ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ

ಬೆಂಗಳೂರು: ರೇಪ್ ಆಗಿರುವುದು ಮೈಸೂರಿನಲ್ಲಿ. ಆದರೆ ಈ ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಬೇಜಾವಾಬ್ದಾರಿ ಹೇಳಿಕೆ ನೀಡಿ ಇದೀಗ ವಿವಾದಕ್ಕೀಡಾಗಿದ್ದಾರೆ.

ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಕುರಿತು ಕಾಂಗ್ರೆಸ್ ನಿಂದ ಗೃಹ ಸಚಿವರ ರಾಜೀನಾಮೆ ಒತ್ತಾಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸಿನವರು ಗೃಹ ಸಚಿವರು ಅಂದರೆ ನನ್ನನ್ನ ರೇಪ್ ಮಾಡ್ತಿದ್ದಾರೆ. ನನ್ನ ರೇಪ್ ಮಾಡುವ ಪ್ರಯತ್ನ ಮಾಡ್ತಿದ್ದಾರೆ. ಇಂತಹ ವಿಚಾರದಲ್ಲಿ ಹೀಗೆ ಮಾಡೋದಕ್ಕೆ ಹೋಗಬಾರದು. ಈ ಪ್ರಕರಣದಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಹೇಳಿದ್ದಾರೆ.

ಯುವಕ ಯುವತಿ 7.30 ಕ್ಕೆ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ಅಷ್ಟೊತ್ತಿಗೆ ಅಲ್ಲಿ ಹೋಗಬಾರದಿತ್ತು. ಆದರೆ ಹೋಗಬೇಡಿ ಅಂತಾ ತಡೆಯೋದಕ್ಕೂ ಆಗೋದಿಲ್ಲ. ಸದ್ಯಕ್ಕೆ ಯುವಕ, ಯುವತಿ ಶಾಕ್ ನಲ್ಲಿ ಇದ್ದಾರೆ. ಅವರ ಸಂಪೂರ್ಣ ಸ್ಟೇಟ್ ಮೆಂಟ್ ಪಡೆಯಲು ಆಗಿಲ್ಲ. ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

ಮೊನ್ನೆ ಸಂಜೆ 7.30- 8 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಘಟನೆ ನಡೆದ 12 ಗಂಟೆ ಒಳಗೆ ಎಫ್‍ಐಆರ್ ದಾಖಲು ಮಾಡಲಾಗಿದೆ. ಸಂತ್ರಸ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲಾಗ್ತಿದೆ. ಸಂತ್ರಸ್ತೆ ಶಾಕ್ ನಲ್ಲಿ ಇದ್ದಾರೆ. ಹೀಗಾಗಿ ಸಂಪೂರ್ಣ ಹೇಳಿಕೆ ಪಡೆಯಲು ಆಗ್ತಿಲ್ಲ. ಆದರೂ ನಮ್ಮ ಪೋಲೀಸರು ಕೇಸ್ ದಾಖಲು ಮಾಡಿಕೊಂಡು ತನಿಖೆ ಮಾಡ್ತಿದ್ದಾರೆ. ಪ್ರಕರಣ ಟ್ರೇಸ್ ಮಾಡಲು ನಮ್ಮ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಬೆಂಗಳೂರಿನಿಂದ ಹಿರಿಯ ಅಧಿಕಾರಿ ಪ್ರತಾಪ್ ರೆಡ್ಡಿಯನ್ನ ಕಳಿಸಲಾಗಿದೆ. ಪ್ರಕರಣ ಭೇದಿಸಲು ಇಲಾಖೆ ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಮೈಸೂರು ಆಯುಕ್ತರು, ಪೊಲೀಸರು ಬೇರೆ ಬೇರೆ ತಂಡ ರಚನೆ ಮಾಡಿಕೊಂಡು ಗಂಭೀರ ತನಿಖೆ ಮಾಡ್ತಿದ್ದಾರೆ ಎಂದರು.

ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ. ಯಾರೇ ಆದರೂ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ನಾನು ಕೂಡಾ ಇಂದು ಮೈಸೂರಿಗೆ ತೆರಳಿ ಅಧಿಕಾರಿಗಳ ಸಭೆ ಮಾಡ್ತೀನಿ. ಇದುವರೆಗೂ ಯಾವುದೇ ಬಂಧನ ಆಗಿಲ್ಲ. ಈ ಬಗ್ಗೆ ನನಗೆ ಇನ್ನೂ ಮಾಹಿತಿ ಬಂದಿಲ್ಲ ಎಂದು ತಿಳಿಸಿದರು.

ಮೈಸೂರು ಪ್ರವಾಸ ತಾಣ. ಸಾವಿರಾರು ಜನ ನಿತ್ಯ ಇಲ್ಲಿಗೆ ಬರ್ತಾರೆ. ಇದೊಂದು ದುರಾದೃಷ್ಟಕರ ಘಟನೆ. ನಾವೆಲ್ಲರು ತಲೆ ತಗ್ಗಿಸುವಂತಹ ಘಟನೆ. ಪೊಲೀಸ್ ಗಸ್ತು ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪ ಸೇರಿದಂತೆ ಎಲ್ಲಾ ವಿಚಾರವಾಗಿ ಇಂದು ಮೈಸೂರಿಗೆ ಹೋಗಿ ಸಭೆ ಮಾಡ್ತೀನಿ. ನಾಳೆಯೂ ಕೂಡಾ ಇಡೀ ದಿನ ಸಭೆ ಮಾಡಿ ಎಲ್ಲಾ ಮಾಹಿತಿ ಪಡೆಯುತ್ತೇನೆ ಎಂದರು.

Source: publictv.in Source link