#NewsfirstExclusive ‘ಕಿರಿಯರ ಸಂಪುಟದಲ್ಲಿ ಪವರ್​ ಬೇಡ’ ಎಂದಿದ್ಯಾಕೆ ಜಗದೀಶ್​ ಶೆಟ್ಟರ್​?

#NewsfirstExclusive ‘ಕಿರಿಯರ ಸಂಪುಟದಲ್ಲಿ ಪವರ್​ ಬೇಡ’ ಎಂದಿದ್ಯಾಕೆ ಜಗದೀಶ್​ ಶೆಟ್ಟರ್​?

ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಪ್ರಬಲ ಖಾತೆ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಯಡಿಯೂರಪ್ಪ ನಿರ್ಗಮಿಸಿದಂತೆ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಬೇಡ ಎಂದು ಸೈಲೆಂಟ್​ ಆಗಿ ಬಿಟ್ಟಿದ್ದರು. ಈ ಕುರಿತು ಅವರು ನೂತನ ಸಿಎಂ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಖಾತೆ ಅಲಂಕರಿಸದೇ ಇರುವುದು, ಇತ್ತೀಚಿನ ರಾಜಕಾರಣದ ತಲ್ಲಣಗಳ ಕುರಿತು, ನ್ಯೂಸ್​ಫಸ್ಟ್​ನ ಪೊಲಿಟಿಕಲ್ ಬ್ಯೂರೋ ಚೀಫ್ ವಿನಾಯಕ ಗಂಗೊಳ್ಳಿ ಜೊತೆ ನಡೆಸಿದ ವಿಶೇಷ ಸಂದರ್ಶನದ ಹೈಲೈಟ್ಸ್ ಇಲ್ಲಿದೆ.

ಕಿರಿಯರ ಸಂಪುಟದಲ್ಲಿ ನನಗೆ ಪವರ್​ ಬೇಡ:

ನ್ಯೂಸ್​ಫಸ್ಟ್​ ಜೊತೆ ಮಾತನಾಡಿದ ಅವರು ಒಬ್ಬ ಮುಖ್ಯಮಂತ್ರಿಯಾಗಿ ಇನ್ನೊಬ್ಬ ಕಿರಿಯನ ಸಂಪುಟದಲ್ಲಿ ಕೆಲಸ ನಿರ್ವಹಿಸಲು ಮುಜುಗರ ಆಗುತ್ತದೆ, ಮುಜುಗರ ತಪ್ಪಿಸಿಕೊಳ್ಳುವ ಕಾರಣದಿಂದಾಗಿ ನಾನು ಮಂತ್ರಿಮಂಡಲದಿಂದ ದೂರ ಇದ್ದೇನೆಯೇ ಹೊರತು ಇನ್ನ್ಯಾವ ಕಾರಣಗಳೂ ಇಲ್ಲ. ಇದರಲ್ಲಿ ಬೊಮ್ಮಾಯಿಯವರ ಪ್ರಶ್ನೆ ಇಲ್ಲ, ನನ್ನ ವೈಯಕ್ತಿಕ ಹಿತಾಸಕ್ತಿಯಿಂದ, ಸ್ವಾಭಿಮಾನ ಅಡ್ಡಿಬಂದ ಪರಿಣಾಮ ಸಂಪುಟದಿಂದ ದೂರ ಉಳಿದಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಸಿದ್ದರಾಮಯ್ಯ, ರೇವಣ್ಣ, ನಾನು.. ಯಾರೇ ಗೃಹಸಚಿವರನ್ನ ರೇ** ಮಾಡಿದ್ರೆ ಕೇಸ್ ಹಾಕಲಿ- ಡಿಕೆಎಸ್​ ಲೇವಡಿ

ಇನ್ನು ತಮಗಿಂತಲೂ ಕಿರಿಯರಾದ ಬೊಮ್ಮಾಯಿಯವರನ್ನು ಸಿಎಂ ಮಾಡಿರುವುದರ ಕುರಿತು ಮಾತನಾಡಿದ ಅವರು ಇದು ಹೈಕಮಾಂಡ್​ನ ನಿರ್ಧಾರ ಅದನ್ನು ಚಾಚೂ ತಪ್ಪದೆ ಪಾಲಿಸುವುದು ನಮ್ಮ ಕರ್ತವ್ಯ. ನಾನು ಒಬ್ಬ ಶಾಸಕನಾಗಿ ಉಳಿದುಕೊಂಡು ಕೂಡ ನನ್ನ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ, ಬೊಮ್ಮಾಯಿಯವರ ಜೊತೆ ಕ್ಷೇತ್ರದ ಸಮಸ್ಯೆಗಳ ಕುರಿತಾಗಿ ಚರ್ಚಿಸುತ್ತಿದ್ದೇನೆ ಎಂದರು.

ಬಿಜೆಪಿ ಎಂಬ ಆಗಸದಲ್ಲಿ ಜಗದೀಶ್​ ಶೆಟ್ಟರ್​ ಎಂಬ ಸೂರ್ಯ ಅಸ್ತ ಆಗ್ತಿದೆಯಾ?

2008ರ ವೇಳೆಯಲ್ಲಿ ಯಡಿಯೂರಪ್ಪ ನಂತರ ಶೆಟ್ಟರ್​ ಅವ್ರೆ ರಾಜ್ಯ ಬಿಜೆಪಿಯ ಪ್ರಬಲ ನಾಯಕ ಅನ್ನೋ ಮಾತುಗಳು ರಾಜ್ಯದ ತುಂಬೆಲ್ಲ ಹರಡಿತ್ತು ಆದರೆ ಇಂದಿನ ಲೆಕ್ಕಾಚಾರವೇ ಬೇರೆ ಇವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಅಂತ್ಯ ಎಂಬ ಪ್ರಶ್ನೆಯೇ ಇರುವುದಿಲ್ಲ. ನಾನು ರಾಜಕಾರಣಕ್ಕೆ ಬಂದಿದ್ದೇ ಆಕಸ್ಮಿಕ, ಯಾವುದೇ ಗುರಿ ಇಲ್ಲದೆ ರಾಜಕೀಯಕ್ಕೆ ಬಂದವನು ನಾನು, ಅವತ್ತು ಎಲ್ಲ ಶಾಸಕರ ಬೆಂಬಲ ಇರೋದ್ಕೆ ಸಿಎಂ ಆದೆ. ಆದರೆ ಯಾವುದೇ ಲಾಬಿ ಮಾಡಿಲ್ಲ.. ಹೀಗಾಗಿ ರಾಜಕೀಯದಲ್ಲಿ ಅಂತ್ಯ ಅನ್ನೋದೇ ಇಲ್ಲ ಎಂದರು..

ಯಾವುದೇ ಜಾತಿ ಮತ್ತು ಧರ್ಮದ ಮೇಲೆ ರಾಜಕೀಯ ಮಾಡಬಾರದು, ಇಂದು ಲಿಂಗಾಯಿತ ಸಮುದಾಯ ಬಿಜೆಪಿಗೆ ತನ್ನದೆಯಾದ ಬೆಂಬಲ, ಕೊಡುಗೆ ನೀಡುತ್ತಲೇ ಬಂದಿದೆ. ಯಡಿಯೂರಪ್ಪ ಕೆಜೆಪಿ ಮಾಡುವ ಸಮಯದಲ್ಲಿ ನಾನು ಅಂದೇ ಹೇಳಿದ್ದೆ, ಎಲ್ಲರೂ ಕೂಡಿ ಇರೋಣ ಎಂದು.. ಆದರೆ ತದನಂತರದಲ್ಲಿ ಭಾಗವಾಗಿ ಮತ್ತೆ ಕೂಡಿದ್ದು ಇತಿಹಾಸ. ಆದರೂ ಲಿಂಗಾಯಿತ ಸಮುದಾಯ ಪಕ್ಷವನ್ನು ಕೈಬಿಟ್ಟಿಲ್ಲ.. ನಾನು ಜನರ ಜೊತೆ ಬೆರೆತಿದ್ದೇನೆ ಇಡೀ ನಮ್ಮಕಾರ್ಯಕರ್ತರ ಜೊತೆ ಪರಿಚಯ ಇದೆ. ಅಧಿಕಾರ ಇರಲಿ ಬಿಡಲಿ ಜನ ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ, ನನ್ನನ್ನು ಯಾರೂ ಮುಟ್ಟಲೂ ಸಾಧ್ಯವಾಗುವುದಿಲ್ಲ ಎಂದರು.

ಇದನ್ನೂ ಓದಿ: ಕಾಂಗ್ರೆಸ್​ನವರು ನನ್ನ ರೇ** ಮಾಡೋಕೆ ಪ್ರಯತ್ನಿಸ್ತಿದ್ದಾರೆ -ಗೃಹ ಸಚಿವ ಆರಗ ಜ್ಞಾನೇಂದ್ರ

Source: newsfirstlive.com Source link