ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಮುಲಾಜಿಲ್ಲದೆ ತಕ್ಕ ಉತ್ತರ- ಬಿಪಿನ್ ರಾವತ್ ಎಚ್ಚರಿಕೆ

ನವದೆಹಲಿ: ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಮುಲಾಜಿಲ್ಲದೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಸಿಡಿಎಸ್(ರಕ್ಷಣಾ ಸಿಬ್ಬಂದಿ ಮುಖ್ಯಸ್ಥ) ಜನರಲ್ ಬಿಪಿನ್ ರಾವತ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಅವರು, ನುಸುಳುವಿಕೆ ಸೇರಿದಂತೆ ಅಫ್ಘಾನಿಸ್ತಾನದ ಕಡೆಯಿಂದ ಯಾವುದೇ ಚಟುವಟಿಕೆ ನಡೆದರೆ ತಕ್ಕ ಉತ್ತರ ನೀಡಲಾಗುವುದು. ನುಸುಳುವಿಕೆಯನ್ನು ನಾವು ಭಯೋತ್ಪಾದನೆಯ ರೀತಿಯಲ್ಲೇ ಉತ್ತರಿಸುತ್ತೇವೆ ಎಂದು ಈಗಾಗಲೇ ಖಚಿತಪಡಿಸಲಾಗಿದೆ. ತಾಲಿಬಾನಿಗಳು ಉದ್ಧಟತನ ಪ್ರದರ್ಶಿಸಿದರೆ ಭಾರತೀಯ ಸೇನೆ ತಕ್ಕ ಉತ್ತರ ನೀಡಲಿದೆ ಎಂದು ಅವರು ಎಚ್ಚರಿಸಿದರು. ಇದನ್ನೂ ಓದಿ: ದೇಶ ಬಿಟ್ಟು ತೆರಳಬೇಡಿ- ತಾಲಿಬಾನ್ ಬೆದರಿಕೆ

ಇದೇ ವೇಳೆ ಭಯೋತ್ಪಾದನೆಯ ವಿರುದ್ಧ ಜಾಗತಿಕ ಉದ್ಧದ ಕುರಿತು ಚರ್ಚೆ ನಡೆಯುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ಸಮನ್ವಯತೆಯಿಂದ ಯಾರೇ ಬೆಂಬಲ ನೀಡಿದರೂ, ಭಯೋತ್ಪಾದನೆಯನ್ನು ಗುರುತಿಸುವುದು, ಭಯೋತ್ಪಾದನೆಯ ವಿರುದ್ಧ ಜಾಗತಿಕ ಯುದ್ಧದ ಕುರಿತು ಯಾವುದೇ ಮಾಹಿತಿ ಬಂದರೂ ಸ್ವಾಗತಾರ್ಹ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇಂಡೋ-ಪೆಸಿಫಿಕ್ ಮತ್ತು ಅಫ್ಘಾನ್ ಪರಿಸ್ಥಿತಿಯನ್ನು ಒಂದೇ ರೀತಿ ನೋಡಬಾರದು. ಇವು ಎರಡು ವಿಭಿನ್ನ ಸಮಸ್ಯೆಗಳಾಗಿವೆ. ಎರಡೂ ಪ್ರದೇಶಗಳಲ್ಲಿ ಭದ್ರತೆಯ ಸವಾಲುಗಳಿವೆ. ಆದರೆ ಎರಡೂ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ಹೊಂದಿವೆ ಎಂದು ಹೇಳಿದರು.

ಈ ಪ್ರದೇಶಗಳಲ್ಲಿ ಎಲ್ಲಿ ಏನಾಗುತ್ತದೋ ಎಂಬುದರ ಕುರಿತು ನಾವು ಚಿಂತಾಕ್ರಾಂತರಾಗಿದ್ದೇವೆ. ಕೇವಲ ಉತ್ತರದ ನೆರೆಯವರಲ್ಲ, ಪಶ್ಚಿಮದವರು ಸಹ ಪರಮಾಣು ಶಸ್ತ್ರಾಸ್ತ್ರ ವ್ಯವಸ್ಥೆ ಹೊಂದಿದ್ದಾರೆ. ಕಾರ್ಯತಂತ್ರದ ಆಯುಧಗಳನ್ನು ಹೊಂದಿದ ಇಬ್ಬರು ನೆರೆಯವರು ನಮ್ಮನ್ನು ಸುತ್ತುವರಿದಿದ್ದಾರೆ ಎಂದು ವಿವರಿಸಿದರು.

ಇದಕ್ಕೆ ತಕ್ಕಂತೆ ನಾವೂ ನಮ್ಮ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಮ್ಮ ನೆರೆಹೊರೆಯವರ ಉದ್ದೇಶಗಳನ್ನು ಅಧ್ಯಯನ ಮಾಡುತ್ತಿದ್ದೇವೆ. ನಮ್ಮ ಸಾಮಥ್ರ್ಯವನ್ನು ಸಹ ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದೇವೆ. ಅದಕ್ಕೆ ತಕ್ಕಂತೆ ಅಭಿವೃದ್ಧಿ ಹೊಂದುತ್ತಿದ್ದೇವೆ. ಸಾಂಪ್ರದಾಯಿಕ ನಾವು ತುಂಬಾ ಬಲಶಾಲಿಯಾಗಿದ್ದೇವೆ. ನಮ್ಮ ಸಾಂಪ್ರದಾಯಿಕ ಪಡೆಗಳೊಂದಿಗೆ ಎದುರಾಳಿಗಳನ್ನು ಎದುರಿಸಲು ಸಮರ್ಥರಾಗಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Source: publictv.in Source link