ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ. ಸಮುದಾಯ ನಿಧಿ

-ಬಂಜರು ಭೂಮಿಯಲ್ಲಿ ಭತ್ತ ಬೆಳೆದಿದ್ದ ಮಹಿಳೆಯರನ್ನು ಶ್ಲಾಘಿಸಿದ ಅಶ್ವತ್ಥನಾರಾಯಣ

ಮಂಗಳೂರು: ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಬಿಗಳಾಗಲು ಹಾಗೂ ಉದ್ಯಮಶೀಲರಾಗಲು ಸರ್ಕಾರ ಎನ್‍ಆರ್‍ಎಲ್‍ಎಂ ಯೋಜನೆ ಮೂಲಕ ರಾಜ್ಯದ ಎಲ್ಲ ಮಹಿಳಾ ಸ್ವಸಹಾಯ ಗುಂಪುಗಳಿಗೆ 600 ಕೋಟಿ ರೂ.ಗಳಿಗೂ ಹೆಚ್ಚಿನ ಸಮುದಾಯ ಬಂಡವಾಳ ನಿಧಿ ನೀಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ, ಜೀವನೋಪಾಯ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕುರ್ನಾಡು ಗ್ರಾಮ ಪಂಚಾಯತಿಯ ಮುಡಿಪು ಗ್ರಾಮದಲ್ಲಿ ಬಂಜರು ಬಿದ್ದಿದ್ದ ಭೂಮಿಯನ್ನು ಸಾಗುವಳಿ ಮಾಡಿ ಭತ್ತ ಬೆಳೆಯುತ್ತಿರುವ ಸ್ವಸಹಾಯ ಗುಂಪುಗಳ ಮಹಿಳೆಯರ ಸಾಧನೆಯನ್ನು ಖುದ್ದು ವೀಕ್ಷಿಸಿದ ನಂತರ ಮಾತನಾಡಿದ ಅವರು, ರಾಜ್ಯದ ಉದ್ದಗಲಕ್ಕೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಕೇಂದ್ರ ಸರ್ಕಾರದ ನೆರವಿನಿಂದ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ. ಇದನ್ನೂ ಓದಿ:ಮಾತು ಕೇಳದ ಪಾಲಿಕೆ ಅಧಿಕಾರಿಗಳು- ಸಲಾಕೆ ಹಿಡಿದು ಚರಂಡಿ ಸ್ವಚ್ಛತೆಗೆ ನಿಂತ ಶಾಸಕ ದೇವಾನಂದ

ashwathnarayan

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಸಂಘಟನೆಗೊಂಡು ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ವತಿಯಿಂದ ಹಲವಾರು ಜೀವನೋಪಾಯ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಕುಟುಂಬಗಳ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಉನ್ನತೀಕರಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುವುದು ಬಹಳ ಸಂತೋಷದ ವಿಷಯವಾಗಿದೆ. ಹಳ್ಳಿ ಮಹಿಳೆಯರಲ್ಲಿ ಕುಶಲತೆಯನ್ನು ಬೆಳೆಸಿ ಅವರಲ್ಲಿ ಉದ್ಯಮಶೀಲತೆ ವೃದ್ಧಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕರಾವಳಿ ಭಾಗದ ಮಹಿಳೆಯರು ಸರಕಾರದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡು ಮುನ್ನಡೆ ಸಾಧಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ashwathnarayan

ಗ್ರಾಮ ಪಂಚಾಯಿತಿ ಮಟ್ಟದ ಸಂಜೀವಿನಿ ಒಕ್ಕೂಟಗಳಲ್ಲಿ ಪ್ರಧಾನ ಪುಸ್ತಕ ಬರಹಗಾರರು ಹಾಗೂ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು ನಿರ್ವಹಿಸುತ್ತಿರುವ ಕರ್ತವ್ಯ ಅತ್ಯಂತ ಶ್ಲಾಘನೀಯವಾದದ್ದು. ಮಹಿಳಾ ಸ್ವಸಹಾಯ ಗುಂಪುಗಳ ಮೂಲಕ ಈ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದು ರಾಷ್ಟ್ರದಲ್ಲಿ ಮಾದರಿ ರಾಜ್ಯವನ್ನಾಗಿ ರೂಪಿಸಲು ತಾವೆಲ್ಲರೂ ಸಹಕರಿಸುವಂತೆ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

blank

ಸಚಿವರಿಗೆ ರಾಖಿ ಕಟ್ಟಿದ ಮಹಿಳೆಯರು:
ಈ ಸಂದರ್ಭದಲ್ಲಿ ಮುಡಿಪು ಗ್ರಾಮದ ಮಹಿಳೆಯರು ಅಶ್ವತ್ಥನಾರಾಯಣ ಅವರಿಗೆ ರಕ್ಷಾ ಬಂಧನ ಕಟ್ಟಿ ಆರತಿ ಬೆಳಗಿದರು. ಇದರಿಂದ ಭಾವುಕರಾದ ಸಚಿವರು, ಈ  ದಿನ ತಾವುಗಳು ನನಗೆ ರಾಖಿ ಕಟ್ಟಿ ಸೋದರನ ಸ್ಥಾನವನ್ನು ನಿಮ್ಮ ಮನದಲ್ಲಿ ನೀಡಿದ್ದೀರಿ. ಇದಕ್ಕೆ ನಾನು ನಿಮಗೆಲ್ಲರಿಗೂ ಚಿರಋಣಿ. ನಾನು ಮತ್ತೊಮ್ಮೆ ಇಲ್ಲಿಗೆ ಬರಲು ಪ್ರಯತ್ನಿಸುತ್ತೇನೆ. ನಿಮ್ಮ ಅಭಿಮಾನಕ್ಕೆ ನನ್ನ ಮನಸ್ಸು ಭಾರವಾಗಿದೆ ಎಂದು ನುಡಿದಿದ್ದಾರೆ.

Source: publictv.in Source link