ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲು ಮುಂದಾದ 2 ಡಜನ್ ಶಾಸಕರು.. ಕೈ ‘ಬಿಗ್’ ಆಪರೇಷನ್..?

ಜೆಡಿಎಸ್​ ತೊರೆದು ಕಾಂಗ್ರೆಸ್ ಸೇರಲು ಮುಂದಾದ 2 ಡಜನ್ ಶಾಸಕರು.. ಕೈ ‘ಬಿಗ್’ ಆಪರೇಷನ್..?

2023 ರ ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂಮುಕ್ಕಾಲು ವರ್ಷವಿರುವಾಗಲೇ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ಸದ್ದಿಲ್ಲದೇ ಆಪರೇಷನ್ ಹಸ್ತ ನಡೆಸುತ್ತಿದೆ ಎನ್ನಲಾಗಿದೆ. ಚುನಾವಣೆ ಹೊತ್ತಿಗೆ ಜೆಡಿಎಸ್​ಗೆ ದೊಡ್ಡ ಹೊಡೆತ ಕೊಡಲು ಕೈಪಡೆ ರಣತಂತ್ರ ರೂಪಿಸುತ್ತಿದ್ದು ಜೆಡಿಎಸ್​ನ ಹಾಲಿ, ಮಾಜಿ ಶಾಸಕರನ್ನ ಸಾಲು ಸಾಲಾಗಿ ಬರ ಮಾಡಿಕೊಳ್ಳಲು ಮುಂದಾಗಿದೆಯಂತೆ.

ಇದನ್ನೂ ಓದಿ: ‘ನನ್ನನ್ನ ಕ್ಷಮಿಸಿ ಅಪ್ಪಾಜಿ.. ನಾನು ಕಾಂಗ್ರೆಸ್ ಸೇರುತ್ತಿದ್ದೇನೆ’ ದೇವೇಗೌಡರಿಗೆ ಜಿಟಿಡಿ ಮನವಿ

ಈಗಾಗಲೇ ಎರಡು ಡಜನ್​ಗೂ ಹೆಚ್ಚು ಹಾಲಿ, ಮಾಜಿ ಶಾಸಕರ ಜೊತೆ ಕೈ ನಾಯಕರು ಚರ್ಚೆಯನ್ನೂ ನಡೆಸಿದ್ದಾರೆ ಎನ್ನಲಾಗಿದ್ದು ಹಳೇ ಮೈಸೂರು ಅಷ್ಟೇ ಅಲ್ಲದೇ ಉತ್ತರ ಕರ್ನಾಟಕ ಭಾಗದ ಮೂರ್ನಾಲ್ಕು ಮಂದಿ ಶಾಸಕರನ್ನೂ ಸೆಳೆಯುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಜಿ.ಟಿ ದೇವೇಗೌಡ ಕಾಂಗ್ರೆಸ್ ಎಂಟ್ರಿ ಘೋಷಣೆ ಮಾಡಿದ್ದು ಮೈಸೂರು ಜಿಲ್ಲೆಯ ಮತ್ತೆ ಇಬ್ಬರು ಜೆಡಿಎಸ್ ಶಾಸಕರು ಕೈ ಹಿಡಿಯಲು ಚರ್ಚೆ ನಡೆಸಿದ್ದಾರಂತೆ. ಅಷ್ಟೇ ಅಲ್ಲದೇ ಹಾಸನ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಯ ಹಲವು ನಾಯಕರ ಸೇರ್ಪಡೆಗೆ ಕಾಂಗ್ರೆಸ್ ತಂತ್ರ ರೂಪಿಸಿದೆಯಂತೆ.

blank

ಈಗಲೇ ಪಕ್ಷಕ್ಕೆ ಸೇರಿಸಿಕೊಂಡರೆ ಶಾಸಕರಿಗೆ ಪಕ್ಷಾಂತರದ ಆತಂಕ ಎದುರಾಗಲಿದೆ.. ಹಾಗಾಗಿ ಚುನಾವಣೆ ಹೊತ್ತಿಗೆ ಎರಡು ಡಜನ್ ಹಾಲಿ, ಮಾಜಿ ಶಾಸಕರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲು ವೇದಿಕೆ ಸಿದ್ಧವಾಗಲಿದೆ ಎಂದು ಹೇಳಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಥಳೀಯವಾಗಿ ಪಕ್ಷದ ನಾಯಕರ ಜೊತೆ ಚರ್ಚಿಸುತ್ತಿದ್ದಾರಂತೆ.

blank

ಅದರಲ್ಲೂ ಸ್ವತಃ ಜೆಡಿಎಸ್ ತ್ಯಜಿಸಿ ಕೈಹಿಡಿಯಲು ಶಾಸಕರು ಮುಂದಾಗಿದ್ದಾರಂತೆ. ಜೆಡಿಎಸ್​ನಲ್ಲೇ ಮುಂದುವರೆದರೆ ರಾಜಕೀಯ ಭವಿಷ್ಯ ರೂಪಿಸಿಕೊಳ್ಳುವುದು ಕಷ್ಟ ಎಂಬ ನಿರ್ಧಾರಕ್ಕೆ ಬಂದಿರುವ ಹಲವು ಶಾಸಕರು ಬಿಜೆಪಿಯಲ್ಲಿನ ಬೆಳವಣಿಗೆ ಹಿನ್ನೆಲೆಯಲ್ಲಿ ಅಲ್ಲಿಗೆ ಹೋಗುವುದಕ್ಕೆ ಹಿಂದೇಟು ಹಾಕುತ್ತಿದ್ದು.. ಸದ್ಯಕ್ಕೆ ಕಾಂಗ್ರೆಸ್​ಗೆ ರಾಜ್ಯದಲ್ಲಿ ಪೂರಕವಾದ ವಾತಾವರಣ ಇದೆ.. ಕೈಹಿಡಿಯುವುದೇ ಸೂಕ್ತವೆಂಬ ತೀರ್ಮಾನಕ್ಕೆ ಬಂದಿದ್ದಾರಂತೆ. ಅದೇ ಕಾರಣಕ್ಕೆ ಸ್ವಯಂಪ್ರೇರಿತರಾಗಿ ಕಾಂಗ್ರೆಸ್​ಗೆ ಸೇರಲು ತುದಿಗಾಲಮೇಲೆ ಹಾಲಿ, ಮಾಜಿ ಶಾಸಕರು ನಿಂತಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ವರದಿ: ಹರೀಶ್ ಕಾಕೋಳು, ನ್ಯೂಸ್​ಫಸ್ಟ್

Source: newsfirstlive.com Source link