ಜಾವೆಲಿನ್ ಎಸೆತ ಭಾರತಕ್ಕೆ ಅವಳಿ ಪದಕ

ಟೋಕಿಯೋ: ಪ್ಯಾರಾಲಂಪಿಕ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಪುರುಷರ ಜಾವೆಲಿನ್ ಎಸೆತದಲ್ಲಿ ಭಾರತದ ಕ್ರೀಡಾಪಟುಗಳಾದ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕ ಮತ್ತು ಸುಂದರ್ ಸಿಂಗ್ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ಅವಳಿ ಪದಕ ಗೆದ್ದಿದ್ದಾರೆ.

ಈ ಹಿಂದೆ ಎರಡು ಬಾರಿ ಪ್ಯಾರಾಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದ ದೇವೇಂದ್ರ ಝಝಾರಿಯಾ ಈ ಬಾರಿ 64.35 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರು. ಇದಲ್ಲದೆ ತಮ್ಮ ವೈಯಕ್ತಿಕ ಅತ್ಯುನ್ನತ ಸಾಧನೆಗೆ ಪಾತ್ರರಾದರು. ಇದನ್ನೂ ಓದಿ: ಡಿಸ್ಕಸ್ ಥ್ರೋ ಬೆಳ್ಳಿ ಪದಕ ಗೆದ್ದ ಯೋಗೇಶ್ ಕಥುನಿಯಾ

ಝಝಾರಿಯಾ ಬೆಳ್ಳಿ ಗೆದ್ದರೆ ಇದೇ ಸ್ಪರ್ಧೆಯಲ್ಲಿ ಭಾರತದ ಇನ್ನೋರ್ವ ಕ್ರೀಡಾಪಟು ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕ ಪಡೆದುಕೊಂಡರು. 64.01 ಮೀಟರ್ ಎಸೆದ ಸುಂದರ್ ಸಿಂಗ್ ಗುರ್ಜಾರ್ ಭಾರತದ ಪದಕ ಪಟ್ಟಿಯನ್ನು ಹೆಚ್ಚಿಸಿದರಲ್ಲದೆ ಒಂದೇ ವಿಜಯ ವೇದಿಕೆಯಲ್ಲಿ ಇಬ್ಬರು ಒಂದೇ ದೇಶದ ಕ್ರೀಡಾಪಟುಗಳು ಒಟ್ಟಿಗೆ ಪದಕ ಸ್ವೀಕರಿಸುವ ವಿಶೇಷ ಸನ್ನಿವೇಶಕ್ಕೆ ದಾರಿ ಮಾಡಿಕೊಟ್ಟರು.

ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ಪರ ಮೂವರು ಆಟಗಾರರಾದ ದೇವೇಂದ್ರ ಝಝಾರಿಯಾ, ಸುಂದರ್ ಸಿಂಗ್ ಗುರ್ಜಾರ್ ಮತ್ತು ಸಜೀತ್ ಸಿಂಗ್ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ಹೆರಾತ್ ಮುಡಿಯನ್ಸ್ 67.79 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದುಕೊಂಡರು. ಇದನ್ನೂ ಓದಿ: ಶೂಟಿಂಗ್‍ನಲ್ಲಿ ಚಿನ್ನ ಗೆದ್ದ ಅವನಿ ಲೇಖರಾ

Source: publictv.in Source link