ಸೆಪ್ಟೆಂಬರ್ 2ಕ್ಕೆ ಹುಬ್ಬಳ್ಳಿಗೆ ಅಮಿತ್ ಶಾ.. ಈ ಹೊತ್ತಿನ ಟಾಪ್ 1 ಸುದ್ದಿಗಳ ಕ್ವಿಕ್ ರೌಂಡ್​ ಅಪ್

ಸೆಪ್ಟೆಂಬರ್ 2ಕ್ಕೆ ಹುಬ್ಬಳ್ಳಿಗೆ ಅಮಿತ್ ಶಾ.. ಈ ಹೊತ್ತಿನ ಟಾಪ್ 1 ಸುದ್ದಿಗಳ ಕ್ವಿಕ್ ರೌಂಡ್​ ಅಪ್

01. ರಾಣಾ ದಗ್ಗುಬಾಟಿ, ರಕುಲ್​ ಪ್ರೀತ್​ಗೆ ಸಮನ್ಸ್!
ಸ್ಯಾಂಡಲ್​ವುಡ್​ ಬೆನ್ನಲ್ಲೇ ಟಾಲಿವುಡ್​ನ ಟಾಪ್​ ನಟ ನಟಿಯರಿಗೆ ಡ್ರಗ್ಸ್ ಕಂಟಕ ಎದುರಾಗಿದೆ. ನಟಿ ರಕುಲ್​ ಪ್ರೀತ್ ಸಿಂಗ್ ಹಾಗೂ ಬಾಹುಬಲಿಯ ಖ್ಯಾತಿಯ ರಾಣ ದಗ್ಗುಬಾಟಿ ಸೇರಿ ಒಟ್ಟು 10 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿದೆ. ಡ್ರಗ್ಸ್​ ಪ್ರಕರಣದಲ್ಲಿ ಮನಿ ಲ್ಯಾಂಡರಿಂಗ್​ನಲ್ಲಿ ಭಾಗಿಯಾಗಿದ್ದ ಶಂಕೆ ಹಿನ್ನೆಲೆ ಟಾಪ್​ ನಟಿಯರಾದ ರಕುಲ್​ ಪ್ರೀತ್​ ಸಿಂಗ್​, ಚಾರ್ಮಿ ಕೌರ್​, ಹಾಗೂ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿಗೆ ಸಮನ್ಸ್​ ನೀಡಲಾಗಿದೆ. ಅಲ್ಲದೆ ವಿಕ್ರಮಾರ್ಕುಡು ಖ್ಯಾತಿಯ ನಟ ರವಿ ತೇಜ ಹಾಗೂ ತೆಲುಗಿನ ಟಾಪ್​ ನಿರ್ದೇಶಕ ಪುರಿ ಜಗನ್ನಾಥ್​ಗೂ ಸಮನ್ಸ್ ನೀಡಲಾಗಿದೆ.

02. ಅಫ್ಘಾನ್ ಬಿಕ್ಕಟ್ಟು​ ಕುರಿತು ಇಂದು ಸರ್ವಪಕ್ಷ ಸಭೆ
ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನ ಬಗ್ಗೆ ತುರ್ತಾಗಿ ಚರ್ಚಿಸಲು ಕೇಂದ್ರ ಸರ್ಕಾರ ಇಂದು ಸರ್ವ ಪಕ್ಷ ಸಭೆ ಕರೆದಿದೆ. ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜಕೀಯ ಪಕ್ಷಗಳ ಸಂಸದೀಯ ನಾಯಕರಿಗೆ ಸಂಕ್ಷಿಪ್ತ ಮಾಹಿತಿ ನೀಡುವಂತೆ ಪ್ರಧಾನಿ ಮೋದಿ ವಿದೇಶಾಂಗ ಇಲಾಖೆಗೆ ಸೂಚನೆ ನೀಡಿದ್ರು. ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್​ ಜೋಶಿ ಹೆಚ್ಚಿನ ವಿವರಗಳನ್ನ ನೀಡುತ್ತಾರೆ ಅಂತ ವಿದೇಶಾಂಗ ಸಚಿವ ಜೈಶಂಕರ್​ ಟ್ವೀಟ್​ ಮಾಡಿ ತಿಳಿಸಿದ್ದಾರೆ.ಇನ್ನು ಇಂದು ಬೆಳಿಗ್ಗೆ 11 ಗಂಟೆಗೆ ಈ ಸಭೆ ನಡೆಯಲಿದೆ.

03. ‘ಸೆಪ್ಟೆಂಬರ್‌ 2ಕ್ಕೆ ಹುಬ್ಬಳ್ಳಿ ಅಮಿತ್‌ ಶಾ ಬರುತ್ತಾರೆ’
ದೆಹಲಿ ಪ್ರವಾಸದಲ್ಲಿರುವ ಸಿಎಂ ಬಸವರಾಜ್‌ ಬೊಮ್ಮಾಯಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾರನ್ನ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾತನಾಡಿದ ಸಿಎಂ, ಅಮಿತ್ ಶಾ ಭೇಟಿ ಸೌಹಾರ್ದಯುತವಾಗಿತ್ತು, ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬ ಬಗ್ಗೆ ಚರ್ಚೆ ಮಾಡಿದ್ದಿವಿ ಅಂತ ಹೇಳಿದ್ರು. ಇನ್ನು ಅಮಿತ್‌ ಶಾ ಸೆಪ್ಟೆಂಬರ್‌ 2ನೇ ತಾರೀಖಿನಂದು ಹುಬ್ಬಳ್ಳಿಗೆ ಬರುತ್ತಿದ್ದಾರೆ. ಅಲ್ಲದೇ ಬೇರೆ-ಬೇರೆ ಕಾರ್ಯಕ್ರಮಗಳಿಗೂ ಅಮಿತ್​ ಶಾರನ್ನ ಆಹ್ವಾನಿಸಿದ್ದೇನೆ ಅಂತ ಸಿಎಂ ಬೊಮ್ಮಾಯಿ ತಿಳಿಸಿದ್ರು..

04. ಬೆಂಗಳೂರಿನಲ್ಲಿ 1 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ
ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಈವರೆಗೂ 1 ಕೋಟಿ ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ ಅಂತ ಬಿಬಿಎಂಪಿ ತಿಳಿಸಿದೆ. ಲಸಿಕೆ ಕೊಡಲು ಶುರು ಮಾಡಿದ ದಿನದಿಂದ ಇವತ್ತಿಗೆ ಒಟ್ಟು 1 ಕೋಟಿ 34 ಸಾವಿರದ 598 ಮಂದಿಗೆ​ ಲಸಿಕೆ ನೀಡಲಾಗಿದೆ. ಇನ್ನು, 65 ಲಕ್ಷದ 50 ಸಾವಿರದ 619 ಮಂದಿಗೆ ಮೊದಲನೇ ಡೋಸ್​ ವ್ಯಾಕ್ಸಿನ್‌ ನೀಡಲಾಗಿದೆ, 21 ಲಕ್ಷದ 80 ಸಾವಿರದ 183 ಮಂದಿಗೆ ಎರಡೂ ಡೋಸ್​​ ನೀಡಲಾಗಿದೆ ಅಂತ ಬಿಬಿಎಂಪಿ ತಿಳಿಸಿದೆ.

05. ಆರೋಗ್ಯ ಕೇಂದ್ರ ತೆರೆಯಲು ಖಡಕ್‌ ಸೂಚನೆ
ಕೊರೊನಾ 3ನೇ ಅಲೆ ಹಿನ್ನೆಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇಲ್ಲದ ವಾರ್ಡ್​ಗಳಲ್ಲೂ ಆರೋಗ್ಯ ಅಥವಾ ಜನಾರೋಗ್ಯ ಕೇಂದ್ರಗಳ ಸ್ಥಾಪನೆಗೆ ಬಿಬಿಎಂಪಿ ಆದೇಶ ಹೊರಡಿಸಿದೆ. ಸರ್ಕಾರಿ ಕಟ್ಟಡಗಳು ಅಥವಾ ಬಾಡಿಗೆ ಕಟ್ಟಡಗಳಲ್ಲಿ ಆರೋಗ್ಯ ಕೇಂದ್ರಗಳು ತೆರೆಯುವಂತೆ ಆದೇಶಿಸಲಾಗಿದೆ. 57 ವಾರ್ಡ್​ಗಳಲ್ಲಿ UPHC ಲಭ್ಯವಿಲ್ಲದ ಕಾರಣ ಬಾಡಿಗೆ ಕಟ್ಟಡಗಳನ್ನ ಗುರುತಿಸಲು ಡಿ. ರಂದೀಪ್​​ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.

06. ‘ಸಿಎಂ ಜೊತೆ ಚರ್ಚಿಸಿ ಮುಂದಿನ ತೀರ್ಮಾನ’
ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರದ ಬಗ್ಗೆ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. ಕೊವೀಡ್ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ಮೇಲೆ ಎಚ್ಚರಿಕೆ ನೀಡ್ತಿದ್ದಾರೆ. ಹೀಗಾಗಿ ಯಾವ ರೀತಿ ಆಚರಣೆ ಮಾಡಬೇಕು ಎಂದು ಮುಂದೆ ತೀರ್ಮಾನಿಸಲಾಗುತ್ತೆ. ಸಿಎಂ ಜೊತೆ ಚರ್ಚಿಸಿ ತೀರ್ಮಾನ ಮಾಡ್ತೇವೆ. ಸದ್ಯ ಮನೆಯಲ್ಲಿ ಹಬ್ಬ ಆಚರಣೆ ಮಾಡಲು ಏನೂ ಸಮಸ್ಯೆ ಇಲ್ಲ, ಆದರೆ ಹೊರಗಡೆ ಆಚರಿಸುವ ಸಂಬಂಧ ಯಾವ ರೀತಿ ಇರಬೇಕು ಎಂದು ಮಾರ್ಗಸೂಚಿ ಹೊರಡಿಸುತ್ತೇವೆ ಅಂತ ತಿಳಿಸಿದ್ದಾರೆ..

07. ‘ಸಂತ್ರಸ್ತೆ ಹಾಗೂ ಕುಟುಂಬದ ಪರ ನಾವು ನಿಲ್ಲುತ್ತೇವೆ’
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ. ಈ ಘಟನೆ ರಾಜ್ಯದಲ್ಲಿ ಕುಸಿದುಬಿದ್ದಿರುವ ಕಾನೂನು-ಸುವ್ಯವಸ್ಥೆಗೆ ಸಾಕ್ಷಿಯಾಗಿದೆ. ಯುವತಿ ಮೇಲೆ ಅತ್ಯಾಚಾರ ನಡೆಸಿರುವುದು ದುರದೃಷ್ಟಕರ ಎಂದಿದ್ದಾರೆ. ಅಲ್ಲದೇ ಸಂತ್ರಸ್ಥೆ ಹಾಗೂ ಕುಟುಂಬದ ಪರ ನಾವು ನಿಲ್ಲುತ್ತೇವೆ. ಪೊಲೀಸರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಿ ವಿದ್ಯಾರ್ಥಿನಿಗೆ ನ್ಯಾಯ ಒದಗಿಸಿ ಅಂತಾ ಒತ್ತಾಯಿಸಿದ್ದಾರೆ.

08. ದೇವರನಾಡಲ್ಲಿ ಒಂದೇ ದಿನ 31,445 ಕೇಸ್​ ಪತ್ತೆ
ಹಿಂದೊಮ್ಮೆ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ, ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಅತೀ ಕಳಪೆ ರಾಜ್ಯ ಎನ್ನಿಸಿಕೊಂಡಿದೆ. ನಿನ್ನೆ ಒಂದೇ ದಿನ ಕೇರಳದಲ್ಲಿ ಬರೋಬ್ಬರಿ 31 ಸಾವಿರದ 445 ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಕಳೆದ 24 ಗಂಟೆಗಳಲ್ಲಿ 215 ಮಂದಿ ಬಲಿಯಾಗಿದ್ದಾರೆ. ಸದ್ಯ ಕೇರಳದ ಪಾಸಿಟಿವಿಟಿ ರೇಟ್ ಶೇಕಡಾ 19.03ಕ್ಕೆ ಜಿಗಿದಿದೆ.

09. ಶರಿಯಾ ಕಾನೂನು ಜಾರಿ ಮಾಡಿದ ತಾಲಿಬಾನಿಗಳು
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಆರಂಭದಲ್ಲಿ ನಾವು ಜನಪರ ಆಡಳಿತ ಮಾಡ್ತೀವಿ ಅಂತ ಹೇಳ್ತಿದ್ದ ತಾಲಿಬಾನಿಗಳು ಮತ್ತೆ ತಮ್ಮ ವರಸೆ ಶುರು ಮಾಡಿದ್ದಾರೆ. ಮುಂದಿನ ಸರ್ಕಾರದ ನೇತೃತ್ವವನ್ನು ಧಾರ್ಮಿಕ ವಿದ್ವಾಂಸರು ವಹಿಸಿಕೊಳ್ಳಲಿದ್ದಾರೆ ಎಂದು ಹೇಳುವ ಮೂಲಕ ಕಟ್ಟುನಿಟ್ಟಿನ ಶರಿಯಾ ಜಾರಿಗೆ ಮುಂದಾಗಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಧಿಕೃತವಾಗಿ ಶರಿಯಾ ಜಾರಿ ಮಾಡುವುದಾಗಿ ತಾಲಿಬಾನ್​ ವಕ್ತಾರ ಜಬೀವುಲ್ಲಾ ಮುಜಾಯಿದ್​ ಸ್ಪಷ್ಟಪಡಿಸಿದ್ದಾರೆ.

10. ಕೊನೆಗೂ ಉಳಿಯಿತು ಬೆಕ್ಕಿನ ಪ್ರಾಣ
2ನೇ ಮಹಡಿ ಹತ್ತಿದ್ದ ಬೆಕ್ಕೊಂದು ಕೆಳಗೆ ಇಳಯಲಾಗದೇ ಹರಸಾಹಸ ಪಡುತ್ತಿತ್ತು. ಇದನ್ನ ಗಮನಿಸಿದ ಸ್ಥಳೀಯರು, ಸಖತ್​ ಪ್ಲಾನ್​ ಮಾಡಿ ಬೆಕ್ಕನ್ನ ಕೆಳಗಿಸಿದ್ದಾರೆ. ಕೆಳಗಿದ್ದ ಜನರು ಬೆಡ್​ಶೀಟ್​ ಹಿಡಿದುಕೊಂಡು ನಿಂತಿದ್ದರು, ಇವರ ಪ್ಲಾನ್​ ಬೆಕ್ಕಿಗೆ ಎಷ್ಟು ಚನ್ನಾಗಿ ಅರ್ಥ ಆಗಿದೆ ಅಂದ್ರೆ, 2ನೇ ಮಹಡಿಯಲ್ಲಿದ್ದ ಬೆಕ್ಕು ಸೀದಾ ಬೆಡ್​ಶೀಟ್​ ಮೇಲೆ ಜಿಗಿದು, ತನ್ನ ಜೀವವನ್ನ ಉಳಿಸಿಕೊಂಡಿದೆ. ಈ ಘಟನೆ ದುಬೈನಲ್ಲಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್​ ಹರಿದಾಡ್ತಿದೆ.

Source: newsfirstlive.com Source link