ಯಾವುದೇ ಒತ್ತಡಕ್ಕೆ ಮಣಿದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ: ಬಿಎಸ್‍ವೈ

– ಇನ್ನೊಬ್ಬರು ರಾಜಕೀಯವಾಗಿ ಬೆಳೆಯಲಿ ಎಂಬ ಉದ್ದೇಶದಿಂದ ರಾಜೀನಾಮೆ

ಶಿವಮೊಗ್ಗ: ಯಾವುದೇ ಒತ್ತಡಕ್ಕೆ ಮಣಿದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ, ರಾಜಕೀಯವಾಗಿ ಇತರರು ಬೆಳೆಯಲಿ ಎಂಬ ಉದ್ದೇಶದಿಂದ ಸಿಎಂ ಸ್ಥಾನದಿಂದ ಇಳಿದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಜಿಲ್ಲೆಯ ಶಿಕಾರಿಪುರದ ಕುಮದ್ವತಿ ಸಭಾಂಗಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾದ ಎರಡು ವರ್ಷದ ಅವಧಿ ಮುಗಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣದ ವೇಳೆ ಸ್ವಲ್ಪ ದುಃಖ ವ್ಯಕ್ತಪಡಿಸಿದ್ದೆ. ಶಿಕಾರಿಪುರ ಜನರ ಹೋರಾಟ ನೆನಪು ಮಾಡಿಕೊಳ್ಳುವ ಸಂದರ್ಭದಲ್ಲಿ ಆವೇಶಕ್ಕೆ ಒಳಗಾಗಿದ್ದು ನಿಜ ಎಂದರು.

ಸರ್ಕಾರಕ್ಕೆ ಎರಡು ವರ್ಷ ಮುಗಿಯುವ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೇರೊಬ್ಬರಿಗೆ ಅವಕಾಶ ಮಾಡಿಕೊಡಬೇಕು ಎಂಬ ಸಂಕಲ್ಪ ಮಾಡಿದ್ದೆ. ಅದರಂತೆಯೇ ನನ್ನ ಭಾಷಣ ಮುಗಿದ ಮೇಲೆ ಎಲ್ಲರಿಗೂ ಸಿಹಿ ಊಟ ಹಾಕಿಸಿ, ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ನನಗೆ ಸಹಕಾರ ನೀಡಿದಂತೆ ಅವರಿಗೂ ಸಹಕಾರ ನೀಡಬೇಕು. ದೇಶಕ್ಕೆ ಮಾದರಿಯಾಗುವ ರೀತಿ ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯ ನಿರ್ಮಿಸೋಣ ಎಂದು ತಿಳಿಸಿದರು. ಇದನ್ನೂ ಓದಿ: ಬೈ ಎಲೆಕ್ಷನ್‍ನಲ್ಲಿ ಸೋತ್ರೂ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಬಲ ಕೊಟ್ಟಿದ್ದಾರೆ: ಡಿ.ಕೆ.ಶಿವಕುಮಾರ್

ರಾಜ್ಯದ ಉದ್ದಗಲಕ್ಕೂ ತೆರಳಿ ಪಕ್ಷ ಸಂಘಟನೆ ಮಾಡುವುದು ನನ್ನ ಏಕೈಕ ಉದ್ದೇಶ. ಪಕ್ಷದ ಪ್ರಮುಖರು ಕಾರ್ಯಕರ್ತರೊಂದಿಗೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವೆ, ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಉದ್ದೇಶ ನಮ್ಮದು. ದೇಶದಲ್ಲಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶ ನಮ್ಮದು ಎಂದರು.

ಶಿಕಾರಿಪುರದಲ್ಲಿ ಅತಿಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ಇತರೆ ಭಾಗಗಳಲ್ಲಿ ಕೂಡ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವ ಸಮಾಧಾನ ಇದೆ. ಜನರ ವಿಶ್ವಾಸ ಮತ್ತು ಅವರ ನಂಬಿಕೆಯನ್ನು ಉಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಾಜಿ ಸಿಎಂ ಯಡಿಯೂರಪ್ಪ ತಿಳಿಸಿದರು.

Source: publictv.in Source link