ಈ ಬಾರಿಯೂ ಗಣೇಶ ಹಬ್ಬವನ್ನು ಸರಳವಾಗಿ ಆಚರಿಸಬೇಕು: ಬಿಎಸ್‍ವೈ

– ಹಬ್ಬದ ನಂತರ ರಾಜ್ಯಾದ್ಯಂತ ಪ್ರವಾಸ

ಶಿವಮೊಗ್ಗ: ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಈ ಬಾರಿಯೂ ಗೌರಿ ಗಣೇಶ ಹಬ್ಬವನ್ನು ಸರಳವಾಗಿ ಆಚರಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ನೀಡಿದರು.

ಯಡಿಯೂರಪ್ಪನವರು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಪಕ್ಕದ ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿವೆ. ಈ ಹಂತದಲ್ಲಿ ವೈಭವದಿಂದ ಗಣೇಶೋತ್ಸವ ಆಚರಣೆ ಸರಿಯಲ್ಲ. ಈ ಬಗ್ಗೆ ನಮ್ಮ ಸರ್ಕಾರ ಚರ್ಚೆ ನಡೆಸಿ, ತೀರ್ಮಾನಿಸಲಿದೆ ಎಂದರು. ಇದನ್ನೂ ಓದಿ: ಒಬ್ಬ ಮನುಷ್ಯನಿಗೆ ತಿಂಗಳಿಗೆ 5 ಕೆಜಿ ಅಕ್ಕಿ ಸಾಕು ಹೇಳಿಕೆ ವಾಪಸ್ ಪಡೆಯಲ್ಲ: ಕತ್ತಿ

ರಾಜ್ಯ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಬಾಕಿ ಇದ್ದು, ಮುಂಬರುವ ದಿನಗಳಲ್ಲಿ ಪಕ್ಷ ಸ್ವತಂತ್ರವಾಗಿ, ಬಹುಮತದೊಂದಿಗೆ ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತೇನೆ. ಗೌರಿ ಗಣೇಶ ಹಬ್ಬದ ನಂತರ ಪಕ್ಷ ಸಂಘಟನೆಗಾಗಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಜಿಲ್ಲಾ ಪ್ರವಾಸದ ನಂತರ ವಿಧಾನಸಭಾ ಕ್ಷೇತ್ರವಾರು ಪ್ರವಾಸ ನಡೆಸಿ, ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಮುಂದಿನ ಬಾರಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ತರಲು ಹೋರಾಟ ನಡೆಸುತ್ತೇನೆ. 135-140 ಸ್ಥಾನ ಬಂದರೆ ನನ್ನ ಹೋರಾಟ ಸಾರ್ಥಕ ಆಗುತ್ತದೆ. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ಕೇವಲ ಶಿವಮೊಗ್ಗ ಜಿಲ್ಲೆಗೆ ಮಾತ್ರ ಕೆಲಸ ಮಾಡಿದ್ದೇನೆ ಎಂದು ಭಾವಿಸುವುದು ಬೇಡ. ಎಲ್ಲ ಜಿಲ್ಲೆಗಳಿಗು, ಸಮುದಾಯದ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿದ್ದೇನೆ. ಜನರ ಕೆಲಸ ಮಾಡಲು ಅಧಿಕಾರ ಮುಖ್ಯ ಅಲ್ಲ, ಅಧಿಕಾರ ಇರದಿದ್ದರೂ ಕೆಲಸ ಮಾಡುತ್ತಿದ್ದೇನೆ. ಜನರ ಸೇವೆಗಾಗಿ ನಮ್ಮ ಮನೆಯ ಬಾಗಿಲು ಸದಾ ತೆರೆದಿರುತ್ತದೆ ಎಂದರು.

Source: publictv.in Source link