ಸಿದ್ದರಾಮಯ್ಯ, ಡಿಕೆಎಸ್​ ಮಧ್ಯೆ ಪದಾಧಿಕಾರಿಗಳ ಪಟ್ಟಿಗಾಗಿ ಮುಸುಕಿನ ಯುದ್ಧ..!

ಸಿದ್ದರಾಮಯ್ಯ, ಡಿಕೆಎಸ್​ ಮಧ್ಯೆ ಪದಾಧಿಕಾರಿಗಳ ಪಟ್ಟಿಗಾಗಿ ಮುಸುಕಿನ ಯುದ್ಧ..!

ಬೆಂಗಳೂರು: ಕಾಂಗ್ರೆಸ್​ ಪಕ್ಷದಲ್ಲಿ ಸೇನೆ ಇಲ್ಲದೇ ನಾಯಕರ ಹೋರಾಟ ಕಳೆದ ಎರಡು ವರ್ಷಗಳಿಂದ ಮುಂದುವರಿದಿದ್ದು, ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೆ ಹಿಡಿದಿರುವ ಗ್ರಹಣ ಎರಡು ವರ್ಷಗಳೇ ಕಳೆದರೂ ದೂರವಾಗಿಲ್ಲ.

ಕೆಪಿಸಿಸಿ ವಿಸರ್ಜಿಸಿ ಎರಡು ವರ್ಷ ಕಳೆದಿದ್ದು, ಪದಾಧಿಕಾರಿಗಳ ನೇಮಕಕ್ಕೆ ಕಾಂಗ್ರೆಸ್ ನಾಯಕರ ಹರಸಾಹಸ ಮುಂದುವರಿದಿದ್ದು, ನಾಯಕರ ನಡುವಿನ ಪ್ರತಿಷ್ಠೆಯ ಕಾರಣ ಪದಾಧಿಕಾರಿಗಳ ಪಟ್ಟಿಗೆ ಇನ್ನು ಬಿಡುಗಡೆಯ ಭಾಗ್ಯ ಲಭ್ಯವಾಗಿಲ್ಲ.

blank

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಸಾರಥ್ಯ ವಹಿಸಿಕೊಂಡು ಒಂದೂವರೆ ವರ್ಷವಾದರೂ ಪದಾಧಿಕಾರಿಗಳ ನೇಮಕ ಮಾತ್ರ ನೆನೆಗುದಿಗೆ ಬಿದ್ದಿದ್ದು, ಸೇನಾನಿಗಳಿಲ್ಲದೆ ಕೇವಲ ದಂಡನಾಯಕರಿಂದ ಮಾತ್ರ ಹೋರಾಟವೆಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಡುವೆ ಪದೇ ಪದೇ ಚುನಾವಣೆಗೆ ಹೋಗೋಣವೆಂದು ಬಿಜೆಪಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸವಾಲು ಹಾಕುತ್ತಿದ್ದಾರೆ, ಮತ್ತೊಂದೆಡೆ ಬೊಮ್ಮಾಯಿ ನೇತೃತ್ವದ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ. ಚುನಾವಣೆ ಎದುರಾಗಬಹುದೆಂದು ನಾಯಕರು ಹೇಳಿದರೂ ಪಕ್ಷದ ಪದಾಧಿಕಾರಿಗಳ ಪಟ್ಟಿ ಬಗ್ಗೆ ಮಾತ್ರ ಮೌನ ಮುಂದುವರಿಸಿದ್ದಾರೆ.

blank

ಮುಂದಿನ ದಿನಗಳಲ್ಲಿ ಸಾಲು ಸಾಲು ಚುನಾವಣೆಗಳು ಎದುರಾಗಲಿದ್ದು, ಕೆಲ ದಿನಗಳಲ್ಲೇ ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಅದರ ಬೆನ್ನಲ್ಲೇ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಹಾಗೂ ಬಿಬಿಎಂಪಿ ಚುನಾವಣೆ ಕೂಡ ನಡೆಯಲಿದೆ. ಅಲ್ಲದೇ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಕೂಡ ಘೋಷಣೆಯಾಗುವ ಸಾಧ್ಯತೆ ಇದೆ. ಜನವರಿಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ತಮ್ಮ ಬೆಂಬಲಿಗರಿಗೆ ಪಟ್ಟಿಯಲ್ಲಿ ಸ್ಥಾನ‌ ಕಲ್ಪಿಸಲು ಪೈಪೋಟಿ ನಡೆಸುತ್ತಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕೆಲ ಹಿರಿಯ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದೆ. ರಾಜ್ಯ ನಾಯಕರಲ್ಲಿ ಒಮ್ಮತ ಮೂಡದೇ ಗೊಂದಲವಿರುವ ಕಾರಣದಿಂದಲೇ ಪಟ್ಟಿ ಬಿಡುಗಡೆ ತಡವಾಗುತ್ತಿದೆ ಎನ್ನಲಾಗಿದೆ.

ಇನ್ನು ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ಅಭಿಪ್ರಾಯ ಆಲಿಸಿರುವ ಹೈಕಮಾಂಡ್, ಎರಡೂ ಬಣಗಳ ನಡುವೆ ಗೊಂದಲಕ್ಕೆ ಅವಕಾಶ ನೀಡದಂತೆ ಪಟ್ಟಿ ಸಿದ್ಧಪಡಿಸಬೇಕಾದ ಒತ್ತಡದಲ್ಲಿ ಸಿಲುಕಿದೆ. ಹಾಗಾಗಿಯೇ ಇದುವರೆಗೂ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಾಗ್ತಿಲ್ಲವೆಂಬ ಗುಸುಗುಸು ಪಕ್ಷದಲ್ಲೇ ಕೇಳಿ ಬಂದಿದೆ.

Source: newsfirstlive.com Source link