ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತ – 10 ಅಡಿ ಆಳಕ್ಕೆ ಕುಸಿದ ರಸ್ತೆ

– ರಸ್ತೆಗೆ ಅಡ್ಡಲಾಗಿ ಉರುಳಿದ ಕಲ್ಲು, ಮಣ್ಣು, ವಿದ್ಯುತ್ ಕಂಬ
– ಬಯಲು ಸೀಮೆಯಲ್ಲಿ ಮಲೆನಾಡು ದೃಶ್ಯ
– ತಡರಾತ್ರಿ ಮಳೆಗೆ ಅಲ್ಲೋಲ, ಕಲ್ಲೋಲ

ಚಿಕ್ಕಬಳ್ಳಾಪುರ: ನಂದಿಬೆಟ್ಟದ ಬ್ರಹ್ಮಗಿರಿಯಲ್ಲಿ ಭೂ ಕುಸಿತವಾಗಿದ್ದು, 10 ಅಡಿ ಆಳಕ್ಕೆ ಮುಖ್ಯ ರಸ್ತೆ ಕುಸಿದಿದೆ. ನಂದಿಬೆಟ್ಟದ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ರಸ್ತೆಗೆ ಅಡ್ಡಲಾಗಿ ಬಂಡೆಗಳು ಉರುಳಿ ನಿಂತಿವೆ. ರಸ್ತೆ ಬಂದ್ ಆಗಿದ್ದರಿಂದ ನಂದಿಬೆಟ್ಟಕ್ಕೆ ಬಂದಿರುವ ಪ್ರವಾಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ.

ಮಂಗಳವಾರ ರಾತ್ರಿ ನಂದಿಬೆಟ್ಟದ ಪರಿಸರದಲ್ಲಿ ಭಾರೀ ಮಳೆಯಾಗಿದ್ದು, ಮೇಲ್ಭಾಗದಿಂದ ಮಣ್ಣು ಕೊಚ್ಚಿಕೊಂಡು ಬಂದಿದೆ. ಮಳೆಯ ನೀರಿನ ಜೊತೆ ಮಣ್ಣು, ಬೃಹತ್ ಬಂಡೆ, ಮರ ಗಿಡಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಇನ್ನೂ ವಿದ್ಯುತ್ ಕಂಬಗಳು ಧರೆಗೆ ಉಳಿದಿರುವ ಕಾರಣ ನಂದಿಗಿರಿಧಾಮದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದನ್ನೂ ಓದಿ: ನಂದಿಬೆಟ್ಟದಲ್ಲಿ ರೋಪ್ ವೇ – ವಾಹನ ನಿಲುಗಡೆಗೆ ಕೃಷಿ ಜಮೀನು ಸ್ವಾಧೀನಕ್ಕೆ ರೈತರ ವಿರೋಧ

ನಂದಿಬೆಟ್ಟದ ಚೆಕ್ ಪೋಸ್ಟ್ ನ ಸ್ವಲ್ಪ ದೂರದಲ್ಲೇ ರಸ್ತೆಗೆ ಅಡ್ಡಲಾಗಿ ಮಣ್ಣು ಶೇಖರಣೆಯಾಗಿದ್ದರಿಂದ, ಮೊದಲೇ ರೆಸಾರ್ಟ್ ಬುಕ್ ಮಾಡಿಕೊಂಡು ವಾಸ್ತವ್ಯ ಹೂಡಿದ್ದ ಪ್ರವಾಸಿಗರು ಮೇಲ್ಭಾಗದಲ್ಲಿಯೇ ಸಿಲುಕಿಕೊಂಡಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿದ್ದು, ಮಣ್ಣು ತೆರವು ಕೆಲಸದಲ್ಲಿ ನಿರತರಾಗಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ಭೂ ಕುಸಿತವಾಗಿರೋದು. ಮಲೆನಾಡು ಭಾಗದಲ್ಲಿ ಕಾಣಿಸುತ್ತಿದ್ದ ದೃಶ್ಯಗಳನ್ನ ತಮ್ಮಲ್ಲಿ ಆಗಿರೋದನ್ನು ಕಂಡು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ನಿರೀಕ್ಷಣಾ ಜಾಮೀನಿಗೆ ಅಜಯ್ ರಾವ್ ಅರ್ಜಿ ಸಲ್ಲಿಕೆ – ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ ರಚಿತಾ ರಾಮ್

Source: publictv.in Source link