ಮತ ಕೇಳಲು ಬರಬೇಡಿ- ಹುಬ್ಬಳ್ಳಿ ಮತದಾರರಿಂದ ಮನೆಗೆ ಬಹಿಷ್ಕಾರದ ಬೋರ್ಡ್

ಹುಬ್ಬಳ್ಳಿ: ಮತ ಕೇಳಲು ಬರಬೇಡಿ ಎಂಬ ಬೋರ್ಡ್ ಹಿಡಿದು ನಿಂತು ಹಾಗೂ ಮನೆ ಗೇಟ್‍ಗಳಿಗೆ ಅಂಟಿಸಿ ಮತದಾರರು ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.

ಕಳೆದ ಹಲವು ವರ್ಷದಿಂದ ಮುಖ್ಯ ರಸ್ತೆಯಿಂದ ಕಾಲೋನಿಗೆ ಸಂಪರ್ಕಿಸುವ ರಸ್ತೆ ಬಂದ್ ಮಾಡಿರುವುದನ್ನು ತೆರವುಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ನಡೆಸಿದ್ದಾರೆ. ಭೈರಿದೇವರಕೊಪ್ಪದ ರಾಜಧಾನಿ ಕಾಲೋನಿ, ನಮ್ರತಾ ಕಾಲೋನಿ, ಮಲ್ಲನಗೌಡರ ಚಾಳದ ನಿವಾಸಿಗಳು ಪಾಲಿಕೆ ಚುನಾವಣೆ ವೇಳೆ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟಿಸಿದ್ದಾರೆ. ಸಾವಿರಾರು ಮತದಾರರು ಮನೆ ಮನೆಗೆ ಬಹಿಷ್ಕಾರದ ಬೋರ್ಡ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಕಾಲೋನಿಗೆ ಸೂಕ್ತ ರಸ್ತೆ ಸಂಪರ್ಕ ಆಗುವರೆಗೆ ಮತದಾನ ಬಹಿಷ್ಕಾರ ಮಾಡುತ್ತೇವೆ. ಇಲ್ಲಿ ಮತಯಾಚಿಸಲು ಯಾರೂ ಬರಬಾರದು. ಸಮಸ್ಯೆ ಬಗೆಹರಿಸಿ ಮತಯಾಚನೆಗೆ ಬರುವಂತೆ ಚುನಾವಣಾ ಅಭ್ಯರ್ಥಿಗಳಿಗೆ ನಿವಾಸಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 3ರಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದ್ದು, ಮತದಾನ ಬಹಿಷ್ಕಾರ ಅಭ್ಯರ್ಥಿಗಳಿಗೆ ಇನ್ನಿಲ್ಲದ ಸಂಕಷ್ಟ ತಂದಿದೆ. ಇದನ್ನೂ ಓದಿ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಹೇಳಿಕೆ ವಾಪಸ್ ಪಡೆಯಲ್ಲ: ಕತ್ತಿ

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಸಂಸದ ಪ್ರಲ್ಹಾದ್ ಜೋಶಿ, ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೂ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಹೀಗಾಗಿ ನಾವು ಮತದಾನ ಬಹಿಷ್ಕರಿಸಿದ್ದೇವೆ ಎಂದು ಬ್ಯಾನರ್‍ನಲ್ಲಿ ಬರೆಯಲಾಗಿದೆ.

ಈ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಿಜೆಪಿ ನಾಯಕರು, ಸ್ಥಳೀಯರೊಂದಿಗೆ ಚರ್ಚಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರೊಂದಿಗೆ ಸಭೆ ನಡೆಸಿ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಬಂದ್ ಮಾಡಿರುವ ರಸ್ತೆ ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ, ಕೋರ್ಟ್ ಮೆಟ್ಟಿಲೇರುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

Source: publictv.in Source link