ರಾಷ್ಟ್ರೀಯ ಕ್ರೀಡಾ ದಿನ- ಜಾವೆಲಿನ್ ಕೋಚ್ ಕಾಶಿನಾಥ ನಾಯ್ಕರಿಗೆ ಸನ್ಮಾನ

ಕಾರವಾರ: ರಾಷ್ಟ್ರೀಯ ಕ್ರೀಡಾದಿನದ ಅಂಗವಾಗಿ ರಾಷ್ಟ್ರೀಯ ಸೇನಾ ಅಕಾಡೆಮಿಯ ಜಾವೆಲಿನ್ ಕೋಚ್ ಕಾಶಿನಾಥ ನಾಯ್ಕ ಅವರನ್ನು ಕ್ರೀಡಾ ಇಲಾಖೆ ವತಿಯಿಂದ ಇಂದು ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾಶಿನಾಥ ನಾಯ್ಕ, ಕ್ರೀಡಾ ಸಾಧಕನ ಜೊತೆ ತರಬೇತುದಾರರನ್ನೂ ಗುರುತಿಸಿದ್ದು ಅವಿಸ್ಮರಣೀಯ. ಸೇನೆಯಲ್ಲಿ ನಿವೃತ್ತಿಯಾದ ಬಳಿಕ ಶಿರಸಿಯಲ್ಲಿ ಕ್ರೀಡಾ ಅಕಾಡೆಮಿ ಸ್ಥಾಪಿಸುವ ಗುರಿ ಇದೆ. ಖೇಲೊ ಇಂಡಿಯಾ ಸೇರಿದಂತೆ ಕ್ರೀಡೆಗೆ ಸಂಬಂಧಿಸಿದ ಸೌಲಭ್ಯಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ವಿದೇಶಿ ಕೋಚ್ ಗಳಿಗೆ ಸಿಕ್ಕ ಪ್ರೋತ್ಸಾಹ ಸ್ವದೇಶಿ ಕೋಚ್ ಗಳಿಗೆ ಮೊದಲು ಸಿಗುತ್ತಿರಲಿಲ್ಲ ಎಂಬ ಬೇಸವರವಿತ್ತು. ಈಗ ಬೆಂಬಲ ಸಿಗುವ ಭರವಸೆ ಮೂಡಿದೆ ಎಂದರು. ಇದನ್ನೂ ಓದಿ: ಉಡುಪಿಯ ರೈತರಿಗೆ ನೆಮ್ಮದಿ ತಂದ ಮಳೆರಾಯ

ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ವಿದೇಶಿ ಕೋಚ್ ಗಳ ಬದಲು ಸ್ವದೇಶಿ ಕೋಚ್ ನೇಮಕಕ್ಕೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುತ್ತೇವೆ. ಸಾಮಥ್ರ್ಯದ ಕೌಶಲ್ಯ ವೃದ್ಧಿಸಿಕೊಳ್ಳುವತ್ತ ದೃಷ್ಟಿ ನೆಡಬೇಕು. ಕಾಶಿನಾಥ ನಾಯ್ಕ ಅತ್ಯುತ್ತಮ ಕ್ರೀಡಾಪಟು ಅಗಿರುವ ಜೊತೆಗೆ ಅತ್ಯುತ್ತಮ ಗುರು ಎಂಬುದನ್ನೂ ಸಾಬೀತುಪಡಿಸಿದ್ದಾರೆ. ಸಾಧನೆ ನಿರಂತರವಾಗಿರಲಿ, ಯುವಜನತೆಗೆ ಮಾದರಿ ಆಗಿರುವ ಕಾಶಿನಾಥ ಅವರ ಗರಡಿಯಲ್ಲಿ ಇನ್ನಷ್ಟು ಕ್ರೀಡಾಪಟುಗಳು ಹೊರಹೊಮ್ಮಲಿ ಎಂದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಜಿ.ಗಾಯತ್ರಿ, ಡಿವೈಎಸ್‍ಪಿ ರವಿ ನಾಯ್ಕ, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಹೆಗಡೆ, ಕ್ರೀಡಾಧಿಕಾರಿ ಕಿರಣ್ ನಾಯ್ಕ ಭಾಗವಹಿಸಿದ್ದರು.

Source: publictv.in Source link