ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ನಾಲ್ವರು ಆತ್ಮಹತ್ಯೆಗೆ ಯತ್ನ

ಚಿಕ್ಕಮಗಳೂರು: ಜೀವನದಲ್ಲಿ ಮಾನಸಿಕವಾಗಿ ನೊಂದಿದ್ದೇವೆ ಎಂದು ವಾಯ್ಸ್ ಮೆಸೇಜ್ ಕಳುಹಿಸಿ ಒಂದೇ ಕುಟುಂಬದ ನಾಲ್ವರು ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಮಳಲಿ ಚನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದವರನ್ನು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹಳೇಜೇಡಿಕಟ್ಟೆ ಗ್ರಾಮದವರು ಎಂದು ಗುರುತಿಸಲಾಗಿದೆ. ಮೂಲತಃ ಭದ್ರಾವತಿ ತಾಲೂಕಿನ ಹಳೇ ಜೇಡಿಕಟ್ಟೆ ಮೂಲದ ನೀತು ಎಂಬವರನ್ನು ಬೆಂಗಳೂರಿಗೆ ಮದುವೆ ಮಾಡಿಕೊಟ್ಟಿದ್ದರು. ದಂಪತಿಗೆ 13 ವರ್ಷ ಪ್ರಾಯದ ಧ್ಯಾನ್ ಎಂಬ ಮಗನಿದ್ದಾರೆ. ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಕಾರಿನಲ್ಲಿ ಬಂದ ಮಂಜು, ನೀತು, ಧ್ಯಾನ್ ಹಾಗೂ ಮಂಜು ತಾಯಿ ಸುನಂದಮ್ಮ ನಾಲ್ವರು ಸ್ವಿಫ್ಟ್ ಕಾರಿನಲ್ಲಿ ಬಂದು ಮಳಲಿ ಚನ್ನೇನಹಳ್ಳಿ ಬಳಿ ಭದ್ರಾ ನಾಲೆಗೆ ಕಾರಿನ ಸಮೇತ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: 4 ಬೈಕ್ ಕದ್ದು ಜಜ್ಜಿ ಹೊಲದಲ್ಲಿ ಬಿಟ್ಟು ಹೋದ ದುಷ್ಕರ್ಮಿಗಳು

ಕಾರು ಭದ್ರಾ ನಾಲೆಗೆ ಬಿದ್ದ ಬಳಿಕ ನೀತು ಹಾಗೂ ಮಗು ಧ್ಯಾನ್ ಸಾವಿನಿಂದ ಪಾರಾಗಿದ್ದಾರೆ. ಆದರೆ ಮಂಜು ಹಾಗೂ ಮಂಜು ತಾಯಿ ಸುನಂದಮ್ಮ ಪತ್ತೆಯಾಗಿಲ್ಲ. ವೇಗವಾಗಿ ಹರಿಯುತ್ತಿರುವ ಭದ್ರಾ ನದಿಯಲ್ಲಿ ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಸ್ಥಳಕ್ಕೆ ಚಿಕ್ಕಮಗಳೂರು ಎಸ್‍ಪಿ ಅಕ್ಷಯ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನಾಪತ್ತೆ ಆದವರಿಗಾಗಿ ಹುಟುಕಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: ಗ್ಯಾಂಗ್‍ರೇಪ್ ಎಸಗಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ ಕಿರಾತಕರು!

Source: publictv.in Source link