ಧೋನಿ, ಕೊಹ್ಲಿ ಪಾಲಿಗೆ ಐಪಿಎಲ್​ ನಿರ್ಣಾಯಕ.. ಪ್ರದರ್ಶನದ ಮೇಲೆ ನಿಂತಿದೆ ಇಬ್ಬರ ಭವಿಷ್ಯ

ಧೋನಿ, ಕೊಹ್ಲಿ ಪಾಲಿಗೆ ಐಪಿಎಲ್​ ನಿರ್ಣಾಯಕ.. ಪ್ರದರ್ಶನದ ಮೇಲೆ ನಿಂತಿದೆ ಇಬ್ಬರ ಭವಿಷ್ಯ

ಟೀಮ್​ ಇಂಡಿಯಾ ಕಂಡ ಈ ಇಬ್ಬರು ಶ್ರೇಷ್ಠ ನಾಯಕರಾದ ಎಮ್​ಎಸ್​​ ಧೋನಿ ಹಾಗೂ ವಿರಾಟ್​ ಕೊಹ್ಲಿ ಪಾಲಿಗೆ 2ನೇ ಹಂತದ 14ನೇ ಆವೃತ್ತಿಯ ಐಪಿಎಲ್​ ನಿರ್ಣಾಯಕ. ಯುಇಎನಲ್ಲಿ ನಡೆಯುವ ಟೂರ್ನಿಯ ಫಲಿತಾಂಶ ಇಬ್ಬರ ಭವಿಷ್ಯವನ್ನೇ ನಿರ್ಧರಿಸಲಿದೆ. ತಂಡಗಳು ಚಾಂಪಿಯನ್​ ಪಟ್ಟಕ್ಕೇರದಿದ್ರೆ, ಈ ಇಬ್ಬರ ಭವಿಷ್ಯ ಏನಾಗಬಹುದು.? ಇಲ್ಲಿದೆ ನೋಡಿ ಒಂದು ರಿಪೋರ್ಟ್​​..!

14ನೇ ಆವೃತ್ತಿಯ ಇಂಡಿಯನ್​ ಪ್ರೀಮಿಯರ್​ ಲೀಗ್​ 2ನೇ ಹಂತದ ಆರಂಭಕ್ಕೆ ಕೆಲವೇ ದಿನಗಳು ಮಾತ್ರ ಬಾಕಿ. ಈಗಾಗಲೇ ಯುಎಇ ತಲುಪಿರುವ ಹಲ ತಂಡಗಳು ಭರ್ಜರಿ ಸಮರಾಭ್ಯಾಸ ಆರಂಭಿಸಿವೆ. ಇದರ ಜೊತೆಗೆ ಪ್ರಿಡಿಕ್ಷನ್​ಗಳು, ಚರ್ಚೆಗಳೂ ಕೂಡ ಗರಿಗೆದರಿವೆ. ಅದರಲ್ಲೂ ಮುಖ್ಯವಾಗಿ ಆರ್​ಸಿಬಿ ನಾಯಕ ವಿರಾಟ್​ ಕೊಹ್ಲಿ, ಚೆನ್ನೈ ಸೂಪರ್​​ ಕಿಂಗ್ಸ್​ ನಾಯಕ ಎಮ್​ಎಸ್​​ ಧೋನಿ ಭವಿಷ್ಯ ಹೆಚ್ಚು ಚರ್ಚೆಯಲ್ಲಿದೆ.

ಉಳಿದ ಪಂದ್ಯಗಳ ಮೇಲೆ ನಿಂತಿದೆ ಕೊಹ್ಲಿ, ಧೋನಿ ಭವಿಷ್ಯ.!
ಯೆಸ್​​..! ಇಷ್ಟು ದಿನ ವಿರಾಟ್​​ ಕೊಹ್ಲಿಯ ಟೀಮ್​ ಇಂಡಿಯಾ ನಾಯಕನ ಸ್ಥಾನ ಚರ್ಚೆಗೆ ಕಾರಣವಾಗಿತ್ತು. ಇದೀಗ ಐಪಿಎಲ್​ ನಾಯಕನ ಪಟ್ಟದ ಚರ್ಚೆಯೂ ಹುಟ್ಟಿಕೊಂಡಿದೆ. ನಾಯಕನಾಗಿ ಒಂದೇ ಒಂದು ಬಾರಿ ತಂಡಕ್ಕೆ ಕೊಹ್ಲಿ ಕಪ್​ ಗೆಲ್ಲಿಸಿ ಕೊಟ್ಟಿಲ್ಲ. ಈ ಬಾರಿಯೂ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಲು ವಿಫಲರಾದ್ರೆ, ನಾಯಕನ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನಲಾಗ್ತಿದೆ.

ನಾಯಕನಾಗಿ ಮಾತ್ರವಲ್ಲ.. ವೈಯಕ್ತಿಕವಾಗಿಯೂ ಕೊಹ್ಲಿ ಅಬ್ಬರಿಸಲೇಬೇಕಿದೆ. ಸದ್ಯ ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ವೈಫಲ್ಯ ಅನುಭವಿಸ್ತಾ ಇರೋ ಕೊಹ್ಲಿ, ಐಪಿಎಲ್​ ಒಳಗಡೆ ಫಾರ್ಮ್​ಗೆ ಮರಳಬೇಕಿದೆ. ಈ ಐಪಿಎಲ್​ ಅಂತ್ಯದ ಬಳಿಕ ಮೆಗಾ ಆಕ್ಷನ್​ ಇರೋ ಕಾರಣ ದುಬಾರಿ ಮೌಲ್ಯದ ಕೊಹ್ಲಿಯನ್ನ ರಿಟೈನ್​ ಮಾಡಿಕೊಳ್ಳುವ ವಿಚಾರದಲ್ಲಿ ಫ್ರಾಂಚೈಸಿಯೂ ಗೊಂದಲದಲ್ಲಿದೆ. ಹೀಗಾಗಿ 2ನೇ ಹಂತದ ಐಪಿಎಲ್​ನಲ್ಲಿ ವೈಫಲ್ಯ ಮುಂದುವರೆದರೆ ಅದು ಕೊಹ್ಲಿಗೆ ಮುಳುವಾಗಲಿದೆ.

ಕೊಹ್ಲಿಯ ಜೊತೆ ಜೊತೆಗೆ ಧೋನಿಗೂ 2ನೇ ಹಂತದ ಐಪಿಎಲ್​ ನಿರ್ಣಾಯಕವಾಗಿದೆ. ಉಳಿದ ಪಂದ್ಯಗಳಲ್ಲಿ ನೀಡೋ ಪ್ರದರ್ಶನ ಧೋನಿಯ ಐಪಿಎಲ್​ ಭವಿಷ್ಯವನ್ನೇ ನಿರ್ಧರಿಸಲಿದೆ. ಯಾಕಂದ್ರೆ, ಈ ಪ್ರದರ್ಶನದ ಆಧಾರದಲ್ಲೇ 40ರ ಹರೆಯದ ಧೋನಿಯನ್ನ ಮುಂದಿನ ಅವೃತ್ತಿಗೆ ರಿಟೈನ್​​ ಮಾಡಿಕೊಳ್ಳಬೇಕಾ..? ಬೇಡವಾ..? ಅನ್ನೋ ಪ್ರಶ್ನೆಗೆ ಮ್ಯಾನೇಜ್​ಮೆಂಟ್​ ಉತ್ತರ ಕಂಡುಕೊಳ್ಳೋ ಪ್ರಯತ್ನದಲ್ಲಿದೆ.

Source: newsfirstlive.com Source link