ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿದ್ದರೆ ರೇಷನ್ ಕಾರ್ಡ್ ಕಟ್- ಯಾದಗಿರಿ ಜಿಲ್ಲಾಡಳಿತ ಎಚ್ಚರಿಕೆ

ಯಾದಗಿರಿ: ಒಂದು ಕಡೆ ಕೋವಿಡ್ ಲಸಿಕೆ ಪಡೆಯಲು ಜನ ಹಿಂದೇಟು ಹಾಕುತ್ತಿದ್ದು, ಮತ್ತೊಂದೆಡೆ ಕೋವಿಡ್ ಲಸಿಕೆ ಪಡೆಯದಿದ್ದರೆ ರೇಷನ್ ಕಾರ್ಡ್ ಕಟ್ ಮಾಡಲಾಗುವುದು ಎಂದು ಜಿಲ್ಲಾಡಳಿತ ಖಡಕ್ ಎಚ್ಚರಿಕೆ ನೀಡಿದೆ.

ಮೂರನೇ ಅಲೆ ಆತಂಕ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕೋವಿಡ್ ಲಸಿಕೆ ನೀಡುವ ಪ್ರಮಾಣವನ್ನು ಹೆಚ್ಚಳ ಮಾಡಲು ಹರಸಾಹಸ ಪಡುತ್ತಿವೆ. ಹೀಗಾಗಿ ಕೋವಿಡ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಿ, ಲಸಿಕೆ ಕೊಡಿಸುವ ಕೆಲಸವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಮಾಡುತ್ತಿದ್ದಾರೆ. ಬಹುತೇಕರು ಲಸಿಕೆ ಪಡೆಯಲು ಇಚ್ಛಿಸಿದ್ದು, ಇನ್ನೂ ಕೆಲವರು ಲಸಿಕೆ ಎಂದರೆ ಭಯಪಡುತ್ತಿದ್ದಾರೆ. ನಾನು ಸತ್ತರೂ ಲಸಿಕೆ ಪಡೆಯಲ್ಲ ಎಂದು ವೃದ್ಧೆಯೊಬ್ಬರು ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ. ಇದನ್ನೂ ಓದಿ: 1,262 ಹೊಸ ಪ್ರಕರಣಗಳು – ಪಾಸಿಟಿವಿಟಿ ರೇಟ್ ಶೇ.0.70

ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಹಿನ್ನೆಲೆ ಲಸಿಕೆ ಪ್ರಮಾಣ ಹೆಚ್ಚಳ ಮಾಡಲು ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಲಸಿಕೆ ಪಡೆಯದಿದ್ದರೆ ರೇಷನ್ ಕಟ್ ಮಾಡಲು ಅಧಿಕಾರಿಗಳಿಗೆ ಮೌಖಿಕವಾಗಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಮುಂಡರಗಿ ಸೇರಿ ಬಹುತೇಕ ಹಳ್ಳಿಗಳಲ್ಲಿ ಲಸಿಕೆ ಪಡೆಯದಿದ್ದರೆ ರೇಷನ್ ಕಾರ್ಡ್ ಕಟ್ ಮಾಡಲಾಗುತ್ತದೆ ಎಂದು ಪಂಚಾಯಿತಿ ಅಧಿಕಾರಿಗಳು ವಾಹನಗಳ ಮೂಲಕ ಎಚ್ಚರಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ.

Source: publictv.in Source link