ಮೆಗಾ ಆಪರೇಷನ್​​​ ಹಸ್ತಕ್ಕೆ ಮುಂದಾಗಿದ್ದ DKS, ಸಿದ್ದರಾಮಯ್ಯ; ಹಿರಿಯ ಕಾಂಗ್ರೆಸ್ಸಿಗರಿಂದಲೇ ವಿರೋಧ..?

ಮೆಗಾ ಆಪರೇಷನ್​​​ ಹಸ್ತಕ್ಕೆ ಮುಂದಾಗಿದ್ದ DKS, ಸಿದ್ದರಾಮಯ್ಯ; ಹಿರಿಯ ಕಾಂಗ್ರೆಸ್ಸಿಗರಿಂದಲೇ ವಿರೋಧ..?

ಮೆಗಾ ಆಪರೇಷನ್ ಹಸ್ತಕ್ಕೆ ಕೈಪಾಳಯದಲ್ಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ನಾಯಕರನ್ನ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಮುಂದಾಗಿರುವ ಬೆನ್ನಲ್ಲೆ ಕಾಂಗ್ರೆಸ್​ ನಾಯಕರೇ ವಿರೋಧ ತೋರುತ್ತಿದ್ದಾರೆ.

ಸದ್ದಿಲ್ಲದೇ ಮೆಗಾ ಆಪರೇಷನ್ ಹಸ್ತಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಕೈ ಹಾಕಿದ್ದಾರೆ. ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್​​ ಹಾಲಿ ಮತ್ತು ಮಾಜಿ ಶಾಸಕರ ಪಟ್ಟಿಯನ್ನೇ ಸಿದ್ಧಪಡಿಸಿಕೊಂಡಿದ್ದರು. ಜೆಡಿಎಸ್​ನಿಂದಲೇ ಬರೋಬ್ಬರಿ ಎರಡು ಡಜನ್ ನಾಯಕರಿಗೆ ಗಾಳ ಹಾಕಲು ರಹಸ್ಯ ಕಾರ್ಯತಂತ್ರ ನಡೆಸಿದ್ದರು ಎನ್ನಲಾಗಿದೆ.

ಇನ್ನು, ಬಿಜೆಪಿಯ ಕೆಲ ನಾಯಕರನ್ನೂ ಸೆಳೆಯಲು ತೆರೆಮರೆ ಕಸರತ್ತು ನಡೆಸಲಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನ ಗೆಲ್ಲುವ ಲೆಕ್ಕಾಚಾರದಲ್ಲಿ ಆಪರೇಷನ್ ಹಸ್ತ ಮಾಡಲಾಗುತ್ತಿದೆ. ಈಗಾಗಲೇ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ ಕಾಂಗ್ರೆಸ್​ ಸೇರಿದ್ದಾರೆ. ಮೈಸೂರು ಭಾಗದ ಪ್ರಭಾವಿ ಒಕ್ಕಲಿಗ ನಾಯಕ ಜಿ.ಟಿ ದೇವೇಗೌಡ ಹಾಗೂ ಪುತ್ರ ಹರೀಶ್ ಗೌಡ ಕೂಡ ಕಾಂಗ್ರೆಸ್​ ಸೇರಲಿದ್ದಾರೆ.

ಖುದ್ದು ಕಾಂಗ್ರೆಸ್ ಸೇರುವ ಸುಳಿವು ಮಾಜಿ ಸಚಿವ ಜಿ.ಟಿ ದೇವೇಗೌಡ ನೀಡಿದ್ದಾರೆ. ಚುನಾವಣೆ ಹೊತ್ತಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ಪಕ್ಷಗಳ ನಾಯಕರಿಗೆ ಡಿ.ಕೆ.ಶಿವಕುಮಾರ್​​ ಗಾಳ ಹಾಕಲು ಮುಂದಾಗಿದ್ದಾರೆ. ಆದರೆ, ಮೆಗಾ ಆಪರೇಷನ್ ಹಸ್ತಕ್ಕೆ ಹಿರಿಯ ಕಾಂಗ್ರೆಸ್​ ನಾಯಕ ಬಿ.ಕೆ ಹರಿಪ್ರಸಾದ್, ಕೆ.ಹೆಚ್ ಮುನಿಯಪ್ಪ ಸೇರಿದಂತೆ ಹಲವರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ‘ಆಪರೇಷನ್​ ಹಸ್ತ’ ಜೋರು -ಮತ್ತಿಬ್ಬರು JDS ಶಾಸಕರು ‘ಕೈ’ ಹಿಡಿತಾರಾ?

ಕಾಂಗ್ರೆಸ್​ಗೆ ಆಪರೇಷನ್ ಹಸ್ತದ ಅಗತ್ಯವೇ ಇಲ್ಲ ಎಂದು ಒತ್ತಿ ಹೇಳುತ್ತಿರುವ ಹಿರಿಯ ನಾಯಕರು, ಈಗ ಚುನಾವಣೆಗೆ ಹೋದರೂ ನಾವು ಅಧಿಕಾರಕ್ಕೆ ಬರಲಿದ್ದೇವೆ ಎಂದಿದ್ದಾರೆ. ಹೀಗಿರುವಾಗ ಆಪರೇಷನ್ ಹಸ್ತದ ಅನಿವಾರ್ಯತೆ ಏನಿದೆ ಎಂದು ಪ್ರಶ್ನಿಸಿದ್ದಾರೆ.

ಯಾರಾದರೂ ಬರೋದಾದರೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವ ಒಪ್ಪಿಕೊಂಡು ಪಕ್ಷಕ್ಕೆ ಬರಲಿ. ಪಕ್ಷದ ಸಿದ್ಧಾಂತವನ್ನ ಒಪ್ಪಿಕೊಂಡು ಅಪ್ಪಿಕೊಳ್ಳಲಿ. ಇದಕ್ಕೆ ನಮ್ಮ ಯಾವುದೇ ಅಭ್ಯಂತರವೇ ಇಲ್ಲ. ಆದರೆ, ಸ್ವಹಿತಾಸಕ್ತಿಗಾಗಿ ಜೆಡಿಎಸ್, ಬಿಜೆಪಿ ನಾಯಕರನ್ನ ಪಕ್ಷಕ್ಕೆ ಕರೆತರುವುದು ಸರಿಯಲ್ಲವೆಂದು ಆಕ್ಷೇಪ ಮಾಡಿದ್ದಾರೆ.

ನಮ್ಮಲ್ಲೇ ದೊಡ್ಡ ಸಂಖ್ಯೆಯಲ್ಲಿ ನಾಯಕರ ದಂಡೇ ಇದೆ. ಹಾಗಾಗಿ ಬೇರೆ ಪಕ್ಷಗಳಿಂದ ಕರೆತರುವ ಅಗತ್ಯ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ವಿಶೇಷ ವರದಿ: ಹರೀಶ್​​​​ ಕಾಕೋಳ್​, ಪೊಲಿಟಿಕಲ್​ ಬ್ಯೂರೋ​

Source: newsfirstlive.com Source link