ಅಫ್ಘಾನ್ ಬೆಳವಣಿಗೆ ಬೆನ್ನಲ್ಲೇ ಪಾಕ್​ ತೆಹರಿಕ್ ಇ ತಾಲಿಬಾನ್​ಗೆ ಮತ್ತೆ ರೆಕ್ಕೆ ಪುಕ್ಕ..!

ಅಫ್ಘಾನ್ ಬೆಳವಣಿಗೆ ಬೆನ್ನಲ್ಲೇ ಪಾಕ್​ ತೆಹರಿಕ್ ಇ ತಾಲಿಬಾನ್​ಗೆ ಮತ್ತೆ ರೆಕ್ಕೆ ಪುಕ್ಕ..!

ಅಫ್ಘಾನ್​ನಲ್ಲಿ ತಾಲಿಬಾನ್​ಗಳು ಅಟ್ಟಹಾಸ ಮೆರೆಯುತ್ತಿದ್ರೆ, ಇತ್ತ ಪಾಕಿಸ್ತಾನದಲ್ಲೂ ತಾಲಿಬಾನ್ ಸಂಘಟನೆ ಚಿಗುರಿಕೊಂಡಿದೆ. ತೆಹರಿಕ್ ಇ ತಾಲಿಬಾನ್​ ಸಂಘಟನೆ ಇದೀಗ ಪಾಕಿಸ್ತಾನದಲ್ಲೂ ಕಠಿಣ ಶರಿಯಾ ಕಾನೂನನ್ನ ಜಾರಿಗೆ ತರಲು ಒತ್ತಾಯಿಸಿದೆ. ಈ ನಡುವೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷದ ನಾಯಕಿ ನೀಡಿರುವ ಹೇಳಿಕೆ ವಿವಾದದ ಕಿಡಿ ಹೊತ್ತಿಸಿದೆ.

ಅಫ್ಘಾನ್​ ನೆತ್ತರಮಯವಾಗಿದೆ. ಸ್ತ್ರೀಯರು ವಿಚಲಿತರಾಗಿದ್ದಾರೆ. ತಾಲಿಬಾನ್​ಗಳು ಲಿಂಗ ತಾರತಮ್ಯವನ್ನೇ ಉಸಿರಾಡ್ತಿದ್ದು, ಮತ್ತೆ ಕರಾಳ ಯುಗ ಶುರುವಾಗಿದೆ. ಅಫ್ಘಾನ್ ಜನರು ಕರಾಳ ಶರಿಯಾ ಕಾನೂನಿಗೆ ಹೆದರಿ ದೇಶ ಬಿಟ್ಟು ಪಲಾಯನ ಮಾಡ್ತಿದ್ದಾರೆ. ಒಂದು ಕಡೆ ಅಮಾಯಕ ಜನರು ತಾಲಿಬಾನ್​ಗಳ ರಕ್ಕಸರ ​ ಕಪಿಮುಷ್ಠಿಯಲ್ಲಿ ಸಿಲುಕಿ ನರಳುತ್ತಿದ್ರೆ, ಪಾಕಿಸ್ತಾನ ಮಾತ್ರ ಅಫ್ಘಾನ್ ತಾಲಿಬಾನ್​ಗಳ ಕ್ರೌರ್ಯವನ್ನ ನೋಡಿ ಸಂತಸದ ಅಲೆಯಲ್ಲಿ ತೇಲಾಡುತ್ತಿದೆ. ಅಷ್ಟೇ ಅಲ್ಲ, ಅಘ್ಘಾನ್​ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿರುವ ಕಠಿಣ ಶರಿಯಾ ಕಾನೂನನ್ನ ಪಾಕಿಸ್ತಾನದಲ್ಲೂ ಜಾರಿ ಮಾಡುಬೇಕೆಂಬ ಕೂಗು, ತೆಹರಿಕ್ ಇ ತಾಲಿಬಾನ್ ಭಯೋತ್ಪಾದನೆ ಸಂಘಟನೆ ನಾಯಕರು ಮೊಳಗಿಸಿದ್ದಾರೆ.

blank

ಪಾಕಿಸ್ತಾನದಲ್ಲಿ ತೆಹರಿಕ್ ಇ ತಾಲಿಬಾನ್​ ಸಂಭ್ರಮಾಚರಣೆ
ಪಾಕಿಸ್ತಾನದಲ್ಲೂ ಕಠಿಣ ಕಾನೂನು ತರಬೇಕೆಂದ ಟಿಟಿಪಿ
ಶರಿಯಾ ಕಾನೂನು ಜಾರಿಗೆ ಮೌಲ್ವಿ ಫಕೀರ್​ ಒತ್ತಾಯ

ಅಫ್ಘಾನ್​ ತಾಲಿಬಾನ್​ ಕೈವಶವಾಗಿರೋದಕ್ಕೆ ಹಲವು ದೇಶಗಳು ನೋವಿನಿಂದ ಮರಗುತ್ತಿದ್ದರೆ, ಪಾಕಿಸ್ತಾನ ಮಾತ್ರ ಸಂಭ್ರಮಾಚರಣೆ ನಡೆಸುತ್ತಿದೆ. ಇಷ್ಟು ದಿನ ಉಗ್ರರನ್ನ ತನ್ನ ಒಡಲಲ್ಲೇ ಬಚ್ಚಿಟ್ಟುಕೊಂಡು ನೌಟಂಕಿ ನಾಟಕವಾಡ್ತಿದ್ದ ಪಾಕಿಸ್ತಾನ, ಅಫ್ಘಾನ್​ನ ತಾಲಿಬಾನ್​ ರಕ್ಕಸರಿಗೆ ಬೆನ್ನಲುಬಾಗಿ ನಿಂತ್ತಿದೆ. ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಸ್ವಾತಂತ್ರ್ರ್ಯವನ್ನ ಸರ್ವನಾಶ ಮಾಡಿ, ಸಾವಿರಾರು ಅಮಾಯಕರ ಸಾವಿಗೆ ಕಾರಣವಾದ ಶರಿಯಾ ಕಾನೂನುಗಳನ್ನು ಪಾಕಿಸ್ತಾನದಲ್ಲೂ ಜಾರಿ ಮಾಡಲು ತೆಹರಿಕ್ ಇ ತಾಲಿಬಾನ್​ ಭಯೋತ್ಪಾದಕ ಸಂಘಟನೆಯ ನಾಯಕ ಮೌಲ್ವಿ ಫಕೀರ್ ಮೊಹಮ್ಮದ್ ಒತ್ತಾಯಿಸಿದ್ದಾರೆ.

ತೆಹರಿಕ್ ಇ ತಾಲಿಬಾನ್ ಅನ್ನೋದು ಪಾಕಿಸ್ತಾನದಲ್ಲಿರುವ ತಾಲಿಬಾನ್ ಸಂಘಟನೆ. ಪಾಕಿಸ್ತಾನದ ಯುವಕರೇ ಈ ಸಂಘಟನೆಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ರು. ಪಾಕಿಸ್ತಾನದಲ್ಲಿ ವರ್ಷಗಳ ಹಿಂದೆ ಅಮಾಯಕ ಜನರ ಮಾರಣ ಹೋಮ ನಡೆಸಿರುವ ತೆಹರಿಕ್ ಇ ತಾಲಿಬಾನ್ ಸಂಘಟನೆ, ಪಾಕ್ ನೆಲದಲ್ಲಿ ಎಂದೂ ಅಳಿಸಲಾಗದ ಭಯದ ವಾತವರಣವನ್ನ ಸೃಷ್ಟಿಸಿ ಬಿಟ್ಟಿದೆ. ಪಾಕ್ ಸೇನೆಯೆ ತೆಹರಿಕ್ ಇ ತಾಲಿಬಾನ್ ವಿರುದ್ಧ ಹೋರಾಡಲು ಹಿಂದೇಟು ಹಾಕ್ತಿದೆ ಅಂದ್ರೆ, ಅದ್ಯಾವ ಮಟ್ಟಿಗೆ ಈ ಉಗ್ರ ಸಂಘಟನೆ ಪಾಕಿಸ್ತಾನದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ ಅಂದ್ರೆ ನೀವೆ ಯೋಚ್ನೇ ಮಾಡಿ.. ? ಪಾಕ್ ನೆಲದಲ್ಲಿ ರಕ್ತ ಸಿಕ್ತ ಅಧ್ಯಾಯ ಬರೆದಿರುವ ಈ ತಾಲಿಬಾನ್​ ಸಂಘಟನೆ ಇದೀಗ ಅಫ್ಘಾನ್​ ತಾಲಿಬಾನ್​ಗಳ ಬಲದಿಂದ ಚಿಗುರಿಕೊಂಡಿದ್ದು, ಪಾಕಿಸ್ತಾನದಾದ್ಯಂದ ಭಯದ ಕಾರ್ಮೋಡ ಕವಿಯುವಂತೆ ಮಾಡಿದೆ.

 

ಅಫ್ಘಾನ್​ನಲ್ಲಿ ಅಮೆರಿಕ ಸೇನೆ 20 ವರ್ಷಗಳ ಕಾಲ ಇದ್ದ ಸಂದರ್ಭದಲ್ಲಿ ಪಾಕಿಸ್ತಾನದ ತೆಹರಿಕ್ ಇ ತಾಲಿಬಾನ್ ಕೂಡ ಬಾಲ ಮುದುಡಿಕೊಂಡು ಸೈಲೆಂಟಾಗಿತ್ತು. ಆದ್ರೆ ಅಮೆರಿಕ ಸೇನೆ ಅಫ್ಘಾನ್​ನಿಂದ ಅಮೆರಿಕಗೆ ರಿಟರ್ನ್​ ಸೇನೆ ಇಡ್ತಿದ್ದಂಗೆ ತೆಹರಿಕ್ ಇ ತಾಲಿಬಾನ್​ಗೆ ರೆಕ್ಕೆ ಪುಕ್ಕ ಬಂದತ್ತಾಗಿದ್ದು, ಮತ್ತೆ ಪುಟಿದು ನಿಂತ್ತಿದೆ.

2008 ರಲ್ಲಿ ಬ್ಲಾಕ್​ ಲಿಸ್ಟ್​​​​ಗೆ ಟಿಟಿಪಿ ಸೇರ್ಪಡೆ
ತೆಹರಿಕ್ ಇ ತಾಲಿಬಾನ್ ಹಿನ್ನೆಲೆಯೇ ಭಯಾನಕ
ಅಮಾಯಕರ ನೆತ್ತರು ಹರಿಸಿದ್ದ ತೆಹರಿಕ್ ಇ ತಾಲಿಬಾನ್

ಸಾವಿರಾರು ಜನರ ಹತ್ಯೆ ನಡೆಸಿದ್ದ ಇದೇ ತೆಹರಿಕ್ ಇ ತಾಲಿಬಾನ್ ಸಂಘಟನೆಯನ್ನು 2008ರಲ್ಲಿ ವಿಶ್ವ ಸಂಸ್ಥೆ ಕಪ್ಪು ಪಟ್ಟಿಗೆ ಸೇರಿಸಿತ್ತು. ಭಯಾನಕ ಹಿನ್ನೆಲೆ ಹೊಂದಿರುವ ಈ ತಾಲಿಬಾನ್​ಗಳು ಪಾಕಿಸ್ತಾನಾದ್ಯಂತ ಇಂದಿಗೂ ಭಯದ ವಾತಾವರಣವೇ ಸೃಷ್ಟಿಸಿ ಬಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಈ ಭಯೋತ್ಪಾದಕ ಸಂಘಟನೆ ನಡೆಸಿರುವ ಉಗ್ರ ದಾಳಿಯನ್ನ ನೆನೆಸ್​ಕೊಂಡ್ರೆ, ಪಾಕಿಸ್ತಾನದ ತಾಯಂದಿರು ಇಂದಿಗೂ ಕನಸಲ್ಲೂ ಬೆಚ್ಚಿ ಬೀಳ್ತಾರೆ..

2014ರಲ್ಲಿ ಪೇಶಾವರದ ಶಾಲೆಯ ಮೇಲೆ ಭಯೋತ್ಪಾದಕರ ದಾಳಿ
132 ವಿದ್ಯಾರ್ಥಿಗಳ ಮಾರಣಹೋಮ ನಡೆಸಿದ ಟಿಟಿಪಿ
ಹೋರಾಟಗಾರ್ತಿ ಮಲಾಲಾ ಯೂಸುಫ್‌ ಮೇಲೂ ಅಟ್ಯಾಕ್

ತೆಹರಿಕ್ ಇ ತಾಲಿಬಾನ್​ ಎಷ್ಟು ಕ್ರೂರ ಸಂಘಟನೆ ಅನ್ನೋದನ್ನ ಜಗತ್ತಿನೆದರು ಮತ್ತೊಮ್ಮೆ ಸಾಬೀತು ಪಡಿಸಿದ್ದೆ 2014ರಲ್ಲಿ ನಡೆದ ಈ ಭಯೋತ್ಪಾದಕ ದಾಳಿ. 2014ರಲ್ಲಿ ಪೇಶಾವರ​ದ ಆರ್ಮಿ ಶಾಲೆಯ ಮೇಲೆ ದಾಳಿ ನಡೆಸಿದ್ದ ತಹರಕ್ ಇ ತಾಲಿಬಾನ್ , ಸರಿಸುಮಾರು 132 ಮಕ್ಕಳನ್ನ ಹತ್ಯೆ ಮಾಡಿತ್ತು. ಈ ಭಯಾನಕ ದಾಳಿಯಲ್ಲಿ 132 ವಿದ್ಯಾರ್ಥಿಗಳು ಸೇರಿದಂತೆ 149 ಜನರು ಉಸಿರು ಚೆಲ್ಲಿದ್ರು.

ಅಷ್ಟೇ ಅಲ್ಲ, ಈ ಟಿಟಿಪಿ ಉಗ್ರ ಸಂಘಟನೆ ಮಕ್ಕಳ ಮೇಲೆ ದಾಳಿ ಮಾಡುವ ಮೊದ್ಲೇ ಮಕ್ಕಳ ಶಿಕ್ಷಣದ ಹಕ್ಕುಗಳ ಪರ ಪಾಕಿಸ್ತಾನದಲ್ಲಿ ಹೋರಾಟ ಮಾಡುತ್ತಿದ್ದ ಹೋರಾಟಗಾರ್ತಿಯ ಹತ್ಯಾ ಯತ್ನ ಕೂಡ ನಡೆಸಿತ್ತು. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಕಾರ್ಯಕರ್ತೆ,ಮಲಾಲ ಯೂಸೂಫ್ ಮೇಲೆ 2012 ರಲ್ಲಿ ಇದೇ ತಹರಿಕ್ ಈ ತಾಲಿಬಾನ್ ಅಟ್ಯಾಕ್ ಮಾಡಿ ಹತ್ಯೆಗೆ ಯತ್ನಿಸಿತ್ತು. ಆದ್ರೆ ಅಂದು ಈ ತಾಲಿಬಾನ್ ರಕ್ಕಸರ ಕೈಯಿಂದ ತಪ್ಪಿಸಿ ಜೀವ ಉಳಿಸುವಲ್ಲಿ ಮಲಾಲ ಯಶಸ್ವಿಯಾಗಿದ್ರು.

ಪಾಕಿಸ್ತಾನದ ತೆಹರಿಕ್ ಇ ತಾಲಿಬಾನ್​ ನಾಯಕ ಅರೆಸ್ಟ್
2013ರಲ್ಲಿ ಅಫ್ಘಾನ್​ನಲ್ಲಿ ಮೌಲ್ವಿ ಫಕೀರ್ ಬಂಧನ
2021ರಲ್ಲಿ ತಾಲಿಬಾನ್​ಗಳಿಂದ ಉಗ್ರನ ಬಿಡುಗಡೆ

ಹೌದು.. ಪಾಕಿಸ್ತಾನದಲ್ಲಿ ಉಗ್ರ ಚರಿತ್ರೆ ಬರೆದಿರುವ ಈ ತೆಹರಿಕ್​ ಇ ತಾಲಿಬಾನ್ ಸಂಘಟನೆಯ ನಾಯಕ ಮೌಲ್ವಿ ಫಕೀರ್​​ನನ್ನು 2013ರ ಫೆಬ್ರವರಿಯಲ್ಲಿ ಅಫ್ಘಾನ್​ನಲ್ಲಿ ಬಂಧಿಸಲಾಗಿತ್ತು. ಅಂದಿನ ಅಫ್ಘಾನ್ ಸರ್ಕಾರ ಟಿಟಿಪಿ ನಾಯಕ ಮೌಲ್ವಿ ಫಕೀರ್ ಮೊಹಮ್ಮದ್​ನನ್ನ ಖೆಡ್ಡಾಗೆ ಕೆಡವಿತ್ತು.

9 ವರ್ಷಗಳ ಕಾಲ ಅಫ್ಘಾನ್​ ಜೈಲಿನಲ್ಲಿದ್ದ ಈ ಮೌಲ್ವಿ ಫಕೀರ್​ನನ್ನ ತಾಲಿಬಾನ್​ಗಳು ಕಳೆದ ಭಾನುವಾರ ಬಿಡುಗಡೆ ಮಾಡಿದ್ದಾರೆ. ಉಗ್ರನ ಬಿಡುಗಡೆಯು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡಕ್ಕೂ ಅಪಾಯ ಎದುರಾಗಲಿದ್ದು, ಅಫ್ಘಾನ್​ ಹಾಗೂ ಪಾಕಿಸ್ತಾನ ಸೇರಿ ಎರಡು ದೇಶಗಳ ಸೈನಿಕರಿಗೂ ಭಾರಿ ಆತಂಕ ಮೂಡಿದೆ. ಇದೇ ಮೌಲ್ವಿ ಫಕೀರ್ ಇದೀಗ ಪಾಕಿಸ್ತಾನದಲ್ಲಿರುವ ತಾಲಿಬಾನ್​ ಸಂಘಟನೆಯನ್ನ ಮತ್ತಷ್ಟು ಬಲಪಡಿಸಲು ಸಜ್ಜಾಗಿದ್ದಾನೆ.

ತಾಲಿಬಾನ್​ಗಳು ನಮಗಾಗಿ ಕಾಶ್ಮೀರ ಗೆಲ್ಲುತ್ತಾರೆಂದ ಪಾಕ್ ನಾಯಕಿ
ಇಷ್ಟು ದಿನ ಅಫ್ಘಾನ್ ತಾಲಿಬಾನ್​ಗಳ ಪರ ತೆರೆಮರೆಯಲ್ಲಿ ಕೂತು ಬ್ಯಾಟಿಂಗ್ ಮಾಡುತ್ತಿದ್ದ ಪಾಕ್ ಪ್ರಧಾನಿ ಇಮ್ರಾನ್ ಪಕ್ಷ ಇದೀಗ ಓಪನ್ ಆಗಿ ಸಪೋರ್ಟ್​ ಮಾಡಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಕ್ಷವಾದ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ನಾಯಕಿ ನೀಲಂ ಶೇಖ್ ನೀಡಿರುವ ಹೇಳಿಕೆ ಇದೀಗ ವಿವಾದದ ಕಿಡಿ ಹೊತ್ತಿಸಿದೆ.

ಪಾಕಿಸ್ತಾನದ ಜೊತೆ ಸದಾ ಕೈಜೋಡಿಸುವುದಾಗಿ ತಾಲಿಬಾನ್​ಗಳ ಈಗಾಗಲೇ ಹೇಳಿದೆ. ಅಫ್ಘಾನ್​ನಲ್ಲಿರುವ ತಾಲಿಬಾನಿಗಳು ಖಂಡಿತವಾಗಿಯೂ ಪಾಕಿಸ್ತಾನಕ್ಕೆ ರಿಟರ್ನ್ ಬರ್ತಾರೆ. ರಿಟರ್ನ್​ ಬಂದ್ಮೇಲೆ ಅವರು ಕಾಶ್ಮೀರವನ್ನ ಗೆದ್ದು ಪಾಕಿಸ್ತಾನಕ್ಕೆ ಕೊಡ್ತಾರೆ
-ನೀಲಂ ಶೇಖ್

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಉಗ್ರರು ಹಿಡಿತ ಸಾಧಿಸುವಲ್ಲಿ ಪಾಕ್ ಕೈವಾಡದ ಕುರಿತು ಈಗಾಗಲೇ ಅನುಮಾನ ವ್ಯಕ್ತವಾಗಿದೆ. ತಾಲಿಬಾನಿಗಳನ್ನು ಬೆಳೆಸುವಲ್ಲಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಪೋರ್ಟ್​ ಮಾಡಿರುವ ಕುರಿತು,ಸ್ವತಃ ಇಮ್ರಾನ್ ಖಾನ್ ಪಕ್ಷದ ನಾಯಕಿಯೇ ಇದೀಗ ಮೌನ ಮುರಿದ್ದಿದ್ದು, ಪಾಕ್ ಕುತಂತ್ರ ಬುದ್ದಿಯನ್ನ ಜಗತ್ತಿನೆದರು ಮತ್ತೊಮ್ಮೆ ಬೆತ್ತಲು ಮಾಡಿದೆ. ಕಠಿಣವಾಗಿರುವ ಶರಿಯಾ ಕಾನೂನು ಜಾರಿದ ಜೊತೆಗೆ ತಾಲಿಬಾನ್ ಕ್ರೌರ್ಯದ ಬಗ್ಗೆ ಅಫ್ಘಾನ್ ಜನತೆ ಆತಂಕಕ್ಕೀಡಾಗಿದ್ದಾರೆ.

ತಮ್ಮ ಮುಂದಿನ ಭವಿಷ್ಯ ಹೇಗಿರುತ್ತದೆಯೋ ಏನೋ ಎಂಬ ಚಿಂತನೆಯಲ್ಲಿದ್ದಾರೆ. ಅಫ್ಘಾನ್​ನಲ್ಲಿ ಮಹಿಳೆಯರ ಸ್ವಾತಂತ್ರ್ಯವನ್ನ ಸಮಾಧಿ ಮಾಡಿರುವ ಈ ಶರಿಯಾ ಕಾನೂನು ಪಾಕಿಸ್ತಾನದಲ್ಲೂ ಜಾರಿಗೆ ತರಲು ಸಿದ್ಧವಾಗಿರುವುದು ಪಾಕಿಸ್ತಾನದ ಮಹಿಳೆಯರಲ್ಲಿ ಆತಂಕ ಮೂಡಿಸಿದೆ. ಅಫ್ಘಾನ್ ತಾಲಿಬಾನ್​ಗಳ ಈ ಕಠಿಣ ಕಾನೂನು ಒಂದೊಂದೆ ದೇಶಗಳಲ್ಲಿ ಜಾರಿಗೆ ಮುಂದಾಗಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. ಉಗ್ರರ ನೆಲೆಬೀಡೆಂದೇ ಕರೆಸಿಕೊಳ್ಳುತ್ತಿರುವ ಪಾಕಿಸ್ತಾನದಲ್ಲಿ ಇದೀಗ ತಾಲಿಬಾನ್​ ಸಂಘಟನೆಯ ಪರ ಒಲವು ಹೆಚ್ಚುತ್ತಿದೆ. ಪಾಕಿಸ್ತಾನದಲ್ಲೂ ತಾಲಿಬಾನ್ ಸಂಘಟನೆ ಚಿಗುರಿಕೊಂಡಿರುವುದು ಜಾಗತಿಕ ಆತಂಕಕ್ಕೂ ಕಾರಣವಾಗಿದೆ. ತಾಲಿಬಾನ್​ ತನ್ನ ರಕ್ಕಸ ಕಬಂಧ ಬಾಹುಗಳನ್ನು ಇನ್ನು ಯಾವ್ಯಾವ ದೇಶಗಳ ಕಡೆ ಚಾಚುತ್ತೋ ಅನ್ನೋದನ್ನ ಕಾದು ನೋಡಬೇಕಾಗಿದೆ.

Source: newsfirstlive.com Source link