ಮೈಸೂರು ಗ್ಯಾಂಗ್‍ರೇಪ್- ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

ಮೈಸೂರು: ಅರಮನೆ ನಗರಿಯಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಘಟನೆ ನಡೆದು 86 ಗಂಟೆಗಳ ನಡೆಸಿದ ಪೊಲೀಸರ ಮಹತ್ವದ ಕಾರ್ಯಾಚರಣೆಯ ಬಳಿಕ ಇದೀಗ ಕೀಚಕರನ್ನು ಪೊಲೀಸರು ವಶಕ್ಕೆ ಪೆಡೆದಿದ್ದಾರೆ. 80 ಮಂದಿ ಪೊಲೀಸರ 5 ತಂಡ ಆರೋಪಿಗಳಿಗಾಗಿ ಶೋಧ ನಡೆಸಿತ್ತು. ಮೈಸೂರಿನಿಂದ ಹೊರಗೆ ಅಂದರೆ ಹೊರ ರಾಜ್ಯದಲ್ಲಿ ಆರೋಪಿಗಳು ತಲೆಮರೆಸಿಕೊಡಿದ್ದರು. ಸಂತ್ರಸ್ತೆ ಹಾಗೂ ಆಕೆಯ ಸ್ನೇಹಿತನ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲಾಗಿದೆ. ವೈಜ್ಞಾನಿಕ ಸಾಕ್ಷ್ಯಾಧಾರಗಳ ಮೂಲಕ ಆರೋಪಿಗಳನ್ನು ಗುರುತಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಮೂಲಕ ಕೃತ್ಯ ನಡೆಸಿದ ಕಾಮುಕರೆಲ್ಲರೂ ಪೊಲೀಸರ ವಶವಾಗಿದ್ದಾರೆ ಎನ್ನಲಾಗಿದೆ.

ಆಗಸ್ಟ್ 24ರ ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ವಿದ್ಯಾರ್ಥಿನಿ ತನ್ನ ಸ್ನೇಹಿತನ ಜೊತೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೋರಿ ಮೇಲೆ ಕುಳಿತಿದ್ದಳು. ಈ ವೇಳೆ ಪಾನಮತ್ತ ಯುವಕರ ತಂಡವೊಂದು ಅಲ್ಲಿಗೆ ಬಂದು ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿಯನ್ನು ದೂರ ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಇತ್ತ ಪೊದೆಯಲ್ಲಿ ನಿತ್ರಾಣವಾಗಿದ್ದ ಜೋಡಿಯನ್ನು ನೋಡಿದ ಯುವಕ ಸ್ನೇಹಿತರು ಕೂಡಲೇ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಅಲ್ಲದೆ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು.

ಪ್ರಕರಣ ಸಂಬಂಧ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಡಿಜಿಪಿ ಪ್ರವೀಣ್ ಸೂದ್, ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಸುಳಿವು ಸಿಕ್ಕರೂ ಸದ್ಯ ನಾವು ಅದನ್ನು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆರೋಪಿಗಳು ಪತ್ತೆಯಾದ ತಕ್ಷಣ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ. ಈ ಪ್ರಕರಣದ ಕುರಿತು ಗಂಭೀರ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಿಂದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂತ್ರಸ್ತೆ ಮಾನಸಿಕ ಸ್ಥಿತಿ ಸರಿ ಇಲ್ಲ. ಹುಷಾರಾದ ಬಳಿಕ ಮಾಹಿತಿ ನೀಡುವುದಾಗಿ ಸಂತ್ರಸ್ತೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದರು.

Source: publictv.in Source link