ಮೂರನೇ ಅಲೆ ಬಂದೇ ಬಿಡ್ತಾ?; ಇಡೀ ದೇಶಕ್ಕೆ ಶಾಕ್​​ ಕೊಟ್ಟ ಕೇರಳ; ಏನಿದು ಕಥೆ?

ಮೂರನೇ ಅಲೆ ಬಂದೇ ಬಿಡ್ತಾ?; ಇಡೀ ದೇಶಕ್ಕೆ ಶಾಕ್​​ ಕೊಟ್ಟ ಕೇರಳ; ಏನಿದು ಕಥೆ?

ಕೊರೊನಾ.. ಕಳೆದ ಸುಮಾರು 20 ತಿಂಗಳಿಂದ ಇಡೀ ವಿಶ್ವವನ್ನೇ ನಡುಗಿಸಿದ ಈ ವೈರಸ್, ಇಂದಿಗೂ ಹಲವು ದೇಶಗಳ ನೆಮ್ಮದಿಯನ್ನ ಹಾಳು ಮಾಡಿದೆ. ಪ್ರತಿದಿನ ಸಾವಿನ ಪ್ರಮಾಣದಲ್ಲೂ ಇಳಿಕೆ ಕಂಡು ಬರ್ತಿಲ್ಲ.. ಇನ್ನೊಂದೆಡೆ ಭಾರತದಲ್ಲಿ ಇದರ ಸ್ವರೂಪ ಬದಲಾಗ್ತಿರೋದ್ರ ಬಗ್ಗೆ ವಿಜ್ಞಾನಿಗಳು ಗಮನಿಸಿದ್ದಾರೆ. ಹಾಗಿದ್ದರೆ, ಈ ಸೋಂಕು ಮತ್ತಷ್ಟು ಭಯಂಕರವಾಗ್ತಿದೆಯಾ? ಅಥವಾ ಇದರ ಬದಲಾದ ರೂಪ ಸಮಾಧಾನಕರವಾ? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕೊರೊನಾ ಎರಡನೇ ಅಲೆ ಅಪ್ಪಳಿಸಿದ ಕರಾಳ ನೆನಪು ಇನ್ನೂ ಹಲವರ ಮನಸ್ಸಿನಿಂದ ಮಾಸಿಲ್ಲ.. ಅದರ ಭೀಕರತೆ ಇಂದಿಗೂ ಎಷ್ಟೋ ಕುಟುಂಬಗಳನ್ನ ಬೆಚ್ಚಿ ಬೀಳಿಸುತ್ತಿದೆ.. ಆ ಆಕ್ಸಿಜನ್​ಗಾಗಿ ಪರದಾಟ, ಬೆಡ್​ಗಾಗಿ ಯುದ್ಧೋಪಾದಿ ಹೋರಾಟ, ಮಾತ್ರೆ-ಇಂಜೆಕ್ಷನ್​​ಗಾಗಿ ಊರೆಲ್ಲ ಅಲೆದಾಟ.. ಆ ಅನುಭವ ಎಂಥ ವೈರಿಗಳಿಗೂ ಬೇಡಪ್ಪ ಅಂತಾ ಅನ್ನಿಸಿಬಿಡುತ್ತೆ.. ಹಾಗಿದ್ದರೆ ಕೊರೊನಾ ಇಂದು ಹೇಗಿದೆ? ಮುಂದೆ ಇದರ ರೂಪ ಏನಾಗಬಹುದು? ಅನ್ನೋದು ಹಲವರ ಪ್ರಶ್ನೆಯಾಗಿದೆ.

ಕೊರೊನಾ ಇಂದಿನ ಸ್ಥಿತಿಗತಿ ಗಮನಿಸೋದಾದ್ರೆ.. ಇಂದಿಗೂ ದೇಶದಲ್ಲಿ ಪ್ರತಿ ದಿನ 30 ರಿಂದ 40 ಸಾವಿರ ಪ್ರಕರಣಗಳು ದಾಖಲಾಗುತ್ತಲೇ ಇವೆ.. ಸಾವಿನ ಪ್ರಮಾಣದಲ್ಲಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ.. ಅದ್ರಲ್ಲೂ ಕೆಲ ರಾಜ್ಯಗಳಂತೂ ಇಡೀ ದೇಶಕ್ಕೇ ತಲೆನೋವನ್ನ ತಂದಿಟ್ಟಿವೆ. ಇನ್ನೇನು ಸೋಂಕು ಮುಗಿದು ಜನ ಜೀವನ ಸಾಮಾನ್ಯವಾಗಬಹುದು ಅನ್ನೋ ಹೊತ್ತಿಗೇ ಈ ರಾಜ್ಯಗಳ ಕೊರೊನಾ ಸೋಂಕು ಬರಸಿಡಿಲಿನಂತೆ ಅಪ್ಪಳಿಸುತ್ತಿವೆ.. ಅದ್ರಲ್ಲೂ ಒಂದು ರಾಜ್ಯವಂತೂ ಇಡೀ ದೇಶದ ಕೊರೊನಾ ನಿಯಂತ್ರಣದ ಲೆಕ್ಕಾಚಾರವನ್ನೇ ಬುಡಮೇಲು ಮಾಡುತ್ತಿದೆ. ಹೀಗಾಗಿ ಸಹಜವಾಗಿ ಜನರಲ್ಲಿ ಮುಂದಿನ ಹಂತದಲ್ಲಿ ಕೊರೊನಾ ಎಂಥ ರೂಪ ಪಡೆದುಕೊಳ್ಳಬಹುದು? ಅನ್ನೋ ಪ್ರಶ್ನೆ ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ..

ಕೇರಳ ಮಾಡೆಲ್ ಉಲ್ಟಾ ಪಲ್ಟಾ
ಇಡೀ ದೇಶಕ್ಕೇ ಶಾಕ್ ತಂದ ಕೇರಳ
ಒಂದೇ ದಿನದಲ್ಲಿ 31 ಸಾವಿರ ಕೇಸ್

ಹೌದು.. ಹಿಂದೊಮ್ಮೆ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಅತೀ ಕಳಪೆ ರಾಜ್ಯ ಎನ್ನಿಸಿಕೊಂಡಿದೆ. ಳೆದ ಕೆಲವು ತಿಂಗಳುಗಳಿಂದ ಕೇರಳ ರಾಜ್ಯದಲ್ಲಿ ಕೊರೊನಾ ತಾಂಡವವಾಡುತ್ತಿದೆ. ಇಂದು ಒಂದೇ ದಿನ ಕೇರಳ ರಾಜ್ಯದಲ್ಲಿ ಬರೋಬ್ಬರಿ 31,445 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ನೆರೆರಾಜ್ಯಗಳಾದ ತಮಿಳುನಾಡು ಮತ್ತ ಕರ್ನಾಟಕಕ್ಕೂ ಆತಂಕ ಹೆಚ್ಚಾಗಿದೆ.

ಇಂದಿನ ಕೊರೊನಾ ಪ್ರಕರಣಗಳನ್ನು ನಿನ್ನೆಗೆ ಹೋಲಿಸಿದರೆ ನಿನ್ನೆಗಿಂತಲೂ ಇಂದು 7,149 ಕೇಸ್​​ಗಳು ಹೆಚ್ಚಾಗಿದ್ದು ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಲೇ ಇವೆ. ಇನ್ನು ಕೇರಳದ ಪಾಸಿಟಿವಿಟಿ ರೇಟ್ 19.03%ಗೆ ಜಿಗಿದಿದೆ. ಇಂದು ಸೋಂಕಿನಿಂದಾಗಿ 215 ಮಂದಿ ಸಾವನ್ನಪ್ಪಿದ್ದಾರೆ.

ಹಾಗೆ ನೋಡಿದ್ರೆ, ಆಗಸ್ಟ್ 24 ರಂದು ಕೇರಳದಲ್ಲಿ 24,296 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು.. ಆಗಸ್ಟ್ 23 ರಂದು ವರದಿಯಾಗಿದ್ದ ಕೇಸ್​ಗಳಿಗಿಂತಲೂ ನಿನ್ನೆ 10,910 ಹೆಚ್ಚು ಕೇಸ್​​ಗಳು ವರದಿಯಾಗಿದ್ದವು. ನಿನ್ನೆಯ ಪಾಸಿಟಿವಿಟಿ ರೇಟ್ 18.04% ಇತ್ತು. ಆಗಸ್ಟ್ 23 ರಂದು ಕೇರಳದಲ್ಲಿ 13,386 ಪ್ರಕರಣಗಳು ವರದಿಯಾಗಿದ್ದವು. ಹೀಗಾಗಿ ಸಹಜವಾಗಿ ಜನರು ತೀವ್ರ ಆತಂಕಕ್ಕೆ ಒಳಗಾಗುವಂತೆ ಆಗಿದೆ. ಮುಂದೇನಾಗುತ್ತೋ ಅನ್ನೋ ಭಯ ಜನರಿಗೆ ಕಾಡೋ ಹಾಗೆ ಆಗಿದೆ.. ಅದರ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಈಗ ಒಂದು ಮಹತ್ವದ ಅಂಶದ ಬಗ್ಗೆ ಮಾಹಿತಿ ನೀಡಿದೆ.

WHO ಭಾರತದ ಬಗ್ಗೆ ಹೇಳಿದ್ದೇನು?
ಮುಂಬರುವ ಹಂತದಲ್ಲಿ ಸೋಂಕು ಹೆಚ್ಚಾಗುತ್ತಾ?

WHO ಭಾರತದ ಬಗ್ಗೆ ಹೇಳಿದ್ದೇನು? ಮುಂಬರುವ ಹಂತದಲ್ಲಿ ಸೋಂಕು ಹೆಚ್ಚಾಗುತ್ತಾ? ಮುಂತಾದ ಪ್ರಶ್ನೆಗಳು ಇಂದು ಹಲವರನ್ನ ಕಾಡುತ್ತಿವೆ .. ನಿಂತಲ್ಲಿ ನಿಲ್ಲಲಾಗದ, ಕುಂತಲ್ಲಿ ಕೂರಲಾಗದ ಕಸಿವಿಸಿಯನ್ನ ಉಂಟು ಮಾಡ್ತಿದೆ.. ಈ ಕಸಿವಿಸಿಯ ಭಯಾಗ್ನಿಗೆ ಕೇರಳ ಮಾಡೆಲ್ ತುಪ್ಪ ಸುರಿಯುತ್ತಿದೆ..

ಹೌದು.. ಜನರ ಪ್ರಶ್ನೆಗೆ ಕೊಂಚ ಸಮಾಧಾನ ತರುವಂಥ ಉತ್ತರವನ್ನ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಒಂದು ಕಡೆ ಇಂದು ಭಾರತದಲ್ಲಿ ಕೊವ್ಯಾಕ್ಸಿನ್, ಕೋವಿಶೀಲ್ಡ್, ಸ್ಫುಟ್ನಿಕ್, ಝೈಡಸ್ ಕೆಡಿಲ್ಲಾ.. ಜಾನ್ಸನ್ ಅಂಡ್ ಜಾನ್ಸನ್ ಹಾಗೂ ಮಾಡರ್ನಾ ಮುಂತಾದ ಆರು ವ್ಯಾಕ್ಸಿನ್​ಗಳನ್ನ ನೀಡಲಾಗಿದೆ. ಸುಮಾರು 60 ಕೋಟಿ ಡೋಸ್​​ನಷ್ಟು ವ್ಯಾಕ್ಸಿನ್​​ಗಳನ್ನು ನೀಡಲಾಗಿದೆ. ಹೀಗಿದ್ದೂ, ಭಾರತದಲ್ಲಿ ಕೊರೊನಾ ಇನ್ನೂ ಇರುತ್ತಾ? ಅಥವಾ ಇದರ ರೂಪ ಬದಲಾಗುತ್ತಾ? ಇದು ಬಲಯುತವಾಗುತ್ತಾ? ಬಲಹೀನವಾಗುತ್ತಾ? ಅನ್ನೋ ಪ್ರಶ್ನೆಗಳ ಸರಮಾಲೆ ಇದ್ದೇ ಇರುತ್ತೆ..

ಇದಕ್ಕೆ ಉತ್ತರವೆಂಬಂತೆ ವಿಶ್ವ ಆರೋಗ್ಯ ಸಂಸ್ಥೆಯ ಚೀಫ್ ಸೈಂಟಿಸ್ಟ್ ಸೌಮ್ಯಾ ಸ್ವಾಮಿನಾಥನ್ ಮಹತ್ವದ ಅಬ್ಸರ್ವೇಷನ್ ಮಾಡಿದ್ದಾರೆ. ಅದು ಏನು ಅಂತಾ ನೋಡೋದಾದ್ರೆ, ಭಾರತದಲ್ಲಿ ಕೊರೊನಾ ಪೆಂಡಮಿಕ್​​, ಎಂಡೆಮಿಸಿಟಿಯಾಗಿ ಬದಲಾಗುತ್ತಿದೆ ಅಂತಾ ಅವರು ಹೇಳಿದ್ದಾರೆ..

ಅರೆ ಎಂಡೆಮಿಸಿಟಿನಾ? ಹಾಗಂದ್ರೆ ಏನು? ಅಂತಾ ನೀವು ಪ್ರಶ್ನೆ ಮಾಡುವುಕ್ಕಿಂತ ಮುನ್ನು ಉತ್ತರ ಹೇಳಿ ಬಿಡ್ತೀವಿ ಕೇಳಿ. ಸಾಮಾನ್ಯವಾಗಿ ಪೆಂಡಮಿಕ್ ಅಂದ್ರೆ ಸಾಂಕ್ರಾಮಿಕ ಎಂದರ್ಥ.. ಸೋಂಕು ಪೆಂಡಮಿಕ್ ಆಗಿದ್ದಾಗ ಅತ್ಯಂತ ವೇಗವಾಗಿ ಸೋಂಕು ಹರಡುತ್ತೆ.. ಅದರ ವಿಸ್ತೀರ್ಣ ಮತ್ತು ಭೀಕರತೆ ಎರಡೂ ಅತಿ ಹೆಚ್ಚಾಗಿರುತ್ತೆ.. ಅದರ ಝಲಕ್ ಅನ್ನೇ ನಾವು ಭಾರತದಲ್ಲಿ ಕೊರೊನಾ ಮೊದಲ ಹಾಗೂ ಎರಡನೇ ಅಲೆ ವೇಳೆ ನೋಡಿದ್ದೆವು.. ಆದ್ರೆ ಈಗ ಅದರ ರೂಪ ಬದಲಾಗಿ ಅದು ಎಂಡೆಮಿಸಿಟಿ ಆಗಿ ಬದಲಾಗುವ ಸಾಧ್ಯತೆ ಇದೆ ಅಂತಾರೆ ಸೌಮ್ಯಾ ಸ್ವಾಮಿನಾಥನ್.

ಎಂಡೆಮಿಸಿಟಿ ಅಂದ್ರೆ ಸೋಂಕು ಒಂದು ಪರ್ಟಿಕ್ಯುಲರ್ ಪ್ರದೇಶಕ್ಕೆ ಸೀಮಿತವಾಗಿರುವಂಥ ಸೋಂಕು. ಉದಾಹರಣೆಗೆ ನೋಡೋದಾದ್ರೆ ಸ್ಮಾಲ್​ ಪಾಕ್ಸ್, ಫ್ಲೂ, ಮಲೇರಿಯಾ ಮುಂತಾದವು.. ಅದೇ ರೀತಿ ಕೊರೊನಾ ಸೋಂಕು ಸಹ ಭಾರತದ ಕೆಲ ಪ್ರದೇಶಗಳಿಗೆ ಸೀಮಿತವಾದಂತೆ ಆಗಾಗ ಕಂಡು ಬರಬಹುದು ಅಂತಾ ಅವರು ಹೇಳಿದ್ದಾರೆ.

ಹಾಗಿದ್ದರೆ ಕೊರೊನಾ ಎಂಡೆಮಿಸಿಟಿ ಆಗಲು ಕಾರಣವೇನು?

ಕೊರೊನಾ ಎಂಡೆಮಿಸಿಟಿ ಆಗಲು ಹಲವು ಕಾರಣಗಳನ್ನು ಪಟ್ಟಿ ಮಾಡಬಹುದು. ಭಾರತದ ಅತಿ ದೊಡ್ಡ ದೇಶ.. ಇಲ್ಲಿ ಭೌಗೋಳಿಕ ವಿಸ್ತೀರ್ಣ ದೊಡ್ಡದು. ಜೊತೆಗೆ 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಲ್ಲಿ, ಪ್ರತಿಯೊಂದು ಪ್ರದೇಶದ ಜನರ ಆಹಾರ ಕ್ರಮ, ಜೀವನ ಶೈಲಿ, ಚಿಕಿತ್ಸಾ ಪದ್ಧತಿ, ಆರೋಗ್ಯ ಸೌಲಭ್ಯ, ರೋಗನಿರೋಧಕ ಶಕ್ತಿ, ವ್ಯಾಕ್ಸಿನೇಷನ್ ಪ್ರಮಾಣ ಪ್ರತಿಯೊಂದೂ ಭಿನ್ನ ಭಿನ್ನ ಆಗಿರುತ್ತೆ.. ಇದೇ ಕಾರಣದಿಂದಾಗಿ ಅವಕಾಶ ಸಿಕ್ಕಲ್ಲಿ ಕಾಣಿಸಿಕೊಳ್ಳೋ ಗುಣ ಹೊಂದಿರೋ ಕೊರೊನಾ ವೈರಸ್​​ಗಳು.. ಪ್ರತಿರೋಧ ವ್ಯಕ್ತವಾದಂತೆ ಒಂದು ರೂಪಾಂತರಗೊಳ್ಳಬಹುದು, ಇಲ್ಲವೇ ಎಂಡೆಮಿಸಿಟಿ ಆಗಿ ಬದಲಾಗಬಹುದು ಎನ್ನಲಾಗುತ್ತೆ.. ಅಲ್ಲದೇ ಅದರ ಪರಿಣಾಮ ಕೂಡ ವಿಭಿನ್ನವಾಗಿರಬಹುದು ಅನ್ನೋದು ವಿಜ್ಞಾನಿಗಳ ಅಂಬೋಣ..

ಕೊರೊನಾ ಎಂಡೆಮಿಸಿಟಿ ಆಗಿ ಬದಲಾಗಬಹುದು ಎಂದ ಮಾತ್ರಕ್ಕೆ ಅದು ಸಂಪೂರ್ಣ ಇಲ್ಲವಾಗಿದೆ ಎಂದು ಅರ್ಥವಲ್ಲ.. ಹಾಗಾಗಿ ವ್ಯಾಕ್ಸಿನೇಷನ್​ ತೆಗೆದುಕೊಳ್ಳುವುದು, ಕೋವಿಡ್ ಪ್ರೋಟೋಕಾಲ್ ಪಾಲಿಸುವುದು.. ಮಾಸ್ಕ್ ಧರಿಸುವುದು, ಹ್ಯಾಂಡ್​ ಸ್ಯಾನಿಟೈಸೇಷನ್ ಮಾಡಿಕೊಳ್ಳುವುದು ಮುಂತಾದ ಕ್ರಮಗಳನ್ನು ಅನುಸರಿಸೋದನ್ನ ಜನರು ಮರೆಯಬಾರದು.. ಕೊರೊನಾ ಬಗ್ಗೆ ಖಂಡಿತವಾಗಿ ಭಯ ಬೇಡ.. ಆದ್ರೆ ಜಾಗೃತಿ ಬೇಕೇಬೇಕು.. ಆಗಲೇ ನಮಗೆಲ್ಲ ಕೊರೊನಾ ಸೋಲಿಸೋದು ಸಾಧ್ಯವಾಗಲಿದೆ.. ಅಲ್ಲವೇ?

Source: newsfirstlive.com Source link