ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟ ಮುಂಬೈ, ಚೆನ್ನೈ -ಅರಬ್ಬರ ನಾಡಲ್ಲಿ ಅಭ್ಯಾಸ ಶುರು

ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟ ಮುಂಬೈ, ಚೆನ್ನೈ -ಅರಬ್ಬರ ನಾಡಲ್ಲಿ ಅಭ್ಯಾಸ ಶುರು

ಯುಇಎನಲ್ಲಿ ಆರಂಭವಾಗಲಿರೋ 2ನೇ ಹಂತದ ಐಪಿಎಲ್​ ಟೂರ್ನಿಗೆ ಕೆಲ ಫ್ರಾಂಚೈಸಿಗಳು ತೆರಳೋ ಸಿದ್ಧತೆಯಲ್ಲೇ ಇವೆ. ಆದ್ರೆ, ಈಗಾಗಲೇ ಅರಬ್ಬರ ನಾಡಿಗೆ ಕಾಲಿಟ್ಟಿರುವ ಈ ಎರಡು ತಂಡಗಳು ಮಾತ್ರ ತಮ್ಮ ಕಠಿಣ ಅಭ್ಯಾಸವನ್ನೇ ಆರಂಭಿಸಿಬಿಟ್ಟಿವೆ. ಇದು 25 ದಿನಗಳ ಮೊದಲೇ ಅಭಿಮಾನಿಗಳಲ್ಲಿ ಐಪಿಎಲ್​ ಫೀವರ್​ ಹೆಚ್ಚಾಗುವಂತೆ ಮಾಡಿದೆ.

2ನೇ ಹಂತದ ಐಪಿಎಲ್​ ಆರಂಭಕ್ಕೆ ಇನ್ನು 25 ದಿನಗಳು ಮಾತ್ರ ಬಾಕಿ. ಈಗಾಗಲೇ ಕೆಲ ತಂಡಗಳು ಯುಇಎ ತಲುಪಿದ್ರೆ, ಇನ್ನು ಹಲವು ತಂಡಗಳು ಫ್ಲೈಟ್​ ಏರೋಕೆ ಸಜ್ಜಾಗಿವೆ. ಆದ್ರೆ, ಐಪಿಎಲ್​ನ ಮೋಸ್ಟ್​ ಸಕ್ಸಸ್​ಫುಲ್​ ತಂಡ ಎಂಬ ಹಣೆಪಟ್ಟಿ ಹೊಂದಿರುವ ಈ ಎರಡು ಟೀಮ್​ಗಳು ಮಾತ್ರ, ಈಗಾಗಲೇ ಅಭ್ಯಾಸದ ಅಖಾಡಕ್ಕಿಳಿದಿವೆ. ಐಪಿಎಲ್​​ನ ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಸಿಕೊಳ್ಳೋ ಈ ಎರಡು ತಂಡಗಳು ಸಿದ್ಧತೆ ಆರಂಭಿಸಿರೋದು, 4 ವಾರಗಳ ಮುಂಚೆಯೇ ಐಪಿಎಲ್​ ಕಾವನ್ನ ಹೆಚ್ಚಿಸಿವೆ.

ಅಬುದಾಬಿಯಲ್ಲಿ ಹಾಲಿ ಚಾಂಪಿಯನ್ನರಿಂದ ಸಮರಾಭ್ಯಾಸ!
ಸತತ 2 ಆವೃತ್ತಿಗಳಿಂದ ಚಾಂಪಿಯನ್​ ಪಟ್ಟವನ್ನ ಅಲಂಕರಿಸಿರುವ ಮುಂಬೈ ಇಂಡಿಯನ್ಸ್​​, ಹ್ಯಾಟ್ರಿಕ್​ ಕಪ್​ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಲ್ಲಿ 4ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ರೋಹಿತ್​ ಪಡೆ, ಯುಎಇ ನಾಡಲ್ಲಿ ಪುಟಿದೇಳಲು ತಯಾರಿ ನಡೆಸಿದೆ. ನಾಯಕ ಸೇರಿದಂತೆ ಪ್ರಮುಖ ಆಟಗಾರರು ಇಂಗ್ಲೆಂಡ್​​ನಲ್ಲಿದ್ರೂ, ಬ್ಯಾಟಿಂಗ್​ ಕೋಚ್​ ರಾಬಿನ್​ ಸಿಂಗ್​, ಬೌಲಿಂಗ್​ ಕೋಚ್​​ ಜಹೀರ್​ ಖಾನ್ ಮಾರ್ಗದರ್ಶನದಲ್ಲಿ ಉಳಿದ ಆಟಗಾರರು ಕಠಿಣ ಅಭ್ಯಾಸವನ್ನ ನಡೆಸುತ್ತಿದ್ದಾರೆ.

ಕಹಿ ನೆನಪಿಗೆ ತೀಲಾಂಜಲಿ ಹಾಡಲು CSK ತಯಾರಿ.!
13ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್ ಲೀಗ್​, 3 ಬಾರಿಯ ಚಾಂಪಿಯನ್​ ಚೆನ್ನೈ ಸೂಪರ್​​ ಕಿಂಗ್ಸ್ ಇತಿಹಾಸದ ಕರಾಳ ಅಧ್ಯಾಯ. ಏಕೆಂದರೆ ಕೊರೊನಾ ಕಾಟದಿಂದಾಗಿ ಯುಇಎನಲ್ಲಿ ಆಯೋಜಿಸಲಾಗಿದ್ದ ಟೂರ್ನಿಯಲ್ಲಿ ಸಿಎಸ್​​ಕೆ ನೀಡಿದ ಪ್ರದರ್ಶನ ಹಾಗಿತ್ತು. ಐಪಿಎಲ್​ ಆರಂಭವಾದ ಬಳಿಕ, ಮೊಟ್ಟ ಮೊದಲ ಬಾರಿಗೆ ಚೆನ್ನೈ ಲೀಗ್​ ಹಂತದಲ್ಲೇ ಟೂರ್ನಿಯಿಂದ ನಿರ್ಗಮಿಸಿತ್ತು. ಇದೀಗ ಆ ಕರಾಳ ನೆನಪನ್ನ ಅದೇ ನೆಲದಲ್ಲಿ ಅಳಿಸಿ ಹಾಕಲು ಧೋನಿ ಪಡೆ ಸಿದ್ಧತೆ ಆರಂಭಿಸಿದೆ.

ಎಲ್ಲಾ ತಂಡಗಳಿಗಿಂತ ಮೊದಲೇ ಯುಎಇಗೆ ಬಂದಿಳಿದ ಚೆನ್ನೈ ಸೂಪರ್​ ಕಿಂಗ್ಸ್​​​ ಕ್ವಾರಂಟೀನ್​ ಅವಧಿಯನ್ನ ಮುಗಿಸಿ, ಈಗಾಗಲೇ ನೆಟ್ಸ್​​​ನಲ್ಲಿ ಅಭ್ಯಾಸ ಆರಂಭಿಸಿದೆ. ನಾಯಕ ಎಮ್​ಎಸ್​ ಧೋನಿ, ಸುರೇಶ್​​ ರೈನಾ ನೇತೃತ್ವದಲ್ಲಿ ಈಗಾಗಲೇ 3 ದಿನಗಳ ಅಭ್ಯಾಸವನ್ನ ಸಿಎಸ್​​ಕೆ ಮುಗಿಸಿದೆ. ಉತ್ತಮ ಪ್ರದರ್ಶನದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ತಂಡ, ಗೆಲುವಿನ ಸ್ಟ್ರೈಕ್​ ಮುಂದುವರೆಸುವ ತವಕದಲ್ಲಿದೆ.

ನೆಟ್ಸ್​​ನಲ್ಲಿ ಮಾಹಿ ಅಬ್ಬರ, ಬಾಲ್​ಗಾಗಿ ಆಟಗಾರರ ಹುಡುಕಾಟ!
14ನೇ ಆವೃತ್ತಿಯ 2ನೇ ಹಂತದ ಐಪಿಎಲ್​ ಎಮ್ಎಸ್​​ ಧೋನಿ ಪಾಲಿಗೆ ತೀರಾ ಮಹತ್ವದ್ದಾಗಿದೆ. ಮೊದಲಾರ್ಧದಲ್ಲಿ ಕಳಪೆ ಪ್ರದರ್ಶನ ನೀಡಿರುವ ಧೋನಿ, ಭವಿಷ್ಯದ ದೃಷ್ಟಿಯಿಂದ 2ನೇ ಹಂತದಲ್ಲಿ ಕಮ್​ಬ್ಯಾಕ್​ ಮಾಡಬೇಕಿದೆ. ಹೀಗಾಗಿ ಧೋನಿ ಕೂಡ ಭರ್ಜರಿ ಸಿದ್ಧತೆ ನಡೆಸ್ತಿದ್ದು, ಕಮ್​ಬ್ಯಾಕ್​ ಸೂಚನೆಯನ್ನ ನೆಟ್ಸ್​​ನಿಂದಲೇ ರವಾನಿಸಿದ್ದಾರೆ. ನೆಟ್ಸ್​​ನಲ್ಲಿ ಧೋನಿಯ ಸಿಕ್ಸರ್​ಗಳ ಸುರಿಮಳೆ ಸಿಡಿಸ್ತಾ ಇದ್ರೆ, ಬೌಂಡರಿ ಲೈನ್​ನಿಂದ ಆಚೆ ಬಾಲ್​ಗಾಗಿ ಸಹ ಆಟಗಾರರು ಹುಡುಕಾಟವನ್ನೆ ನಡೆಸುವಷ್ಟರ ಮಟ್ಟಿಗೆ ಧೋನಿ ಅಭ್ಯಾಸ ನಡೆದಿದೆ.

ಮುಂಬೈ – ಚೆನ್ನೈ ಮೊದಲ ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​..!
ಮುಂಬೈ ​​- ಚೆನ್ನೈ​ ತಂಡಗಳ ಈ ಸಮರಾಭ್ಯಾಸ 2ನೇ ಹಂತದ ಮೊದಲ ಪಂದ್ಯಕ್ಕೆ ಹೈವೋಲ್ಟೆಜ್​ ಟಚ್​ ನೀಡಿದೆ. ಸೆಪ್ಟೆಂಬರ್​​ 19ಕ್ಕೆ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್​​ VS ಚೆನ್ನೈ ಸೂಪರ್​​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಅದಕ್ಕೂ ಮುನ್ನ ಈ ಎರಡು ತಂಡಗಳು ಹೀಗೆ ಅಭ್ಯಾಸದಲ್ಲಿ ತೊಡಗಿರೋದು ಐಪಿಎಲ್​ 2ನೇ ಹಂತಕ್ಕೆ ಕಿಕ್​​ಸ್ಟಾರ್ಟ್​ ನೀಡಲಿದೆ ಅನ್ನೋ ನಿರೀಕ್ಷೆ ಗರಿಗೆದರಿದೆ.

Source: newsfirstlive.com Source link