೆ ಕ್ಯಾತೆ: ಆನಂದ್ ಸಿಂಗ್​​ಗೆ ಕಿವಿ ಮಾತು ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ!

ಬೆಂಗಳೂರು: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಆರಂಭವಾಗಿದ್ದ ಸಂಪುಟ ವಿಸ್ತರಣೆಯ ಸರ್ಕಸ್​​ಗೆ ಹೈಕಮಾಂಡ್​ ಬ್ರೇಕ್​ ಹಾಕಿತ್ತು. ಆದರೆ ಸಚಿವರಿಗೆ ಖಾತೆ ಹಂಚಿಕೆ ಬಳಿಕ ಆರಂಭವಾಗಿದ್ದ ಕ್ಯಾತೆ 20ಕ್ಕಿಂತ ಹೆಚ್ಚು ದಿನಗಳು ಕಳೆದರು ಅಂತ್ಯಗೊಂಡಿಲ್ಲ.

ಖಾತೆ ಕುರಿತು ಕಳೆದ ಕೆಲ ದಿನಗಳಿಂದ ಮುನಿಸಿಕೊಂಡಿದ್ದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್​ ಸಿಂಗ್ ನಿನ್ನೆ ಏಕಾಏಕಿ ವಿಧಾನಸಭೆಗೆ ಆಗಮಿಸಿ ಅಧಿಕಾರ ಸ್ವೀಕಾರ ಮಾಡಿ ಸಭೆ ನಡೆಸಿದ್ದರು. ಆದರೆ ಅಧಿಕಾರ ಸ್ವೀಕರಿಸಿದ ಬಳಿಕ ಸಭೆ ನಡೆಸಿದ ಆನಂದ್​ ಸಿಂಗ್​, ಸಭೆಯಲ್ಲಿ ಸಚಿವ ಆರ್​.ಅಶೋಕ್​ ಅವರಿಗೆ ಪ್ರಮುಖ ಸ್ಥಾನ ನೀಡಿದ್ದರು. ಇದರಿಂದ ಸಚಿವ ಆನಂದ್ ಸಿಂಗ್ ಕಾಟಾಚಾರಕ್ಕೆ ಅಧಿಕಾರ ಸ್ವೀಕರಿಸಿದ್ರಾ ಎಂಬ ಪ್ರಶ್ನೆ ಎದುರಾಗಿದೆ.

blank

ಇನ್ನು ದಿವಸ ಪಟ್ಟು ಹಿಡಿದು ಈಗ ನಿರ್ಧಾರ ಬದಲಿಸುವ ಆನಂದ್​ ಸಿಂಗ್​ ನಡೆಯ ಅಚ್ಚರಿ ಮೂಡಿಸಿದ್ದು, ಸರ್ಕಾರ ಹಾಗೂ ಪಕ್ಷಕ್ಕೆ ಆಗುತ್ತಿದ್ದ ಮುಜುಗರ ತಪ್ಪಿಸಲು ಕೇಸರಿಪಡೆ ನಾಯಕರು ತಾತ್ಕಾಲಿಕವಾಗಿ ಅಸಮದಾನಕ್ಕೆ ತೇಪೆ ಹಚ್ಚಿದ್ರಾ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬಂದಿದೆ.

ಇಪ್ಪತ್ತು ದಿನಗಳ ಬಳಿಕ ವಿಕಾಸಸೌಧದ ತಮ್ಮ ಕೊಠಡಿಗೆ ದಿಢೀರ್ ತೆರಳಿ ಸಭೆ ನಡೆಸಿರುವ ಆನಂದ್ ಸಿಂಗ್ ಸಭೆ ನಡೆಸಿದ್ರು. ಆದರೆ ಸಭೆಗೂ ಮುನ್ನ ಸಿಎಂ ಹಾಗೂ ಪಕ್ಷದ ಅಧ್ಯಕ್ಷರನ್ನ ಭೇಟಿ ಮಾಡಿ ತಮ್ಮ ಬೇಡಿಕೆಯನ್ನು ಮತ್ತೊಮ್ಮೆ ಮುಂದಿಟ್ಟಿದ್ದರು. ಆದರೆ, ಆನಂದ್ ಸಿಂಗ್​ ಅವರ ಮನವೊಲಿಕೆ ಮುಂದಾದ ಸಿಎಂ ಅವರು, ಮೊದಲು ಅಧಿಕಾರ ವಹಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಇಪ್ಪತ್ತು ದಿನಗಳಾದರೂ ಅಧಿಕಾರ ವಹಿಸಿಕೊಳ್ಳದಿರುವುದರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಹೈಕಮಾಂಡ್ ಕೂಡ ಇದನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ. ಹೀಗೆ ಮುಂದುವರೆದರೆ ರಾಜಕೀಯ ಭವಿಷ್ಯಕ್ಕೆ ಹೊಡೆತ ಬೀಳಲಿದೆ. ಅನಗತ್ಯವಾಗಿ ಗೊಂದಲಕ್ಕೆ ಅವಕಾಶ ಕೊಡುವುದು ಬೇಡ. ತತ್ ಕ್ಷಣವೇ ಅಧಿಕಾರ ಸ್ವೀಕರಿಸಿ ಕೆಲಸ ಮಾಡಿಕೊಂಡು ಹೋಗಿ. ನಿಮ್ಮ ಬೇಡಿಕೆಯನ್ನ ಹೈಕಮಾಂಡ್​​ ಜೊತೆ ಚರ್ಚೆ ಮಾಡುವೇ, ಹೈಕಮಾಂಡ್ ಕೂಡ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ. ಇಲ್ಲದೇ ಇದ್ದಲ್ಲಿ ನಿಮ್ಮ ಬೇಡಿಕೆಯನ್ನ ತಿರಸ್ಕರಿಸಿದರೂ ಅಚ್ಚರಿ ಇಲ್ಲ ಎಂದು ಸಿಎಂ ಆನಂದ್ ಸಿಂಗ್​ಗೆ ಕಿವಿಮಾತು ಹೇಳಿ ಕಳುಹಿಸಿದ್ದರು ಎನ್ನಲಾಗಿದೆ. ಸಿಎಂ ಭರವಸೆಯಿಂದಾಗಿ ಕೊನೆಗೂ ಆನಂದ್ ಸಿಂಗ್ ಅಧಿಕಾರ ಸ್ವೀಕರಿಸಿದ್ದಾರೆ.

Source: newsfirstlive.com Source link