ಅಫ್ಘಾನ್​​ನಲ್ಲಿ ರಕ್ತದೋಕುಳಿ ಹರಿಸಿದ್ದು ಐಸಿಸ್‌-ಕೆ; ISIS-K ಅಂದ್ರೆ ಏನು ಗೊತ್ತಾ..?

ಅಫ್ಘಾನ್​​ನಲ್ಲಿ ರಕ್ತದೋಕುಳಿ ಹರಿಸಿದ್ದು ಐಸಿಸ್‌-ಕೆ; ISIS-K ಅಂದ್ರೆ ಏನು ಗೊತ್ತಾ..?

ಕಾಬೂಲ್‌ ವಿಮಾನ ನಿಲ್ದಾಣ, ಹೋಟೆಲ್‌ನಲ್ಲಿ ಬಾಂಬ್‌ ದಾಳಿ ನಡೆಸಿ ರಕ್ತ ಹರಿಸಿರುವುದು ಐಸಿಸ್‌-ಕೆ ಉಗ್ರಗಾಮಿ ಸಂಘಟನೆ. ಈ ದಾಳಿಯಿಂದ ಈ ಸಂಘಟನೆ ರಾತ್ರಿ ಬೆಳಗಾಗುವುದರೊಳಗೆ ಜಗತ್ತಿನಾದ್ಯಂತ ಸುದ್ದಿಯಾಗಿ ಬಿಟ್ಟಿದೆ. ಹಾಗಾದ್ರೆ, ಈ ಸಂಘಟನೆ ಹಿನ್ನೆಲೆ ಏನು? ತಾಲಿಬಾನಿಗಳಿಗೂ ಇವರಿಗೂ ಇರೋ ಲಿಂಕ್‌ ಏನು? ಇಂತಹ ರೋಚಕ ವಿಷಯವನ್ನು ತೆರೆದಿಡುತ್ತೇವೆ.

blank

ಕಾಬೂಲ್‌ ವಿಮಾನ ನಿಲ್ದಾಣ ಮತ್ತು ಹೊರ ಭಾಗದಲ್ಲಿ ಐಸಿಸ್‌ ಬಾಂಬ್‌ ದಾಳಿ ನಡೆಸಬಹುದು. ಅದರಲ್ಲೂ ಅಮೆರಿಕ ಸೈನಿಕರನ್ನೇ ಗುರಿಯಾಗಿಸಿ ದಾಳಿ ನಡೆಸುತ್ತಾರೆ. ಜಾಗ್ರತರಾಗಿರಿ ಅಂತ ಅಮೆರಿಕದ ಗುಪ್ತಚರ ಸಂಸ್ಥೆ ಎಚ್ಚರಿಸಿತ್ತು. ಇದಾಗಿ ಎರಡ್ಮೂರು ದಿನದಲ್ಲಿ ಅಂದ್ರೆ ಗುರುವಾರ ಕಾಬೂಲ್‌ ವಿಮಾನ ನಿಲ್ದಾಣದ ಗೇಟ್‌ ಬಳಿ, ಅಮೆರಿಕದವರು ವಾಸ್ತವ್ಯ ಇದ್ದ ಹೋಟೆಲ್‌ನಲ್ಲಿ ಬಾಂಬ್​ ಸ್ಫೋಟ ನಡೆದಿದೆ. ಇದರಲ್ಲಿ 12 ಅಮೆರಿಕ ಯೋಧರು ಸೇರಿದಂತೆ 100 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ತಾಲಿಬಾನ್‌ ಉಗ್ರರಿಗೆ ಹೆದರಿ ದೇಶಬಿಟ್ಟು ಹೋಗಲು ವಿಮಾನ ನಿಲ್ದಾಣದ ಬಳಿ ಗೇಟ್‌ನಲ್ಲಿ ಕಾಯ್ತಾ ಇದ್ದ ಮಹಿಳೆಯರು, ಮಕ್ಕಳು, ಪುರುಷರು ಹೆಣವಾಗಿದ್ದಾರೆ. ಈ ದಾಳಿ ನಡೆಸಿದ್ದು, ತಾಲಿಬಾನ್‌ ಉಗ್ರರು ಅಲ್ಲ ಎನ್ನಲಾಗುತ್ತಿದೆ. ಹಾಗಾದ್ರೆ ಈ ದಾಳಿ ನಡೆಸಿದವರು ಯಾರು? ಅವರಿಗೂ ತಾಲಿಬಾನ್‌ ಉಗ್ರರಿಗೂ ಇರೋ ಲಿಂಕ್‌ ಏನು? ಮುಂದೆ ಉಗ್ರರ ನಡುವೆ ಯುದ್ಧ ಆರಂಭವಾಗುತ್ತಾ? ಇದನ್ನೆಲ್ಲಾ ಎಳೆ ಎಳೆಯಾಗಿ ಬಿಚ್ಚಿಡುತ್ತೇವೆ.

ಇದನ್ನೂ ಓದಿ: ಇವನೇ ನೋಡಿ ಕಾಬೂಲ್ ಆತ್ಮಾಹುತಿ ದಾಳಿಕೋರ ಉಗ್ರ; ISIS-Kನಿಂದ ಫೋಟೋ ರಿಲೀಸ್

blank

ಕಾಬೂಲ್‌ನಲ್ಲಿ ಮೂರು ಕಡೆ ಬಾಂಬ್‌ ಸ್ಫೋಟ
ಅಮೆರಿಕದವರನ್ನೇ ಟಾರ್ಗೆಟ್‌ ಮಾಡಿ ಬಾಂಬ್‌ ದಾಳಿ

ತಾಲಿಬಾನ್ ಉಗ್ರರು ಆಗಸ್ಟ್‌ 15 ರಂದು ಪಂಜ್‌ಶೀರ್‌ ಪ್ರಾಂತ್ಯವನ್ನು ಹೊರತುಪಡಿಸಿ ಇಡೀ ಅಫ್ಘಾನ್‌ ವಶಪಡಿಸಿಕೊಳ್ಳುತ್ತಾರೆ. ಅಧ್ಯಕ್ಷ ಅಶ್ರಫ್‌ ಘನಿ ನೇತೃತ್ವದ ಪ್ರಜಾಪ್ರಭುತ್ವ ಸರ್ಕಾರ ಅಂದೇ ಪತನವಾಗುತ್ತದೆ. ಆಡಳಿತ ಕೇಂದ್ರದ ಜುಟ್ಟನ್ನು ತಾಲಿಬಾನಿಗಳು ಹಿಡಿದುಕೊಳ್ಳುತ್ತಾರೆ.. ಆದ್ರೆ, ತಾಲಿಬಾನ್‌ ಉಗ್ರರ ಕ್ರೌರ್ಯಕ್ಕೆ ಹೆದರಿ ಅಲ್ಲಿ ವಾಸವಿದ್ದ ವಿದೇಶಿಗರು ಅಷ್ಟೇ, ಅಲ್ಲ ಸ್ವತಃ ಅಫ್ಘಾನ್‌ ಪ್ರಜೆಗಳು ಕೂಡ ಮನೆ ಮಠ ಬಿಟ್ಟು ಹೊರಡುತ್ತಾರೆ. ವಿದೇಶಕ್ಕೆ ಪರಾರಿಯಾಗಲು ಇರೋ ಮಾರ್ಗ ಅಂದ್ರೆ ಅಮೆರಿಕ ಸೇನೆ ನಿಯಂತ್ರಣದಲ್ಲಿರೋ ಕಾಬೂಲ್‌ ಏರ್‌ಪೋರ್ಟ್‌ ಮಾತ್ರ ಆಗಿರುತ್ತದೆ. ಹೀಗಾಗಿ ಆಗಸ್ಟ್‌ 15 ರಿಂದಲೇ ಕಾಬೂಲ್‌ ನಿಂದ ಏರ್‌ ಲಿಫ್ಟ್‌ ಆರಂಭವಾಗುತ್ತೆ.

ಅದೇ ರೀತಿ ಗುರುವಾರ ಕೂಡ ಕಾಬೂಲ್‌ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಅಪಾರ ಸಂಖ್ಯೆಯ ಜನ ಸೇರಿದ್ರು. ಗೇಟ್‌ ಸಮೀಪ ಅಮೆರಿಕ ಸೈನಿಕರೂ ಇದ್ರು. ಇದೇ ವೇಳೆ ಅಲ್ಲಿ ಕಾರ್‌ನಲ್ಲಿ ಬಾಂಬ್‌ ಇಟ್ಟು ಸ್ಫೋಟಿಸಲಾಗಿದೆ. ಹಾಗೇ ಅಮೆರಿಕದವರು ಇದ್ದ ಹೋಟೆಲ್‌ನಲ್ಲಿ ಬಾಂಬ್‌ ದಾಳಿ ನಡೆಸಲಾಗಿದೆ. ಅಮೆರಿಕ ನಾಗರಿಕರ ಮೇಲೆ ಗುಂಡಿನ ದಾಳಿಯೂ ನಡೆದಿದೆ. ಇದರ ಪರಿಣಾಮ 12 ಜನ ಆಮೆರಿಕ ಸೈನಿಕರು, 100 ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ. ಅದರಲ್ಲಿ ಅಫ್ಘಾನ್‌, ಅಮೆರಿಕ ಸೇರಿದಂತೆ ಹಲವು ದೇಶಗಳ ನಾಗರಿಕರು ಇದ್ದರು ಅನ್ನೋದು ತಿಳಿದು ಬಂದಿದೆ. ದೇಹಗಳು ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದದ್ದವು. ಆ ಭೀಕರ ದೃಶ್ಯ ನೋಡಿದ್ರೆ ಎಂಥವರಿಗಾದ್ರೂ ಕರುಳು ಚುರ್‌ ಅನ್ನುವಂತಿತ್ತು.

blank

ಈ ದಾಳಿ ನಡೆಸಿದ್ದು ತಾಲಿಬಾನ್‌ ಅಲ್ಲ
ಐಸಿಸ್‌-ಕೆ ಸಂಘಟನೆಯಿಂದ ಬಾಂಬ್‌ ಸ್ಫೋಟ

ಅಮೆರಿಕ ಸೈನಿಕರನ್ನು, ಅಮೆರಿಕ ನಾಗರಿಕರನ್ನೇ ಟಾರ್ಗೆಟ್‌ ಆಗಿ ಇಟ್ಟುಕೊಂಡು ಬಾಂಬ್‌ ದಾಳಿ ನಡೆಸಲಾಗಿದೆ. ಈ ದಾಳಿಯನ್ನು ತಾಲಿಬಾನ್‌ ಮಾಡಿರಬಹುದು ಅನ್ನೋ ಅನುಮಾನ ಮೇಲ್ನೋಟಕ್ಕೆ ಕಂಡುಬಂದಿತ್ತು. ಆದ್ರೆ, ಇದನ್ನು ಮಾಡಿರೋದು ತಾಲಿಬಾನ್‌ ಅಲ್ಲ. ಹಾಗಾದ್ರೆ, ದಾಳಿ ಮಾಡಿದವರು ಯಾರಿರಬಹುದು ಅನ್ನೋ ಪ್ರಶ್ನೆಗೆ ಕೇಳಿ ಬರುತ್ತಿರೋ ಉತ್ತರ ಐಸಿಸ್‌-ಕೆ ಸಂಘಟನೆ. ಐಸಿಸ್‌-ಕೆ ಅಂದ್ರೆ ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಎಂದಾಗಿದೆ. ಇದೇ ಸಂಘಟನೆ ಬಾಂಬ್‌ ದಾಳಿ ನಡೆಸಿದೆ. ಈ ದಾಳಿ ಹುಟ್ಟಿಕೊಂಡಿದ್ದು ಹೇಗೆ ಗೊತ್ತಾ? ದಾಳಿ ನಡೆಸಲು ಪ್ರಮುಖ ಕಾರಣ ಏನು ಗೊತ್ತಾ?

ಇದನ್ನೂ ಓದಿ: ಅಮೆರಿಕ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದು ‘ಬಿನ್ ಲಾಡೆನ್ ಅಲ್ವೇ ಅಲ್ಲ’ ಎಂದ ತಾಲಿಬಾನ್

2014ರಲ್ಲಿ ಐಸಿಸ್‌-ಕೆ ಉಗ್ರಗಾಮಿ ಸಂಘಟನೆ ರಚನೆ
ತಾಲಿಬಾನ್ ಸಂಘಟನೆಯ ಅಸಮಾಧಾನಿತರಿಂದಲೇ ರಚನೆ

ಅದು, 2014, 2015ರ ಸಮಯದಲ್ಲಿ ಇರಾಕ್‌ ಮತ್ತು ಸಿರಿಯಾದಲ್ಲಿ ಐಸಿಸ್‌ ಉಗ್ರರು ಉತ್ತುಂಗದಲ್ಲಿ ಇರ್ತಾರೆ. ಅತ್ಯಂತ ಕ್ರೂರವಾದ ಸಂಘಟನೆ ಅದಾಗಿರುತ್ತೆ. ಮಹಿಳೆಯರು ಮಕ್ಕಳು, ಗರ್ಭಿಣಿಯರನ್ನು ಇವರು ಹತ್ಯೆ ಮಾಡಿ ಕ್ರೌರ್ಯ ಮೆರೆಯುತ್ತಾರೆ. ಇಡೀ ವಿಶ್ವವನ್ನೇ ಇಸ್ಲಾಮಿಕ್‌ ರಾಷ್ಟ್ರವಾಗಿ ಮಾಡಬೇಕು ಅನ್ನೋದು ಇವರ ಟಾರ್ಗೆಟ್‌ ಆಗಿರುತ್ತದೆ. 2014ರಲ್ಲಿ ಐಸಿಸ್‌ ಸಂಘಟನೆಯ ಮುಖಂಡರು ಅಫ್ಘಾನ್‌, ಪಾಕಿಸ್ತಾನಲ್ಲಿ ನೆಲೆ ನಿಲ್ಲಲು ಪ್ಲಾನ್‌ ಮಾಡ್ತಾರೆ. ಇದೇ ಉದ್ದೇಶಕ್ಕೆ ಐಸಿಸ್‌ ಪ್ರತಿನಿಧಿಗಳು ಪಾಕಿಸ್ತಾನ ತಾಲಿಬಾನ್‌, ಅಫ್ಘಾನ್‌ ತಾಲಿಬಾನ್‌ ಅಸಮಾಧಾನಿತರನ್ನು ಭೇಟಿಯಾಗುತ್ತಾರೆ. ಅವರಿಂದಲೇ ಐಸಿಸ್‌-ಕೆ ಸಂಘಟನೆ ಸ್ಥಾಪನೆ ಮಾಡ್ತಾರೆ. ನಂತರದ ದಿನಗಳಲ್ಲಿ ಈ ಐಸಿಸ್‌-ಕೆ ಅನ್ನೋ ಉಗ್ರಗಾಮಿ ಸಂಘಟನೆ ಐಸಿಸ್‌ ಸಂಘಟನೆಯ ಸಹವರ್ತಿಯಾಗಿ ಬೆಳೆಯುತ್ತಾ ಹೋಗುತ್ತದೆ. ಪಾಕ್‌ ಮತ್ತು ಅಫ್ಘಾನ್‌ನಲ್ಲಿ ತನ್ನದೆಯಾದ ನೆಲೆ ಕಂಡುಕೊಳ್ಳುತ್ತದೆ. ಹಾಗಾದ್ರೆ ಇವರಿಗೂ ತಾಲಿಬಾನ್‌ ಉಗ್ರರಿಗೂ ಸಂಬಂಧ ಹೇಗಿದೆ ಗೊತ್ತಾ?

blank

ತಾಲಿಬಾನ್, ಐಸಿಸ್‌-ಕೆ ಸಂಬಂಧ ಎಣ್ಣೆ-ಸೀಗೆಕಾಯಿ
ತಾಲಿಬಾನ್‌ ಅಸಮಾಧಾನಿತರೇ ಐಸಿಸ್‌-ಕೆ ಬಂಡವಾಳ

ತಾಲಿಬಾನ್‌ ಉಗ್ರಗಾಮಿ ಸಂಘಟನೆಯಲ್ಲಿ ಇರುವ ಅಸಮಾಧಾನಿತರು ದೊಡ್ಡ ಪ್ರಮಾಣದಲ್ಲಿ ಐಸಿಸ್‌-ಕೆ ಸೇರಿಕೊಳ್ಳುತ್ತಾರೆ. ಈ ಎರಡು ಸಂಘಟನೆಗಳ ನಡುವೆ ಕೆಲವೊಂದಷ್ಟು ಸೈದಾಂತಿಕ ಭಿನ್ನಾಭಿಪ್ರಾಯಗಳು ಉದ್ಭವಗೊಳುತ್ತವೆ. ಇದೇ ಉದ್ದೇಶಕ್ಕೆ ಎರಡು ಉಗ್ರಗಾಮಿ ಸಂಘಟನೆಗಳು ಎಣ್ಣೆ-ಸೀಗೆಕಾಯಿ ಸಂಬಂಧದಂತೆ ಆಗಿ ಬಿಡುತ್ತವೆ. ತಾಲಿಬಾನ್‌ ಉಗ್ರರಿಗೆ ಹೋಲಿಸಿದರೆ, ಐಸಿಸ್‌-ಕೆ ಉಗ್ರರು ಮತ್ತಷ್ಟು ಕ್ರೂರಿಗಳು ಆಗಿರುತ್ತಾರೆ. ಮಹಿಳೆಯರು, ಮಕ್ಕಳು, ಗರ್ಭಿಣಿಯನ್ನು ಕೂಡ ಹತ್ಯೆ ಮಾಡುತ್ತಾರೆ. ಹತ್ಯೆ ಮಾಡಬೇಕು ಅಂತ ಬಯಸಿದ್ರೆ ಯಾವುದೇ ಕನಿಕರವನ್ನೂ ಇವರು ತೋರಿಸುವುದಿಲ್ಲ.

ಅಫ್ಘಾನ್‌ ಅನ್ನು ತಾಲಿಬಾನ್‌ ವಶಪಡಿಸಿಕೊಳ್ಳುತ್ತಲೇ ಐಸಿಸ್‌-ಕೆ ಕ್ರುದ್ಧ
ತಾಲಿಬಾನ್‌ ಉಗ್ರರಿಗೆ ಏಟು ನೀಡಲು ಬಾಂಬ್‌ ಸ್ಫೋಟ
ಪರಿಸ್ಥಿತಿಯ ಲಾಭ ಪಡೆಯಲು ಮುಂದಾದ ಐಸಿಸ್‌-ಕೆ

ಅದ್ಯಾವಾಗ ತಾಲಿಬಾನ್‌ ಉಗ್ರರು ಅಫ್ಘಾನ್‌ ವಶಪಡಿಸಿಕೊಂಡ್ರೋ ಆವಾಗಲೇ ನೋಡಿ ಐಸಿಸ್‌-ಕೆ ಉಗ್ರಗಾಮಿ ಸಂಘಟನೆ ಕ್ರುದ್ಧವಾಗಿ ಬಿಡ್ತು. ಇಷ್ಟು ವರ್ಷಗಳ ಕಾಲ ಅಮೆರಿಕ ಸೇನೆಯ ವಿರುದ್ಧ ಐಸಿಸ್‌-ಕೆ ಕೂಡ ಹೋರಾಟ ಮಾಡಿತ್ತು. ಅಫ್ಘಾನ್‌ ವಶಕ್ಕೆ ಈ ಸಂಘಟನೆ ಕೂಡ ಹೋರಾಡಿತ್ತು. ಆದ್ರೆ, ತಾಲಿಬಾನ್‌ ಸಂಘಟನೆಯಲ್ಲಿ ಹೆಚ್ಚಿನ ಉಗ್ರಗಾಮಿಗಳು ಇದ್ದಾರೆ. ಪಾಕಿಸ್ತಾನದ ನೇರ ಸಪೋರ್ಟ್‌ ತಾಲಿಬಾನ್‌ ಉಗ್ರರಿಗೆ ಇದೆ. ಇದೇ ಕಾರಣಕ್ಕೆ ತಾಲಿಬಾನ್‌ ಉಗ್ರರು ಪ್ರಭಾವಿಗಳಾಗಿ ಅಫ್ಘಾನ್‌ ವಶಪಡಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ತಾಲಿಬಾನ್‌ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುಲು ಐಸಿಸ್‌-ಕೆ ಮುಂದಾಗಿದೆ. ಅಫ್ಘಾನ್‌ನ ಅರಾಜಕತೆ ಲಾಭ ಪಡೆಯಲು ಮುಂದಾಗಿದೆ. ಇದರ ಪ್ರಾಥಮಿಕ ಹಂತವಾಗಿ ಕಾಬುಲ್‌ನಲ್ಲಿ ಗುರುವಾರ ಬಾಂಬ್‌ ಸ್ಫೋಟ ನಡೆಸಲಾಗಿದೆ.

ಇದನ್ನೂ ಓದಿ: ಅಫ್ಘಾನ್ ಸರಣಿ ಬಾಂಬ್ ಸ್ಫೋಟ; 13 ಯುಎಸ್​ ಸೈನಿಕರು ಸೇರಿ ಒಟ್ಟು 73 ಕ್ಕೇರಿದ ಸಾವಿನ ಸಂಖ್ಯೆ

blank

ಹಕ್ಕಾನಿ ನೆಟ್‌ವರ್ಕ್‌, ಐಸಿಸ್‌-ಕೆ ನಡುವೆ ಉತ್ತಮ ಸಂಬಂಧ
ಹಕ್ಕಾನಿ ನೆಟ್‌ವರ್ಕ್‌ ಅನ್ನೋದು ತಾಲಿಬಾನ್‌ ಸಂಘಟನೆಯ ಒಂದು ಗುಂಪು

ತಾಲಿಬಾನ್‌ ಉಗ್ರಗಾಮಿ ಸಂಘಟನೆಯಲ್ಲಿ ಹಕ್ಕಾನಿ ನೆಟ್‌ವರ್ಕ್‌ ಅನ್ನೋ ಒಂದು ಗುಂಪು ಇದೆ. ಈ ಹಕ್ಕಾನಿ ನೆಟ್‌ವರ್ಕ್‌ ಒಂದು ಪ್ರಭಾವಶಾಲಿ ಗುಂಪು. ಈ ಸಂಘಟನೆಯಲ್ಲಿ ಬಾಂಬ್‌ ತಯಾರಕ ತಂತ್ರಜ್ಞರು, ರಾಕೆಟ್‌ ತಯಾರಕ ತಂತ್ರಜ್ಞರು ಕೂಡ ಇದ್ದಾರೆ. ತಾಲಿಬಾನ್‌ ಉಗ್ರರು ಅಫ್ಘಾನ್‌ ವಶಪಡಿಸಿಕೊಳ್ಳುವಲ್ಲಿ ಈ ಸಂಘಟನೆಯ ಪಾತ್ರ ಪ್ರಮುಖವಾದುದ್ದಾಗಿದೆ. ಈ ಹಕ್ಕಾನಿ ನೆಟ್‌ವರ್ಕ್‌ ಜೊತೆ ಐಸಿಸ್‌-ಕೆ ಸಂಬಂಧ ಚೆನ್ನಾಗಿದೆ ಅಂತೆ. ಆದ್ರೆ, ತಾಲಿಬಾನ್‌ ಉಗ್ರರ ಇತರೆ ಸಂಘಟನೆಗಳ ಜೊತೆ ಐಸಿಸ್‌-ಕೆ ಸಂಘಟನೆಗೆ ಭಿನ್ನಾಭಿಪ್ರಾಯವಿದೆ ಎಂದು ಕೇಳಿ ಬರ್ತಾ ಇದೆ. ಈಗ ತಾಲಿಬಾನ್‌ ಉಗ್ರಗಾಮಿಗಳು ಅಫ್ಘಾನ್‌ನಲ್ಲಿ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಐಸಿಸ್‌-ಕೆ ಜೊತೆ ಸಂಪರ್ಕ ಸಾಧಿಸಬೇಕು, ಅಫ್ಘಾನ್‌ನಲ್ಲಿ ಅವರು ತಲೆಹಾಕದಂತೆ ನೋಡಿಕೊಳ್ಳಬೇಕು ಅಂದ್ರೆ ತಾಲಿಬಾನ್‌ನ ಇತರೆ ಸಂಘಟನೆಗಳು ಹಕ್ಕಾನಿ ನೆಟ್‌ವರ್ಕ್‌ ಅನ್ನು ಸೇತುವೆಯಾಗಿ ಬಳಸಿಕೊಳ್ಳಬೇಕು. ಇದರ ಸದುಪಯೋಗ ಪಡೆದು ಹಕ್ಕಾನಿ ನೆಟ್‌ವರ್ಕ್‌ ಅಫ್ಘಾನ್‌ ಆಡಳಿತದಲ್ಲಿ ಪ್ರಮುಖ ಹುದ್ದೆಗಳನ್ನು ಕಬಳಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಕೇಳಿ ಬರ್ತಾ ಇದೆ.

blank

ತಾಲಿಬಾನ್‌ V/S ಐಸಿಸ್‌-ಕೆ ಆಗುತ್ತಾ?
ಪರಸ್ಪರ ಉಗ್ರಗಾಮಿಗಳೇ ಹೊಡೆದುಕೊಂಡು ಸಾಯ್ತಾರಾ?

ಅಫ್ಘಾನ್‌ನಲ್ಲಿ ತಾಲಿಬಾನ್‌ ಉಗ್ರರು ಸರ್ಕಾರ ರಚಿಸಿದ ನಂತರ ತಾಲಿಬಾನ್‌ ವರ್ಸಸ್‌ ಐಸಿಸ್‌-ಕೆ ಅಂತಾದ್ರೂ ಅಚ್ಚರಿಯಿಲ್ಲ. ಸದ್ಯದ ಬೆಳವಣಿಗೆ ನೋಡಿದ್ರೆ ಹಾಗಾಗುವ ಎಲ್ಲಾ ಸಾಧ್ಯತೆಗಳು ಇವೆ. ಐಸಿಸ್‌-ಕೆ ಉಗ್ರಗಾಮಿ ಸಂಘಟನೆಯಲ್ಲಿ ಸುಮಾರು 30 ಸಾವಿರ ಜನ ಇದ್ದಾರೆ ಎನ್ನಲಾಗುತ್ತಿದೆ. ಪ್ರಮುಖವಾಗಿ ಈ ಸಂಘಟನೆಯವರು ಪಾಕಿಸ್ತಾನ್‌-ಅಫ್ಘಾನಿಸ್ತಾನ್‌ ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ. ತಾಲಿಬಾನ್‌ ಉಗ್ರರು ಇವರನ್ನು ವಿಶ್ವಾಸಕ್ಕೆ ತೆಗೆಕೊಂಡಿಲ್ಲ ಅಂದ್ರೆ, ಇಬ್ಬರ ನಡುವೆ ಯುದ್ಧ ನಡೆಯುವುದು ಖಚಿತ. ಅಂತಹ ಒಂದು ಸೂಚನೆ ಕಾಬೂಲ್‌ ಬಾಂಬ್‌ ಸ್ಫೋಟದಲ್ಲಿಯೇ ಸಿಕ್ಕಿದೆ. ತಾಲಿಬಾನ್‌ಗಳ ಮಟ್ಟಹಾಕಲು ಬೇರೆ ಬೇರೆ ದೇಶಗಳು ಒಳಗೊಳಗೆ ಐಸಿಸ್‌-ಕೆ ಸಂಘಟನೆಗೆ ಬೆಂಬಲ ನೀಡಿದ್ರೂ ಅಚ್ಚರಿಯಿಲ್ಲ. ಅಫ್ಘಾನ್‌ನಲ್ಲಿ ಮತ್ತಷ್ಟು ಹಿಂಸಾಚಾರ, ಅರಾಜಕತೆ ಉಂಟಾಗಬಹುದು.

Source: newsfirstlive.com Source link