ಪರಪ್ಪನ ಅಗ್ರಹಾರದ ಬಗ್ಗೆ ಕೇಳಿ ಬಂದ ಆರೋಪ ಏನು? ಕೈದಿ ಬರೆದಿರೋ ಪತ್ರದಲ್ಲಿ ಏನಿದೆ ಗೊತ್ತಾ?

ಪರಪ್ಪನ ಅಗ್ರಹಾರದ ಬಗ್ಗೆ ಕೇಳಿ ಬಂದ ಆರೋಪ ಏನು? ಕೈದಿ ಬರೆದಿರೋ ಪತ್ರದಲ್ಲಿ ಏನಿದೆ ಗೊತ್ತಾ?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ. ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಜೈಲು. ಕಳೆದ ಕೆಲ ವರ್ಷಗಳಿಂದಂತೂ ಕೇಂದ್ರ ಕಾರಾಗೃಹ ಹೆಚ್ಚು ಸುದ್ದಿಯಲ್ಲಿದೆ. ಬಹಳ ಮುಖ್ಯವಾಗಿ ಯಾವುದು ನಡೆಯಬಾರದೋ ಅದೆಲ್ಲವು ಅಲ್ಲಿ ಪ್ರತಿನಿತ್ಯ ನಡೆಯುತ್ತಲೆ ಇದೆ. ಆ ಅಕ್ರಮಗಳನ್ನ ಇಷ್ಟು ದಿನ ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದರು. ಆದ್ರೆ ಈ ಬಾರಿ ಖೈದಿಯೊಬ್ಬರು ಬರೆದಿದ್ದಾರೆ ಎನ್ನಲಾಗುತ್ತಿರೋ ಒಂದು ಪತ್ರದಿಂದ ಮತ್ತೊಮ್ಮೆ ಅಕ್ರಮಗಳ ಅನಾವರಣ ಆಗ್ತಿದೆ. ಹಾಗಾದ್ರೆ ಸಜಾ ಖೈದಿ ಬರೆದಿರೋ ಪತ್ರದಲ್ಲಿ ಏನಿದೆ? ಅದಕ್ಕೆ ಜೈಲು ಅಧಿಕಾರಿಗಳು ಹೇಳಿದ್ದೇನು? ನೋಡೋಣಾ ಈ ಕ್ಷಣದ ಸ್ಪೆಷಲ್ ರಿಪೋರ್ಟ್​​​ನಲ್ಲಿ.

ಪರಪ್ಪನ ಅಗ್ರಹಾರ ಕೇಂದ್ರ ಕಾರಗೃಹ.. ಐದು ಸಾವಿರಕ್ಕೂ ಹೆಚ್ಚು ಖೈದಿಗಳು ಇರೋ ಕಾರಾಗೃಹ. ತಾವುಗಳು ಮಾಡಿದ ತಪ್ಪಿಗೆ ಶಿಕ್ಷೆಯನ್ನ ಅನುಭವಿಸುವ ಸಲುವಾಗಿ ಇಲ್ಲಿಗೆ ಕರೆ ತರಲಾಗುತ್ತೆ. ಇಲ್ಲಿ ಶಿಕ್ಷೆ ಅನ್ನೋದನ್ನ ಬಿಟ್ಟು ಉಳಿದೆಲ್ಲ ಸವಲತ್ತುಗಳು ಚೆನ್ನಾಗಿ ಇರುತ್ತೆ ಅನ್ನೋ ಆರೋಪಗಳು ಪದೇ ಪದೇ ಕೇಳಿ ಬರುತ್ತಲೆ ಇರುತ್ತೆ. ಅಂದರೆ ಇಲ್ಲಿ ಅಮಾಯಕರಿಗೆ ನರಕ, ಹಣ ಇರೋರಿಗೆ ಇದು ವಿಲಾಸಿ ಕೇಂದ್ರ. ಇನ್ನೊಂದು ಮಾತಿನಲ್ಲಿ ಹೇಳಬೇಕು ಅಂದ್ರೆ ರೌಡಿಗಳ ಜೀವ ಕಾಪಾಡುವ ರಕ್ಷಣಾ ಕೋಟೆ.. ಜೈಲಿನಲ್ಲಿ ನಡೆಯುವ ಕೆಲ ಅಕ್ರಮಗಳ ಬಗ್ಗೆ ಅಂದಿನ ಐಜಿಪಿ ಆಗಿದ್ದ ಡಿ ರೂಪಾ ಅವರು ಅದೆಲ್ಲವನ್ನು ಬಹಿರಂಗ ಪಡಿಸೋ ಮೂಲಕ ಇದೊಂದು ಅಕ್ರಮಗಳ ಕೂಟ ಎಂದು ಕರೆದಿದ್ದರು. ಅಂದಿನಿಂದ ಇಂದಿನವರೆಗೂ ಒಂದಲ್ಲ ಒಂದು ರೀತಿಯಲ್ಲಿ ಕೇಂದ್ರ ಕಾರಾಗೃಹ ಸುದ್ದಿಯಲ್ಲಿದೆ. ಹಾಗಾದ್ರೆ ಈಗ ಸುದ್ದಿಯಲ್ಲಿರೋದು ಯಾಕೆ? ಕೃಷ್ಣ ಜನ್ಮಾಷ್ಠಮಿ ಆಚರಣೆ ಮಾಡುತ್ತಿರೋ ಈ ಸಂದರ್ಭದಲ್ಲಿ ಈ ಜಾಗದ ಬಗ್ಗೆ ಕೇಳಿ ಬಂದಿರೋ ಆರೋಪವೇನು? ಎಲ್ಲವನ್ನು ನೋಡ್ತಾ ಹೋಗೋಣಾ ಬನ್ನಿ.

blank

ಜೈಲಿನ ಅಕ್ರಮಗಳ ಬಗ್ಗೆ ಪತ್ರದಲ್ಲಿ ಉಲ್ಲೇಖ ಆಗಿದೇನು?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಮತ್ತೆ ಸುದ್ದಿಯಲ್ಲಿರೋದಕ್ಕೆ ಕಾರಣವೇ ಈ ಒಂದು ಪತ್ರ. ಸಜೆ ಖೈದಿಯೊಬ್ಬರು ಬರೆದಿದ್ದಾರೆ ಅಂತಾ ಹೇಳಲಾಗುತ್ತಿರುವ ಪತ್ರವಿದು. ಇದರಲ್ಲಿ ಕೇಂದ್ರ ಕಾರಾಗೃಹದಲ್ಲಿ ಇಂದು ನಡೆಯುತ್ತಿರುವ ಎಲ್ಲಾ ಅಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಬರೆಯಲಾಗಿದೆ. ಆದ್ರೆ ಈ ಪತ್ರವನ್ನ ಯಾರಿಗೆ ಬರೆದಿದ್ದಾರೆ ಅನ್ನೋದು ಸ್ಪಷ್ಟವಾಗಿಲ್ಲ. ಇನ್ನು ಈ ಪತ್ರದಲ್ಲಿ ಜೈಲು ಅಧಿಕಾರಿಗಳು ಮತ್ತು ಅಲ್ಲಿನ ಸಿಬ್ಬಂದಿ ನಡೆದುಕೊಳ್ಳುವ ರೀತಿ, ಅಲ್ಲಿನ ಪ್ರತಿನಿತ್ಯದ ಅಕ್ರಮಗಳ ಬಗ್ಗೆ ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಕೇಂದ್ರ ಕಾರಾಗೃಹಕ್ಕೆ ನೂತನ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರು ಭೇಟಿ ಕೊಟ್ಟಿದ್ದರು. ಆಗ ಗೃಹ ಸಚಿವರು ಅಲ್ಲಿನ ಸ್ಥಿತಿಗತಿಗಳನ್ನ ಖುದ್ದು ಪರೀಶಿಲಿಸಿ ನಂತರ ಅಧಿಕಾರಿಗಳ ಜೊತೆ ಸಮಾಲೋಚನೆಯನ್ನ ನಡೆಸಿದ್ದಲ್ಲದೆ, ಕೆಲವೊಂದು ಸೂಚನೆಗಳನ್ನ ಕೂಡ ಕೊಟ್ಟಿದ್ದರು. ಅದ್ರಂತೆ ಜೈಲಿನ ಸ್ವಚ್ಛತೆ ಕಾಪಾಡುವಂತೆ ತಾಕೀತು ಮಾಡಿದ್ದರು. ಗೃಹ ಸಚಿವರ ಭೇಟಿ ಬೆನ್ನಲ್ಲೇ ಜೈಲಿನ ಅಕ್ರಮಗಳ ಚಿತ್ರಣವನ್ನು ಸನ್ನಡತೆ ಕೈದಿಯೊಬ್ಬ ಬರೆದಿದ್ದಾರೆ ಎನ್ನಲಾಗುತ್ತಿರುವ ಪತ್ರದಲ್ಲಿ ಎಲ್ಲವನ್ನು ಸಹ ಬಹಿರಂಗಪಡಿಸಿಲಾಗಿದೆ.

ಅಧಿಕಾರಿಗಳು ಹಣ ಮಾಡಲು ನಿಂತಿದ್ದಾರೆಂದು ಆರೋಪ
ಇನ್ನು ಈ ಪತ್ರದಲ್ಲಿ ತಿಳಿಸಿರುವಂತೆ ಕೈದಿಗಳು ತಿನ್ನೋ ಅನ್ನದಲ್ಲಿ ಅವ್ಯವಹಾರ ನಡೆಸಿ ಅಧಿಕಾರಿಗಳೇ ಕಾಸು ಮಾಡುತ್ತಿದ್ದಾರೆ ಅನ್ನೋ ಗಂಭೀರವಾದ ಆರೋಪ ಮಾಡಲಾಗಿದೆ. ಅಲ್ಲದೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಕೈಯಲ್ಲಿ ಇಲ್ಲಿ ಮೊಬೈಲ್​​​​​ ವ್ಯಾಪಾರವನ್ನು ಅಧಿಕಾರಿಗಳೇ ನಡೆಸುತ್ತಿದ್ದಾರಂತೆ. ಹೀಗೆ ಸರಣಿ ಸರಣಿ ಆರೋಪಗಳನ್ನ ಆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆ ಮೂಲಕ ಜೈಲು ಅಧಿಕಾರಿಗಳು ವಿವಿಧ ರೀತಿಯಲ್ಲಿ ಹಣವನ್ನ ಮಾಡುತ್ತಿದ್ದಾರೆ ಅನ್ನೋ ಆರೋಪಗಳ ಪಟ್ಟಿಯೆ ಇದೆ.

blank

ಅನ್ನ ತ್ಯಜಿಸುವಂತೆ ಕೆಮಿಕಲ್ ಮಿಶ್ರಣ ಮಾಡ್ತಾರಂತೆ
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಸಿವು ತೀರಿಸಿಕೊಳ್ಳಬೇಕಾದರೆ ತೋಳ್ಬಲ ಇರಬೇಕು. ಇಲ್ಲವೇ ಕೈ ತುಂಬಾ ಕಾಸು ಇರಬೇಕು. ಈ ಎರಡೂ ಇಲ್ಲದಿದ್ದರೆ ರಾಸಾಯನಿಕ ಮಿಶ್ರಣ ಮಾಡಿರುವ ಅನ್ನ ತಿಂದು ಜೀವನ ಪರ್ಯಂತ ಊಟವನ್ನೇ ತ್ಯಜಿಸಬೇಕು ಅಂತಾ ಉಲ್ಲೇಖಿಸಲಾಗಿದೆ. ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿರುವ ಅನ್ನದಲ್ಲಿ ಕೈದಿಗಳು ಅನ್ನ ತ್ಯಜಿಸುವಂತೆ ರಾಸಾಯನಿಕ ಬೆರೆಸುತ್ತಾರೆಂದು ಹೇಳಲಾಗಿದೆ. ಆದ್ರೆ ಇಲ್ಲಿ ಅದ್ಯಾವ ರೀತಿಯ ಕೆಮಿಕಲ್ ಅನ್ನೋದನ್ನ ಬರೆದಿಲ್ಲ. ಹಾಗಾಗಿ ಕೆಲವೊಂದು ಅನುಮಾನಗಳು ಪತ್ರದ ಮೇಲೆ ಹುಟ್ಟಿಕೊಳ್ಳುತ್ತಿದೆ.

ಏನಿಲ್ಲ ಅಂದ್ರೂ ಕೇಂದ್ರ ಕಾರಾಗೃಹದಲ್ಲಿ 5 ಸಾವಿರ ಕೈದಿಗಳು ಇದ್ದಾರೆ. ಅವರಿಗೆಲ್ಲಾ ಬೆಳಗ್ಗೆ ತಿಂಡಿ ನೀಡುತ್ತಾರೆ. ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಕೂಡ ಕೊಡುತ್ತಾರೆ. ಆದ್ರೆ ಇಷ್ಟು ಮಂದಿಗೆ ಊಟ ತಿಂಡಿ ತಯಾರು ಮಾಡೋ ಬದಲು ಕೇವಲ ಎರಡು ಸಾವಿರ ಮಂದಿಗೆ ಊಟ ತಯಾರಿಸುತ್ತಾರಂತೆ. ಹೀಗೆ ತಯಾರಾದ ಊಟದಲ್ಲಿಯೂ ಕೂಡ ಹಣವನ್ನು ಮಾಡಿಕೊಳ್ಳಲಾಗುತ್ತದೆ ಅನ್ನೋ ಗುಮಾನಿಯಿದೆ. ಯಾರಾದ್ರು ಕೈದಿಗಳ ಬಳಿ ಕಾಸು ಇದ್ದು, ಅವರು ಕಾಸು ಕೊಟ್ಟರೆ ಅವರಿಗೆ ಚಪಾತಿ ಅನ್ನ ಎಲ್ಲವೂ ಕೊಡುತ್ತಾರೆ ಎನ್ನಲಾಗುತ್ತಿದೆ.

ರೌಡಿಗಳಿಗೆ ಊಟ ಕೊಡೋದ್ರಲ್ಲಿ ನಿಸ್ಸೀಮರಂತೆ
ಇನ್ನು ಜೈಲಿನಲ್ಲಿರುವ ರೌಡಿ ಗ್ಯಾಂಗ್ ಗಳಿಗೆ ಹೆದರಿ ಅವರಿಗೆ ಬೇಕಾದ ಊಟ ಕೊಡುತ್ತಾರಂತೆ. ಇಲ್ಲವೇ ಹೊರಗಿನಿಂದ ತರಿಸಿಕೊಳ್ಳಲು ಅವಕಾಶ ಕೊಡುತ್ತಾರಂತೆ. ಆದರೆ, ಹೆಚ್ಚು ಹೆಸರು ಮಾಡದ ಹಾಗು ಧ್ವನಿಯಿಲ್ಲದ ಕೈದಿಗಳಿಗೆ ಊಟ ಕೊಡದೇ ಕೈದಿಗಳ ಆಹಾರ ಪದಾರ್ಥ ಕಡಿತಗೊಳಿಸಿ ಜೈಲು ಅಧಿಕಾರಿಗಳು ಭ್ರಷ್ಟಾಚಾರ ನಡೆಸುತ್ತಿದ್ದಾರೆಂದು ಉಲ್ಲೇಖಿಸಿಲಾಗಿದೆ. ಕಿರಿಯ ಅಧಿಕಾರಿಗಳು ಹಾಗು ಕೆಲ ಸಿಬ್ಬಂದಿ ಸೇರಿಕೊಂಡು ಕಾರಾಗೃಹ ಮೇಲಾಧಿಕಾರಿಗಳಿಗೆ ಸುಳ್ಳು ಲೆಕ್ಕ ನೀಡಿ ಮೋಸ ಮಾಡುತ್ತಿದ್ದಾರೆ ಎಂದು ಸಜಾ ಬಂಧಿ ಪತ್ರದಲ್ಲಿ ವಿವರಿಸಿದ್ದಾರೆ.

ಸೀಜ್ ಆದ ಮೊಬೈಲ್ ಎಷ್ಟಕ್ಕೆ ಮಾರುತ್ತಿದ್ರು ಗೊತ್ತಾ?
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬೀಡಿ, ಸಿಗರೇಟು, ಮಾದಕ ವಸ್ತು, ಮೊಬೈಲ್ ಹಾಗು ಮೊಬೈಲ್ ಕರೆ, ವಿಡಿಯೋ ಕಾಲ್‌ಗೆ ಅವಕಾಶ ಕೊಟ್ಟು ಶ್ರೀಮಂತರಾಗಬಹುದು ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ. ಅಧಿಕಾರಿಗಳ ಭ್ರಷ್ಟಾಚಾರದ ಜತೆ ಶಾಮೀಲಾಗುವ ಕೆಲವು ಕೈದಿಗಳು ಬೀಡಿ ಸಿಗರೇಟು ವ್ಯವಹಾರ ಜತೆಗೆ ಮೊಬೈಲ್ ಪೋನ್ ಕೂಡ ಮಾರಾಟ ಮಾಡುತ್ತಾರಂತೆ. ಅದ್ರಲ್ಲಿ ಬಂದ ಹಣದಿಂದಲೇ ಜೈಲು ಸಿಬ್ಬಂದಿಗೆ ಕಮೀಷನ್ ಕೂಡ ಕೊಡುತ್ತಾರಂತೆ. ಎರಡು ಸಾವಿರ ರೂ. ಮೌಲ್ಯದ ಬೇಸಿಕ್ ಮೊಬೈಲ್ ಹತ್ತರಿಂದ 20 ಸಾವಿರಕ್ಕೆ ಮಾರಾಟ ಮಾಡುತ್ತಾರೆ. ಅದನ್ನು ಕೇವಲ ಎರಡು ತಿಂಗಳು ಮಾತ್ರ ಬಳಕೆ ಮಾಡೋದಕ್ಕೆ ಅನುಮತಿಯನ್ನ ಕೊಡಲಾಗುತ್ತದೆ ಅಂತಾನೂ ಹೇಳಲಾಗುತ್ತಿದೆ. ಅದಾದ ಬಳಿಕ ಜೈಲು ಅಧಿಕಾರಿಗಳು ರೇಡ್ ಮಾಡಿ ಮೊಬೈಲ್​​ಗಳನ್ನ ವಶಕ್ಕೆ ಪಡೆದುಕೊಂಡು ನಂತರ ಅದನ್ನ ಮತ್ತೆ ಅದೇ ಬೆಲೆಗೆ ಮಾರಾಟ ಮಾಡುತ್ತಾರಂತೆ. ಅಷ್ಟೇ ಯಾಕೆ 20 ರಿಂದ 30 ಸಾವಿರ ದಂಡವನ್ನ ಸಹ ಕಟ್ಟಿಸಿಕೊಳ್ಳುತ್ತಾರಂತೆ.

ಯಾವುದೋ ಅಪರಾಧ ಕೃತ್ಯ ಎಸಗಿ ಜೈಲಿಗೆ ಹೋಗುವ ಕೈದಿಗಳು, ಶಿಕ್ಷೆಗೆ ಗುರಿಯಾಗುವ ಕೈದಿಗಳು ತಮ್ಮ ಸಂಬಂಧಿಕರ ಜತೆ ಭಾವನೆಗಳನ್ನು ಹಂಚಿಕೊಳ್ಳಲು ದುಬಾರಿ ಬೆಲೆ ಕೊಟ್ಟು ಮಾತನಾಡುತ್ತಾರೆ. ಜೈಲಿನ ಅಧಿಕಾರಿಗಳು ಮೊಬೈಲ್ ವಹಿವಾಟು ನಡೆಸಲು ಕೆಲವು ಕೈದಿಗಳನ್ನ ನಿಯೋಜಿಸಿಕೊಂಡಿದ್ದಾರಂತೆ . ಇನ್ನು ಸಜಾ ಬಂಧಿಗಳು ತಮ್ಮ ಕುಟುಂಬಗಳ ಜತೆ ಮಾತನಾಡಲೆಂದು ಜೈಲಿನಲ್ಲಿ ಆರು STD ಬೂತ್ ಹಾಕಿದ್ದಾರೆ. ಈ ಪೋನ್ ಬೂತ್ ಇದ್ದರೆ ಮೊಬೈಲ್ ವಹಿವಾಟು ನಡೆಯಲ್ಲ ಎಂದು ಎರಡನ್ನು ಕೆಡಿಸಿಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನ ಹೊರತು ಪಡಿಸಿ ಇನ್ನು ಸಾಕಷ್ಟು ವಿಚಾರಗಳನ್ನ ಇಲ್ಲಿ ಉಲ್ಲೇಖಿಸಲಾಗಿದೆ. ಇದೆಲ್ಲಕ್ಕು ಪುಷ್ಠಿ ನೀಡುವಂತೆ ಬೆಂಗಳೂರು ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ಇತ್ತೀಚೆಗಷ್ಟೇ ಕಿಡಿ ಕಾರಿತ್ತು ಅನ್ನೋದನ್ನ ನಾವಿಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಕೆ.ಜಿ. ಹಳ್ಳಿ ಹಾಗೂ ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಕೈದಿಗಳು ತಮ್ಮ ಜಾಮೀನು ಅರ್ಜಿ ವಿಚಾರಣೆಯ ಹೈ ಕೋರ್ಟ್​​​ ಕಲಾಪವನ್ನು ಜೈಲಿನಲ್ಲಿದ್ದುಕೊಂಡೇ ಮೊಬೈಲ್ ನಲ್ಲಿ ವೀಕ್ಷಿಸಿದ್ದರು. ಈ ಗಂಭೀರ ವಿಚಾರವನ್ನ ಕೇಂದ್ರ ತನಿಖಾ ಸಂಸ್ಥೆಯ ಸರ್ಕಾರಿ ಅಭಿಯೋಜಕರು ಕೋರ್ಟ್ ಗಮನಕ್ಕೆ ತಂದಿದ್ದರು. ಇದರಿಂದ ಕೆಂಡಾಮಂಡಲವಾಗಿದ್ದ ಹೈಕೋರ್ಟ್ ಜೈಲಿನ ಅಕ್ರಮದ ಬಗ್ಗೆ ವರದಿ ಕೇಳಿತ್ತು.

blank

ಇಷ್ಟೆಲ್ಲಾ ಆರೋಪಗಳು ಕೇಳಿ ಬರುತ್ತಿದ್ದಂತೆ,, ಈ ಒಂದು ಪತ್ರದ ಬಗ್ಗೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಯೊಬ್ಬರನ್ನ ಸಂಪರ್ಕ ಮಾಡಿದ್ದು, ಈ ತರಹದ ಪತ್ರ ಹರಿದಾಡುತ್ತಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ಆದ್ರೆ ಇಲ್ಲಿ ಇಷ್ಟೆಲ್ಲಾ ಆರೋಪಗಳನ್ನ ಪತ್ರದಲ್ಲಿ ಉಲ್ಲೇಖಿಸಿರೋದು ಸತ್ಯಕ್ಕೆ ದೂರವಾದ ಮಾತು. ಕೇಂದ್ರ ಕಾರಾಗೃಹಕ್ಕೆ ಪ್ರತಿ ತಿಂಗಳಿಗೆ ಇಬ್ಬರು ಜಡ್ಜ್​​​ಗಳು ಬಂದು ಎಲ್ಲವನ್ನು ಪರಿಶೀಲನೆ ಮಾಡಿಕೊಂಡು ಹೋಗ್ತಾರೆ. ಆಗ ನೇರವಾಗಿ ಜಡ್ಜ್​​ ಬಳಿಯೇ ಆರೋಪವನ್ನ ಮಾಡಬಹುದಿತ್ತು? ಯಾಕೆ ಮಾಡಿಲ್ಲ. ಅಲ್ಲದೇ ಫುಡ್​ ಸೇಫ್ಟಿ ಮತ್ತು ಸ್ಟಾಂಡರ್ಡ್​​​​​​​ ಅಥಾರಿಟಿ ಆಫ್ ಇಂಡಿಯಾದಿಂದ ಕೇಂದ್ರ ಕಾರಾಗೃಹದಲ್ಲಿ ತಯಾರಾಗುವ ಊಟಕ್ಕೆ ನಾಲ್ಕು ಸ್ಟಾರ್​ಗಳನ್ನ ಕೊಟ್ಟಿದ್ದಾರೆ. ಯಾರೋ ಬೇಕು ಅಂತಾನೇ ಈ ರೀತಿ ಪತ್ರವನ್ನ ಬರೆದಿರಬೋದು ಅಥವಾ ಬೇರೆ ಬೇರೆ ಕಡೆ ನಾವು ಶಿಫ್ಟ್ ಮಾಡುತ್ತಿದ್ದೇವೆ ಅದಕ್ಕಾಗಿ ಹೀಗೆ ಮಾಡಿರಬಹುದು.

ಎಸ್​​​,,, ಹೀಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಉನ್ನತ ಅಧಿಕಾರಿಯನ್ನ ಸಂಪರ್ಕ ಮಾಡಿದಾಗ ಈ ಅಂಶವನ್ನ ಹೇಳಿದ್ದಲ್ಲದೆ, ಅವರು ಈ ಸರ್ಟಿಫೀಕೇಟ್​​ ಕೂಡ ಕೊಟ್ಟಿದ್ದಾರೆ.

ಒಟ್ಟಿನಲ್ಲಿ ಇಲ್ಲಿ ಯಾರ ಮಾತು ಸುಳ್ಳು ಅಥವಾ ಯಾರ ಮಾತು ಸತ್ಯ ಅನ್ನೋದು ಮುಖ್ಯವಲ್ಲ. ಇದೊಂದು ಶಿಕ್ಷೆಗೆ ಗುರಿಯಾಗಿ ಅವರು ಅವರ ಶಿಕ್ಷಾ ಅವಧಿಯನ್ನ ಕಳೆಯಲು, ಅವರನ್ನ ಸುಧಾರಿಸಿ ಮನ ಪರಿವರ್ತಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು. ಅದು ಬಿಟ್ಟು ಅವರು ಜೈಲು ಒಳಗೆ ಜೀವನ ಕಳೆಯಲು ಸಾಲಾ ಸೋಲ ಮಾಡಿ ನಂತರ ಹೊರಬಂದು ಅದನ್ನ ತೀರಿಸಲು ಮತ್ತೊಂದು ಅಪರಾಧ ಕೃತ್ಯ ಮಾಡುವಂತಾಗಬಾರದು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಂದ್ರೆ ಅಕ್ರಮ ಕೂಪ ಅನ್ನೊ ಹಾಗೆ ಆಗೋಗಿದೆ. ಅದಕ್ಕೆ ಪೂರಕವೆಂಬಂತೆ ಒಂದಾದ ಮೇಲೊಂದರಂತೆ ಆರೋಪಗಳು ಕೇಳಿ ಬರುತ್ತಲೆ ಇದೆ. ಇನ್ನಾದ್ರು ಇದಕ್ಕೆಲ್ಲಾ ಕಡಿವಾಣ ಬೀಳುವಂತೆ ಆಗಲಿ ಅನ್ನೋದೆ ನಮ್ಮ ಆಶಯ.

ವಿಶೇಷ ಬರಹ; ನಾಗೇಂದ್ರ ಬಾಬು, ಸ್ಪೆಷಲ್​ ಡೆಸ್ಕ್​​, ನ್ಯೂಸ್​​ಫಸ್ಟ್​​

Source: newsfirstlive.com Source link