ಇಂದಿನಿಂದ ಲೀಡ್ಸ್​ನಲ್ಲಿ ಸೇಡಿನ ಸಮರ -ಗೆಲುವಿನ ಓಟ ಮುಂದುವರಿಸುತ್ತಾ ಕೊಹ್ಲಿ ಪಡೆ

ಇಂದಿನಿಂದ ಲೀಡ್ಸ್​ನಲ್ಲಿ ಸೇಡಿನ ಸಮರ -ಗೆಲುವಿನ ಓಟ ಮುಂದುವರಿಸುತ್ತಾ ಕೊಹ್ಲಿ ಪಡೆ

ಕ್ರಿಕೆಟ್​​ ಕಾಶಿ ಲಾರ್ಡ್ಸ್​ನಲ್ಲಿ ರೋಚಕ ಗೆಲುವು ಸಾಧಿಸಿದ ಟೀಮ್ ಇಂಡಿಯಾ, ಈಗ ಮತ್ತೊಂದು ಸೂಪರ್ ಫೈಟ್‌ಗೆ ಸಿದ್ಧವಾಗಿದೆ. ಇಂದಿನಿಂದ ಹೆಡಿಂಗ್ಲಿಯಲ್ಲಿ 3ನೇ ಟೆಸ್ಟ್​ ಆರಂಭವಾಗುತ್ತಿದ್ದು, ಗೆಲುವಿನತ್ತ ಉಭಯ ತಂಡಗಳ ಚಿತ್ತ ನೆಟ್ಟಿದೆ. 9 ದಿನಗಳ ಬಳಿಕ ನಡೆಯುತ್ತಿರುವ ಈ ಪಂದ್ಯಕ್ಕೆ ಎರಡೂ ತಂಡಗಳು ತಮ್ಮದೇ ಮಾಸ್ಟರ್ ಪ್ಲಾನ್​ನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿವೆ.

ಭಾರತ-ಇಂಗ್ಲೆಂಡ್​ ನಡುವಿನ ಮತ್ತೊಂದು ಜಿದ್ದಾಜಿದ್ದಿನ ಹೋರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ ಲೀಡ್ಸ್​ನ ಹೆಡಿಂಗ್ಲಿಯಲ್ಲಿ ಟೆಸ್ಟ್​ ಸರಣಿಯ ಮೂರನೇ ಪಂದ್ಯಾಟ ನಡೆಯಲಿದ್ದು, ಇದಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ. ಲಾರ್ಡ್ಸ್​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿರೋ ಟೀಮ್ ಇಂಡಿಯಾ, ಈಗ ಲೀಡ್ಸ್​​ನಲ್ಲಿ ಲೀಡ್ ಪಡೆದುಕೊಳ್ಳುವತ್ತ ತನ್ನ ಚಿತ್ತ ಹರಿಸಿದೆ. ಈ ಮೂಲಕ ಟೆಸ್ಟ್​​ ಸರಣಿ ಮೇಲೆ ಹಿಡಿತ ಸಾಧಿಸುವ ಲೆಕ್ಕಚಾರದಲ್ಲಿದೆ.

blank

ಆದ್ರೆ, ಕ್ರಿಕೆಟ್​ ಕಾಶಿಯ ಸೋಲಿನಿಂದ ಗಾಯಗೊಂಡ ಹುಲಿಯಂತಾಗಿರುವ ರೂಟ್ ಪಡೆ, ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಇದಕ್ಕಾಗಿ ಭಾರೀ ವ್ಯೂಹದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಾದ ಸ್ಲೆಡ್ಜಿಂಗ್​ಗಳ ಪರಿಣಾಮ ಉಭಯ ತಂಡಗಳ ಈ ಪಂದ್ಯ ಪ್ರತಿಷ್ಠೆಯ ಸಮರವಾಗಿ ಮಾರ್ಪಟ್ಟಿದೆ. ಹೀಗಾಗಿ ಲೀಡ್ಸ್​ ಟೆಸ್ಟ್​​ ಹೈವೋಲ್ಟೇಜ್​ ಟಚ್​ ಪಡೆದುಕೊಂಡಿದೆ.

ಗೆಲುವಿನ ಆತ್ಮವಿಶ್ವಾಸದಲ್ಲಿ ಟೀಮ್ ಇಂಡಿಯಾ..!
ಲಾರ್ಡ್ಸ್​ ಟೆಸ್ಟ್​ ಗೆದ್ದ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಈಗ ಹೆಡಿಂಗ್ಲಿ ಟೆಸ್ಟ್​ನಲ್ಲೂ ಗೆಲ್ಲೋ ವಿಶ್ವಾಸದಲ್ಲಿದೆ. ಪಂದ್ಯದಿಂದ ಪಂದ್ಯಕ್ಕೆ ಸಂಘಟಿತ ಪ್ರದರ್ಶನ ನೀಡುತ್ತಿರುವ ವಿರಾಟ್​ ಪಡೆ, ಮೂರನೇ ಟೆಸ್ಟ್ ಗೆದ್ದು ಸರಣಿ ಕೈವಶದತ್ತ ಹೆಜ್ಜೆ ಹಾಕೋ ಲೆಕ್ಕಚಾರದಲ್ಲಿದೆ. 2002ರ ಬಳಿಕ ಲೀಡ್ಸ್​ನಲ್ಲಿ ಭಾರತ ಮೊದಲ ಪಂದ್ಯವಾಡ್ತಿದ್ದು, ಈ ಹಿಂದೆ ಈ ಮೈದಾನದಲ್ಲಿ ಆಡಿದ ಕೊನೆಯ ಎರಡೂ ಟೆಸ್ಟ್​ ಪಂದ್ಯ ಗೆದ್ದ ಸಾಧನೆ ಭಾರತದ ಬೆನ್ನಿಗಿದೆ. ಲಾರ್ಡ್ಸ್​ ಅಂಗಳದ ರೋಚಕ ಗೆಲುವಿನೊಂದಿಗೆ, ಮೈದಾನದಲ್ಲಿ ಮಾಡಿದ ಈ ಹಿಂದಿನ ಸಾಧನೆ ಆಟಗಾರರಲ್ಲಿ ಹೊಸ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ.

ಹೆಡಿಂಗ್ಲಿಯಲ್ಲಿ ಟೀಮ್ ಇಂಡಿಯಾಗೆ ಕಾದಿದೆ ಅಗ್ನಿಪರೀಕ್ಷೆ..!
1986, 2002ರಲ್ಲಿ ಟೀಮ್ ಇಂಡಿಯಾ ಬ್ಯಾಕ್ ಟು ಬ್ಯಾಕ್ ಟೆಸ್ಟ್​ ಗೆದ್ದಿದ್ದರೂ ಕೂಡ ಹೆಡಿಂಗ್ಲಿ ಟೆಸ್ಟ್​ ಅಗ್ನಿ ಪರೀಕ್ಷೆಯೇ ಪಂದ್ಯವೇ ಆಗಿದೆ. ಪ್ರಮುಖವಾಗಿ ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳಿಗೆ ಇಲ್ಲಿ ಕಠಿಣ ಸವಾಲು ಎದುರಾಗಲಿದೆ. ಇಲ್ಲಿನ ಸ್ಟೀಡ್​​ ಟ್ರ್ಯಾಕ್​​ನಲ್ಲಿ ಆಂಗ್ಲ ಬೌಲರ್​ಗಳ ಪರಾಕ್ರಮ ಜೋರಾಗಿದೆ. ಟೀಮ್ ಇಂಡಿಯಾದ ಪಾಲಿನ ವಿಲನ್ ಆ್ಯಂಡರ್ಸ್​ನ್, ಈ ಟ್ರ್ಯಾಕ್​​ನಲ್ಲಿ ಉತ್ತಮ ದಾಖಲೆಯನ್ನೇ ಹೊಂದಿದ್ದಾರೆ. ಹೀಗಾಗಿ ಈ ಪಿಚ್​ನಲ್ಲಿ ಇಂಗ್ಲೆಂಡ್ ವೇಗಿಗಳು​​, ಭಾರತದ ಬ್ಯಾಟ್ಸ್​ಮನ್​ಗಳ ಮೇಲೆ ಪಾರಮ್ಯ ಸಾಧಿಸೋ ಸಾಧ್ಯತೆಯಿದೆ. ಇದನ್ನ ಅರಿತು ಬ್ಯಾಟ್ಸ್​ಮನ್​ಗಳು ಜವಾಬ್ದಾರಿಯುತ ಇನ್ನಿಂಗ್ಸ್​ ಕಟ್ಟಬೇಕಿದೆ. ಮುಖ್ಯವಾಗಿ ವಿರಾಟ್, ಪೂಜಾರ, ರಹಾನೆ, ಪಂತ್​​ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಬೇಕಿದೆ.

ಒಂದೆಡೆ ಬ್ಯಾಟ್ಸ್​ಮನ್​ಗಳಿಗೆ ಅಗ್ನಿ ಪರೀಕ್ಷೆಯ ಕಣವಾದ್ರೆ, ಭಾರತೀಯ ಬೌಲರ್​ಗಳ ಪಾಲಿಗೆ ಇದೇ ಸ್ವರ್ಗವಾದ್ರೂ ಅನುಮಾನವಿಲ್ಲ. ಈಗಾಗಲೇ ಆಡಿದ 2 ಪಂದ್ಯಗಳಲ್ಲಿ ಆತಿಥೇಯರಿಗೆ ಕಬ್ಬಿಣದ ಕಡಲೆಯಾಗಿರುವ ಟೀಮ್ ಇಂಡಿಯಾ ವೇಗಿಗಳ ಮೇಲಿನ ನಿರೀಕ್ಷೆ ಈ ಪಿಚ್​​ನಲ್ಲಿ ಮತ್ತಷ್ಟು ಹೆಚ್ಚಾಗಿದೆ. ಅದ್ರಲ್ಲೂ ಆಕ್ರಮಣಕಾರಿ ಆಟದಿಂದ ಗಮನ ಸೆಳೆದ ಸಿರಾಜ್, ಬೂಮ್ರಾ ಹಾಗೂ ಅನುಭವಿಗಳಾದ ಶಮಿ, ಇಶಾಂತ್ ಲೀಡ್ಸ್​ನಲ್ಲಿ ಆತಿಥೇಯರ ಇಂಗ್ಲೆಂಡ್ ಹೆಡೆಮುರಿ ಕಟ್ತಾರೆ ಅಂತಾನೇ ವಿಶ್ಲೇಷಸಲಾಗ್ತಿದೆ. ಆದ್ರೆ ಜೋ ರೂಟ್​ ಮತ್ತು ಜಾನಿ ಬೇರ್​ಸ್ಟೋಗೆ ಇದು ತವರಿನ ಪಿಚ್​ ಆಗಿದ್ದು, ಭಾರತೀಯರಿಗೆ ಕಠಿಣ ಸವಾಲಾಗೋ ಸಾಧ್ಯತೆಯಿದೆ.

ಅಘಾತದ ನಡುವೆ ತಿರುಗೇಟು ನೀಡುತ್ತಾ ಆತಿಥೇಯ ತಂಡ.!
ಅನಗತ್ಯ ತಪ್ಪುಗಳಿಂದ ಪಂದ್ಯ ಕೈಚೆಲ್ಲಿದ್ದ ಇಂಗ್ಲೆಂಡ್, ಈಗ ಗೆಲ್ಲುವ ಭರವಸೆಯೊಂದಿಗೆ ಕಣಕ್ಕಿಳಿಯುತ್ತಿದೆ. ಸೇಡು ತೀರಿಸಿಕೊಳ್ಳುವ ತವಕದಲ್ಲಿರುವ ರೂಟ್​ ಪಡೆ, ಹೊಸ ತಂಡವನ್ನೇ ಪ್ರಕಟಿಸಿದೆ. ಕಳೆದ ಎರಡು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಬ್ಲೆ ಹಾಗೂ ಜಾಕ್ ಕ್ರಾವ್ಲೆಯನ್ನ ಕೈಬಿಟ್ಟಿದೆ. ಹೀಗಾಗಿ ಹೊಸ ಆರಂಭಿಕರಾಗಿ ರೋರಿ ಬರ್ನ್ಸ್​​ಗೆ ಹಸೀಬ್ ಹಮೀದ್ ಸಾಥ್ ನೀಡೋ ಸಾಧ್ಯತೆ ಇದೆ. ಮತ್ತೊಂದೆಡೆ ಡೇವಿಡ್ ಮಲನ್, ಒಲೀ ಪೋಪ್​ಗೆ ಸ್ಥಾನ ಸಿಗಬಹುದಾಗಿದೆ. ಇಂಜುರಿಗೆ ಒಳಗಾಗಿರೋ ಮಾರ್ಕ್‌ವುಡ್ ಸ್ಥಾನದಲ್ಲಿ ಸಕೀಬ್​ ಮಹಮೂದ್​ ಕಣಕ್ಕಿಳಿಯೋ ಸಾಧ್ಯತೆಯಿದೆ. ಉಳಿದಂತೆ ಲಾರ್ಡ್ಸ್ ಅಂಗಳದಲ್ಲಿ ಕಣಕ್ಕಿಳಿದ ಆಟಗಾರರೇ ಹೆಡಿಂಗ್ಲಿಯಲ್ಲಿಯೂ ಕಣಕ್ಕಿಳಿಯೋದು ಬಹುತೇಕ ಪಕ್ಕಾ.

ಒಟ್ಟಿನಲ್ಲಿ ಸತತ ಇಂಜುರಿ ಹಾಗೂ ಸೋಲಿನ ಆಘಾತದ ನಡುವೆ ಸರಣಿ ಇಂಗ್ಲೆಂಡ್, ಸರಣಿ ಉಳಿಸಿಕೊಳ್ಳಲು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಈಗಾಗಲೇ ಸರಣಿಯಲ್ಲಿ ಮೇಲುಗೈ ಸಾಧಿಸಿರೋ ಭಾರತ ಕೂಡ ಗೆಲುವನ್ನೇ ಎದುರು ನೋಡ್ತಿದೆ. ಹೀಗಾಗಿ ಮೂರನೇ ಟೆಸ್ಟ್ ಅಭಿಮಾನಿಗಳಿಗೆ ಭಾರೀ ಕುತೂಹಲವನ್ನೇ ಹುಟ್ಟು ಹಾಕಿದೆ.

Source: newsfirstlive.com Source link