ರೋಹಿತ್ ಶರ್ಮಾ ಔಟ್ ಆಗ್ತಿದ್ದಂತೆ 4ನೇ ಕ್ರಮಾಂಕದಲ್ಲಿ ಬ್ಯಾಟ್ ಹಿಡಿದು ಮೈದಾನಕ್ಕಿಳಿದ ‘ಜಾರ್ವೋ’!

ಲೀಡ್ಸ್: ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮೂರನೇ ದಿನದಾಟದಲ್ಲಿ ಭಾರತದ ಆಟಗಾರ ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ 4ನೇ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಆಗಿ ಜಾರ್ವೋ ಬ್ಯಾಟ್ ಹಿಡಿದು ಮೈದಾನಕ್ಕೆ ಇಳಿದು ಸುದ್ದಿಯಾಗಿದ್ದಾರೆ.

ಮೂರನೇ ದಿನದಾಟದ ಚಹಾ ವಿರಾಮದ ಬಳಿಕ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿ ಹೊರನಡೆದರು. ಈ ವೇಳೆ ಎಲ್ಲರೂ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮ್ಯಾನ್ ಗಾಗಿ ಕಾಯುತ್ತಿದ್ದರು ಈ ಸಂದರ್ಭ ಇಂಗ್ಲೆಂಡ್ ಪ್ರೇಕ್ಷಕ ಜಾರ್ವೋ 69 ಎಂಬ ಜೆರ್ಸಿ ಧರಿಸಿದಾತ ಪ್ಯಾಡ್ ಧರಿಸಿ, ಬ್ಯಾಟ್ ಹಿಡಿದು ಮೈದಾನಕ್ಕೆ ಬಂದಿದ್ದಾರೆ. ಬಳಿಕ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದು ಹೊರಹಾಕಿದ್ದಾರೆ. ನಂತರ ವಿರಾಟ್ ಕೊಹ್ಲಿ ಬ್ಯಾಟ್ ಹಿಡಿದು ನಾಲ್ಕನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರು.

ಈ ಮೊದಲು 2ನೇ ಟೆಸ್ಟ್ ಪಂದ್ಯದಲ್ಲೂ ಕೂಡ ಜಾರ್ವೋ ಭಾರತದ ಪರ ಫೀಲ್ಡಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಹಿಡಿದು ಹೊರ ಹಾಕಲು ಪ್ರಯತ್ನಿಸಿದಾಗ ಬಿಸಿಸಿಐ ಲಾಂಛನವನ್ನು ತನ್ನ ಜೆರ್ಸಿಯಲ್ಲಿ ತೋರಿಸಿ ತಾನು ಭಾರತ ತಂಡದ ಆಟಗಾರ ಎಂಬಂತೆ ವರ್ತಿಸಿದ್ದರು.

ಲೀಡ್ಸ್ ಟೆಸ್ಟ್ ನ ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ದ್ವಿತೀಯ ಇನ್ನಿಂಗ್ಸ್ ನಲ್ಲಿ 215ರನ್ ಗಳಿಸಿ 2 ವಿಕೆಟ್ ಕಳೆದುಕೊಂಡು 139ರನ್‍ಗಳ ಹಿನ್ನಡೆಯಲ್ಲಿದೆ. ವಿರಾಟ್ ಕೊಹ್ಲಿ ಅಜೇಯ 45ರನ್(94 ಬಾಲ್, 6 ಬೌಂಡರಿ), ಚೇತೇಶ್ವರ ಪೂಜಾರ ಅಜೇಯ 91ರನ್(180 ಎಸೆತ, 15 ಬೌಂಡರಿ) ಸಿಡಿಸಿ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

Source: publictv.in Source link