ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ‌ ಕೊಲೆ: ಆರೋಪಿಗಳನ್ನು ಹಿಡಿದಿದ್ದೇ ರೋಚಕ ಕಥೆ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ವೃದ್ಧ ದಂಪತಿ‌ ಕೊಲೆ: ಆರೋಪಿಗಳನ್ನು ಹಿಡಿದಿದ್ದೇ ರೋಚಕ ಕಥೆ

ಬೆಂಗಳೂರು: ಕೆಲವೊಂದು ಪ್ರಕರಣಗಳೇ ಹಾಗೆ.. ಏನೂ ಸುಳಿವು ಸಿಗದ ಹಾಗೆ ಅಪರಾಧ ಕೃತ್ಯ ನಡೆದು ಹೋಗಿರುತ್ತೆ. ಪೊಲೀಸರು ಕೂಡ ಅಷ್ಟೇ ಚಾಣಾಕ್ಷತನದಿಂದಲೇ ಪ್ರಕರಣಗಳನ್ನ ಭೇದಿಸುತ್ತಾ ತಾವೇನು ಕಮ್ಮಿಯಿಲ್ಲ ಅನ್ನೋದನ್ನ ತೋರಿಸಿಕೊಳ್ಳುತ್ತಿರುತ್ತಾರೆ. ಅಂಥಾದ್ದೇ ಒಂದು ಪ್ರಕರಣ ಬೆಂಗಳೂರಿನಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ನಡೆದು ಹೋಗಿತ್ತು. ಅಂದು ನಡೆದ ಡಬಲ್ ಮರ್ಡರ್​​ ಪ್ರಕರಣ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಮುಂದೇನಾಯ್ತು ಅನ್ನೋದರ ಕಂಪ್ಲೀಟ್​ ಡಿಟೈಲ್ಸ್​​ ಈ ಕ್ಷಣದ ಸ್ಪೆಷಲ್ ರಿಪೋರ್ಟ್​​ನಲ್ಲಿ..

ಬೆಂಗಳೂರನ್ನ ಬೆಚ್ಚಿ ಬೀಳಿಸಿತ್ತು ಡಬಲ್​ ಮರ್ಡರ್​​​

ಎಸ್.. ಅಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ.. ಕೊರೊನಾ ಸಂಕಷ್ಟ ಕಾಲದಿಂದ ಹೊರ ಬಂದ ನಾಡಿನ ಸಮಸ್ತ ಜನರು ಅಂದು ವರಮಹಾಲಕ್ಷ್ಮಿ ಹಬ್ಬವನ್ನ ಆಚರಿಸಿ ಎಲ್ಲರು ಹಬ್ಬದ ಊಟವನ್ನ ಮುಗಿಸಿ ವಿಶ್ರಮಿಸೋದಕ್ಕೆ ಸಜ್ಜಾಗುತ್ತಿದ್ದರು. ಆಗಲೇ ನೋಡಿ ರಾಜ್ಯ ರಾಜಧಾನಿಯಲ್ಲಿ ನಡೆದು ಹೋಗಿತ್ತು ಡಬಲ್​ ಮರ್ಡರ್​​​.. ಬೆಂಗಳೂರಿನ ಕುಮರಸ್ವಾಮಿ ಲೇಔಟ್​​ನಲ್ಲಿ ಅಜ್ಜ ಅಜ್ಜಿಯ ಕೊಲೆ ಪ್ರಕರಣ ಹಬ್ಬದ ವಾತಾವರಣದಿಂದ ಹೊರಗೆ ಬಂದು ಬೆಚ್ಚಿ ಬೀಳುವಂತೆ ಮಾಡಿತ್ತು.

ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿತ್ತು ಡಬಲ್ ಮರ್ಡರ್​​​

ನಾಲ್ಕು ದಿನಗಳ ಹಿಂದೆ ಮನೆಯಲ್ಲಿದ್ದ ವೃದ್ಧ ದಂಪತಿ ಶಾಂತರಾಜು ಮತ್ತು ಪ್ರೇಮಲತಾ ಇಬ್ಬರು ಮನೆಯಲ್ಲಿ ಆಗ ತಾನೆ ಹಬ್ಬವನ್ನ ಆಚರಿಸಿ ವಿಶ್ರಾಂತಿಗೆ ಜಾರೋದಕ್ಕೆ ರೆಡಿ ಆಗುತ್ತಿದ್ದರು. ಆಗ ಸುಮಾರು ಬೆಳಗ್ಗೆ 11 ಗಂಟೆ ಸಮಯ ಆಗಿತ್ತು. ಆಗಲೇ ನೋಡಿ ಮನೆಗೆ ಎಂಟ್ರಿ ಕೊಟ್ಟಿದ್ದರು ಹಂತಕರ ಟೀಮ್​​​.. ಹೀಗೆ ಹಂತಕರ ಟೀಮ್ ಎಂಟ್ರಿ ಕೊಡುತ್ತಿದ್ದಂತೆ ವೃದ್ಧ ದಂಪತಿಯನ್ನ ಭೀಕರವಾಗಿ ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದರು. ಯಾವಾಗ ಮನೆಯೊಂದರಲ್ಲಿ ಡಬಲ್ ಮರ್ಡರ್​ ಆಗಿದೆ ಅನ್ನೋದು ಕುಮಾರಸ್ವಾಮಿ ಲೇಔಟ್​ ಪೊಲೀಸರಿಗೆ ಗೊತ್ತಾಗಿತ್ತೋ ಆಗಲೇ ಪೊಲೀಸರು ತಡ ಮಾಡದೇ ಕೃತ್ಯ ನಡೆದಿದ್ದ ಸ್ಥಳಕ್ಕೆ ದೌಡಾಯಿಸಿದ್ದರು.

ಸ್ಥಳಕ್ಕೆ ದೌಡಾಯಿಸಿದ್ದ ಕುಮಾರಸ್ವಾಮಿ ಲೇಔಟ್​ ಪೊಲೀಸರು ಮನೆಯೊಳಗೆ ಪ್ರವೇಶ ಮಾಡಿದಾಗ ಅಲ್ಲಿ ಕಂಡು ಬಂದಿದ್ದು ವೃದ್ಧ ದಂಪತಿ ಭೀಕರವಾಗಿ ಕೊಲೆ ಆಗಿದ್ದು. ಅದನ್ನ ಗಮನಿಸೋ ಪೊಲೀಸರು ಯಾರೋ ಪರಿಚಯಸ್ಥರೇ ಮಾಡಿರಬಹುದು ಅನ್ನೋ ಅನುಮಾನವನ್ನ ಆರಂಭದಲ್ಲಿಯೇ ವ್ಯಕ್ತಪಡಿಸುತ್ತಾರೆ. ಆಗಲೇ ಮನೆಯನ್ನೆಲ್ಲಾ ತಲಾಶ್ ನಡೆಸೋಕೆ ಪೊಲೀಸರು ಮುಂದಾಗೋದು. ಹೀಗೆ ತಲಾಶ್ ನಡೆಸೋಕೆ ಮುಂದಾದ ಸಂದರ್ಭದಲ್ಲಿ ಮನೆಯಲ್ಲಿದ್ದ ಕೆಲ ಒಡವೆಗಳು ನಾಪತ್ತೆ ಆಗುತ್ತೆ. ಅಲ್ಲದೇ ಮನೆಯಲ್ಲಿದ್ದ ಸುಮಾರು 200 ಗ್ರಾಂ ಚಿನ್ನಾಭರಣಗಳನ್ನ ಹಂತಕರು ಕದ್ದೊಯ್ದಿರುತ್ತಾರೆ. ಅದನ್ನ ಗಮನಿಸೋ ಪೊಲೀಸರು ಇದೊಂದು ಮರ್ಡರ್​ ಫಾರ್ ಗೇನ್ ಅನ್ನೋದನ್ನ ಅರಿತುಕೊಳ್ಳುತ್ತಾರೆ.

ಸಣ್ಣ ಸುಳಿವು ಕೂಡ ಪೊಲೀಸಿರಿಗೆ ಸಿಗೋದಿಲ್ಲ

ಹೌದು. ಅಂದು ನಡೆದ ಡಬಲ್​ ಮರ್ಡರ್​ ಪ್ರಕರಣ ಒಂದು ಕಡೆ ಬೆಂಗಳೂರನ್ನ ಬೆಚ್ಚಿ ಬೀಳಿಸಿದ್ದರೆ, ಮತ್ತೊಂದು ಕಡೆ ಪೊಲೀಸರಿಗೆ ಪ್ರಕರಣವನ್ನ ಬೇಧಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿರುತ್ತೆ. ಅದೇ ಕಾರಣಕ್ಕಾಗಿ ಸ್ಥಳಕ್ಕೆ ಬೆಂಗಳೂರು ಪೊಲೀಸ್ ಹಿರಿಯ ಅಧಿಕಾರಿಗಳೆಲ್ಲಾ ಸ್ಥಳಕ್ಕೆ ದೌಡಾಯಿಸಿ ಆರೋಪಿಗಳನ್ನ ಶಿಘ್ರದಲ್ಲಿಯೇ ಬಂಧಿಸಬೇಕು ಎಂದು ಆದೇಶವನ್ನ ಹೊರಡಿಸುತ್ತಾರೆ. ಆಗ ಕುಮಾರಸ್ವಾಮಿ ಲೇಔಟ್​​ ಪೊಲೀಸರು ಒಂದು ಕ್ಷಣವೂ ತಡ ಮಾಡದೇ ಸುಳಿವಿಗಾಗಿ ಹುಡುಕಾಟವನ್ನ ನಡೆಸುತ್ತಾರೆ. ಆಗ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಇನ್​​ಸ್ಪೆಕ್ಟರ್​ ಶಿವಕುಮಾರ್ ಅಂಡ್ ಟೀಮ್ ಎಷ್ಟೇ ಹುಡುಕಾಡಿದ್ರೂ ಕೂಡ ಅವರಿಗೆ ಒಂದು ಸಣ್ಣ ಸುಳಿವು ಕೂಡ ಸಿಗೋದಿಲ್ಲಾ.

ಒಂದು ಸಣ್ಣ ಸುಳಿವು ಕೂಡ ಸಿಗದೇ ಇದ್ದಾಗ, ಪೊಲೀಸರು ಏನಾದ್ರು ಮಾಡಿ ಆರೋಪಿಗಳನ್ನ ಪತ್ತೆ ಹಚ್ಚಲೇಬೇಕು ಎಂದು ಪಣತೊಟ್ಟು ನಿಂತು ಬಿಡುತ್ತಾರೆ. ನಂತರ ಮನೆಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದ ವೃದ್ಧ ದಂಪತಿ ಮೃತ ದೇಹಗಳನ್ನ ಪೋಸ್ಟ್​​ ಮಾರ್ಟಮ್​​ ಗೆ ಕಳುಹಿಸಿ, ನಂತರ ಪೊಲೀಸುರು ಮತ್ತೊಮ್ಮೆ ಮನೆಯಲ್ಲಿ ತಲಾಶ್ ನಡೆಸೋದಕ್ಕೆ ಮುಂದಾಗ್ತಾರೆ.

ವಾಟರ್ ಬಾಟಲ್ & ಕಾಫಿ ಗ್ಲಾಸ್ ಕೊಟ್ಟಿತ್ತು ಸುಳಿವು

ಮನೆಯಲ್ಲಿ ಏನೂ ಸಿಗದೇ ಇದ್ದಾಗ ಪೊಲೀಸರು ತಲೆ ಕೆಡಿಸಿಕೊಂಡು ಕೂತಿದ್ದರು. ಆಗಲೇ ನೋಡಿ ಪೊಲೀಸರ ಕಣ್ಣಿಗೆ ಬಿದ್ದಿದ್ದು ಒಂದು ‘ವಾಟರ್ ಬಾಟಲ್ & ಕಾಫಿ ಗ್ಲಾಸ್.. ಅದನ್ನ ನೋಡಿದ್ದ ಪೊಲೀಸರಿಗೆ ಅನುಮಾನ ಮೂಡೋದಕ್ಕೆ ಶುರು ಆಗಿತ್ತು. ಒಂದು ಕಡೆ ಮನೆಯಲ್ಲಿದ್ದ ಚಿನ್ನಾಭರಣಗಳು ಕಳ್ಳತನ ಆಗಿದೆ, ಇನ್ನೊಂದು ಕಡೆ ‘ವಾಟರ್ ಬಾಟಲ್ & ಕಾಫಿ ಗ್ಲಾಸ್ ಟೇಬಲ್​ ಮೇಲಿದ್ದದ್ದನ್ನು ನೋಡಿ ಅಲ್ಲಿಗೆ ಒಂದು ನಿರ್ಧಾರಕ್ಕೆ ಬಂದಿದ್ದರು. ಯಾರೋ ಪರಿಚಯಸ್ಥರೇ ಬಂದು ಈ ಕೊಲೆಯನ್ನ ಮಾಡಿರಬಹುದು ಎಂದು ಅಂದುಕೊಳ್ಳುತ್ತಾರೆ. ಅದೇ ಆಯಾಮದಲ್ಲಿ ಕುಮಾರಸ್ವಾಮಿ ಲೇಔಟ್​ ಪೊಲೀಸರು ತನಿಖೆಯನ್ನ ನಡೆಸೋದಕ್ಕೆ ಮುಂದಾಗ್ತಾರೆ.

ನಾಲ್ಕು ಖಾಕಿ ಟೀಂ.. 300 ಸಿಸಿಟಿವಿ & 100 ಜನರ ವಿಚಾರಣೆ

ಯೆಸ್.. ಯಾರೋ ಪರಿಚಯದವರೇ ಈ ಕೃತ್ಯವನ್ನ ಎಸಗಿರಬಹುದು ಎಂದು ಅಂದುಕೊಳ್ಳೋ ಪೊಲೀಸರು ನಂತರ ದಕ್ಷಿಣ ವಿಭಾಗದ ಪೊಲೀಸರಿಂದ ನಾಲ್ಕು ವಿಶೇಷ ತಂಡಗಳನ್ನ ರಚಿಸಿಕೊಳ್ಳುತ್ತಾರೆ. ಆ ಮೂಲಕ ನಾಲ್ಕು ತಂಡಗಳು ಹಂತಕರ ಪತ್ತೆಗಾಗಿ ಫೀಲ್ಡ್​​​ಗೆ ಇಳಿದಿದ್ವು.. ಹೀಗೆ ಒಂದೊಂದು ಟೀಮ್ ಒಂದೊಂದು ಆಯಾಮದಲ್ಲಿ ತನಿಖೆಯನ್ನ ನಡೆಸೋದಕ್ಕೆ ಮುಂದಾಗ್ತಾರೆ. ಅದ್ರಲ್ಲಿ ಒಂದು ಟೀಮ್​ ಘಟನೆ ನಡೆದ ಮನಯ ಸುತ್ತಮುತ್ತ, ರಸ್ತೆಯಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನ ಕಲೆ ಹಾಕೋದಕ್ಕೆ ಮುಂದಾಗ್ತಾರೆ. ಆಗ ಸುಮಾರು 300 ಸಿಸಿಟಿವಿ ಫೂಟೇಜ್​​ಗಳನ್ನ ಒಂದು ತಂಡ ಪರಿಶೀಲನೆಯನ್ನ ನಡೆಸಿದ್ದರು.

ಒಂದು ಕಡೆ ಮೃತ ದಂಪತಿ ಮನೆ ಹತ್ತಿರ ಓಡಾಡುತ್ತಿದ್ದವರು, ಮನೆ ಬಾಡಿಗೆ ಇದ್ದವರು, ಸಂಬಂಧಿಕರು ಸೇರಿ ಸಿಸಿಟಿವಿಯಲ್ಲಿ ಯಾರೆಲ್ಲಾ ಪತ್ತೆ ಆಗ್ತಾರೆ ಅವರೆಲ್ಲರನ್ನು ಕರೆಯಿಸಿ ಮತ್ತೊಂದು ತಂಡ ಒಬ್ಬೊಬ್ಬರಾಗಿ ವಿಚಾರಣೆಯನ್ನ ನಡೆಸುತ್ತಾರೆ. ಹೀಗೆ ಸುಮಾರು 100 ಜನರನ್ನ ಪೊಲೀಸರು ಕರೆಯಿಸಿ ವಿಚಾರಣೆಯನ್ನ ನಡೆಸುತ್ತಾರೆ. ಹೀಗೆ ವಿಚಾರಣೆ ನಡೆಸುತ್ತಿದ್ದ ಕುಮಾರಸ್ವಾಮಿ ಲೇಔಟ್​ ಪೊಲೀಸರಿಗೆ ಅಂತಿಮವಾಗಿ ಒಂದು ಲೀಡ್ ಸಿಕ್ಕಿರುತ್ತೆ. ಆ ಲೀಡ್​​ ಬೆನ್ನತ್ತಿದ್ದ ಪೊಲೀಸರು ಹೋಗಿ ತಲುಪಿದ್ದು ಹಿಂದೂಪುರಕ್ಕೆ..

ಹಿಂದೂಪುರ ಮೂಲದವನನ್ನ ವಶಕ್ಕೆ ಪಡೆಯೋ ಪೊಲೀಸರು

ಯಾವಾಗ ಲೀಡ್​ ಪೊಲೀಸರನ್ನ ಹಿಂದೂಪುರಕ್ಕೆ ಕರೆದೊಯ್ಯುತ್ತೋ ಆಗಲೇ ಅಲ್ಲಿನ ಸ್ಥಳೀಯ ನಿವಾಸಿ ನಾರಾಯಣಸ್ವಾಮಿ ಅನ್ನೋನು ಪತ್ತೆ ಆಗೋದು.. ಆತನನ್ನ ವಶಕ್ಕೆ ಪಡೆಯೋ ಪೊಲೀಸರು ಅಲ್ಲಿಂದ ಎತ್ತಾಕ್ಕೊಂಡು ಬಂದು ವಿಚಾರಣೆ ನಡೆಸೋದು.. ಆರಂಭದಲ್ಲಿ ಏನೇ ಹೇಳಿದ್ರೂ ಕೂಡ ಬಾಯಿ ಬಿಡದ ನಾರಾಯಣಸ್ವಾಮಿ ನಂತರ ಪೊಲೀಸ್​ ಭಾಷೆಗೆ ಪಟಾ ಪಟಾ ಅಂತಾ ಎಲ್ಲವನ್ನು ಕಕ್ಕಿ ಬಿಡ್ತಾನೆ. ಆಗ ಅಸಲಿ ಕಥೆಗಳು ಒಂದೊಂದಾಗಿ ಬಿಚ್ಚಿಕೊಳ್ತವೆ.

ಒಬ್ಬನಿಂದ ಇನ್ನೂ ಮೂವರು ಕೂಡ ಪತ್ತೆ ಆಗ್ತಾರೆ

ನಾರಾಯಣಸ್ವಾಮಿಯ ಹೇಳಿಕೆಯನ್ನ ದಾಖಲಿಸಿಕೊಳ್ಳುವ ಪೊಲಿಸರು ನಂತರ ಆತ ನೀಡೋ ಮಾಹಿತಿ ಆಧರಿಸಿ ಇನ್ನು ಮೂವರನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ. ಆಗ ಪ್ರಕರಣದಲ್ಲಿ ನಾಲ್ವರು ಹಂತಕರು ಇರೋದು ಗೊತ್ತಾಗುತ್ತೆ. ನಾರಾಯಣ ಸ್ವಾಮಿ, ರಾಮು ಅಲಿಯಾಸ್​​​​ ರಾಮಸ್ವಾಮಿ, ಶೇಖ್​ ಆಸೀಫ್​​​​ ಮತ್ತು ಗಂಗಾಧರ್​ ಅನ್ನೋ ನಾಲ್ಕು ಜನರನ್ನ ಕೂಡ ಮುಂದಿನ ಹಂತದಲ್ಲಿ ಬಂಧಿಸಿಯೇ ಬಿಡುತ್ತಾರೆ. ನಂತರ ಅವರೆಲ್ಲರನ್ನ ವಿಚಾರಣೆ ನಡೆಸುತ್ತಾರೆ ಪೊಲೀಸರು.

ಸಾಲ ತೀರಿಸಲು ಹತ್ಯೆ ನಡೆಸಿದ್ದಾಗಿ ತಪ್ಪೊಪ್ಪಿಗೆ!
10 ವರ್ಷ ಬಾಡಿಗೆಗಿದ್ದವನೇ ಮಾಸ್ಟರ್ ಮೈಂಡ್!

ಡಬಲ್ ಮರ್ಡರ್​​​ ಕೇಸಿನಲ್ಲಿ ಪ್ರಮುಖ ಆರೋಪಿ ನಾರಾಯಣಸ್ವಾಮಿ ಸುಮಾರು 10 ವರ್ಷಗಳ ಕಾಲ, ಈ ವೃದ್ಧ ದಂಪತಿ ಶಾಂತರಾಜು & ಪ್ರೇಮಲತಾರ ಮನೆಯಲ್ಲಿಯೇ ಫ್ಯಾಮಿಲಿ ಸಮೇತ ಬಾಡಿಗೆಗಿದ್ರು.. ಆ ಬಳಿಕ ಈತ ಬೇರೆ ಕಡೆಗೆ ಶಿಫ್ಟ್ ಆಗಿದ್ದ.. ಹೀಗೆ ಮನೆ ಖಾಲಿ ಮಾಡಿದ ಮೇಲೆ ನಾರಾಯಣಸ್ವಾಮಿ ಮೈ ತುಂಬಾ ಸಾಲ ಮಾಡಿಕೊಂಡಿದ್ದ.. ಅದನ್ನ ತೀರಿಸಲಾಗದೆ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ. ಆಗ ಸಾಲಗಾರರ ಕಿರುಕುಳ ಹೆಚ್ಚಾದಾಗ, ನಾರಾಯಣ ಸ್ವಾಮಿಗೆ ವೃದ್ಧ ದಂಪತಿ ನೆನಪಾಗಿತ್ತು.. ಇವ್ರಿಗೆ ಹಿಂದೆ ಮುಂದೆ ಯಾರೂ ಇಲ್ಲ ಅನ್ನೊದು ನಾರಾಯಣ ಸ್ವಾಮಿಗೆ ತಿಳಿದಿತ್ತು. ದಂಪತಿಗಳನ್ನ ಕೊಲೆ ಮಾಡೋದಕ್ಕೆ ಈತ ಪ್ಲಾನ್ ಮಾಡಿಕೊಂಡುಬಿಟ್ಟಿದ್ದ.

ಪರಿಚಯ ಇದ್ದವರ ಜೊತೆಯಲ್ಲಿಯೇ ಗ್ಯಾಂಗ್​ ಕಟ್ಟಿಕೊಂಡಿದ್ದ

ಇನ್ನು ನಾರಾಯಣ್​ ಈ ಹಿಂದೆಯೂ ಎರಡು ಬಾರಿ ದಂಪತಿಯನ್ನ ಕೊಲೆ ಮಾಡಲು ಸ್ಕೆಚ್ ಅನ್ನ ಹಾಕಿಕೊಂಡಿದ್ದ, ಆದ್ರೆ ಅದು ಫೈಲೂರ್​ ಆಗಿತ್ತು. ಆಗಾಗ ದಂಪತಿ ಮನೆಗೆ ಬಂದು ಟೀ-ಕಾಫಿ ಕುಡಿದು ಹೋಗ್ತಿದ್ದ.. ಅದೇ ರೀತಿ ಇತ್ತೀಚೆಗೆ ಎರಡು ಬಾರೀ ಅವರ ಹತ್ಯೆಗೆ ಸ್ಕೆಚ್ ಹಾಕಿದ್ದ.. ಒಮ್ಮೆ ಆ ದಂಪತಿ ಮೈಮೇಲೆ ಚಿನ್ನಾಭರಣ ಹಾಕಿಕೊಂಡು, ಮದುವೆ ಸಮಾರಂಭಕ್ಕೆ ಹೋಗಿದ್ರು.. ಅಂದು ಮಿಸ್ ಆಗಿದ್ದ ಆ ದಂಪತಿ, ವರಮಹಾಲಕ್ಷ್ಮೀ ಹಬ್ಬದ ದಿನ ಲಾಕ್ ಆಗಿದ್ರು..ಆಗಲೇ ನೋಡಿ ಸ್ನೇಹಿತರ ಜೊತೆ ಸೇರಿಕೊಂಡು ದಂಪತಿ ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನ ದೋಚಿ ಅಲ್ಲಿಂದ ಎಸ್ಕೇಪ್ ಆಗಿದ್ದು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಇನ್ನು ಘಟನೆ ಸಂಬಂಧ ನಾಲ್ವರು ಆರೋಪಿಗಳ ಹೇಳಿಕೆ ದಾಖಲಿಸಿಕೊಂಡು ಪೊಲೀಸರು ತನಿಖೆಯನ್ನ ಮುಂದುವರೆಸಿದ್ದರು. ಅಲ್ಲದೆ ಆರೋಪಿಗಳಿಂದ 193 ಗ್ರಾಂ ಚಿನ್ನಾಭರಣಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ತನಿಖೆಯನ್ನ ಮುಂದುವರೆಸಿದ್ದು, ಆರೋಪಿಗಳನ್ನ ಜೈಲಿಗಟ್ಟಿದ್ದಾರೆ. ಏನೇ ಆಗಲಿ ಹಿಂದೆ ಮುಂದೆಯಿಲ್ಲದ ದಂಪತಿಯನ್ನೇ ಟಾರ್ಗೆಟ್ ಮಾಡಿ ಈಗ ನಾರಾಯಣ್ ಅಂಡ್​​ ಟೀಮ್​ ಜೈಲಿನಲ್ಲಿ ಮುದ್ದೆ ಮುರಿಯಲು ರೆಡಿ ಆಗಿದ್ದಾರೆ..

ಸುಳಿವೇ ಸಿಗದೆ ಪೊಲೀಸ್​ ಟೀಮ್​​ ತನಿಖೆಯನ್ನ ಚುರುಕುಗೊಳಿಸಿ ನಂತರ ಕಾಫಿ ಕಪ್ ಹಾಗು ವಾಟರ್​ ಬಾಟಲಿನಿಂದ ಸಿಕ್ಕ ಸುಳಿವಿನಿಂದಲೇ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ ಸಾಲ ತೀರಿಸಲು ಮಾಡಿದ ಪ್ಲಾನ್​ ಈಗ ಜೈಲು ಸೇರುವಂತೆ ಮಾಡಿದೆ.

Source: newsfirstlive.com Source link