ಕೇರಳದಿಂದ ಕೋಲಾರ ನರ್ಸಿಂಗ್​ ಕಾಲೇಜಿಗೆ ಆಗಮಿಸಿದ 66 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಕೇರಳದಿಂದ ಕೋಲಾರ ನರ್ಸಿಂಗ್​ ಕಾಲೇಜಿಗೆ ಆಗಮಿಸಿದ 66 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಕೋಲಾರ: ಗಡಿ ಜಿಲ್ಲೆ ಕೋಲಾರದಲ್ಲಿ ಕೇರಳದಿಂದ ಬಂದಿರುವ ನರ್ಸಿಂಗ್ ವಿದ್ಯಾರ್ಥಿಗಳಿಂದ 3ನೇ ಅಲೆ ಆತಂಕ ಹೆಚ್ಚಾಗಿದೆ. 265 ನರ್ಸಿಂಗ್ ವಿದ್ಯಾರ್ಥಿಗಳ ಪೈಕಿ 66 ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಪರಿಣಾಮ ನರ್ಸಿಂಗ್ ಕಾಲೇಜು ಸೀಲ್ ಡೌನ್ ಮಾಡಿ, ಸೋಂಕು ಹೆಚ್ಚಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ.

ನರ್ಸಿಂಗ್ ವ್ಯಾಸಂಗಕ್ಕಾಗಿ ಕೇರಳದಿಂದ ಕೋಲಾರಕ್ಕೆ ಬರುವ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳು ಜಿಲ್ಲೆಗೆ ಕೊರೊನಾವನ್ನ ಬಳುವಳಿಯಾಗಿ ನೀಡುತ್ತಿದ್ದಾರೆ. ಅದು ಸಹ ಕೇರಳದಿಂದ ಜಿಲ್ಲೆಗೆ ಬಂದಿರುವ ಒಟ್ಟು 66 ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡಿರುವುದು ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.

blank

ಕಳೆದೆರಡು ದಿನಗಳಿಂದ ಕೆಜಿಎಫ್ ನಗರದ ನೂರ್ ಉನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ ಪರೀಕ್ಷೆಗೊಳಪಡಿಸಿದ ವೇಳೆ 66 ವಿದ್ಯಾರ್ಥಿಗಳಿಗೆ ಸೋಂಕಿರುವುದು ದೃಢಪಟ್ಟಿದೆ. ಇಂದು ನಡೆಸಿದ ಱಪಿಡ್ ಟೆಸ್ಟ್ ವೇಳೆ 32 ವಿದ್ಯಾರ್ಥಿಗಳಲ್ಲಿ ಸೋಂಕಿರುವುದು ದೃಢಪಟ್ಟಿದೆ. ಇದೇ ತಿಂಗಳ 18 ರಂದು ನೂರ್ ಉನ್ನೀಸಾ ನರ್ಸಿಂಗ್ ಕಾಲೇಜು ಬಸ್ 180 ವಿದ್ಯಾರ್ಥಿಗಳು ಕೇರಳದಿಂದ ಬಂದಿದ್ದಾರೆ. ಮೊದಲು 3 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಮೂವರಿಂದ 33 ಆಗಿ, ಇದು 66 ಆಗಿದೆ.

ಇದನ್ನೂ ಓದಿ: 2ನೇ ಅಲೆಗಿಂತ 3ನೇ ಅಲೆ ಬಹಳ ಡೇಂಜರ್​​​; ಸರ್ಕಾರಕ್ಕೆ PHANA ಸಲ್ಲಿಸಿದ ವರದಿಯಲ್ಲಿ ಏನಿದೆ?

ಜಿಲ್ಲೆಯಲ್ಲಿ 12ಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳಿದ್ದು, ಈಗಾಗಲೇ ನರ್ಸಿಂಗ್ ಕಾಲೇಜುಗಳಲ್ಲಿ ಟೆಸ್ಟಿಂಗ್ ಕಾರ್ಯ ಆರಂಭವಾಗಿದೆ. ಸಾಕಷ್ಟು ವಿದ್ಯಾರ್ಥಿಗಳು ಯಾವುದೇ ನೆಗೆಟಿವ್ ರಿಪೋರ್ಟ್ ಇಲ್ಲದೆ ಕೇರಳದಿಂದ ಜಿಲ್ಲೆಗೆ ರೈಲುಗಳ ಮೂಲಕ ಎಂಟ್ರಿ ಕೊಡುತ್ತಿದ್ದು, ಹೀಗೆ ಬರುವವರಿಗೆ ಯಾವುದೇ ನಿರ್ಬಂಧವಿಲ್ಲ. ಅಲ್ಲದೇ ಮುನ್ನಚ್ಚರಿಕಾ ಕ್ರಮವಾಗಿ ರೈಲು ನಿಲ್ದಾಣಗಳಲ್ಲಿ ಯಾವುದೇ ಕಟ್ಟೆಚ್ಚರ ವಹಿಸಿಲ್ಲ, ಜೊತೆಗೆ ಗಡಿಯಲ್ಲಿ ಯಾವುದೇ ನಿರ್ಬಂಧ ಕೂಡ ವಿಧಿಸಿಲ್ಲ. ಪರಿಣಾಮ ಸುಲಭವಾಗಿ ಸೋಂಕು ಜಿಲ್ಲೆಗೆ ಹರಡುತ್ತಿದೆ.

ಇನ್ನು ನೂರ್ ಉನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ 66 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆ ಕಾಲೇಜಿಗೆ ಜಿಲ್ಲಾಧಿಕಾರಿ ಮತ್ತು ಆರೋಗ್ಯಾಧಿಕಾರಿಗಳ ತಂಡ ಭೇಟಿ ನೀಡಿತ್ತು. ವಿದ್ಯಾರ್ಥಿಗಳ ಟ್ರಾವಲ್ ಹಿಸ್ಟರಿ ಸೇರಿದಂತೆ ನೆಗಟಿವ್ ರಿಪೋರ್ಟ್ ಮತ್ತು ವಿದ್ಯಾರ್ಥಿಗಳು ಜಿಲ್ಲೆಗೆ ಹೇಗೆ ಬಂದಿದ್ದಾರೆ ಎಂಬ ಮಾಹಿತಿ ಕಲೆ ಹಾಕಿದ್ರು. ನೂರ್ ಉನ್ನೀಸಾ ನರ್ಸಿಂಗ್ ಕಾಲೇಜಿನಲ್ಲಿ 265 ವಿದ್ಯಾರ್ಥಿಗಳಿದ್ದ ಅದರಲ್ಲಿ ಇನ್ನೂ 140 ವಿದ್ಯಾರ್ಥಿಗಳ ಪರೀಕ್ಷಾ ವರದಿ ಬರಬೇಕಾಗಿದೆ. ಇದರಲ್ಲಿ ಇನ್ನೂ 32 ಜನರಲ್ಲಿ ಸೋಂಕು ಕಾಣಿಸಿಕೊಳ್ಳಲಿದೆ ಅನ್ನೋ ಮಾಹಿತಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಲಭ್ಯವಾಗಿದೆ.

blank

ಒಂದು ವೇಳೆ ಮತ್ತೆ 32 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದೆ ಆದಲ್ಲಿ ಕೋಲಾರದಲ್ಲಿ 3ನೇ ಅಲೆ ಆತಂಕ ಮತ್ತಷ್ಟು ಹೆಚ್ಚಾಗಲಿದೆ. ಸೋಂಕಿತ ವಿದ್ಯಾರ್ಥಿಗಳನ್ನು ಕೆಜಿಎಫ್ ನಗರದ ಬಿಜಿಎಂಎಲ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಇನ್ನೂ ನೂರ್ ಉನ್ನೀಸ್ ನರ್ಸಿಂಗ್ ಕಾಲೇಜು ಹಾಗೂ ಸುತ್ತಮುತ್ತಲಿನ ಪ್ರದೇಶವನ್ನ ನಗರಸಭೆ ಅಧಿಕಾರಿಗಳು ಕಂಟೈನ್​ಮೆಂಟ್ ಝೋನ್ ಎಂದು ಘೋಷಣೆ ಮಾಡಿದ್ದಾರೆ. ಕಾಲೇಜಿನಲ್ಲಿರುವ ಎಲ್ಲಾ ವಿದ್ಯಾರ್ಥಿಗಳನ್ನ ತಪಾಸಣೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿದ್ದು, ಸೋಂಕು ಹರಡದಂತೆ ಕಾಲೇಜಿನಲ್ಲಿ ಎಚ್ಚರ ವಹಿಸಲಾಗುತ್ತಿದೆ. ಇದಷ್ಟೆ ಅಲ್ಲದೆ ಮುಳಬಾಗಿಲು ತಾಲೂಕಿನ ಕೋಳಿ ಫಾರಂನ 16 ಮಂದಿ ಕಾರ್ಮಿಕರಲ್ಲಿ ಸಹ ಸೋಂಕು ಧೃಡ ಪಟ್ಟಿದೆ. ಸದ್ಯ ಇವರನ್ನೆಲ್ಲ ಕೋವಿಡ್ ಸೆಂಟರ್ ನಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.

ಒಟ್ಟಾರೆ ನರ್ಸಿಂಗ್ ಕಾಲೇಜಿನಲ್ಲಿ ಮತ್ತಷ್ಟು ಸೋಂಕು ಕಾಣಿಸಿಕೊಳ್ಳುವ ಆತಂಕ ಎದುರಾಗಿದೆ. ಉಳಿದ ವಿದ್ಯಾರ್ಥಿಗಳನ್ನ ಕ್ವಾರಂಟೈನ್ ಮಾಡಿ ಸೋಂಕು ನಿವಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ. ಮತ್ತಷ್ಟು ಸಂಕಷ್ಟ ಎದುರಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಪರಿಸ್ಥಿತಿ ಕೈಮೀರುವ ಮುನ್ನ ಜಿಲ್ಲಾಡಳಿತ ಮತ್ತು ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.

Source: newsfirstlive.com Source link