‘ನಮ್ಮ ಮೆಟ್ರೋ’ ಕಾರ್ಯಕ್ರಮದಲ್ಲಿ ಕನ್ನಡ ಮರೆತ BMRCL; ವಾಟಾಳ್​​​​​, ಗುಂಡೂರಾವ್​​​​ ಆಕ್ರೋಶ

‘ನಮ್ಮ ಮೆಟ್ರೋ’ ಕಾರ್ಯಕ್ರಮದಲ್ಲಿ ಕನ್ನಡ ಮರೆತ BMRCL; ವಾಟಾಳ್​​​​​, ಗುಂಡೂರಾವ್​​​​ ಆಕ್ರೋಶ

ಬೆಂಗಳೂರು: ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ 7.5 ಕಿಮೀ ಉದ್ದದ ‘ನಮ್ಮ ಮೆಟ್ರೋ’ ರೈಲು ಸೇವೆಗೆ ಚಾಲನೆ ನೀಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ನಗರ ವ್ಯವಹಾರಗಳ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ನೂತನ ಮಾರ್ಗವನ್ನು ಉದ್ಘಾಟಿಸಿದ್ದಾರೆ. ಆದರೆ, ನಾಯಂಡಹಳ್ಳಿಯಿಂದ ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಚಾಲನೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣನೆ ಮಾಡಲಾಗಿದೆ. ಈ ಕಾರ್ಯಕ್ರಮದ ಮುಖ್ಯ ವೇದಿಕೆಯಲ್ಲಿ ಸಂಪೂರ್ಣ ಇಂಗ್ಲಿಷ್  ಬಳಕೆಯಾಗಿದೆ. ಈ ಮೂಲಕ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗಿದೆ.

Image

ಇನ್ನು, ವೇದಿಕೆ ಕಾರ್ಯಕ್ರಮದಲ್ಲಿ ಹಾಕಲಾಗಿದ್ದ ಫ್ಲೆಕ್ಸ್​ನಲ್ಲಿ ಕನ್ನಡ ಬಳಸದ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್​​ ಲಿಮಿಟೆಡ್​​ (BMRCL) ವಿರುದ್ಧ ಕನ್ನಡಪರ ಹೋರಾಟಗಾರ ವಾಟಳ್​​ ನಾಗರಾಜ್​​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ನಾಡಿನ ಭಾಷೆ ಬಳಸದೆ ಕನ್ನಡ ವಿರೋಧಿ ನೀತಿ ಅನುಸರಿಸಿದ ನಮ್ಮ ಮೆಟ್ರೋ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕನ್ನಡಕ್ಕೆ ಯಾಕಿಲ್ಲ ಆದ್ಯತೆ
ಇನ್ನೊಂದೆಡೆ ಕೆಂಗೇರಿ ನೇರಳೆ ಮಾರ್ಗದ ನಮ್ಮ ಮೆಟ್ರೋ ಉದ್ಘಾಟನೆ‌ ಕಾರ್ಯಕ್ರಮದಲ್ಲಿ ಕನ್ನಡವನ್ನು ಕಡೆಗಣಿಸಿರುವುದು ಕರ್ನಾಟಕಕ್ಕೆ ಮಾಡಿದ ಅವಮಾನ. ಸರ್ಕಾರಿ ಕಾರ್ಯಕ್ರಮದಲ್ಲೇ ಕನ್ನಡ ಕಡೆಗಣಿಸಿರುವ ಉದ್ಧಟತನ ಸಹಿಸಲು ಸಾಧ್ಯವಿಲ್ಲ. ನಮ್ಮ ಮೆಟ್ರೋ ಯೋಜನೆ ಕೇಂದ್ರ ಹಾಗೂ ರಾಜ್ಯದ ಸಹಭಾಗಿತ್ವದ ಯೋಜನೆ. ಹೀಗಿರುವಾಗ ಕನ್ನಡಕ್ಕೂ ಆದ್ಯತೆ ಇರಬೇಕಲ್ಲವೆ.? ಎಂದು ಮಾಜಿ ಸಚಿವ ದಿನೇಶ್​​ ಗುಂಡೂರಾವ್​​ ಟ್ವೀಟ್​​ ಮಾಡಿ ಖಂಡಿಸಿದ್ದಾರೆ.

BMRCL ಆಗಿಂದಲೂ ಕನ್ನಡಕ್ಕೆ ಅಪಮಾನ ಮಾಡುವ ಕೆಲಸ ಮಾಡುತ್ತಿದೆ. ದುರುದ್ದೇಶದಿಂದಲೇ ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿದೆ. ದುರಂತವೆಂದರೆ ಸಿಎಂ ಬಸವರಾಜ್​​​ ಬೊಮ್ಮಾಯಿ ಅವರಾದರೂ ಕನ್ನಡದ ಭಾಷಾಭಿಮಾನ ತೋರಬೇಕಿತ್ತು. ಆದರೆ ಕೇಂದ್ರದವರನ್ನು ಮೆಚ್ಚಿಸಲು ಕಾರ್ಯಕ್ರಮವನ್ನು ಇಂಗ್ಲಿಷ್​ಮಯ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ನಾಯಂಡಹಳ್ಳಿ-ಕೆಂಗೇರಿ ಮೆಟ್ರೋ ಮಾರ್ಗಕ್ಕೆ ಸಿಕ್ತು ಚಾಲನೆ; ಕೇಂದ್ರದ ನಾಯಕರು ಭಾಗಿ

BJP ಏಕ ಭಾಷೆ-ಏಕ ರಾಷ್ಟ್ರ ಪರಿಕಲ್ಪನೆಯಲ್ಲಿ‌ ಪ್ರಾದೇಶಿಕ ಭಾಷೆಗಳನ್ನು ದಮನ ಮಾಡುತ್ತಿದೆ. ಇಂದಿನ ಮೆಟ್ರೋ ಉದ್ಘಾಟನೆಯಲ್ಲಿ ಕನ್ನಡಕ್ಕೆ ಅಪಮಾನ ಮಾಡಿದ್ದೇ ಈ ಅಜೆಂಡಾದಿಂದ. ಆದರೆ ಕನ್ನಡವನ್ನು ಕೊಲೆ ಮಾಡುವ ಪ್ರಯತ್ನವನ್ನು ಕನ್ನಡಿಗರು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕನ್ನಡ ಕೇವಲ ಭಾಷೆಯಲ್ಲ, ಅದು ಕನ್ನಡಿಗರ ಆತ್ಮ ಎಂದಿದ್ದಾರೆ.

ಇನ್ಮುಂದೆ ಆಗಲ್ಲ ಎಂದ ಪರ್ವೀಜ್​
ಇನ್ನು, ಕಾರ್ಯಕ್ರಮದಲ್ಲಿ ಕನ್ನಡ ಬಳಕೆ ಕಡೆಗಣನೆ ವಿಚಾರದ ಬಗ್ಗೆ BMRCL ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೀಜ್ ಪ್ರತಿಕ್ರಿಯೆ ನೀಡಿದ್ದಾರೆ. ಮೆಟ್ರೋ ಎಲ್ಲಾ ನಿಲ್ದಾಣಗಳಲ್ಲಿ ಕನ್ನಡ ಬಳಸಿದ್ದೇವೆ. ಆದರೆ, ಕಾರ್ಯಕ್ರಮದ ಬ್ಯಾನರ್​​​ನಲ್ಲಿ ಮಿಸ್ ಆಗಿದೆ. ಇಂತ ದೊಡ್ಡ ಕಾರ್ಯಕ್ರಮಗಳಲ್ಲಿ ಸಣ್ಣ ಪುಟ್ಟ ತಪ್ಪುಗಳು ಆಗುತ್ತವೆ. ಮುಂದೆ ಈ ರೀತಿ ಆಗುವುದಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

 

Source: newsfirstlive.com Source link