ಕರಾವಳಿಯಲ್ಲಿ ಪತ್ತೆಯಾದ ಹಾಕ್ಸ್ ಬಿಲ್ ಆಮೆ ಕಳೆಬರ

ಕಾರವಾರ: ಪಶ್ಚಿಮ ಕರಾವಳಿಯಲ್ಲಿ ಮೊದಲ ಬಾರಿ ಸಮುದ್ರ ಆಮೆಗಳಲ್ಲಿ ಅತೀ ಚಿಕ್ಕ ಆಮೆಗಳ ಪ್ರಭೇದ ಎಂದು ಕರೆಸಿಕೊಳ್ಳುವ ಹಾಕ್ಸ್ ಬಿಲ್ ಜಾತಿಯ, ಸ್ಥಳೀಯ ಭಾಷೆಯಲ್ಲಿ ‘ಗಿಡುಗ ಆಮೆ’ ಎಂದು ಕರೆಯಲ್ಪಡುವ ಅಪರೂಪದ ಆಮೆ ಪತ್ತೆಯಾಗಿದೆ.

ಕಾರವಾರದ ತಿಳುಮಾತಿ ಬೀಚ್ ಬಳಿ ಅದರ ಕಳೆಬರವನ್ನು ಕಡಲಜೀವಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಪಂಚಮಿಯವರು ಪತ್ತೆ ಮಾಡಿದ್ದಾರೆ. ಈ ಆಮೆಯು ಸಮುದ್ರ ಆಮೆಗಳಲ್ಲಿಯೇ ಗಾತ್ರದಲ್ಲಿ ಅತೀ ಚಿಕ್ಕದಾಗಿದ್ದು, ಇದರ ಮುಖವು ಗಿಡಗನ ಮುಖದಂತೆ ಹೋಲುತ್ತದೆ. ದೇಹದ ಮೇಲೆ ಹುಲಿಯ ದೇಹದಂತೆ ಪಟ್ಟೆಗಳಿದ್ದು, ಕಾಲುಗಳಲ್ಲಿ ಎರಡು ಉಗುರುಗಳಿವೆ. ನೋಡಲು ತುಂಬಾ ಸುಂದರವಾಗಿ ಕಾಣುವ ಈ ಆಮೆ ಹೆಚ್ಚಾಗಿ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳಲ್ಲಿ ಹಾಗೂ ಅಂಡಮಾನ್, ನಿಕೋಬಾರ್‌ನ ಆಳವಿಲ್ಲದ ಕಡಲಲ್ಲಿ, ಹವಳದ ದಿಬ್ಬಗಳ ನಡುವೆ ಕಂಡು ಬರುತ್ತದೆ.

ಇದು 4,000 ಕಿಲೋಮೀಟರ್‌ಗೂ ಹೆಚ್ಚು ದೂರ ಸಮುದ್ರದಲ್ಲಿ ಪ್ರಯಾಣ ಬೆಳೆಸುವ ಸಾಮರ್ಥ್ಯ ಹೊಂದಿದೆ. ಒಂದು ಮೀಟರ್ ಉದ್ದ, 100 ಕಿಲೋಗ್ರಾಂ ತೂಕವಿರುವ ಈ ಆಮೆ 2ರಿಂದ 3 ವರ್ಷಗಳಿಗೊಮ್ಮೆ ಮಿಲನದ ನಂತರ ಮೊಟ್ಟೆಯಿಡುತ್ತದೆ. ಇದರ ಬಗ್ಗೆ ಈವರೆಗೂ ಹೆಚ್ಚು ಅಧ್ಯಯನಗಳು ಆಗಿರುವುದಿಲ್ಲ. ಬಂಗಾಳ ಕೊಲ್ಲಿ ಸೇರಿದಂತೆ ಇತರ ಭಾಗದಲ್ಲಿ ಕಂಡುಬರುವ ‘ಆಲಿವ್ ರಿಟ್ಟಿ’ ಜಾತಿಯ ಆಮೆಗಳಂತೆ ಬಹುತೇಕ ಇದರ ಜೀವನಕ್ರಮ ಹೋಲುತ್ತದೆ. ಇದನ್ನೂ ಓದಿ:ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ಕಳೆದ ಒಂದು ವಾರದ ಹಿಂದೆ ಎರಡು ಆಮೆಗಳ ಕಳೆಬರ ಪತ್ತೆಯಾಗಿತ್ತು. ಇದರ ನಂತರ ಇದೀಗ ಮತ್ತೆ ಆಮೆಯ ಕಳೆಬರ ಕಂಡುಬಂದಿದೆ. ಅತೀ ಹೆಚ್ಚು ಆಯುಷ್ಯವನ್ನು ಹೊಂದಿರುವ ಆಮೆಗಳು ಹೀಗೇ ಒಂದಾದ ಮೇಲೊಂದರಂತೆ ಸತ್ತು ಕಡಲತೀರಗಳಿಗೆ ಬರತೊಡಗಿದೆ. ಹೀಗಾಗಿ ಇವುಗಳ ಸಾವಿನ ಬಗ್ಗೆ ಹೆಚ್ಚು ಅಧ್ಯಯನದ ಅವಶ್ಯಕತೆ ಇದೆ. ಇದನ್ನೂ ಓದಿ:ಮುಖ್ಯಮಂತ್ರಿ ಆಗುವ ಕಾಲ ಬಂದೇ ಬರುತ್ತೆ- ಯತ್ನಾಳ್ ಸಿಎಂ ಆಗುವ ಇಂಗಿತ

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾರವಾರದ ಡಿ.ಸಿ.ಎಫ್ ವಸಂತ್ ರೆಡ್ಡಿಯವರು ಇದೇ ಮೊದಲ ಬಾರಿಗೆ ಹಾಕ್ಸ್ ಬಿಲ್ ಜಾತಿಯ ಆಮೆ ಪತ್ತೆಯಾಗಿದೆ. ಇದರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಇದು ಹೇಗೆ ಸಾವಾಗಿದೆ ಎಂಬುದು ತಿಳಿಯಲಿದೆ ಎಂದು ತಿಳಿಸಿದ್ದಾರೆ.

Source: publictv.in Source link