ಬಡಾವಣೆಗಿಲ್ಲ ರಸ್ತೆ ಸೌಲಭ್ಯ ಎಂದು ಒಗ್ಗಟ್ಟಾಗಿ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

ಬಡಾವಣೆಗಿಲ್ಲ ರಸ್ತೆ ಸೌಲಭ್ಯ ಎಂದು ಒಗ್ಗಟ್ಟಾಗಿ ಚುನಾವಣೆ ಬಹಿಷ್ಕರಿಸಿದ ಗ್ರಾಮಸ್ಥರು

ಹುಬ್ಬಳ್ಳಿ: ಬಡಾವಣೆಗೆ ಸೂಕ್ತ ರಸ್ತೆ ಸೌಲಭ್ಯ ಇಲ್ಲದಿರುವುದನ್ನು ಪ್ರತಿಭಟಿಸಿ ಭೈರಿದೇವರಕೊಪ್ಪದ ರಾಜಧಾನಿ ಕಾಲೊನಿ ನಿವಾಸಿಗಳು ಚುನಾವಣೆಯನ್ನ ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ.

ನಗರದ ಪ್ರತಿ ಮನೆಯ ಗೇಟ್‌ಗೆ ಮತದಾನ ಬಹಿಷ್ಕಾರ ಮಾಡಲಾಗಿದೆ. ಯಾರೂ ಮತ ಕೇಳಲು ಬರಬೇಡಿ ಎಂದು ಸೂಚನಾ ಫಲಕ ಹಾಕಿದ್ದಾರೆ. ಈ ಕಾಲೋನಿಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿದ್ದು, 287 ಮತದಾರರು ಇಲ್ಲಿ ವಾಸಿಸುತ್ತಿದ್ದಾರೆ. ಕಳೆದ 22ವರ್ಷಗಳಿಂದ ರಸ್ತೆ ಇಲ್ಲದೇ ಸಮಸ್ಯೆ ಎದುರಿಸುತ್ತಿದ್ದು, ಹಲವಾರು ಬಾರಿ ರಾಜಕಾರಣಿಗಳಿಗೆ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲಂತೆ. ಹೀಗಾಗಿ ನಮ್ಮ ನಗರಕ್ಕೆ ಮತ ಕೇಳಿಕೊಂಡು ಯಾವ ಪಕ್ಷದವರೂ ಬರುವುದು ಬೇಡ ಎಂದು ಇಲ್ಲಿನ ಜನ ಹೇಳುತ್ತಿದ್ದಾರೆ.

ಸಾರ್ವಜನಿಕರ ಸಮಸ್ಯೆಗೆ ಧ್ವನಿಯಾಗುವ ಮತ್ತು ಸಮಸ್ಯೆಗೆ ಸ್ಪಂದಿಸದ ಜನನಾಯಕರಿಂದ ತೊಂದರೆಯಾಗುತ್ತಿದೆ ಎಂಬುದು ಸ್ಥಳೀಯರ ಮಾತು. ಮುಖ್ಯ ರಸ್ತೆಯಿಂದ ನಗರಕ್ಕೆ ಬರಬೇಕಾದರೆ ಅಕ್ಕಪಕ್ಕ ಎರಡು ಗ್ಯಾರೇಜ್‌ಗಳಿವೆ. ಅದರ ನಡುವೆ ಒಂದು ಸಣ್ಣ ಮಣ್ಣಿನ ರಸ್ತೆಯಿದ್ದು ಇಲ್ಲಿಯ ನಿವಾಸಿಗಳು ಇದೊಂದೇ ಮಾರ್ಗದಲ್ಲಿ ಅಲೆದಾಡಬೇಕು. ರಸ್ತೆಯಲ್ಲಿ ಬೀದಿ ದೀಪಗಳು ಉರಿಯುವುದಿಲ್ಲ. ರಾತ್ರಿ ಮಹಿಳೆಯರು ಕೈಯಲ್ಲಿ ಜೀವ ಹಿಡಿದು ಅಲೆದಾಡುವ ಪರಿಸ್ಥಿತಿ ಇದೆ. ರಾತ್ರಿ ವೇಳೆ ಕೆಲವೊಂದು ಬಾರಿ ಈ ರಸ್ತೆಯಲ್ಲಿ ಮಹಿಳೆಯರನ್ನು ಚುಡಾಯಿಸಿದ ಘಟನೆಗಳು ನಡೆದಿವೆ ಮತ್ತು ಪೊಲೀಸ್ ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಮಳೆಯಾದರೆ ರಸ್ತೆ ಉದ್ದಕ್ಕೂ ಕೊಳಚೆಯಾಗಿ ವಾಹನ ಸವಾರು ಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿಯ ರಾಜಕಾರಣಿಯೊಬ್ಬರ ಜಾಗಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ರಸ್ತೆ ನಿರ್ಮಾಣವಾಗುತ್ತಿಲ್ಲ ಎಂದು ಇಲ್ಲಿಯ ನಿವಾಸಿಗಳು ಹೇಳುತ್ತಾರೆ. ಈಗಾಗಲೇ ಅವರೊಂದಿಗೆ ನಾವು ಮಾತನಾಡಿದ್ದೇವೆ. ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದ್ದರು. ಇಲ್ಲಿವರೆಗೂ ಯಾವುದೇ ರೀತಿ ಪ್ರತಿಕ್ರಿಯೆ ನೀಡಿಲ್ಲ.‌ ಹೀಗಾಗಿ‌ ಇಲ್ಲಿನ ನಿವಾಸಿಗಳು ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟನೆಗಿಳಿದಿದ್ದಾರೆ.

Source: newsfirstlive.com Source link